ಭಾರತದ ಅವಳಿ ವೈಟ್‌ವಾಶ್ ಪರಾಕ್ರಮ
Team Udayavani, Feb 20, 2022, 11:08 PM IST
ಕೋಲ್ಕತಾ: ಏಕದಿನದಂತೆ ಟಿ20 ಸರಣಿಯಲ್ಲೂ ಮೆರೆದ ಭಾರತ, ಪ್ರವಾಸಿ ವೆಸ್ಟ್ ಇಂಡೀಸಿಗೆ 3-0 ಸೋಲುಣಿಸಿದೆ. ರೋಹಿತ್ ಪಡೆ ಅವಳಿ ವೈಟ್‌ವಾಶ್ ಸಾಧನೆಯೊಂದಿಗೆ ಪರಾಕ್ರಮ ಮೆರೆದಿದೆ.
ರವಿವಾರದ ಅಂತಿಮ ಟಿ20 ಪಂದ್ಯವನ್ನು ಭಾರತ 17 ರನ್ ಅಂತರದಿಂದ ಗೆದ್ದು ಅಜೇಯವಾಗಿ ಸರಣಿಯನ್ನು ಮುಗಿಸಿತು. ಕೆರಿಬಿಯನ್ ಪಡೆ ಈ ಪ್ರವಾಸದಲ್ಲಿ ಒಂದೂ ಪಂದ್ಯ ಗೆಲ್ಲದೆ ವಿಮಾನ ಏರುವ ಅವಮಾನಕ್ಕೆ ಸಿಲುಕಿತು.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಪೇರಿಸಿದ ಮೊತ್ತ 5 ವಿಕೆಟಿಗೆ 184. ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 9 ವಿಕೆಟಿಗೆ 167 ರನ್ ಮಾಡಿ ಶರಣಾಯಿತು. ನಿಕೋಲಸ್ ಪೂರಣ್ ಅವರ ಹ್ಯಾಟ್ರಿಕ್ ಅರ್ಧ ಶತಕವೊಂದೇ ವಿಂಡೀಸ್ ಸರದಿಯ ಆಕರ್ಷಣೆ ಆಗಿತ್ತು. ಹರ್ಷಲ್ ಪಟೇಲ್, ವೆಂಕಟೇಶ್ ಅಯ್ಯರ್ ಮತ್ತು ದೀಪಕ್ ಚಹರ್ ಬೌಲಿಂಗ್‌ನಲ್ಲಿ ಮಿಂಚಿದರು.
ಸೂಪರ್ ಡೆತ್ ಓವರ್
ಪವರ್ ಪ್ಲೇಯಲ್ಲಿ ಒಂದಕ್ಕೆ 43 ರನ್, 15 ಓವರ್‌ಗಳಲ್ಲಿ 4ಕ್ಕೆ ಕೇವಲ 98 ರನ್ ಗಳಿಸಿದ್ದ ಭಾರತ 184ರ ತನಕ ಸಾಗುತ್ತದೆಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದರೆ ಡೆತ್ ಓವರ್‌ಗಳಲ್ಲಿ ಸಿಡಿದು ನಿಂತ ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ರನ್ ಪ್ರವಾಹವನ್ನೇ ಹರಿಸಿದರು. 5ನೇ ವಿಕೆಟಿಗೆ ಕೇವಲ 37 ಎಸೆತಗಳಿಂದ 91 ರನ್ ರಾಶಿ ಹಾಕಿದರು.
ಕೊನೆಯ 5 ಓವರ್‌ಗಳಲ್ಲಿ ಒಟ್ಟುಗೂಡಿದ ರನ್ ಬರೋಬ್ಬರಿ 86. ಇದು ಡೆತ್ ಓವರ್‌ಗಳಲ್ಲಿ ಭಾರತ ಪೇರಿಸಿದ ಅತ್ಯಧಿಕ ರನ್ನಿನ ದಾಖಲೆಯಾಗಿದೆ. ಇದಕ್ಕೂ ಮೊದಲು 2007ರ ಇಂಗ್ಲೆಂಡ್ ಎದುರಿನ ಡರ್ಬನ್ ಪಂದ್ಯದಲ್ಲಿ 80 ರನ್ ಗಳಿಸಿದ್ದು ದಾಖಲೆಯಾಗಿತ್ತು.
ಅಂತಿಮ ಎಸೆತದಲ್ಲಿ ಔಟಾದ ಸೂರ್ಯಕುಮಾರ್ ಯಾದವ್ 31 ಎಸೆತಗಳಿಂದ 65 ರನ್ ಸಿಡಿಸಿದರು. ಇದರಲ್ಲಿ 7 ಪ್ರಚಂಡ ಸಿಕ್ಸರ್ ಒಳಗೊಂಡಿತ್ತು. ಬೌಂಡರಿ ಒಂದು ಮಾತ್ರ. ಇದು ಸೂರ್ಯಕುಮಾರ್ ಅವರ 4ನೇ ಅರ್ಧ ಶತಕ. ಹಾರ್ಡ್ ಹಿಟ್ಟರ್ ವೆಂಕಟೇಶ್ ಅಯ್ಯರ್ 19 ಎಸೆತಗಳಿಂದ 35 ರನ್ ಮಾಡಿ ಅಜೇಯರಾಗಿ ಉಳಿದರು. ಈ ಆಕರ್ಷಕ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಇವರಿಬ್ಬರು ಸೇರಿ ಕೊನೆಯ 5 ಓವರ್‌ಗಳಲ್ಲಿ 7 ಸಿಕ್ಸರ್, 7 ಬೌಂಡರಿ ಬಾರಿಸಿ ಟಿ20ಯ ನೈಜ ರೋಮಾಂಚನವನ್ನು ತೆರೆದಿರಿಸಿದರು.
ಓಪನಿಂಗ್ ಪರಿವರ್ತನೆ
ಸುದೀರ್ಘ ಕಾಯುವಿಕೆಯ ಬಳಿಕ ತಂಡ ಪ್ರವೇಶಿಸಿದ ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದರು. ಆದರೆ ಗಾಯಕ್ವಾಡ್ (4) ಮತ್ತು ರೋಹಿತ್ (7)-ಇಬ್ಬರೂ ಕ್ಲಿಕ್ ಆಗಲಿಲ್ಲ. ಇಶಾನ್ ಕಿಶನ್ 31 ಎಸೆತಗಳಿಂದ 34 ರನ್ ಹೊಡೆದರು (5 ಬೌಂಡರಿ). ಶ್ರೇಯಸ್ ಅಯ್ಯರ್ ಗಳಿಕೆ 16 ಎಸೆತಗಳಿಂದ 25 ರನ್ (4 ಬೌಂಡರಿ).
ವೆಸ್ಟ್ ಇಂಡೀಸ್ ಪರ ಐವರು ತಲಾ ಒಂದೊಂದು ವಿಕೆಟ್ ಕೆಡವಿದರು. ರೊಮಾರಿಯೊ ಶೆಫರ್ಡ್ ಸಿಕ್ಕಾಪಟ್ಟೆ ದುಬಾರಿಯಾದರು. ಅವರ 4 ಓವರ್‌ಗಳಿಂದ 50 ರನ್ ಸೋರಿ ಹೋಯಿತು.
ವಿಂಡೀಸಿಗೆ ದೀಪಕ್ ಚಹರ್ ಆರಂಭದಲ್ಲೇ ಆಘಾತವಿಕ್ಕಿದರು. ಓಪನರ್‌ಗಳಾದ ಕೈಲ್ ಮೇಯರ್ ಮತ್ತು ಶೈ ಹೋಪ್ ಅವರನ್ನು 26 ರನ್ ಆಗುವಷ್ಟರಲ್ಲಿ ವಾಪಸ್ ಕಳುಹಿಸಿದರು. ಆದರೆ ಪೂರಣ್ ಮತ್ತು ಪೊವೆಲ್ ಮತ್ತೆ ನೆರವಿಗೆ ನಿಂತರು. ದ್ವಿತೀಯ ವಿಕೆಟಿಗೆ 47 ರನ್ ರನ್ ಪೇರಿಸಿದರು. ಇವರಿಬ್ಬರ ಜತೆಯಾಟದ ವೇಳೆ ಹತ್ತರ ಸರಾಸರಿಯಲ್ಲಿ ರನ್ ಬರತೊಡಗಿತು.
ಪೂರಣ್ ಹ್ಯಾಟ್ರಿಕ್ ಫಿಫ್ಟಿ
ಪೊವೆಲ್ 14 ಎಸೆತಗಳಿಂದ 25 ರನ್ (2 ಬೌಂಡರಿ, 2 ಸಿಕ್ಸರ್) ಮಾಡಿ ನಿರ್ಗಮಿಸಿದರೂ ಪೂರಣ್ ಮತ್ತೂಮ್ಮೆ ಅಮೋಘ ಬ್ಯಾಟಿಂಗ್ ಪ್ರದರ್ಶನವಿತ್ತರು. ಮೂರೂ ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿ ಮೆರೆದರು (61, 62, 61). ಅವರು ಭಾರತದೆದುರು ಹ್ಯಾಟ್ರಿಕ್ ಫಿಫ್ಟಿ ಹೊಡೆದ 2ನೇ ಆಟಗಾರ. ಬ್ರೆಂಡನ್ ಮೆಕಲಮ್ ಮೊದಲಿಗ.
4 ಬದಲಾವಣೆ
ಎರಡೂ ತಂಡಗಳು 4 ಬದಲಾವಣೆಗಳೊಂದಿಗೆ ಕಣಕ್ಕಿಳಿದವು. ಭಾರತ ಮೊದಲೇ ವಿರಾಟ್ ಕೊಹ್ಲಿ, ರಿಷಭ್ ಪಂತ್ ಅವರಿಗೆ “ಬಯೋ ಬ್ರೇಕ್’ ಕೊಟ್ಟಿತ್ತು. ಭುವನೇಶ್ವರ್ ಕುಮಾರ್ ಮತ್ತು ಯಜುವೇಂದ್ರ ಚಹಲ್ ಅವರಿಗೆ ವಿಶ್ರಾಂತಿ ನೀಡಿತು. ಇವರ ಸ್ಥಾನಕ್ಕೆ ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಬಂದರು. ಟಿ20 ಪದಾರ್ಪಣೆ ಮಾಡಿದ ಆವೇಶ್ ಖಾನ್‌ಗೆ ಭುವನೇಶ್ವರ್ ಕುಮಾರ್ ಕ್ಯಾಪ್ ನೀಡಿದರು.
ವೆಸ್ಟ್ ಇಂಡೀಸ್ ತಂಡಕ್ಕೆ ಹೇಡನ್ ವಾಲ್ಶ್, ಫ್ಯಾಬಿಯನ್ ಅಲೆನ್, ಡೊಮಿನಿಕ್ ಡ್ರೇಕ್ಸ್ ಮತ್ತು ಶೈ ಹೋಪ್ ವಾಪಸಾದರು.
ಸ್ಕೋರ್ ಪಟ್ಟಿ
ಭಾರತ
ಗಾಯಕ್ವಾಡ್ ಸಿ ಮೇಯರ್ ಬಿ ಹೋಲ್ಡರ್ 4
ಇಶಾನ್ ಕಿಶನ್ ಬಿ ವಾಲ್ಶ್ 34
ಶ್ರೇಯಸ್ ಅಯ್ಯರ್ ಸಿ ಹೋಲ್ಡರ್ ಬಿ ವಾಲ್ಶ್ 25
ರೋಹಿತ್ ಶರ್ಮ ಬಿ ಡ್ರೇಕ್ಸ್ 7
ಸೂರ್ಯಕುಮಾರ್ ಸಿ ಪೋವೆಲ್ ಬಿ ಶೆಫರ್ಡ್ 65
ವೆಂಕಟೇಶ್ ಅಯ್ಯರ್ ಔಟಾಗದೆ 35
ಇತರ 14
ಒಟ್ಟು (5 ವಿಕೆಟಿಗೆ) 184
ವಿಕೆಟ್ ಪತನ:1-10, 2-63, 3-66, 4-93, 5-184.
ಬೌಲಿಂಗ್; ಜೇಸನ್ ಹೋಲ್ಡರ್ 4-0-29-1
ರೊಮಾರಿಯೊ ಶೆಫರ್ಡ್ 4-0-50-1
ರೋಸ್ಟನ್ ಚೇಸ್ 4-0-23-1
ಹೇಡನ್ ವಾಲ್ಶ್ 4-0-30-1
ಡೊಮಿನಿಕ್ ಡ್ರೇಕ್ಸ್ 3-0-37-1
ಫ್ಯಾಬಿಯನ್ ಅಲೆನ್ 1-0-5-0
ವೆಸ್ಟ್ ಇಂಡೀಸ್
ಕೈಲ್ ಮೇಯರ್ ಸಿ ಇಶಾನ್ ಬಿ ಚಹರ್ 6
ಶೈ ಹೋಪ್ ಸಿ ಇಶಾನ್ ಬಿ ಚಹರ್ 8
ಪೂರಣ್ ಸಿ ಇಶಾನ್ ಬಿ ಠಾಕೂರ್ 61
ಪೋವೆಲ್ ಸಿ ಠಾಕೂರ್ ಬಿ ಹರ್ಷಲ್ 25
ಪೊಲಾರ್ಡ್ ಸಿ ಬಿಷ್ಣೋಯಿ ಬಿ ವೆಂಕಟೇಶ್ 5
ಹೋಲ್ಡರ್ ಸಿ ಅಯ್ಯರ್ ಬಿ ವೆಂಕಟೇಶ್ 2
ರೋಸ್ಟನ್ ಚೇಸ್ ಬಿ ಹರ್ಷಲ್ 12
ಶೆಫರ್ಡ್ ಸಿ ರೋಹಿತ್ ಬಿ ಹರ್ಷಲ್ 29
ಫ್ಯಾಬಿಯನ್ ಅಲೆನ್ ಔಟಾಗದೆ 5
ಡೊಮಿನಿಕ್ ಡ್ರೇಕ್ಸ್ ಸಿ ರೋಹಿತ್ ಬಿ ಠಾಕೂರ್ 4
ಹೇಡನ್ ವಾಲ್ಶ್ ಔಟಾಗದೆ 0
ಇತರ 10
ಒಟ್ಟು (9 ವಿಕೆಟಿಗೆ) 167
ವಿಕೆಟ್ ಪತನ:1-6, 2-26, 3-73, 4-82, 5-87, 6-100, 7-148, 8-158, 9-166.
ಬೌಲಿಂಗ್; ದೀಪಕ್ ಚಹರ್ 1.5-0-15-2
ಆವೇಶ್ ಖಾನ್ 4-0-42-0
ವೆಂಕಟೇಶ್ ಅಯ್ಯರ್ 2.1-0-23-2
ಶಾರ್ದೂಲ್ ಠಾಕೂರ್ 4-0-33-2
ರವಿ ಬಿಷ್ಣೋಯಿ 4-0-29-0
ಹರ್ಷಲ್ ಪಟೇಲ್ 4-0-22-3
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.