ಆಫ್ರಿಕಾವನ್ನು ಕ್ಲೀನ್‌ಸ್ವೀಪ್ ಮಾಡಿದ ಭಾರತ
Team Udayavani, Oct 15, 2019, 5:53 AM IST
ವಡೋದರ: ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ 3 ಪಂದ್ಯಗಳ ವನಿತಾ ಏಕದಿನ ಸರಣಿಯನ್ನು ಭಾರತ ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಸೋಮವಾರ ಇಲ್ಲಿ ನಡೆದ ಅಂತಿಮ ಮುಖಾಮುಖೀಯಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ 6 ರನ್ನುಗಳ ರೋಚಕ ಜಯ ಸಾಧಿಸುವ ಮೂಲಕ ಸಂಪೂರ್ಣ ಮೇಲುಗೈ ಸಾಧಿಸಿತು.
ಸಣ್ಣ ಮೊತ್ತದ ಈ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 45.5 ಓವರ್‌ಗಳಲ್ಲಿ 146ಕ್ಕೆ ಆಲೌಟಾದರೆ, ದಕ್ಷಿಣ ಆಫ್ರಿಕಾ 48 ಓವರ್‌ಗಳಲ್ಲಿ 140ಕ್ಕೆ ಕುಸಿಯಿತು. ಇಲ್ಲೇ ನಡೆದ ಮೊದಲೆರಡು ಪಂದ್ಯಗಳಲ್ಲಿ ಭಾರತ 8 ವಿಕೆಟ್ ಹಾಗೂ 5 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಇದಕ್ಕೂ ಹಿಂದಿನ 6 ಪಂದ್ಯಗಳ ಟಿ20 ಸರಣಿಯನ್ನು ಭಾರತ 3-1ರಿಂದ ಜಯಿಸಿತ್ತು.
ಬೌಲರ್‌ಗಳ ಮೇಲುಗೈ
ಪಂದ್ಯದುದ್ದಕ್ಕೂ ಬೌಲರ್‌ಗಳೇ ಮೇಲುಗೈ ಸಾಧಿಸಿದರು. ಚೇಸಿಂಗ್ ವೇಳೆ ದಕ್ಷಿಣ ಆಫ್ರಿಕಾ 63ಕ್ಕೆ 5 ವಿಕೆಟ್ ಕಳೆದುಕೊಂಡಾಗಲೇ ಭಾರತದ ಗೆಲುವು ಖಾತ್ರಿಯಾಗಿತ್ತು. ಆದರೆ 6ನೇ ವಿಕೆಟಿಗೆ ಜತೆಗೂಡಿದ ನಾಯಕಿ ಸುನ್ ಲುಸ್ (24) ಮತ್ತು ಮರಿಜಾನ್ ಕಾಪ್ (29) 40 ರನ್ ಒಟ್ಟುಗೂಡಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ಮತ್ತೆ ಮೇಲುಗೈ ಸಾಧಿಸಿತು. ಏಕ್ತಾ ಬಿಷ್ಟ್ 3, ದೀಪ್ತಿ ಶರ್ಮ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಉರುಳಿಸಿ ಭಾರತದ ಗೆಲುವು ಸಾರಿದರು.
ಆರಂಭಿಕರಾದ ಪ್ರಿಯಾ ಪೂನಿಯ (0) ಮತ್ತು ಜೆಮಿಮಾ ರೋಡ್ರಿಗಸ್ (3) ಅವರನ್ನು ಬೇಗನೇ ಕಳೆದುಕೊಂಡ ಭಾರತ ಭಾರೀ ಆಘಾತಕ್ಕೆ ಸಿಲುಕಿತು. ಮಿಥಾಲಿ (11) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದಲ್ಲೂ ಭಾರತ ಚಡಪಡಿಸಿತು. 30ನೇ ಓವರ್ ವೇಳೆ ಭಾರತ 71 ರನ್ನಿಗೆ 6 ವಿಕೆಟ್ ಉದುರಿಸಿಕೊಂಡಿತ್ತು. ಹರ್ಮನ್‌ಪ್ರೀತ್ ಕೌರ್ (38) ಮತ್ತು ಶಿಖಾ ಪಾಂಡೆ (35) 49 ರನ್ ಜತೆಯಾಟ ನಡೆಸಿ ತಂಡವನ್ನು ಮೇಲೆತ್ತಿದರು.
ಸಂಕ್ಷಿಪ್ತ ಸ್ಕೋರ್
ಭಾರತ-45.5 ಓವರ್‌ಗಳಲ್ಲಿ 146 (ಕೌರ್ 38, ಪಾಂಡೆ 35, ರಾವತ್ 15, ಕಾಪ್ 20ಕ್ಕೆ 3, ಶಬ್ನಮ್ 18ಕ್ಕೆ 2, ಖಾಕಾ 33ಕ್ಕೆ 2). ದಕ್ಷಿಣ ಆಫ್ರಿಕಾ-48 ಓವರ್‌ಗಳಲ್ಲಿ 140 (ಕಾಪ್ 29, ಲುಸ್ 24, ವೋಲ್ವಾರ್ಟ್ 23, ಏಕ್ತಾ 32ಕ್ಕೆ 3, ರಾಜೇಶ್ವರಿ 22ಕ್ಕೆ 2, ದೀಪ್ತಿ 24ಕ್ಕೆ 2). ಪಂದ್ಯಶ್ರೇಷ್ಠ: ಏಕ್ತಾ ಬಿಷ್ಟ್. ಸರಣಿಶ್ರೇಷ್ಠ: ಮರಿಜಾನ್ ಕಾಪ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.