ಕೇಪ್‌ಟೌನ್ ಟೆಸ್ಟ್: ಬುಮ್ರಾ ಬ್ರೇಕ್; ಭಾರತಕ್ಕೆ 70 ರನ್ ಮುನ್ನಡೆ
Team Udayavani, Jan 12, 2022, 11:15 PM IST
ಕೇಪ್‌ಟೌನ್: ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಪರಾಕ್ರಮದ ಮೂಲಕ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಅಲ್ಪ ಮುನ್ನಡೆ ದೊರಕಿಸಿ ಕೊಟ್ಟಿದ್ದಾರೆ. ಭಾರತದ 223ಕ್ಕೆ ಉತ್ತರವಾಗಿ ಹರಿಣಗಳ ಪಡೆ 210ಕ್ಕೆ ಮೊದಲ ಇನ್ನಿಂಗ್ಸ್ ಮುಗಿಸಿದೆ.
13 ರನ್ ಲೀಡ್ ಬಳಿಕ ದ್ವಿತೀಯ ಇನ್ನಿಂಗ್ಸ್ ಆಡಲಿಳಿದ ಭಾರತ ಆರಂಭಿಕ ಆಘಾತಕ್ಕೆ ಸಿಲುಕಿತು. ರಾಹುಲ್ (10) ಮತ್ತು ಅಗರ್ವಾಲ್ (7) ವಿಕೆಟ್ ಕಳೆದುಕೊಂಡು 57 ರನ್ ಗಳಿಸಿದೆ. ಪೂಜಾರ (9) ಮತ್ತು ಕೊಹ್ಲಿ (14) ಕ್ರೀಸಿನಲ್ಲಿದ್ದಾರೆ. ಒಟ್ಟು ಮುನ್ನಡೆ 70 ರನ್ನಿಗೆ ಏರಿದೆ. ಈ ಲೀಡ್ 250ರ ಗಡಿ ದಾಟಬೇಕಾದ ಅಗತ್ಯವಿದೆ.
ಬುಮ್ರಾ ಸಾಧನೆ 42ಕ್ಕೆ 5 ವಿಕೆಟ್. ಅವರು ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ 7ನೇ ನಿದರ್ಶನ ಇದಾಗಿದೆ. ಹಾಗೆಯೇ ಕೇಪ್‌ಟೌನ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ ಬೌಲರ್. 2010-11ರಲ್ಲಿ ಹರ್ಭಜನ್ ಸಿಂಗ್ 120ಕ್ಕೆ 7 ಮತ್ತು ಎಸ್. ಶ್ರೀಶಾಂತ್ 114ಕ್ಕೆ 5 ವಿಕೆಟ್ ಕೆಡವಿದ್ದರು.
2ನೇ ಎಸೆತದಲ್ಲೇ ವಿಕೆಟ್
ಬೆಳಗಿನ ಆಟದಲ್ಲಿ ಭಾರತ ಮೊದಲ ದಿನದ ನಾಟೌಟ್ ಆಟಗಾರರಿಬ್ಬರನ್ನೂ ಪೆವಿಲಿಯನ್ನಿಗೆ ರವಾನಿಸುವಲ್ಲಿ ಯಶಸ್ವಿಯಾಯಿತು. ಬುಮ್ರಾ ಮತ್ತು ಉಮೇಶ್ ಯಾದವ್ ವಿಕೆಟ್ ಟೇಕರ್. ಮಾರ್ಕ್‌ರಮ್ ಮೊದಲ ದಿನದ ಮೊತ್ತಕ್ಕೇ (8) ಆಟ ಮುಗಿಸಿದರು. ದಿನದಾಟದ ದ್ವಿತೀಯ ಎಸೆತದಲ್ಲೇ ಬುಮ್ರಾ ಈ ವಿಕೆಟ್ ಉಡಾಯಿಸಿ ಭಾರತದ ಪಾಳೆಯದಲ್ಲಿ ಹೊಸ ಜೋಶ್ ತುಂಬಿದರು. ನೈಟ್ ವಾಚ್‌ಮನ್ ಮಹಾರಾಜ್ 45 ಎಸೆತಗಳಿಂದ 25 ರನ್ (4 ಬೌಂಡರಿ) ಮಾಡಿದರು. ಉಮೇಶ್ ಯಾದವ್ ಅವರ ಕ್ಲಾಸಿಕ್ ಒಂದು ಮಿಡ್ಲ್ ಸ್ಟಂಪ್ ಎಗರಿಸಿತು. ಲಂಚ್ ವೇಳೆ ಸ್ಕೋರ್ ಮೂರಕ್ಕೆ 100 ರನ್ ಆಗಿತ್ತು.
ಮತ್ತೆ 4 ವಿಕೆಟ್ ಪತನ
ದ್ವಿತೀಯ ಅವಧಿಯ ಆಟವೂ ಭಾರತದ ಬೌಲರ್‌ಗಳಿಗೆ ಮೀಸಲಾಯಿತು. ಈ ಅವಧಿಯಲ್ಲಿ 4 ವಿಕೆಟ್ ಉಡಾಯಿಸಿ ಮೆರೆದರು. ಶಮಿ 2, ಉಮೇಶ್ ಯಾದವ್ ಮತ್ತು ಬುಮ್ರಾ ತಲಾ ಒಂದು ವಿಕೆಟ್ ಕಿತ್ತರು. ಟೀ ವೇಳೆ ದಕ್ಷಿಣ ಆಫ್ರಿಕಾ 7ಕ್ಕೆ 167 ರನ್ ಮಾಡಿತ್ತು. ಕೀಗನ್ ಪೀಟರ್‌ಸನ್ ಮಾತ್ರ 70 ರನ್ ಮಾಡಿ ಸವಾಲಾಗಿಯೇ ಉಳಿದಿದ್ದರು.
ಮೊದಲು ವಾಪಸಾದವರು ರಸ್ಸಿ ವಾನ್ ಡರ್ ಡುಸೆನ್. 21 ರನ್ ಮಾಡಿದ ಅವರು ಉಮೇಶ್ ಯಾದವ್ ಎಸೆತವನ್ನು ಕೊಹ್ಲಿಗೆ ಕ್ಯಾಚಿತ್ತರು. ಪೀಟರ್‌ಸನ್-ಬವುಮ ಜೋಡಿಯಿಂದ ಉತ್ತಮ ಜತೆಯಾಟದ ಸೂಚನೆ ಲಭಿಸಿತು. 5ನೇ ವಿಕೆಟಿಗೆ 47 ರನ್ ಒಟ್ಟುಗೂಡಿತು. ಆಗ ಶಮಿ ಒಂದೇ ಓವರ್‌ನಲ್ಲಿ ಅವಳಿ ವಿಕೆಟ್ ಬೇಟೆಯಾಡಿದರು. ಮೊದಲು ಟೆಂಬ ಬವುಮ ಭಾರತದ ಕಪ್ತಾನನಿಗೆ ಕ್ಯಾಚ್ ನೀಡಿ ವಾಪಸಾದರು. ಒಂದು ಎಸೆತದ ಬಳಿಕ ಕೀಪರ್ ಕೈಲ್ ವೆರೇಯ್ನ (0) ಭಾರತದ ಕೀಪರ್‌ಗೆ ಕ್ಯಾಚ್ ಕೊಟ್ಟರು. ಬವುಮ ಗಳಿಕೆ 52 ಎಸೆತಗಳಿಂದ 28 ರನ್.
ಇದನ್ನೂ ಓದಿ:ಪ್ರೊ ಕಬಡ್ಡಿ: ದಬಾಂಗ್ ದಿಲ್ಲಿಯನ್ನು ತಿವಿದು ಕೆಡವಿದ ಬೆಂಗಳೂರು ಬುಲ್ಸ್
ಕೊಹ್ಲಿ 100 ಕ್ಯಾಚ್
ಟೆಂಬ ಬವುಮ ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ 100 ಕ್ಯಾಚ್ ಪಡೆದ ಭಾರತದ 6ನೇ ಕ್ಷೇತ್ರರಕ್ಷಕನೆನಿಸಿದರು (ಕೀಪರ್ ಹೊರತುಪಡಿಸಿ). ಉಳಿದವರೆಂದರೆ ರಾಹುಲ್ ದ್ರಾವಿಡ್ (209), ವಿವಿಎಸ್ ಲಕ್ಷ್ಮಣ್ (135), ಸಚಿನ್ ತೆಂಡುಲ್ಕರ್ (115), ಸುನೀಲ್ ಗಾವಸ್ಕರ್ (108) ಮತ್ತು ಅಜರುದ್ದೀನ್ (105).
ಸೇಡು ತೀರಿಸಿಕೊಂಡ ಬುಮ್ರಾ
ಇನ್ನೇನು ಟೀ ಬ್ರೇಕ್ ಸಮೀಪಿಸಿತು ಎನ್ನುವಾಗ ಬುಮ್ರಾ ಮತ್ತೊಂದು ಯಶಸ್ಸು ತಂದಿತ್ತರು. ಮಾರ್ಕೊ ಜಾನ್ಸೆನ್ ಅವರನ್ನು ಬೌಲ್ಡ್ ಮಾಡಿ ಕಳೆದ ಟೆಸ್ಟ್ ಪಂದ್ಯದ ಸೇಡು ತೀರಿಸಿಕೊಂಡರು. ವಾಂಡರರ್ನಲ್ಲಿ ಜಾನ್ಸೆನ್ ಬೌನ್ಸರ್ ಮೂಲಕ ಬುಮ್ರಾ ಅವರನ್ನು ಕಾಡಿದ್ದರು. ಮುಂದಿನ ಸಲ ನೋಡಿಕೊಳ್ಳೋಣ ಎಂಬ ರೀತಿಯಲ್ಲಿ ಬುಮ್ರಾ ಪ್ರತಿಕ್ರಿಯಿಸಿದ್ದರು!
ಟೀ ಬಳಿಕ ಬುಮ್ರಾ ಬಿಗ್ ವಿಕೆಟ್ ಉಡಾಯಿಸಿದರು. ಅದು ಕ್ರೀಸ್ ಆಕ್ರಮಿಸಿಕೊಂಡು ನಿಂತಿದ್ದ ಪೀಟರ್‌ಸನ್ ವಿಕೆಟ್ ಆಗಿತ್ತು. ಮೊದಲ ಸ್ಲಿಪ್‌ನಲ್ಲಿದ್ದ ಪೂಜಾರ ಕ್ಯಾಚ್ ಪಡೆದರು. 166 ಎಸೆತ ಎದುರಿಸಿ ನಿಂತ ಪೀಟರ್‌ಸನ್ 9 ಬೌಂಡರಿ ನೆರವಿನಿಂದ 72 ರನ್ ಕೊಡುಗೆ ಸಲ್ಲಿಸಿದರು.
ಸ್ಕೋರ್ ಪಟ್ಟಿ
ಭಾರ ತ ಪ್ರಥಮ ಇನ್ನಿಂಗ್ಸ್ 223
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್
ಡೀನ್ ಎಲ್ಗರ್ ಸಿ ಪೂಜಾರ ಬಿ ಬುಮ್ರಾ 3
ಮಾರ್ಕ್‌ರಮ್ ಬಿ ಬುಮ್ರಾ 8
ಮಹಾರಾಜ್ ಬಿ ಉಮೇಶ್ 25
ಪೀಟರ್ ಸನ್ ಸಿ ಪೂಜಾರ ಬಿ ಬುಮ್ರಾ 72
ಡುಸೆನ್ ಸಿ ಕೊಹ್ಲಿ ಬಿ ಉಮೇಶ್ 21
ಟೆಂಬಬವು ಮ ಸಿ ಕೊಹ್ಲಿ ಬಿ ಶಮಿ 28
ವೆರೇಯ್ನ ಸಿ ಪಂತ್ ಬಿ ಶಮಿ 0
ಮಾರ್ಕೊ ಜಾನ್ಸೆನ್ ಬಿ ಬುಮ್ರಾ 7
ಕಾಗಿಸೊ ರಬಾಡ ಸಿ ಬುಮ್ರಾ ಬಿ ಠಾಕೂರ್ 15
ಡ್ನೂನ್ ಒಲಿವರ್ ಔಟಾಗದೆ 10
ಎನ್‌ಗಿಡಿ ಸಿ ಅಶ್ವಿನ್ ಬಿ ಬುಮ್ರಾ 3
ಇತರ 18
ಒಟ್ಟು (ಆಲೌಟ್) 210
ವಿಕೆಟ್ ಪತ ನ:1-10, 2-17, 3-45, 4-112, 5-159, 6-159, 7-176, 8-179, 9-200.
ಬೌಲಿಂಗ್ ;
ಜಸ್‌ಪ್ರೀತ್ ಬುಮ್ರಾ 23.3-8-42-5
ಉಮೇಶ್ ಯಾದವ್ 16-3-64-2
ಮೊಹಮ್ಮದ್ ಶಮಿ 16-4-39-2
ಶಾರ್ದೂಲ್ ಠಾಕೂರ್ 12-2-37-1
ಆರ್. ಅಶ್ವಿ ನ್ 9-2-15-0
ಭಾರತ ದ್ವಿತೀಯ ಇನ್ನಿಂಗ್ಸ್ 57/2
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.