ಧವನ್ ಬಳಗಕ್ಕೆ ಬಲಿಷ್ಠ ಕಿವೀಸ್ ಸವಾಲು: ಇಂದಿನಿಂದ ಏಕದಿನ ಸರಣಿ
Team Udayavani, Nov 25, 2022, 5:50 AM IST
ಆಕ್ಲೆಂಡ್: ಇಷ್ಟು ದಿನಗಳ ಕಾಲ ಟಿ20 ಪಂದ್ಯಗಳನ್ನೇ ಆಡುತ್ತ ಬಂದ ಭಾರತ ತಂಡ ಇನ್ನು ಏಕದಿನ ಕ್ರಿಕೆಟ್‌ನತ್ತ ಮುಖ ಮಾಡುತ್ತಿದೆ. ನ್ಯೂಜಿಲೆಂಡ್ ಎದುರಿನ 3 ಪಂದ್ಯಗಳ ಸರಣಿ ಶುಕ್ರವಾರ ಆಕ್ಲೆಂಡ್‌ನ “ಈಡನ್ ಪಾರ್ಕ್’ನಲ್ಲಿ ಆರಂಭವಾಗಲಿದೆ.
ಪ್ರಮುಖ ಆಟಗಾರರ ವಿಶ್ರಾಂತಿಯ ಕಾರಣ ಎಡಗೈ ಆರಂಭಕಾರ ಶಿಖರ್ ಧವನ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಒಂದಿಷ್ಟು ಬದಲಾವಣೆಗಳೂ ಗೋಚರಿಸುತ್ತಿವೆ. ನಾಯಕ ರೋಹಿತ್ ಶರ್ಮ, ಮಾಜಿ ನಾಯಕ ವಿರಾಟ್ ಕೊಹ್ಲಿ, ಯಾರ್ಕರ್ ತಜ್ಞ ಜಸ್ಪ್ರೀತ್ ಬುಮ್ರಾ, ಆರಂಭಕಾರ ಕೆ.ಎಲ್.ರಾಹುಲ್, ಆಲ್‌ರೌಂಡರ್ ರವೀಂದ್ರ ಜಡೇಜ ಅವರೆಲ್ಲ ಈ ಸರಣಿಯಲ್ಲಿ ಆಡುತ್ತಿಲ್ಲ. ಮೊನ್ನೆ ಟಿ20 ಸರಣಿಯನ್ನು ಗೆಲ್ಲಿಸಿಕೊಟ್ಟ ನಾಯಕ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿಲ್ಲ. ಹೀಗಾಗಿ ತಂಡದ ತುಂಬೆಲ್ಲ ಯುವ ಹಾಗೂ ಪ್ರತಿಭಾನ್ವಿತ ಆಟಗಾರರೇ ತುಂಬಿರುವುದು ಕಂಡುಬರುತ್ತದೆ.
ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಎಲ್ಲರಿಗೂ ಇದೊಂದು ಮಹತ್ವದ ಸರಣಿ. ಆದರೆ “ತಾತ್ಕಾಲಿಕ ನಾಯಕ’ ಶಿಖರ್ ಧವನ್ ಪಾಲಿಗೆ ಅಲ್ಲವೆಂದು ಹೇಳಲಾಗುತ್ತಿದೆ. ಅವರು ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಮುಂದಿನ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ. ಅಂದಹಾಗೆ ಭಾರತದ ಪಾಲಿಗೆ ಇದೊಂದು ಸೇಡಿನ ಸರಣಿಯೂ ಹೌದು. 2020ರ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ಪಡೆಯನ್ನು ನ್ಯೂಜಿಲೆಂಡ್ 3-0 ಅಂತರದಿಂದ ಬಗ್ಗುಬಡಿದಿತ್ತು!
ಧವನ್ ಜತೆಗೆ ಗಿಲ್: ತಂಡದ ಸಂಯೋಜನೆ ಬಗ್ಗೆ ಹೇಳಬೇಕಾದರೆ, ಶಿಖರ್ ಧವನ್ ಜತೆಗೆ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸುವುದರಲ್ಲಿ ಅನುಮಾನವಿಲ್ಲ. ಕಳೆದ 12 ಪಂದ್ಯಗಳಲ್ಲಿ 57ಕ್ಕೂ ಹೆಚ್ಚಿನ ಸರಾಸರಿ ಹಾಗೂ 100 ಪ್ಲಸ್ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಹೆಗ್ಗಳಿಕೆ ಇವರದು. ಅಲ್ಲದೇ ಟಿ20ಯಲ್ಲಿ ಗಿಲ್ ಅವಕಾಶ ವಂಚಿತರಾಗಿದ್ದರು. ಹೀಗಾಗಿ ಏಕದಿನದಲ್ಲಿ ಇವರು ಎಂದಿನ ಚಾರ್ಮ್ ತೋರಲೇಬೇಕಿದೆ.
ಸೂರ್ಯಕುಮಾರ್ ಯಾದವ್ ಅವರಿಗೆ ಟಿ20 ಕ್ರಿಕೆಟ್‌ನಿಂದ ಏಕದಿನ ಲಯಕ್ಕೆ ಮರಳುವುದು ಸಮಸ್ಯೆ ಆಗಲಿಕ್ಕಿಲ್ಲ. ಆದರೆ ಟಿ20ಯಲ್ಲಿ ವೈಫಲ್ಯ ಕಂಡ ಶ್ರೇಯಸ್ ಐಯ್ಯರ್ ಮೇಲೆ ಹೆಚ್ಚಿನ ಒತ್ತಡವಿದೆ. ತಂಡದ ಮಧ್ಯಮ ಕ್ರಮಾಂಕ ಕಿವೀಸ್ ದಾಳಿಯನ್ನು ತಡೆದು ನಿಲ್ಲಬೇಕಾದರೆ ಐಯ್ಯರ್ ಬ್ಯಾಟ್‌ನಿಂದ ರನ್ ಹರಿದುಬರಲೇಬೇಕಿದೆ.
ಸಂಜು ಸ್ಯಾಮ್ಸನ್, ರಿಷಭ್ ಪಂತ್ ಮತ್ತು ದೀಪಕ್ ಹೂಡಾ ತ್ರಿವಳಿ ಹಿಟ್ಟರ್‌ಗಳಾಗಿದ್ದಾರೆ. ಇವರಲ್ಲಿ ಸ್ಯಾಮ್ಸನ್‌ಗೆ ಟಿ20ಯಲ್ಲಿ ಅವಕಾಶ ಲಭಿಸಿರಲಿಲ್ಲ. ಪಂತ್ ಆರಂಭಿಕನಾಗಿ ಇಳಿದು ಯಶಸ್ಸು ಕಾಣಲಿಲ್ಲ. ಹೂಡಾ ಒಮ್ಮೆ ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲಿಲ್ಲ. ಇಲ್ಲಿ ನಿಂತು ಆಡಬೇಕಾದ ಅಗತ್ಯವಿದೆ. ಹಾಗೆಯೇ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೂ ಅನ್ವಯಿಸುವ ಮಾತಿದು.
ಭಾರತದ ವೇಗದ ಬೌಲಿಂಗ್ ವಿಭಾಗದಲ್ಲೂ ಭಾರೀ ಬದಲಾವಣೆ ಕಂಡುಬಂದಿದೆ. ಅನುಭವಿ ಭುವನೇಶ್ವರ್ ಕುಮಾರ್ ಗೈರಲ್ಲಿ ಯುವಕರೇ ಈ ವಿಭಾಗವನ್ನು ನಿಭಾಯಿಸಬೇಕಿದೆ. ಅರ್ಷದೀಪ್ ಸಿಂಗ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಕುಲದೀಪ್ ಸೇನ್ ಕಿವೀಸ್ ಟ್ರ್ಯಾಕ್ ಮೇಲೆ ಎಂತಹ ಮ್ಯಾಜಿಕ್ ಮಾಡಬಲ್ಲರೆಂಬುದನ್ನು ಕಾದು ನೋಡಬೇಕು. ಸ್ಪಿನ್ ವಿಭಾಗ ಚಹಲ್ ಮತ್ತು ಕುಲದೀಪ್ ಯಾದವ್ ಅವರನ್ನು ಅವಲಂಬಿಸಿದೆ.
ನ್ಯೂಜಿಲೆಂಡ್ ಬಲಿಷ್ಠ: ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿರುವ ಕಾರಣ ಆತಿಥೇಯ ನ್ಯೂಜಿಲೆಂಡ್ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗಗಳೆರಡರಲ್ಲೂ ಅದು ಮೇಲುಗೈ ಹೊಂದಿದೆ. ಹೀಗಾಗಿ ಧವನ್ ಪಡೆಯ ಮುಂದಿರುವ ಸವಾಲು ಸುಲಭದ್ದಂತೂ ಅಲ್ಲ.
ವೇಳಾಪಟ್ಟಿ:
ದಿನಾಂಕ/ಪಂದ್ಯ/ಸ್ಥಳ/ಆರಂಭ
ನ.25 /ಮೊದಲ ಏಕದಿನ/ಆಕ್ಲೆಂಡ್/ಬೆ.7.00
ನ.27/ ದ್ವಿತೀಯ ಏಕದಿನ/ಹ್ಯಾಮಿಲ್ಟನ್/ಬೆ.7.00
ನ.30 /ತೃತೀಯ ಏಕದಿನ/ಕ್ರೈಸ್ಟ್‌ಚರ್ಚ್/ಬೆ.7.00
ಸಮಯ: ಭಾರತೀಯ ಕಾಲಮಾನ
ಡಿಡಿ ನ್ಪೋರ್ಟ್ಸ್ 1.0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.