ಇಂದಿನಿಂದ ಭಾರತ-ಶ್ರೀಲಂಕಾ ಡೇ ನೈಟ್ ಮ್ಯಾಚ್: ಗಾರ್ಡನ್ ಸಿಟಿಯಲ್ಲಿ ಪಿಂಕ್ ಟೆಸ್ಟ್ ರಂಗು
ಬೆಂಗಳೂರಿನಲ್ಲಿ ನಡೆಯಲಿದೆ ಮೊದಲ ಹಗಲು ರಾತ್ರಿ ಟೆಸ್ಟ್ ಮ್ಯಾಚ್
Team Udayavani, Mar 12, 2022, 6:55 AM IST
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಶನಿವಾರದಿಂದ ಗುಲಾಲಿ ಚೆಂಡಿನ ನಲಿದಾಟ-ಕುಣಿದಾಟ. ಭಾರತ-ಶ್ರೀಲಂಕಾ ನಡುವೆ ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಸರಣಿಯ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ನಡೆಯಲಿದ್ದು, ಇದು ಹಗಲು-ರಾತ್ರಿ ಪಂದ್ಯವೆಂಬುದು ವಿಶೇಷ. ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಫ್ಲಡ್‌ಲೈಟ್ ಟೆಸ್ಟ್ ಆಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಸಹಜವಾಗಿಯೇ ಹೆಚ್ಚಿನ ಖುಷಿ ಮೂಡಿಸಿದೆ.
ಬೆಂಗಳೂರಿನಲ್ಲಿ 2 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಅದರಲ್ಲೂ 4 ವರ್ಷಗಳ ಬಳಿಕ ಟೆಸ್ಟ್ ಪಂದ್ಯದ ಆತಿಥ್ಯ ಲಭಿಸಿರುವುದರಿಂದ ಕ್ರಿಕೆಟ್ ಫ್ಯಾನ್ಸ್ ಫುಲ್ ಜೋಶ್‌ನಲ್ಲಿದ್ದಾರೆ. ಕೊರೊನಾ ಹಾವಳಿ ಹತೋಟಿಗೆ ಬಂದಿರುವುದರಿಂದ ಸ್ಟೇಡಿಯಂ ಪೂರ್ಣ ಪ್ರಮಾಣದಲ್ಲಿ ವೀಕ್ಷಕರಿಗೆ ತೆರೆಯಲ್ಪಡುವುದು ಈ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ವೇಳೆ ಹೋಳಿ ಸಡಗರವೂ ಮೇಳೈಸುವುದರಿಂದ ಟೆಸ್ಟ್ ಪಂದ್ಯ ಇನ್ನಷ್ಟು ರಂಗೇರಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.
ಅಂದಹಾಗೆ ಇದು ತವರಲ್ಲಿ ಈ ವರ್ಷ ಭಾರತ ಆಡಲಿರುವ ಕೊನೆಯ ಟೆಸ್ಟ್ ಪಂದ್ಯ. ಇದನ್ನು ಸ್ಮರಣೀ ಯಗೊಳಿಸಲು ಟೀಮ್ ಇಂಡಿಯಾದ ಪ್ರಯತ್ನ ಸಾಗು ವುದರಲ್ಲಿ ಅನುಮಾನವಿಲ್ಲ. 2022ರಲ್ಲಿ ಭಾರತವಿನ್ನೂ 7 ಟೆಸ್ಟ್ ಆಡಲಿಕ್ಕಿದೆಯಾದರೂ ಎಲ್ಲವೂ ವಿದೇಶದಲ್ಲೇ ನಡೆಯಲಿದೆ.
5 ದಿನ ಸಾಗೀತೇ ಪಂದ್ಯ?!
ಹೊನಲು ಬೆಳಕಿನ ಟೆಸ್ಟ್ ಪಂದ್ಯ ಎಂಬುದನ್ನು ಹೊರತು ಪಡಿಸಿ ಹೇಳುವುದಾದರೆ ಇಲ್ಲಿಯೂ ಭಾರತವೇ ನೆಚ್ಚಿನ ತಂಡವಾಗಿ ಗುರುತಿಸಲ್ಪಟ್ಟಿದೆ. ಮೊಹಾಲಿಯಲ್ಲಿ ಮೂರೇ ದಿನದಲ್ಲಿ ಇನ್ನಿಂಗ್ಸ್ ಸೋಲುಂಡ ಲಂಕೆಯ ಮೇಲೆ ಯಾವುದೇ ನಂಬಿಕೆ ಇಡಲಾಗದು. ಅದು ಪಂದ್ಯವನ್ನು ಎಷ್ಟು ದಿನಕ್ಕೆ ವಿಸ್ತರಿಸೀತು ಎಂಬುದೊಂದೇ ಸಣ್ಣ ಕೌತುಕ. ಮೊಹಾಲಿಯ ಜೋಶ್‌ನಲ್ಲೇ ಸಾಗಿದರೆ ರೋಹಿತ್ ಪಡೆ ಈ ಪಂದ್ಯವನ್ನೂ 3-4 ದಿನಗಳಲ್ಲಿ ಗೆದ್ದರೆ ಅಚ್ಚರಿ ಇಲ್ಲ.
ಶ್ರೀಲಂಕಾ ಸಾಮಾನ್ಯ ದರ್ಜೆಯ ತಂಡವಾಗಿದ್ದು, ಭಾರತಕ್ಕೆ ಯಾವ ರೀತಿಯಲ್ಲೂ ಸಾಟಿಯಾಗದು. ಸ್ನಾಯು ಸೆಳೆತಕ್ಕೊಳಗಾಗಿರುವ ಪೇಸ್ ಬೌಲರ್ ಲಹಿರು ಕುಮಾರ ಹೊರಗುಳಿದಿರುವುದು ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಇವರ ಸ್ಥಾನದಲ್ಲಿ ದುಷ್ಮಂತ ಚಮೀರ ಆಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಇಂಡಿಯನ್ ವೆಲ್ಸ್ : ಮುನ್ನಡೆದ ಸಾನಿಯಾ ಜೋಡಿ
ಸ್ಪಿನ್ನಿಗೆ ಬೆದರಿದ ಲಂಕಾ!
ರವೀಂದ್ರ ಜಡೇಜ ಅವರ ಆಲ್‌ರೌಂಡ್ ಪ್ರದರ್ಶನ ಮೊಹಾಲಿ ಟೆಸ್ಟ್ ಪಂದ್ಯದ ಹೈಲೈಟ್ ಆಗಿತ್ತು. ಅಜೇಯ 175 ರನ್ ಮತ್ತು 9 ವಿಕೆಟ್ ಸಾಧನೆ ಜಡೇಜ ಅವರ ಜಬರ್ದಸ್ತ್ ಸಾಧನೆಗೆ ಸಾಕ್ಷಿಯಾಗಿತ್ತು. ಅಶ್ವಿನ್ ಕೂಡ ಸ್ಪಿನ್ ಮೋಡಿಗೈದಿದ್ದರು. ಏಷ್ಯಾದ ತಂಡವಾಗಿದ್ದೂ ಲಂಕೆಗೆ ಸ್ಪಿನ್ ನಿಭಾಯಿಸಲು ಸಾಧ್ಯವಾಗಲಿಲ್ಲ ಎಂಬುದೊಂದು ವಿಪರ್ಯಾಸವೇ ಸರಿ.
ಬೆಂಗಳೂರಿನಲ್ಲೂ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇಲ್ಲ. ಇವರಿಬ್ಬರ ಜತೆಗೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಸೇರಿಕೊಂಡರಂತೂ ಲಂಕೆಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು ಖಂಡಿತ. ಇಂಗ್ಲೆಂಡ್ ಎದುರಿನ ಅಹ್ಮದಾಬಾದ್ ಪಿಂಕ್ ಟೆಸ್ಟ್ ಪಂದ್ಯದಲ್ಲಿ ಅಕ್ಷರ್ ಅವರೇ ಹೀರೋ ಆಗಿದ್ದರು. 11 ವಿಕೆಟ್ ಕೆಡವಿದ ಸಾಧನೆ ಇವರದಾಗಿತ್ತು. ಇವರಿಗಾಗಿ ಜಯಂತ್ ಯಾದವ್ ಸ್ಥಾನ ಬಿಡಬೇಕಾಗುತ್ತದೆ. ಮೊಹಾಲಿಯಲ್ಲಿ 17 ಓವರ್ ಎಸೆದರೂ ಜಯಂತ್ ವಿಕೆಟ್‌ಲೆಸ್ ಆಗಿದ್ದರು.
ಆದರೆ ಪಿಚ್ ಮೇಲೆ ಹುಲ್ಲನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿರುವುದರಿಂದ ಮೊಹಮ್ಮದ್ ಸಿರಾಜ್ ಸೇರ್ಪಡೆಯನ್ನು ತಳ್ಳಿಹಾಕುವಂತಿಲ್ಲ.
ಕೊಹ್ಲಿ ಶತಕ ನಿರೀಕ್ಷೆ
ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಕ್ಕಿಲ್ಲ. ಆದರೆ ವಿರಾಟ್ ಕೊಹ್ಲಿ ಶತಕದ ಬರಗಾಲ ನೀಗಿಸಿಕೊಳ್ಳಬಹುದೇ ಎಂಬ ಕುತೂಹಲವಿದೆ. ಅವರ ಕೊನೆಯ ಸೆಂಚುರಿ 2019ರ ಡೇ ನೈಟ್ ಟೆಸ್ಟ್ ಪಂದ್ಯದಲ್ಲೇ ಬಂದಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ಅದು ಬಾಂಗ್ಲಾದೇಶ ವಿರುದ್ಧದ ಕೋಲ್ಕತಾ ಟೆಸ್ಟ್ ಆಗಿತ್ತು. ಅಲ್ಲಿ ಕೊಹ್ಲಿ 136 ರನ್ ಹೊಡೆದಿದ್ದರು. ಈ ಶತಕ ಬಾರಿಸಿ 28 ತಿಂಗಳುಗಳೇ ಉರುಳಿವೆ.
ಚಿನ್ನಸ್ವಾಮಿ ಫುಲ್‌ಹೌಸ್
ಟಿಕೆಟ್ ಬೇಡಿಕೆ ಹೆಚ್ಚಿದ್ದರಿಂದ ಹಾಗೂ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಶೇ. 100ರಷ್ಟು ವೀಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದೆ.
“ಕೋವಿಡ್ ಕಾರಣ ಕೆಲವು ರಾಜ್ಯಗಳು ಶೇ. 25ರಷ್ಟು, ಇಲ್ಲವೇ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುತ್ತಿವೆ. ಆದರೆ 2 ವರ್ಷಗಳ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಶೇಕಡಾ 100ರಷ್ಟು ವೀಕ್ಷಕರಿಗೆ ಅನುಮತಿ ನೀಡಲಿದ್ದೇವೆ’ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
ವಾರದ ಹಿಂದೆ 50 ಶೇ. ವೀಕ್ಷಕರ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿತ್ತು. ಸೀಮಿತ ಟಿಕೆಟ್ ಲಭ್ಯವಾಗಿದ್ದರಿಂದ ಎಲ್ಲವೂ ಸೋಲ್ಡ್ ಔಟ್ ಆಗಿತ್ತು. ಹಾಗೆಯೇ ಕೋವಿಡ್ ನಿರ್ಬಂಧವೂ ತೆರವುಗೊಂಡಿದೆ. ಹೀಗಾಗಿ ಶೇ. 100ರಷ್ಟು ವೀಕ್ಷಕರಿಗೆ ಸ್ಟೇಡಿಯಂ ಬಾಗಿಲು ತೆರೆಯಲ್ಪಡಲಿದೆ.
ಬೆಂಗಳೂರು 12ನೇ ಡೇ ನೈಟ್ ಟೆಸ್ಟ್ ತಾಣ
1. ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಮೊದಲ ಸಲ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಇದು ವಿಶ್ವದ 12ನೇ ಹಾಗೂ ಭಾರತದ 3ನೇ ಹಗಲು ರಾತ್ರಿ ಟೆಸ್ಟ್ ತಾಣವೆನಿಸಲಿದೆ. ಭಾರತದ ಉಳಿದೆರಡು ಅಂಗಳಗಳೆಂದರೆ ಕೋಲ್ಕತಾ ಮತ್ತು ಅಹ್ಮದಾಬಾದ್. ಉಳಿದಂತೆ ಅಡಿಲೇಡ್, ದುಬಾೖ, ಬ್ರಿಸ್ಬೇನ್, ಬರ್ಮಿಂಗ್‌ಹ್ಯಾಮ್, ಪೋರ್ಟ್ ಎಲಿಜಬೆತ್, ಆಕ್ಲೆಂಡ್, ಬ್ರಿಜ್‌ಟೌನ್, ಪರ್ತ್ ಮತ್ತು ಹೋಬರ್ಟ್‌ನಲ್ಲಿ ಡೇ ನೈಟ್ ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ.
2. ಈ ವರೆಗೆ 18 ಡೇ ನೈಟ್ ಟೆಸ್ಟ್ ಪಂದ್ಯಗಳು ನಡೆದಿದ್ದು, ಎಲ್ಲ ಪಂದ್ಯಗಳೂ ಸ್ಪಷ್ಟ ಫಲಿತಾಂಶ ಕಂಡಿರುವುದು ವಿಶೇಷ. ಆಸ್ಟ್ರೇಲಿಯ ಆಡಿದ ಎಲ್ಲ 10 ಪಂದ್ಯಗಳನ್ನು ಗೆದ್ದಿರುವುದು ದಾಖಲೆಯಾಗಿದೆ. ಭಾರತ ಮತ್ತು ಶ್ರೀಲಂಕಾ ತಲಾ 2 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಉಳಿದಂತೆ ಪಾಕಿಸ್ಥಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಲಾ ಒಂದು ಗೆಲುವು ಕಂಡಿವೆ.
3. ಡೇ ನೈಟ್ ಟೆಸ್ಟ್ ಇತಿಹಾಸದ ಮೊದಲ ಪಂದ್ಯ 2015ರಲ್ಲಿ ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್ ನಡುವೆ ಅಡಿಲೇಡ್‌ನಲ್ಲಿ ನಡೆಯಿತು. ಇದನ್ನು ಆಸ್ಟ್ರೇಲಿಯ 3 ವಿಕೆಟ್‌ಗಳಿಂದ ಗೆದ್ದಿತು.
4. ಡೇ ನೈಟ್ ಟೆಸ್ಟ್‌ನಲ್ಲಿ ಮೊದಲ ವಿಕೆಟ್ ಉರುಳಿಸಿದ ಹೆಗ್ಗಳಿಕೆ ಜೋಶ್ ಹ್ಯಾಝಲ್‌ವುಡ್ ಅವರದು. ಔಟಾದ ಆಟಗಾರ ಮಾರ್ಟಿನ್ ಗಪ್ಟಿಲ್.
5. ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳಲ್ಲಿ 2 ತ್ರಿಶತಕ ಸೇರಿದಂತೆ ಒಟ್ಟು 23 ಶತಕ ದಾಖಲಾಗಿದೆ. ಮಾರ್ನಸ್ ಲಬುಶೇನ್ ಅತ್ಯಧಿಕ 3 ಸೆಂಚುರಿ ಹೊಡೆದಿದ್ದಾರೆ. ಭಾರತದ ಏಕೈಕ ಶತಕ ಹೊಡೆದವರು ವಿರಾಟ್ ಕೊಹ್ಲಿ (ಬಾಂಗ್ಲಾ ವಿರುದ್ಧ 136 ರನ್).
6. ಹಗಲು ರಾತ್ರಿ ಟೆಸ್ಟ್‌ನಲ್ಲಿ ಮೊದಲ ಶತಕ ಬಾರಿಸಿದ ಆಟಗಾರ ಪಾಕಿಸ್ಥಾನದ ಅಜರ್ ಅಲಿ. ಇದನ್ನು ಅವರು ತ್ರಿಶತಕಕ್ಕೆ ವಿಸ್ತರಿಸಿದ್ದರು (302). ವೆಸ್ಟ್ ಇಂಡೀಸ್ ಎದುರಿನ ದುಬಾೖ ಟೆಸ್ಟ್‌ನಲ್ಲಿ ಅಲಿ ಈ ಸಾಧನೆಗೈದರು. ತ್ರಿಶತಕ ಹೊಡೆದ ಮತ್ತೋರ್ವ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್. ಅವರು ಪಾಕಿಸ್ಥಾನ ಎದುರಿನ 2019ರ ಅಡಿಲೇಡ್ ಪಂದ್ಯದಲ್ಲಿ 335 ಬಾರಿಸಿದ್ದರು. ಇದು ದಾಖಲೆಯಾಗಿದೆ.
7. ಪಾಕಿಸ್ಥಾನ ವಿರುದ್ಧ ಆಸ್ಟ್ರೇಲಿಯ 3ಕ್ಕೆ 589 ರನ್ ಬಾರಿಸಿದ್ದು ಅತ್ಯಧಿಕ ಮೊತ್ತವಾದರೆ, ಆಸ್ಟ್ರೇಲಿಯ ಎದುರು ಭಾರತ 36ಕ್ಕೆ ಕುಸಿದದ್ದು ಅತೀ ಕಡಿಮೆ ಸ್ಕೋರ್ ಆಗಿದೆ.
8. ಅತ್ಯಧಿಕ ರನ್ ದಾಖಲೆ ಡೇವಿಡ್ ವಾರ್ನರ್ ಹೆಸರಲ್ಲಿದೆ (6 ಟೆಸ್ಟ್, 596 ರನ್). ಅತ್ಯಧಿಕ ವಿಕೆಟ್ ಕೆಡವಿದ ದಾಖಲೆ ಹೊಂದಿರುವವರು ಮಿಚೆಲ್ ಸ್ಟಾರ್ಕ್ (8 ಟೆಸ್ಟ್, 46 ವಿಕೆಟ್). ಟೆಸ್ಟ್ ಪಂದ್ಯವೊಂದರ ಶ್ರೇಷ್ಠ ಬೌಲಿಂಗ್ ದಾಖಲೆ ದೇವೇಂದ್ರ ಬಿಶೂ ಅವರದು (49ಕ್ಕೆ 8).
9. ವನಿತಾ ತಂಡಗಳ ನಡುವೆ 2 ಡೇ ನೈಟ್ ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಈ ಎರಡೂ ಟೆಸ್ಟ್ ಡ್ರಾಗೊಂಡಿವೆ. ಮೊದಲ ಪಂದ್ಯ 2017ರಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವೆ ಸಿಡ್ನಿಯಲ್ಲಿ, ದ್ವಿತೀಯ ಪಂದ್ಯ ಭಾರತ-ಆಸ್ಟ್ರೇಲಿಯ ನಡುವೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿತ್ತು.
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಆರಂಭ: ಅಪರಾಹ್ನ 2.00
ಬೆಂಗಳೂರಿನಲ್ಲಿ ಭಾರತದ ಸಾಧನೆ
ಟೆಸ್ಟ್: 23, ಗೆಲುವು: 08, ಸೋಲು: 06, ಡ್ರಾ: 09
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.