![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 27, 2020, 5:35 AM IST
ಇಂದಿನಿಂದ ಭಾರತ-ಆಸ್ಟ್ರೇಲಿಯ ಏಕದಿನ ಸರಣಿ
288 ದಿನಗಳ ಬಳಿಕ ಭಾರತದ ಮೊದಲ ಏಕದಿನ
ಕ್ರಿಕೆಟ್ ವೀಕ್ಷಕರಿಗೆ ತೆರೆಯಲಿದೆ ಸ್ಟೇಡಿಯಂ ಬಾಗಿಲು
ಭಾರತಕ್ಕೆ ರೋಹಿತ್, ಇಶಾಂತ್ ಗೈರಿನ ಆತಂಕ
ಸಿಡ್ನಿ: ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ಸೋಂಕು ಇಳಿಮುಖಗೊಳ್ಳುತ್ತಿರುವ ಹೊತ್ತಿನಲ್ಲಿ ಭಾರತ-ಆಸ್ಟ್ರೇಲಿಯ ತಂಡ ಗಳು ನೂತನ ಕ್ರಿಕೆಟ್ ಅಧ್ಯಾಯ ಆರಂಭಿಸುವ ತವಕದಲ್ಲಿವೆ. ಈ ಮಾರಿಗೆ ಸಡ್ಡು ಹೊಡೆದು, ಮಾರ್ಚ್ ಬಳಿಕ ಮೊದಲ ಸಲ ವೀಕ್ಷಕರಿಗೆ ಸ್ಟೇಡಿಯಂ ಬಾಗಿಲನ್ನು ತೆರೆದು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಲು ಮುಂದಾಗಿವೆ. ಶುಕ್ರವಾರ ಸಿಡ್ನಿಯಲ್ಲಿ ನಡೆಯುವ ಮೊದಲ ಏಕದಿನ ಪಂದ್ಯ ಇಂಥದೊಂದು ಸ್ಮರಣೀಯ ಘಟನೆಗೆ ಸಾಕ್ಷಿಯಾಗಲಿದೆ.
ಉಳಿದಂತೆ ಈ ಪಂದ್ಯದ ವಿಶೇಷವೆಂದರೆ ಭಾರತದ ಆಟಗಾರರು 1992ರ ಏಕದಿನ ವಿಶ್ವಕಪ್ ವೇಳೆ ಧರಿಸಿದಂತಹ “ನೇವಿ ಬ್ಲೂ’ ಬಣ್ಣದ ಜೆರ್ಸಿಯಲ್ಲಿ ಆಡಲಿಳಿಯುವುದು. ಆಸ್ಟ್ರೇಲಿಯದಲ್ಲೇ ನಡೆದ ಅಂದಿನ ವಿಶ್ವಕಪ್‌ನಲ್ಲಿ ಮೊದಲ ಸಲ ಬಣ್ಣದ ಉಡುಗೆಯನ್ನು ಪರಿಚಯಿಸಲಾಗಿತ್ತು. ಆದರೆ 9 ತಂಡಗಳು ಪಾಲ್ಗೊಂಡ ಅಂದಿನ ಕೂಟದಲ್ಲಿ ಭಾರತ 7ನೇ ಸ್ಥಾನಕ್ಕೆ ಕುಸಿದುದನ್ನು ಮರೆಯುವಂತಿಲ್ಲ!
ಒಂದೆರಡು ತೊಡಕುಗಳು
ಕಳೆದ ಪ್ರವಾಸದ ವೇಳೆ ಆಸ್ಟ್ರೇಲಿಯಕ್ಕೆ ಮೊದಲ ಸಲ ಅವರದೇ ನೆಲದಲ್ಲಿ ಸರಣಿ ಸೋಲುಣಿಸಿ ಇತಿಹಾಸ ನಿರ್ಮಿಸಿದ್ದ ಟೀಮ್ ಇಂಡಿಯಾ ಈ ಸಲವೂ ಇಂಥದೇ ಪರಾಕ್ರಮ ಮೆರೆದೀತೇ ಎಂಬುದು ಎಲ್ಲರ ಕುತೂಹಲ. ಆದರೆ ಇದಕ್ಕೆ ಎರಡು ದೊಡ್ಡ ತೊಡಕುಗಳಿವೆ. ಸಿಡ್ನಿಯಲ್ಲಿ ಭಾರತದ ಏಕದಿನ ದಾಖಲೆ ಅತ್ಯಂತ ಕಳಪೆ ಆಗಿರುವುದು ಹಾಗೂ ಸ್ಟಾರ್ ಆಟಗಾರರಾದ ರೋಹಿತ್ ಶರ್ಮ ಮತ್ತು ಇಶಾಂತ್ ಗಾಯಾಳಾಗಿ ಹೊರಗುಳಿದಿರುವುದು. ಹೀಗಾಗಿ ಭಾರತದ ಟೀಮ್ ಕಾಂಬಿನೇಶನ್‌ಗೆ ಇದೊಂದು ದೊಡ್ಡ ತೊಡಕಾಗಿ ಪರಿಣಮಿಸಿದೆ.
2018-19ರ ಪ್ರವಾಸದ ವೇಳೆ ಭಾರತ 2-1 ಅಂತರದಿಂದ ಸರಣಿ ಜಯಿಸಿತಾದರೂ ಸಿಡ್ನಿಯ ಆರಂಭಿಕ ಪಂದ್ಯದಲ್ಲಿ ಸೋಲುಂಡಿತ್ತು. ಈ ಬಾರಿ ಮೊದಲೆರಡು ಪಂದ್ಯಗಳನ್ನು ಸಿಡ್ನಿಯಲ್ಲೇ ಆಡಲಿದೆ. ಹೀಗಾಗಿ ಸಣ್ಣದೊಂದು ಆತಂಕ ಇದ್ದೇ ಇದೆ.
ಓಪನರ್ ಯಾರು?
ಇನ್ನು ಹನ್ನೊಂದರ ಬಳಗದ ವಿಚಾರ. ರೋಹಿತ್ ಗೈರಲ್ಲಿ ಧವನ್ ಜತೆ ಇನ್ನಿಂಗ್ಸ್ ಆರಂಭಿಸುವವರ್ಯಾರು ಎಂಬುದೊಂದು ದೊಡ್ಡ ಪ್ರಶ್ನೆ. ಇಲ್ಲಿ ಸ್ಟಾರ್ಕ್-ಕಮಿನ್ಸ್ ದಾಳಿಯನ್ನು ಸಮರ್ಥ ರೀತಿಯಲ್ಲಿ ಎದುರಿಸುವವರು ಬೇಕು. ಅಗರ್ವಾಲ್-ಗಿಲ್ ನಡುವೆ ಪೈಪೋಟಿ ಇದೆ. ಅಗರ್ವಾಲ್ ಅವರೇ ಮೊದಲ ಆಯ್ಕೆ ಎಂಬುದು ಸದ್ಯದ ಲೆಕ್ಕಾಚಾರ. ಆಗ ಕೀಪಿಂಗ್ ಕೂಡ ಮಾಡಬೇಕಿರುವ ರಾಹುಲ್ ಮಧ್ಯ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ.
ಉಳಿದಂತೆ ಭಾರತದ ದೊಡ್ಡ ಸಮಸ್ಯೆಯೆಂದರೆ ಸಿಡ್ನಿಯಲ್ಲಿ ಕೊಹ್ಲಿ ರನ್ ಬರಗಾಲ ಅನುಭವಿಸುತ್ತ ಬಂದಿರುವುದು. ಇದು ಕೊನೆಗಾಣುವುದು ಅತ್ಯಗತ್ಯ. ಆಸೀಸ್ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಧವನ್, ಡೆಲ್ಲಿಯನ್ನು ಮೊದಲ ಸಲ ಫೈನಲ್‌ಗೆ ತಂದ ಅಯ್ಯರ್, ಉತ್ತಮ ಫಾರ್ಮ್ನಲ್ಲಿರುವ ರಾಹುಲ್ ಭಾರತದ ಬ್ಯಾಟಿಂಗ್ ಸರದಿಯ ಭರವಸೆಯಾಗಿದ್ದಾರೆ. ಪಾಂಡೆ ಕೂಡ ಲೈನ್‌ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಬುಮ್ರಾ-ಶಮಿ ಜೋಡಿಗೆ ಸೂಕ್ತ ವೇಗಿಯೋರ್ವನ ಬೆಂಬಲದ ಕೊರತೆ ಇದೆ. ಸೈನಿ, ಠಾಕೂರ್ ಸಾಮರ್ಥ್ಯ ಪರೀಕ್ಷೆಗೆ ಇದೊಂದು ವೇದಿಕೆ. ಜಡೇಜ, ಚಹಲ್ ಸ್ಪಿನ್ ವಿಭಾಗವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ ವಿಶ್ವಾಸವಿದೆ.
2018-19ರ ಐತಿಹಾಸಿಕ ಸರಣಿ ಗೆಲುವಿನ ವೇಳೆ ಕಾಣಿಸಿಕೊಂಡಿದ್ದ ರೋಹಿತ್, ರಾಯುಡು, ಧೋನಿ, ಭುವನೇಶ್ವರ್, ದಿನೇಶ್ ಕಾರ್ತಿಕ್, ಖಲೀಲ್ ಅಹ್ಮದ್ ಮೊದಲಾದವರು ಈ ಸಲ ಟೀಮ್ ಇಂಡಿಯಾದಿಂದ ಬೇರ್ಪಟ್ಟಿದ್ದಾರೆ.
ಬಲಿಷ್ಠಗೊಂಡಿದೆ ಆಸ್ಟ್ರೇಲಿಯ
ಕಳೆದ ಸಲ ಭಾರತದ ವಿರುದ್ಧ ಸರಣಿ ಸೋತ ಆಸ್ಟ್ರೇಲಿಯ ಈ ಬಾರಿ ಹೆಚ್ಚು ಬಲಿಷ್ಠಗೊಂಡಿದೆ. ವಾರ್ನರ್, ಸ್ಮಿತ್, ಲಬುಶೇನ್, ಸ್ಟಾರ್ಕ್, ಕಮಿನ್ಸ್ ಅವರ ಉಪಸ್ಥಿತಿಯೇ ಇದಕ್ಕೆ ಕಾರಣ. ಇವರ್ಯಾರೂ 2018-19ರ ಸರಣಿ ವೇಳೆ ಆಸೀಸ್ ತಂಡದಲ್ಲಿರಲಿಲ್ಲ. ಹೀಗಾಗಿ ಇದನ್ನು ಆಸ್ಟ್ರೇಲಿಯದ ಪೂರ್ಣ ಸಾಮರ್ಥ್ಯದ ತಂಡವೆಂದೇ ಪರಿಗಣಿಸಬೇಕಾಗುತ್ತದೆ. ಇವರೆಲ್ಲರ ಗುರಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವುದು. ಹೀಗಾಗಿ ಪ್ರವಾಸಿಗರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದುದು ಅನಿವಾರ್ಯ.
ಬಿಸಿಸಿಐ ಮನವಿ
ರೋಹಿತ್ ಶರ್ಮ ಮತ್ತು ಇಶಾಂತ್ ಶರ್ಮ ಅವರಿಗಾಗಿ ಕ್ವಾರಂಟೈನ್ ನಿಯಮವನ್ನು ಸಡಿಲಿಸುವಂತೆ ಬಿಸಿಸಿಐ “ಕ್ರಿಕೆಟ್ ಆಸ್ಟ್ರೇಲಿಯ’ಕ್ಕೆ ಮನವಿ ಮಾಡಿದೆ. ಗಾಯಾಳು ಕ್ರಿಕೆಟಿಗರಿಬ್ಬರಿಗೂ ಕಾಂಗರೂ ನಾಡಿನಲ್ಲಿರುವ ಭಾರತ ತಂಡವನ್ನು ತ್ವರಿತವಾಗಿ ಕೂಡಿಕೊಳ್ಳುವ ರೀತಿಯಲ್ಲಿ ನಿಯಮದಲ್ಲಿ ಬದಲಾವಣೆ ಮಾಡಿದರೆ ಅನುಕೂಲ ಎಂಬುದಾಗಿ ಬಿಸಿಸಿಐ ಈ ಮನವಿಯಲ್ಲಿ ಉಲ್ಲೇಖೀಸಿದೆ.
ಸದ್ಯ ಗಾಯಾಳು ಕ್ರಿಕೆಟಿಗರಿಬ್ಬರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ಎಕ್ಸ್‌ಟ್ರಾ ಇನ್ನಿಂಗ್ಸ್
– ಭಾರತ 288 ದಿನಗಳ ಬಳಿಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಲಿಳಿಯುತ್ತಿದೆ. ಇದು 1976-78ರ ಬಳಿಕ ದಾಖಲಾದ ಭಾರತೀಯ ಕ್ರಿಕೆಟಿನ ಸುದೀರ್ಘ ವಿರಾಮ.
– ಭಾರತ 268 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿಳಿಯದೆ. ಇದು 1992ರ ಬಳಿಕ ಭಾರತ ಕಂಡ ಅತೀ ದೀರ್ಘ ವಿರಾಮವಾಗಿದೆ.
– ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಆಡಿದ 17 ಪಂದ್ಯಗಳಲ್ಲಿ ಭಾರತ 14ರಲ್ಲಿ ಸೋಲನುಭವಿಸಿದೆ. ಗೆದ್ದದ್ದು ಎರಡರಲ್ಲಿ ಮಾತ್ರ. ಒಂದು ಪಂದ್ಯ ವಾಶೌಟ್ ಆಗಿದೆ. ಆದರೆ ಉಳಿದ ತಂಡಗಳ ವಿರುದ್ಧ ಇಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದೆ.
– ಸಿಡ್ನಿಯಲ್ಲಿ ಆಡಲಾದ ಕಳೆದ 5 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡವೇ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡದ ಸರಾಸರಿ ಮೊತ್ತ 305 ರನ್.
– ಸಿಡ್ನಿಯಲ್ಲಿ ಕೊನೆಯ ಸಲ ಚೇಸ್ ಮಾಡಿ ಗೆದ್ದ ತಂಡವೆಂಬ ಹೆಗ್ಗಳಿಕೆ ಭಾರತದ್ದಾಗಿದೆ. 2016ರ ಈ ಪಂದ್ಯದಲ್ಲಿ ಭಾರತ 331 ರನ್ ಬೆನ್ನಟ್ಟಿ ಗೆದ್ದು ಬಂದಿತ್ತು.
– ಸಿಡ್ನಿಯಲ್ಲಿ ವಿರಾಟ್ ಕೊಹ್ಲಿ ಕೇವಲ 9 ರನ್ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಆಡಿದ 5 ಪಂದ್ಯಗಳಲ್ಲಿ ಗಳಿಸಿದ್ದು 36 ರನ್ ಮಾತ್ರ. ಸರ್ವಾಧಿಕ ಗಳಿಕೆ 21 ರನ್.
– ಇಲ್ಲಿ ಆಡಲಾದ ಕಳೆದ 15 ಪಂದ್ಯಗಳಲ್ಲಿ ಆಸ್ಟ್ರೇಲಿಯ 11 ಗೆಲುವು ಕಂಡಿದೆ. ಎರಡರಲ್ಲಿ ಸೋತಿದೆ. 2 ಪಂದ್ಯ ರದ್ದುಗೊಂಡಿದೆ. ಈ ಅವಧಿಯಲ್ಲಿ ಕಾಂಗರೂಗಳನ್ನು ಕೆಡವಿದ ತಂಡಗಳೆಂದರೆ ಭಾರತ (2016) ಮತ್ತು ಇಂಗ್ಲೆಂಡ್ (2018).
– ಇನ್ನು 17 ರನ್ ಮಾಡಿದರೆ ಆರನ್ ಫಿಂಚ್ ಏಕದಿನದಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಲಿದ್ದಾರೆ.
– ಕೊಹ್ಲಿ ಇನ್ನು ಕೇವಲ 133 ರನ್ ಮಾಡಿದರೆ ಏಕದಿನದಲ್ಲಿ 12 ಸಾವಿರ ರನ್ ಸಾಧನೆಗೈಯಲಿದ್ದಾರೆ.
ಆಸ್ಟ್ರೇಲಿಯದಲ್ಲಿ ಭಾರತ
ಪಂದ್ಯ 51
ಗೆೆಲುವು 13
ಸೋಲು 36
ರದ್ದು 02
ಸಂಭಾವ್ಯ ತಂಡಗಳು
ಭಾರತ: ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ನವದೀಪ್ ಸೈನಿ/ಶಾದೂìಲ್ ಠಾಕೂರ್, ಯಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಬುಮ್ರಾ.
ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.