Cricket ದೀಪಾವಳಿ; 9ನೇ ಗೆಲುವಿನ ಬಳುವಳಿ: ನೆದರ್ಲೆಂಡ್ಸ್ ವಿರುದ್ಧವೂ ನಲಿದಾಟ
Team Udayavani, Nov 12, 2023, 10:36 PM IST
ಬೆಂಗಳೂರು: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಮೇಳೈಸುತ್ತಿದ್ದರೆ, ಇತ್ತ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ “ಕ್ರಿಕೆಟ್ ದೀಪಾವಳಿ’ಯ ಮಹಾಸಂಭ್ರಮಕ್ಕೆ, ಟೀಮ್ ಇಂಡಿಯಾದ “ನೀಲಿ ಪಟಾಕಿ’ಗಳ ಅಬ್ಬರಕ್ಕೆ ಸಾಕ್ಷಿಯಾಯಿತು. ನೆದರ್ಲೆಂಡ್ಸ್ ವಿರುದ್ಧ ಆಡಲಾದ ಅಂತಿಮ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತದ ಸ್ಫೋಟಕ ಹಾಗೂ ರಂಜನೀಯ ಬ್ಯಾಟಿಂಗ್‌ಗೆ ಬೆಳಕಿನ ಹಬ್ಬವೇ ಉಪಮೆಯಾದ ನಿದರ್ಶನವಿದು. ಇಲ್ಲಿ ರೋಹಿತ್ ಪಡೆಯ ಗೆಲುವಿನ ಅಂತರ 160 ರನ್.
ಈಗಾಗಲೇ ಅಗ್ರಸ್ಥಾನದೊಂದಿಗೆ ಸೆಮಿ ಫೈನಲ್ ಗೌರವ ಸಂಪಾದಿಸಿದ್ದ ಭಾರತಕ್ಕೆ ಇದು ಕೇವಲ “ನಾಕೌಟ್ ರಿಹರ್ಸಲ್’ ಆಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಕ್ಷಣದಿಂದಲೇ ಸುಡುಮದ್ದಿನ ದಾಸ್ತಾನಿಗೆ ಬೆಂಕಿ ಹಚ್ಚಿದ ರೀತಿಯಲ್ಲಿ ರನ್ ಸ್ಫೋಟಗೊಳ್ಳುತ್ತಲೇ ಹೋಯಿತು. ಒಟ್ಟುಗೂಡಿದ ರನ್ ಬರೋಬ್ಬರಿ 410. ಉರುಳಿದ್ದು ನಾಲ್ಕೇ ವಿಕೆಟ್. ಇದು ವಿಶ್ವಕಪ್‌ನಲ್ಲಿ ಭಾರತ ದಾಖಲಿಸಿದ ದ್ವಿತೀಯ ಸರ್ವಾಧಿಕ ಸ್ಕೋರ್. ಜವಾಬಿತ್ತ ನೆದರ್ಲೆಂಡ್ಸ್ 47.5 ಓವರ್‌ಗಳಲ್ಲಿ 250ರ ತನಕ ಸಾಗಿತು. ತೇಜ ನಿಡಮನೂರು ಅರ್ಧ ಶತಕ ಬಾರಿಸಿ ಸಂಭ್ರಮಿಸಿದರು (54).
ಡಚ್ಚರ ಪಡೆ ಈ ಬೃಹತ್ ಮೊತ್ತವನ್ನು ಕಂಡೇ ದಿಗಿಲುಗೊಂಡಿತು. ಅದಕ್ಕೆ ವೀರೋ ಚಿತ ನಿರ್ಗಮನವೂ ಸಾಧ್ಯವಾಗಲಿಲ್ಲ. ಸ್ಕಾಟ್ ಎಡ್ವರ್ಡ್ಸ್ ಬಳಗ 9 ಪಂದ್ಯಗಳಲ್ಲಿ ಅನುಭವಿಸಿದ 7ನೇ ಸೋಲು ಇದಾಗಿದೆ.
ಭಾರತ ಈ ಪಂದ್ಯದಲ್ಲಿ ಒಂದಿಷ್ಟು ಬೌಲಿಂಗ್ ಪ್ರಯೋಗ ನಡೆಸಿತು. ಹಾರ್ದಿಕ್ ಪಾಂಡ್ಯ ಗೈರಲ್ಲಿ 6ನೇ ಬೌಲರ್ ಕೊರತೆ ಅನುಭವಿಸುತ್ತಿರುವ ಹೊತ್ತಿನಲ್ಲಿ ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮ 7.5 ಓವರ್ ಹಂಚಿಕೊಂಡರು. ಕೊಹ್ಲಿ ಮತ್ತು ರೋಹಿತ್ ವಿಕೆಟ್ ಕೂಡ ಕೆಡವಿದರು. ಇದು ವೆಸ್ಟ್ ಇಂಡೀಸ್ ಎದುರಿನ 2016ರ ಟಿ20 ವಿಶ್ವಕಪ್ ಪಂದ್ಯದ ಬಳಿಕ ಕೊಹ್ಲಿ ಉರುಳಿಸಿದ ಮೊದಲ ವಿಕೆಟ್ ಆಗಿದೆ.
ಎರಡನೇ ಗರಿಷ್ಠ ಮೊತ್ತ
ಸ್ಥಳೀಯ ಹೀರೋ ಕೆ.ಎಲ್. ರಾಹುಲ್ ಮತ್ತು “ಮುಂಬೈ ಬಾಯ್’ ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಶತಕ ಸಾಹಸದಿಂದ ಭಾರತ ವಿಶ್ವಕಪ್ ಇತಿಹಾಸ ದಲ್ಲಿ ತನ್ನ 2ನೇ ಗರಿಷ್ಠ ಮೊತ್ತ ದಾಖಲಿಸಿತು. ರಾಹುಲ್ ವಿಶ್ವಕಪ್‌ನಲ್ಲಿ ಭಾರತದ ಅತೀ ವೇಗದ ಶತಕಕ್ಕೆ ಸಾಕ್ಷಿಯಾದರೆ, ಅಯ್ಯರ್ ವಿಶ್ವಕಪ್‌ನಲ್ಲಿ ಮೊದಲ ಶತಕದೊಂದಿಗೆ ಅಬ್ಬರಿಸಿದರು. ಇದಕ್ಕೂ ಮುನ್ನ ರೋಹಿತ್ ಶರ್ಮ (61) ಮತ್ತು ಶುಭಮನ್ ಗಿಲ್ (51) ಅರ್ಧ ಶತಕ ಬಾರಿಸುವ ಜತೆಗೆ ಮೊದಲ ವಿಕೆಟಿಗೆ ಭರ್ತಿ 100 ರನ್ ಪೇರಿಸಿ ಭದ್ರ ಅಡಿಪಾಯ ನಿರ್ಮಿಸಿದರು.
ವಿರಾಟ್ ಕೊಹ್ಲಿ ತಮ್ಮ ಎರಡನೇ ತವರಲ್ಲಿ 51 ರನ್ ಬಾರಿಸಿ ಅಭಿಮಾನಿಗಳಿಗೆ ಧಾರಾಳ ರಂಜನೆ ಒದಗಿಸಿದರು. ಕೊಹ್ಲಿ ಅಂಗಳಕ್ಕೆ ಇಳಿಯುತ್ತಿದ್ದಂತೆಯೆ “ಆರ್‌ಸಿಬಿ ಆರ್‌ಸಿಬಿ…’ ಎಂಬ ಅಭಿಮಾನಿಗಳ ಕೂಗು ಮಾರ್ದನಿಸತೊಡಗಿತು. ಅವರೀಗ ಈ ಪಂದ್ಯಾವಳಿಯ ಟಾಪ್ ಸ್ಕೋರರ್ ಗೌರವಕ್ಕೆ ಪಾತ್ರರಾಗಿದ್ದಾರೆ.
62 ಎಸೆತಗಳಲ್ಲಿ ಸೆಂಚುರಿ
ತವರಿನಂಗಳದಲ್ಲಿ ಬ್ಯಾಟಿಂಗ್ ಮಜಾ ಉಡಾಯಿಸಿದ ರಾಹುಲ್ 62 ಎಸೆತಗಳಲ್ಲಿ ಶತಕ ಪೂರೈಸಿದರು. ಅಫ್ಘಾನಿಸ್ಥಾನ ವಿರುದ್ಧ ರೋಹಿತ್ ಶರ್ಮ 63 ಎಸೆತಗಳಲ್ಲಿ ಸೆಂಚುರಿ ಹೊಡೆದ ಭಾರತೀಯ ದಾಖಲೆ ಕೆಲವೇ ದಿನಗಳಲ್ಲಿ ಮುರಿಯಲ್ಪಟ್ಟಿತು. ರಾಹುಲ್ ಒಟ್ಟು 64 ಎಸೆತಗಳಿಂದ 102 ರನ್ ರಾಶಿ ಹಾಕಿದರು. ಸಿಡಿಸಿದ್ದು 11 ಬೌಂಡರಿ ಮತ್ತು 4 ಸಿಕ್ಸರ್. ಇದು ಏಕದಿನದಲ್ಲಿ ರಾಹುಲ್ ಬಾರಿಸಿದ 7ನೇ ಶತಕ. ವಿಶ್ವಕಪ್‌ನಲ್ಲಿ ಎರಡನೆಯದು.
ಶ್ರೇಯಸ್ ಅಯ್ಯರ್ ಅವರದು ಅಜೇಯ 128 ರನ್ ಕೊಡುಗೆ. 94 ಎಸೆತ ನಿಭಾ ಯಿಸಿದ ಅಯ್ಯರ್ 10 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿ ಜೋಶ್ ತೋರಿದರು. ಇದು ಅವರ 4ನೇ ಶತಕವಾದರೆ, ವಿಶ್ವಕಪ್‌ನಲ್ಲಿ ಮೊದಲನೆಯದು.
ಡಚ್ ಬೌಲರ್‌ಗಳನ್ನು ಚೆಂಡಾಡುತ್ತ ಸಾಗಿದ ಅಯ್ಯರ್-ರಾಹುಲ್ 4ನೇ ವಿಕೆಟಿಗೆ 21.1 ಓವರ್‌ಗಳಿಂದ 208 ರನ್ ರಾಶಿಹಾಕಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಇದು ವಿಶ್ವಕಪ್‌ನಲ್ಲಿ 4ನೇ ಹಾಗೂ ಇದಕ್ಕೂ ಕೆಳ ಕ್ರಮಾಂಕದ ವಿಕೆಟಿಗೆ ಭಾರತ ಪೇರಿಸಿದ ಮೊದಲ ದ್ವಿಶತಕದ ಜತೆಯಾಟ.
100 ರನ್ ಜತೆಯಾಟ
ರೋಹಿತ್ ಶರ್ಮ-ಶುಭಮನ್ ಗಿಲ್ ಆರಂಭದಿಂದಲೇ ಸಿಡಿದು ನಿಂತರು. ಆಗಲೇ ಈ ಟ್ರ್ಯಾಕ್‌ನಲ್ಲಿ ದೊಡ್ಡ ಮೊತ್ತ ಸಂಗ್ರಹ ಗೊಳ್ಳುವುದು ಖಾತ್ರಿಯಾಗಿತ್ತು. ಆರಂಭಿಕ ಜೋಡಿಯಿಂದ 11.5 ಓವರ್‌ಗಳಿಂದ 100 ರನ್ ಹರಿದು ಬಂದಿತ್ತು. ರೋಹಿತ್ 54 ಎಸೆತಗಳಿಂದ 61 ರನ್ (8 ಬೌಂಡರಿ, 2 ಸಿಕ್ಸರ್), ಗಿಲ್ 32 ಎಸೆತಗಳಿಂದ 51 ರನ್ (3 ಬೌಂಡರಿ, 4 ಸಿಕ್ಸರ್) ಹೊಡೆದರು.
ವಿರಾಟ್ ಕೊಹ್ಲಿ ಟಾಪರ್
56 ಎಸೆತಗಳಿಂದ 51 ರನ್ ಮಾಡಿದ ವಿರಾಟ್ ಕೊಹ್ಲಿ (5 ಬೌಂಡರಿ, 1 ಸಿಕ್ಸರ್) ಈ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನೆಂಬ ಗೌರವಕ್ಕೆ ಭಾಜನರಾದರು. ಅವರ ರನ್ ಗಳಿಕೆ 594ಕ್ಕೆ ಏರಿದೆ. ಕ್ವಿಂಟನ್ ಡಿ ಕಾಕ್ (591), ರಚಿನ್ ರವೀಂದ್ರ (565) ಅನಂತರದ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ ಕೂಡ ರವಿವಾರದ ಬ್ಯಾಟಿಂಗ್ ಅಬ್ಬರದ ವೇಳೆ 500 ರನ್ ಗಡಿ ದಾಟಿದರು (503).
ಸ್ಕೋರ್ ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಬರೇಸಿ ಬಿ ಡಿ ಲೀಡ್ 61
ಶುಭಮನ್ ಗಿಲ್ ಸಿ ತೇಜ ಬಿ ಮೀಕರೆನ್ 51
ವಿರಾಟ್ ಕೊಹ್ಲಿ ಬಿ ಮರ್ವ್ 51
ಶ್ರೇಯಸ್ ಅಯ್ಯರ್ ಔಟಾಗದೆ 128
ರಾಹುಲ್ ಸಿ ಸಿಬ್ರಾಂಡ್ ಬಿ ಡಿ ಲೀಡ್ 102
ಸೂರ್ಯಕುಮಾರ್ ಔಟಾಗದೆ 2
ಇತರ 15
ಒಟ್ಟು (50 ಓವರ್‌ಗಳಲ್ಲಿ 4 ವಿಕೆಟಿಗೆ) 410
ವಿಕೆಟ್ ಪತನ: 1-100, 2-129, 3-200, 4-408.
ಬೌಲಿಂಗ್: ಆರ್ಯನ್ ದತ್ 7-0-52-0
ಲೋಗನ್ ವಾನ್ ಬೀಕ್ 10-0-107-0
ಕಾಲಿನ್ ಆ್ಯಕರ್‌ಮನ್ 3-0-25-0
ಪಾಲ್ ವಾನ್ ಮೀಕರೆನ್ 10-0-90-1
ರೋಲ್ಫ್ ವಾನ್ ಡರ್ ಮರ್ವ್ 10-0-53-1
ಬಾಸ್ ಡಿ ಲೀಡ್ 10-0-82-2
ನೆದರ್ಲೆಂಡ್ಸ್
ವೆಸ್ಲಿ ಬರೇಸಿ ಸಿ ರಾಹುಲ್ ಬಿ ಸಿರಾಜ್ 4
ಮ್ಯಾಕ್ಸ್ ಓ’ಡೌಡ್ ಬಿ ಜಡೇಜ 30
ಕಾಲಿನ್ ಆ್ಯಕರ್‌ಮನ್ ಎಲ್‌ಬಿಡಬ್ಲ್ಯು ಕುಲದೀಪ್ 35
ಸಿಬ್ರಾಂಡ್ ಎಂಗಲ್‌ಬ್ರೆಟ್ ಬಿ ಸಿರಾಜ್ 45
ಸ್ಕಾಟ್ ಎಡ್ವರ್ಡ್ಸ್ ಸಿ ರಾಹುಲ್ ಬಿ ಕೊಹ್ಲಿ 17
ಬಾಸ್ ಡಿ ಲೀಡ್ ಬಿ ಬುಮ್ರಾ 12
ತೇಜ ನಿಡಮನೂರು ಸಿ ಶಮಿ ಬಿ ರೋಹಿತ್ 54
ಲೋಗನ್ ವಾನ್ ಬೀಕ್ ಬಿ ಕುಲದೀಪ್ 16
ವಾನ್ ಡರ್ ಮರ್ವ್ ಸಿ ಶಮಿ ಬಿ ಜಡೇಜ 16
ಆರ್ಯನ್ ದತ್ ಬಿ ಬುಮ್ರಾ 5
ಪಾಲ್ ವಾನ್ ಮೀಕರೆನ್ ಔಟಾಗದೆ 3
ಇತರ 13
ಒಟ್ಟು (47.5 ಓವರ್‌ಗಳಲ್ಲಿ ಆಲೌಟ್) 250
ವಿಕೆಟ್ ಪತನ: 1-5, 2-66, 3-72, 4-114, 5-144, 6-172, 7-208, 8-225, 9-236.
ಬೌಲಿಂಗ್: ಜಸ್‌ಪ್ರೀತ್ ಬುಮ್ರಾ 9-1-33-2
ಮೊಹಮ್ಮದ್ ಸಿರಾಜ್ 6-1-29-2
ಮೊಹಮ್ಮದ್ ಶಮಿ 6-0-41-0
ಕುಲದೀಪ್ ಯಾದವ್ 10-1-41-2
ರವೀಂದ್ರ ಜಡೇಜ 9-0-49-2
ವಿರಾಟ್ ಕೊಹ್ಲಿ 3-0-13-1
ಶುಭಮನ್ ಗಿಲ್ 2-0-11-0
ಸೂರ್ಯಕುಮಾರ್ 2-0-17-0
ರೋಹಿತ್ ಶರ್ಮ 0.5-0-7-1
ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್
ಭಾರತ ವಿಶ್ವಕಪ್‌ನಲ್ಲಿ 2ನೇ ಸಲ 400 ಪ್ಲಸ್ ರನ್ ಬಾರಿಸಿತು (4ಕ್ಕೆ 410). ಇದು ಭಾರತದ 2ನೇ ಸರ್ವಾಧಿಕ ಗಳಿಕೆ. ಬರ್ಮುಡಾ ವಿರುದ್ಧದ 2007ರ ಪೋರ್ಟ್ ಆಫ್ ಸ್ಪೇನ್ ಪಂದ್ಯದಲ್ಲಿ 5ಕ್ಕೆ 413 ರನ್ ಹೊಡೆದದ್ದು ದಾಖಲೆ.
ಶ್ರೇಯಸ್ ಅಯ್ಯರ್ ವಿಶ್ವಕಪ್‌ನಲ್ಲಿ ಮೊದಲ ಸೆಂಚುರಿ ಹೊಡೆದರು.
ಕೆ.ಎಲ್. ರಾಹುಲ್ ವಿಶ್ವಕಪ್‌ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಹೊಡೆದ ಭಾರತೀಯ ದಾಖಲೆ ಬರೆದರು (62 ಎಸೆತ). ಇದೇ ಕೂಟದ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ 63 ಎಸೆತಗಳಲ್ಲಿ ಶತಕ ಬಾರಿಸಿದ ದಾಖಲೆಯನ್ನು ಅಳಿಸಿದರು.
ರೋಹಿತ್ ಶರ್ಮ ಕ್ಯಾಲೆಂಡರ್ ವರ್ಷವೊಂದರ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದರು. ಅವರು ಈ ಪಂದ್ಯದ ಮೊದಲ ಸಿಕ್ಸರ್ ಬಾರಿಸಿದೊಡನೆ ಈ ದಾಖಲೆ ನಿರ್ಮಾಣಗೊಂಡಿತು (59). ಎಬಿ ಡಿ ವಿಲಿಯರ್ 2015ರಲ್ಲಿ ಬಾರಿಸಿದ 58 ಸಿಕ್ಸರ್‌ಗಳ ದಾಖಲೆ ಪತನಗೊಂಡಿತು.
ರೋಹಿತ್ ಶರ್ಮ ವಿಶ್ವಕಪ್ ಒಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ನಾಯಕನೆನಿಸಿದರು (23ನೇ ಸಿಕ್ಸರ್). ಕಳೆದ ಸಲ ಇಂಗ್ಲೆಂಡ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಹೊಡೆದ 22 ಸಿಕ್ಸರ್‌ಗಳ ದಾಖಲೆಯನ್ನು ಮೀರಿ ನಿಂತರು.
ಭಾರತ ಈ ಕೂಟದ ಪವರ್ ಪ್ಲೇಯಲ್ಲಿ 3ನೇ ಸಲ 90 ಪ್ಲಸ್ ರನ್ ಬಾರಿಸಿತು (91). ಅಫ್ಘಾನಿಸ್ಥಾನ ವಿರುದ್ಧ 94, ದಕ್ಷಿಣ ಆಫ್ರಿಕಾ ವಿರುದ್ಧ 91 ರನ್ ಮಾಡಿತ್ತು.
ರೋಹಿತ್ ಶರ್ಮ-ಶುಭಮನ್ ಗಿಲ್ ಈ ವರ್ಷದ ಏಕದಿನ ಪಂದ್ಯಗಳಲ್ಲಿ ಅತ್ಯಧಿಕ 5 ಶತಕದ ಜತೆಯಾಟ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.