ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ
Team Udayavani, Dec 4, 2020, 9:09 AM IST
ಕ್ಯಾನ್‌ಬೆರಾ: ಭಾರತದ ಕಾಂಗರೂ ನಾಡಿನ ಕ್ರಿಕೆಟ್ ಸರಣಿಯೀಗ ಏಕದಿನದಿಂದ ಅಚ್ಚುಮೆಚ್ಚಿನ ಟಿ20 ಮುಖಾಮುಖೀಯತ್ತ ಮುಖ ಮಾಡುತ್ತಿದೆ. ಕೊಹ್ಲಿ ಪಡೆಗೆ ಏಕದಿನ ಗೆಲುವು ತಂದಿತ್ತ “ಮನುಕಾ ಓವಲ್’ನಲ್ಲಿ ಶುಕ್ರವಾರ ಮೊದಲ ಪಂದ್ಯ ನಡೆಯಲಿದೆ. ಐಪಿಎಲ್‌ನಲ್ಲಿ ಮಿಂಚಿದ ಹೀರೋಗಳ ಮೆರೆದಾಟಕ್ಕೆ ಇದು ಮತ್ತೂಂದು ವೇದಿಕೆ ಆಗಲಿದೆ ಎಂಬುದೊಂದು ನಿರೀಕ್ಷೆ.
ಇದು ಕೂಡ 3 ಪಂದ್ಯಗಳ ಸರಣಿ. ಮೊದಲ ಸ್ಪರ್ಧೆಯ ಬಳಿಕ ಎರಡೂ ತಂಡಗಳು ಸಿಡ್ನಿಗೆ ಮರಳಲಿವೆ. ಇಲ್ಲಿ ಉಳಿದೆರಡು ಪಂದ್ಯಗಳು ನಡೆಯಲಿವೆ. ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡ ಭಾರತಕ್ಕೆ ಸೇಡು ತೀರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ್ದೇ ಮೇಲುಗೈ
ಚುಟುಕು ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕ ಎಂಬುದಕ್ಕೆ ಅನೇಕ ಸಂಗತಿಗಳು ಪುಷ್ಟಿ ಕೊಡುತ್ತವೆ. ಆಸ್ಟ್ರೇಲಿಯ ಇನ್ನೂ ಟಿ20 ಮಾದರಿಯನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದಿರುವುದು, ಕಾಂಗರೂಗಳ ವಿರುದ್ಧ ಭಾರತದ ದಾಖಲೆ ಉತ್ತಮ ಮಟ್ಟದಲ್ಲಿರುವುದು ಹಾಗೂ ಆಸೀಸ್ ನೆಲದಲ್ಲೂ ಟೀಮ್ ಇಂಡಿಯಾ ಮೇಲುಗೈ ಸಾಧಿಸಿರುವುದನ್ನೆಲ್ಲ ಇದಕ್ಕೆ ಕಾರಣವಾಗಿ ಕೊಡಬಹುದು.
ಇದನ್ನೂ ಓದಿ:ಟಿ. ನಟರಾಜನ್ ಮಹತ್ವ ಈಗ ತಿಳಿಯುತ್ತಿದೆ: ಸೆಹವಾಗ್
ಇಲ್ಲಿ ಇನ್ನೊಂದು ಉಲ್ಲೇಖನೀಯ ಸಂಗತಿ ಇದೆ. ಲಾಕ್ ಡೌನ್‌ಗಿಂತ ಮೊದಲು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದ್ದ ಭಾರತ, ಅಲ್ಲಿ ಆಡಿದ ಎಲ್ಲ 5 ಟಿ20 ಪಂದ್ಯಗಳನ್ನು ಗೆದ್ದು ಬೀಗಿತ್ತು. ಇನ್ನೂರು ಪ್ಲಸ್ ಟಾರ್ಗೆಟ್ ಕೂಡ ಕೊಹ್ಲಿ ಪಡೆಗೆ ಸವಾಲಾಗಿರಲಿಲ್ಲ. ಈಗ ಅಂಥದೇ ಟ್ರಾಕ್‌ನಲ್ಲಿ ನಮ್ಮವರು ಸರಣಿ ಆಡುತ್ತಿದ್ದಾರೆ. ಇದೊಂದು ಪ್ಲಸ್ ಪಾಯಿಂಟ್.
ಇವೆಲ್ಲದರ ಜತೆಗೆ ಭಾರತದ ಆಟಗಾರರ ಪಾಲಿಗೆ ಐಪಿಎಲ್ ಎಂಬ ಬೃಹತ್ ವೇದಿಕೆ ಇದೆ. ವಿಶ್ವದ ಈ ಶ್ರೀಮಂತ ಲೀಗ್ ಇತ್ತೀಚೆಗಷ್ಟೇ ಮುಗಿದುದರಿಂದ ಇಲ್ಲಿ ಮಿಂಚಿದವರೆಲ್ಲ ಹೊಸ ಹುರುಪಿನಲ್ಲಿದ್ದಾರೆ. ಇದೇ ಲಯದಲ್ಲಿ ಸಾಗಿದರೆ ಸರಣಿಯಲ್ಲಿ ಮೇಲುಗೈ ಸಾಧಿಸುವುದು ಭಾರತಕ್ಕೆ ದೊಡ್ಡ ಸಮಸ್ಯೆಯಾಗದು.
ಟೀಮ್ ಕಾಂಬಿನೇಶನ್
ತಂಡದ ಖಾಯಂ ಸದಸ್ಯರೊಂದಿಗೆ ಐಪಿಎಲ್‌ನಲ್ಲಿ ಮಿಂಚಿದ ಬಹಳಷ್ಟು ಆಟಗಾರರು ರೇಸ್‌ನಲ್ಲಿದ್ದಾರೆ. ಕೊನೆಯ ಏಕದಿನ ಪಂದ್ಯವಾಡಿದ ಟಿ.ನಟರಾಜನ್, ಚೆನ್ನೈ ತಂಡದ ಸ್ಟ್ರೈಕ್ ಬೌಲರ್ ದೀಪಕ್ ಚಹರ್, ಆರ್‌ಸಿಬಿ ಪರ ಮಿತವ್ಯಯಕಾರಿ ಬೌಲಿಂಗ್ ದಾಖಲಿಸಿದ ವಾಷಿಂಗ್ಟನ್ ಸುಂದರ್, ರಾಜಸ್ಥಾನ್ ರಾಯಲ್ಸ್‌ನ ಬಿಗ್ ಹಿಟ್ಟರ್ ಸಂಜು ಸ್ಯಾಮ್ಸನ್ ಅವರೆಲ್ಲ ಇಲ್ಲಿನ ಪ್ರಮುಖರು.
ಚಹರ್-ನಟರಾಜನ್ ಹಾಗೂ ಚಹಲ್-ವಾಷಿಂಗ್ಟನ್ ಸುಂದರ್ ನಡುವಿನ ಆಯ್ಕೆ ತುಸು ಜಟಿಲವಾದೀತು, ಅಷ್ಟೇ. ಐಪಿಎಲ್‌ನಲ್ಲಿ ಚಹರ್‌ಗಿಂತ ನಟರಾಜನ್ ಹೆಚ್ಚು ಯಶಸ್ಸು ಸಾಧಿಸಿದ್ದರು. ಹಾಗೆಯೇ, ಪಾಂಡ್ಯ ಬೌಲಿಂಗ್ ದಾಳಿ ನಡೆಸುವ ಸಾಧ್ಯತೆ ಇಲ್ಲವಾದ್ದರಿಂದ ಭಾರತಕ್ಕೆ ಆಲ್‌ರೌಂಡರ್ ಒಬ್ಬನ ಕೊರತೆ ಕಾಡುತ್ತದೆ. ಇಲ್ಲಿರುವುದು ಜಡೇಜ ಮಾತ್ರ. ಹೀಗಾಗಿ ಏಕದಿನದಲ್ಲಿ ದುಬಾರಿಯಾದ ಚಹಲ್ ಬದಲು ಸುಂದರ್ ಕಾಣಿಸಿಕೊಳ್ಳಬಹುದು.
ಉಳಿದಂತೆ, ಉಪನಾಯಕನೂ ಆಗಿರುವ ಕೆ.ಎಲ್. ರಾಹುಲ್ ತಮ್ಮ ನೆಚ್ಚಿನ ಓಪನಿಂಗ್ ಸ್ಥಾನಕ್ಕೆ ಮರಳಲಿದ್ದಾರೆ. ಅವರು ಕೀಪಿಂಗ್ ಕೂಡ ಮಾಡುವುದರಿಂದ ಸ್ಪೆಷಲಿಸ್ಟ್ ಕೀಪರ್ ಸ್ಯಾಮ್ಸನ್ ಆಡುವ ಸಾಧ್ಯತೆ ಕಡಿಮೆ. ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆಗೆ ಸ್ಥಾನ ಲಭಿಸಲಿದೆ. ಡೆಲ್ಲಿಯನ್ನು ಫೈನಲ್‌ಗೆ ಕೊಂಡೊಯ್ದ ಅಯ್ಯರ್ ಮತ್ತು ಕ್ಯಾಪ್ಟನ್ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ.
ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್ ಗೈರು
ಆಸ್ಟ್ರೇಲಿಯ ತನ್ನ ಏಕದಿನ ತಂಡವನ್ನೇ ಟಿ20ಗೂ ಉಳಿಸಿಕೊಂಡಿದೆ. ಆದರೆ ಅನುಭವಿ ಆರಂಭಕಾರ ಡೇವಿಡ್ ವಾರ್ನರ್ ಮತ್ತು ಪ್ರಧಾನ ವೇಗಿ ಪ್ಯಾಟ್ ಕಮಿನ್ಸ್ ಗೈರು ಕಾಡಲಿದೆ. ಹೀಗಾಗಿ ಫಿಂಚ್ ಜತೆ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬ ಕುತೂಹಲವಿದೆ. ಬಿಗ್ ಹಿಟ್ಟಿಂಗ್ ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಫಿಟ್ ನೆಸ್ ಹೇಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಸ್ಮಿತ್, ಮ್ಯಾಕ್ಸ್ ವೆಲ್ ಇಲ್ಲಿಯೂ ಅಪಾಯಕಾರಿಯಾಗಿ ಗೋಚರಿಸುವ ಎಲ್ಲ ಸಾಧ್ಯತೆ ಇದೆ. ಐಪಿಎಲ್‌ನಲ್ಲಿ ಫ್ಲಾಪ್ ಆದ ಫಿಂಚ್ ಮತ್ತು ಮ್ಯಾಕ್ಸ್‌ವೆಲ್ ಏಕದಿನದಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿರುವುದು ಆಸೀಸ್ ಪಾಲಿಗೊಂದು ವರದಾನ.
ಸಂಭಾವ್ಯ ತಂಡಗಳು
ಭಾರತ: ಕೆ.ಎಲ್. ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ದೀಪಕ್ ಚಹರ್/ಟಿ. ನಟರಾಜನ್, ಯಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ.
ಉಳಿದ ಸದಸ್ಯರು: ಮಾಯಾಂಕ್ ಅಗರ್ವಾಲ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ನವದೀಪ್ ಸೈನಿ.
ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ), ಡಿ’ಆರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ, ಮೊಸಸ್ ಹೆನ್ರಿಕ್ಸ್/ಮಾರ್ಕಸ್ ಸ್ಟೋಯಿನಿಸ್, ಕ್ಯಾಮರೂನ್ ಗ್ರೀನ್, ಆ್ಯಶ್ಟನ್ ಅಗರ್,ಜೋಶ್ ಹ್ಯಾಝಲ್‌ವುಡ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪ.
ಉಳಿದ ಸದಸ್ಯರು: ಮಾರ್ನಸ್ ಲಬುಶೇನ್, ಡೇನಿಯಲ್ ಸ್ಯಾಮ್ಸ್, ಮ್ಯಾಥ್ಯೂ ವೇಡ್, ಆ್ಯಂಡ್ರೂé ಟೈ, ಸೀನ್ ಅಬೋಟ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.