ಭಾರತದ ಮೊಗದಲ್ಲಿ “ನಿದಹಾಸದ: ಮಂದಹಾಸ
Team Udayavani, Mar 20, 2018, 7:30 AM IST
ಕೊಲಂಬೊ: ಟಿ20 ಪಂದ್ಯದ ಅಷ್ಟೂ ರೋಚಕತೆ, ಕೌತುಕ, ಕುತೂಹಲ ಹಾಗೂ ಸಂಭ್ರಮಕ್ಕೆ ಸಾಕ್ಷಿಯಾದ ರವಿವಾರ ರಾತ್ರಿಯ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಸೂಪರ್ ಹೀರೋ ಆಗಿ ಕಂಗೊಳಿಸಿದ್ದಾರೆ. ಪಂದ್ಯದ ಕಟ್ಟಕಡೆಯ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ಅವರು ಭಾರತಕ್ಕೆ “ನಿದಹಾಸ್ ಟ್ರೋಫಿ’ಯನ್ನು ಅರ್ಪಿಸಿ ಕ್ರಿಕೆಟ್ ಜಗತ್ತಿನ ಸುದ್ದಿಯ ಕೇಂದ್ರವಾಗಿದ್ದಾರೆ.
ಈ ಕೂಟದಲ್ಲಿ ಶ್ರೇಷ್ಠ ನಿರ್ವಹಣೆ ಕಾಯ್ದುಕೊಂಡು ಬಂದ ಬಾಂಗ್ಲಾದೇಶ ವಿರುದ್ಧ ನಡೆದ ಪ್ರಶಸ್ತಿ ಕಾಳಗದಲ್ಲಿ ಭಾರತ 4 ವಿಕೆಟ್ ಅಂತರದ ಜಯಭೇರಿ ಮೊಳಗಿಸಿ “ದ್ವಿತೀಯ ದರ್ಜೆ’ಯ ತಂಡವೊಂದರ ಪಾರಮ್ಯವನ್ನು ತೆರೆದಿರಿಸಿತು. ಇನ್ನೇನು ಸೋತೇ ಹೋಯಿತೆಂದು ಭಾವಿಸಲಾಗಿದ್ದ ಭಾರತ ದಿನೇಶ್ ಕಾರ್ತಿಕ್ ಸಾಹಸದಿಂದ ಚಾಂಪಿಯನ್ ಆಗಿ ಮೂಡಿಬಂದದ್ದು ಕ್ರಿಕೆಟಿನ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 8 ವಿಕೆಟಿಗೆ 166 ರನ್ ಬಾರಿಸಿದರೆ, ಭಾರತ ಭರ್ತಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಬಾರಿಸಿ “ನಿದಹಾಸದ ಮಂದಹಾಸ’ ಬೀರಿತು.
ದಿನೇಶ್ ಕಾರ್ತಿಕ್ ಮ್ಯಾಜಿಕ್
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಲಾಸ್ಟ್ ಬಾಲ್ ಸಿಕ್ಸರ್ ಎಂದೊಡನೆ ನೆನಪಿಗೆ ಬರುವವರು ಪಾಕಿಸ್ಥಾನದ ಜಾವೇದ್ ಮಿಯಾಂದಾದ್. ದಶಕಗಳ ಹಿಂದಿನ ಭಾರತದೆದುರಿನ ಶಾರ್ಜಾ ಪಂದ್ಯದಲ್ಲಿ ಚೇತನ್ ಶರ್ಮ ಎಸೆದ ಪಂದ್ಯದ ಕಟ್ಟಕಡೆಯ ಎಸೆತವನ್ನು ಸಿಕ್ಸರ್‌ಗೆ ರವಾನಿಸುವ ಮೂಲಕ ಪಾಕಿಸ್ಥಾನವನ್ನು ಗೆಲ್ಲಿಸಿದ ಮಿಯಾಂದಾದ್ ಜಾಗತಿಕ ಮಟ್ಟದ ಹೀರೋ ಆಗಿದ್ದರು. ಆ ಕಾಲಕ್ಕೆ ಅದೊಂದು ಅದ್ಭುತ ಸಾಹಸವಾಗಿತ್ತು. ಈಗ ದಿನೇಶ್ ಕಾರ್ತಿಕ್ ಇಂಥದೇ ಸಾಹಸಗೈದು ಇದೇ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ. 18ನೇ ಓವರ್ ತನಕ ಈ ಪಂದ್ಯ ಬಾಂಗ್ಲಾದ ಕೈಯಲ್ಲೇ ಇತ್ತು. 17ನೇ ಓವರಿನ ಕೊನೆಯ ಎಸೆತದಲ್ಲಿ ಮನೀಷ್ ಪಾಂಡೆ 5ನೇ ವಿಕೆಟ್ ರೂಪದಲ್ಲಿ ಔಟಾಗುವಾಗ ಭಾರತ ಕೇವಲ 133 ರನ್ ಮಾಡಿತ್ತು. ಉಳಿದೆರಡು ಓವರ್‌ಗಳಲ್ಲಿ 34 ರನ್ ಗಳಿಸಬೇಕಾದ ಕಠಿನ ಸವಾಲು ಭಾರತದ ಮುಂದಿತ್ತು. ಪಾಂಡೆ ಆಚೆ ಹೋಗುವಾಗ ದಿನೇಶ್ ಕಾರ್ತಿಕ್ ಅಂಗಳಕ್ಕೆ ಇಳಿಯುತ್ತಿದ್ದರಷ್ಟೇ. ಅವರ ಇರಾದೆ ಸ್ಪಷ್ಟವಾಗಿತ್ತು. ಮುನ್ನುಗ್ಗಿ ಬಾರಿಸಲು ತಯಾರಾಗಿಯೇ ಬಂದಂತಿತ್ತು. ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿ ಪಂದ್ಯದ ಪಥವನ್ನು ಬದಲಿಸುವ ಸೂಚನೆಯಿತ್ತರು.
ರುಬೆಲ್ ಹೊಸೇನ್ ಎಸೆದ 19ನೇ ಓವರಿನಲ್ಲಿ 22 ರನ್ ದೋಚುವ ಮೂಲಕ ಕಾರ್ತಿಕ್ ಭಾರತದ ಪಾಳೆಯದಲ್ಲಿ ಸಂಚಲನ ಮೂಡಿಸಿದರು. ಮೊದಲ ಎಸೆತವನ್ನೇ ಸಿಕ್ಸರ್‌ಗೆ ರವಾನಿಸಿದ ಕಾರ್ತಿಕ್, ಮುಂದಿನೆರಡು ಎಸೆತಗಳಿಗೆ ಬೌಂಡರಿ ಹಾಗೂ ಸಿಕ್ಸರ್ ರುಚಿ ತೋರಿಸಿದರು. 4ನೇ ಎಸೆತಕ್ಕೆ ರನ್ ಬರಲಿಲ್ಲ. ಮುಂದಿನೆರಡು ಎಸೆತಗಳಲ್ಲಿ ಅವಳಿ ರನ್ ಹಾಗೂ ಬೌಂಡರಿ ಬಿತ್ತು. ಹೀಗಾಗಿ ಕೊನೆಯ ಓವರಿನಲ್ಲಿ ಭಾರತ ಗಳಿಸಬೇಕಾದ ರನ್ 12ಕ್ಕೆ ಇಳಿಯಿತು.
ಅಂತಿಮ ಓವರ್, ಅಂತಿಮ ಎಸೆತ!
ಅಂತಿಮ ಓವರ್ ಎಸೆಯಲು ಬಂದವರು ಸೌಮ್ಯ ಸರ್ಕಾರ್. ಮೊದಲ ಎಸೆತವೇ ವೈಡ್. ಬಳಿಕ ವಿಜಯ್ ಶಂಕರ್ ರನ್ ಗಳಿಸಲು ವಿಫಲರಾದರು. 2ನೇ ಎಸೆತದಲ್ಲಿ ಸಿಕ್ಕಿದ್ದು ಒಂದೇ ರನ್. 3ನೇ ಎಸೆತದಲ್ಲಿ ಕಾರ್ತಿಕ್ ಕೂಡ ಒಂಟಿ ರನ್ನಿಗೆ ಸೀಮಿತಗೊಂಡರು. 4ನೇ ಎಸೆತವನ್ನು ಶಂಕರ್ ಬೌಂಡರಿಗೆ ಅಟ್ಟಿದಾಗ ಭಾರತದ ಹೋರಾಟಕ್ಕೆ ಜೀವ ಬಂತು. ಆದರೆ 5ನೇ ಎಸೆತದಲ್ಲಿ ಶಂಕರ್ ವಿಕೆಟ್ ಬಿತ್ತು. ಅಂತಿಮ ಎಸೆತದಲ್ಲಿ ಭಾರತದ ಗೆಲುವಿಗೆ 5 ರನ್ ಅಗತ್ಯವಿತ್ತು. ಸಿಕ್ಸರ್ ಬಾರಿಸದೆ ಅನ್ಯ ಮಾರ್ಗವೇ ಇರಲಿಲ್ಲ. ಆಗ ಕ್ರೀಸ್ ಬದಲಿಸಿದ್ದ ಕಾರ್ತಿಕ್ ಇತಿಹಾಸವೊಂದಕ್ಕೆ ಸಾಕ್ಷಿಯಾದರು. ಚೆಂಡನ್ನು ಕವರ್ ಬೌಂಡರಿ ಮಾರ್ಗವಾಗಿ ಸಿಕ್ಸರ್‌ಗೆ ರವಾನಿಸಿಯೇ ಬಿಟ್ಟರು! ಭಾರತದ ಸಂಭ್ರಮ ಮೇರೆ ಮೀರಿತ್ತು; ಬಾಂಗ್ಲಾ ಬಿಕ್ಕುತ್ತಿತ್ತು! ದಿನೇಶ್ ಕಾರ್ತಿಕ್ ಗಳಿಕೆ ಬರೀ 8 ಎಸೆತಗಳಿಂದ ಅಜೇಯ 29 ರನ್. 3 ಪ್ರಚಂಡ ಸಿಕ್ಸರ್, 2 ಬೌಂಡರಿಗಳಿಂದ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್ ರಂಗೇರಿಸಿಕೊಂಡಿತ್ತು.
ಹಿಂಭಡ್ತಿಗೆ ಕಾರ್ತಿಕ್ ಬೇಸರ
“ಈ ನಿರ್ಣಾಯಕ ಪಂದ್ಯದಲ್ಲಿ ದಿನೇಶ್ ಕಾರ್ತಿಕ್‌ಗೆ 7ನೇ ಕ್ರಮಾಂಕಕ್ಕೆ ಹಿಂಭಡ್ತಿ ನೀಡಲಾಗಿತ್ತು. ಇದರಿಂದ ಅವರು ಬೇಸರದ ಜತೆಗೆ ತಳಮಳಗೊಂಡಿ ದ್ದರು’ ಎಂದೂ ರೋಹಿತ್ ಹೇಳಿದರು.”ನೀವು ಕೊನೆಯ ಹಂತದಲ್ಲಿ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಗೆಲ್ಲಿಸಿಕೊಡಬೇಕು. ನಿಮ್ಮಲ್ಲಿ ಆ ಕೌಶಲ ಇದೆ. ಕೊನೆಯ 3-4 ಓವರ್‌ಗಳಲ್ಲಿ ನಿಮಗೆ ಈ ಅವಕಾಶ ಲಭಿಸಬಹುದು ಎಂದು ನಾನು ಕಾರ್ತಿಕ್ ಅವರಿಗೆ ಹೇಳಿದ್ದೆ. ಇದನ್ನು ಕಾರ್ತಿಕ್ ನಿಜ ಮಾಡಿ ತೋರಿಸಿದ್ದಾರೆ. ಈಗ ಅವರಷ್ಟು ಖುಷಿಯ ವ್ಯಕ್ತಿ ಬೇರೆ ಯಾರೂ ಇಲ್ಲ. ಈ ಸಾಧನೆ ಕಾರ್ತಿಕ್ ಅವರಲ್ಲಿ ಅಗಾಧ ಆತ್ಮವಿಶ್ವಾಸ ತುಂಬಲಿದೆ’ ಎಂದು ರೋಹಿತ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಾಂಗ್ಲಾದೇಶದ ನಿರ್ಭೀತ ಕ್ರಿಕೆಟಿಗೂ ರೋಹಿತ್ ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀಲಂಕಾ ಧ್ವಜ ಹಾರಾಡಿಸಿದ ರೋಹಿತ್!
ಭಾರತದ ವಿಜಯೋತ್ಸವದ ವೇಳೆ ನಾಯಕ ರೋಹಿತ್ ಶರ್ಮ ಶ್ರೀಲಂಕಾದ ರಾಷ್ಟ್ರಧ್ವಜ ಹಾರಾಡಿಸಿದ್ದಾರೆ. ಇದಕ್ಕೆ ಕಾರಣ, ಫೈನಲ್ ಪಂದ್ಯದ ವೇಳೆ ಶ್ರೀಲಂಕಾ ವೀಕ್ಷಕರು ಭಾರತಕ್ಕೆ ನೀಡಿದ ಅಮೋಘ ಪ್ರೊತ್ಸಾಹ! ಅಂತಿಮ ಲೀಗ್ ಪಂದ್ಯ ದಲ್ಲಿ ತವರಿನ ತಂಡವನ್ನು ಸೋಲಿಸಿದ ಬಾಂಗ್ಲಾದೇಶದ ಮೇಲೆ ಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ವಿಪರೀತ ಸಿಟ್ಟಿತ್ತು. ಹೀಗಾಗಿ ರವಿವಾರದ ಪ್ರಶಸ್ತಿ ಸಮರದ ವೇಳೆ ಲಂಕಾ ಅಭಿಮಾನಿಗಳು ಭಾರತವನ್ನು ಬೆಂಬಲಿಸಿದರು; ಟೀಮ್ ಇಂಡಿಯಾದ ಹೃದಯವನ್ನೂ ಗೆದ್ದರು. ಇದಕ್ಕೆ ಕೃತಜ್ಞತೆ ಸೂಚಿಸುವ ಸಲುವಾಗಿ ರೋಹಿತ್ ಭಾರತದ ಗೆಲುವಿನ ಬಳಿಕ ಲಂಕಾದ ರಾಷ್ಟ್ರಧ್ವಜ ಹಿಡಿದು ಮೈದಾನಕ್ಕೆ ಸುತ್ತು ಬಂದರು.
ರೋಹಿತ್ ಶರ್ಮ ಅಂತಿಮ ಎಸೆತ ವೀಕ್ಷಿಸಲೇ ಇಲ್ಲ!
ದಿನೇಶ್ ಕಾರ್ತಿಕ್ ಅವರ ಲಾಸ್ಟ್ ಬಾಲ್ ಸಿಕ್ಸರ್ ಈಗ ಕ್ರಿಕೆಟ್ ಜಗತ್ತಿನ ಬಹು ದೊಡ್ಡ ಸುದ್ದಿ. ಆದರೆ ಇದನ್ನು ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ರೋಹಿತ್ ಶರ್ಮ ನೋಡಲೇ ಇಲ್ಲವಂತೆ! ಹಾಗಾದರೆ ಅವರೇನು ಮಾಡುತ್ತಿದ್ದರು ಎನ್ನುತ್ತೀರಾ? ಸೂಪರ್ ಓವರ್ ಎದುರಾಗಬಹುದೆಂದು ತೀರ್ಮಾನಿಸಿ ಪ್ಯಾಡ್ ಕಟ್ಟಿಕೊಳ್ಳಲು ಹೋಗಿದ್ದರು! “ನಾನು ಕೊನೆಯ ಎಸೆತವನ್ನು ನೋಡಲೇ ಇಲ್ಲ. ನಾನಾಗ ಸೂಪರ್ ಓವರ್ ಬಗ್ಗೆಯೇ ಚಿಂತಿಸುತ್ತಿದ್ದೆ. ಹೀಗಾಗಿ ಪ್ಯಾಡ್ ಕಟ್ಟಲು ಒಳಗಡೆ ಹೋಗಿದ್ದೆ. ಆದರೆ ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಮ್ಮೆಲೆ ಸಂಭ್ರಮಾಚರಣೆ ಮುಗಿಲು ಮುಟ್ಟಿದಾಗ ದಿನೇಶ್ ಕಾರ್ತಿಕ್ ಸಿಕ್ಸರ್ ಹೊಡೆದು ಭಾರತವನ್ನು ಗೆಲ್ಲಿಸಿದರು ಎಂದು ತೀರ್ಮಾನಿಸಿದೆ. ಇದು ನಿಜವಾಗಿತ್ತು…’ ಎಂದು ರೋಹಿತ್ ಹೇಳಿದರು.
“ನೋ ಮೋರ್ ಕೋಬ್ರಾ ಡ್ಯಾನ್ಸ್, ಚಿಯರ್4 ಇಂಡಿಯಾ’ ಎಂಬೆಲ್ಲ ಬ್ಯಾನರ್‌ಗಳು ಸ್ಟೇಡಿಯಂನಲ್ಲಿ ಕಂಡುಬಂದವು. ಶುಕ್ರವಾರದ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿ ಕೂಟದಿಂದ ಹೊರದಬ್ಬಿದ ಬಳಿಕ ಬಾಂಗ್ಲಾ ಕ್ರಿಕೆಟಿಗರು “ನಾಗಿಣಿ ನೃತ್ಯ’ ಮಾಡುತ್ತ ಸಂಭ್ರಮಿಸಿದ್ದಕ್ಕೆ ಇದು ತಿರುಗೇಟಾಗಿತ್ತು.
ಗಾವಸ್ಕರ್ ನೃತ್ಯಕ್ಕೆ ಸಿಟ್ಟಾದ ಬಾಂಗ್ಲಾ ಅಭಿಮಾನಿಗಳು
ಲೀಗ್‌ನಲ್ಲಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯದಲ್ಲಿ ಗೆದ್ದ ಅನಂತರ ಬಾಂಗ್ಲಾದೇಶ ತಂಡ ಸಾಮೂಹಿಕವಾಗಿ ನಾಗನೃತ್ಯ ವನ್ನು ಮಾಡಿತ್ತು. ರವಿವಾರ ರಾತ್ರಿ ಭಾರತದ ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಅದೇ ರೀತಿಯ ನೃತ್ಯ ಮಾಡಿದ್ದನ್ನು ಬಾಂಗ್ಲಾ ಅಭಿಮಾನಿಗಳು ಇಷ್ಟ ಪಟ್ಟಿಲ್ಲ! ಬಾಂಗ್ಲಾ ಮೊತ್ತವನ್ನು ಭಾರತ ಬೆನ್ನತ್ತುವಾಗ 10ನೇ ಓವರ್‌ನಲ್ಲಿ ರೋಹಿತ್ ಶರ್ಮ ಭರ್ಜರಿ ಮೂಡ್‌ನಲ್ಲಿದ್ದರು. ಆ ವೇಳೆ ಸ್ಪಯಂಸ್ಫೂರ್ತಿಯಿಂದ ಗಾವಸ್ಕರ್ ಈ ನೃತ್ಯ ಮಾಡಿದ್ದರು. ಇದು ತಮ್ಮ ಆಟಗಾರರಿಗೆ ಮಾಡಿದ ಅಣಕ ಎಂದು ಬಾಂಗ್ಲಾ ಅಭಿಮಾನಿಗಳು ಭಾವಿಸಿ ಸಿಟ್ಟಾಗಿದ್ದಾರೆ.
ಕ್ರಿಕೆಟ್ ಟ್ವೀಟ್
ಮಿಯಾಂದಾದ್‌ರಂತೆ ಸಾಧಿಸಿದ ಕಾರ್ತಿಕ್! -ಉನ್ನಿಕೃಷ್ಣನ್
ಯೂ ಬ್ಯೂಟಿ!: -ಯುವರಾಜ್ ಸಿಂಗ್
ದಿನೇಶ್ ಕಾರ್ತಿಕ್ ತಮ್ಮ ಜೀವಮಾನದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವಿತ್ತರು. -ಹರ್ಷ ಬೋಗ್ಲೆ
ದಿನೇಶ್ ಕಾರ್ತಿಕ್ 6-ಜಾವೇದ್ ಮಿಯಾಂದಾದ್ 6…-ಸಚಿನ್ ಕಲಾºಗ್
ಧೋನಿಗೆ ಬದಲಿ ಆಟಗಾರನೊಬ್ಬ ಭಾರತಕ್ಕೆ ಲಭಿಸಿದಂತಾಗಿದೆ.-ನೋಟಾ ಜರ್ನಲಿಸ್ಟ್
ಬಹಳ ದಿನಗಳ ಕಾಲ ನೆನಪಿನಲ್ಲಿ ಉಳಿಯಬೇಕಾದ ಇನ್ನಿಂಗ್ಸ್. ಯಶಸ್ಸಿಗೆ ಅಡ್ಡ ದಾರಿಗಳಿಲ್ಲ.
-ಮೊಹಮ್ಮದ್ ಕೈಫ್
ಭಾರತ ಅರ್ಧ ಡಜನ್‌ನಷ್ಟು ಆಟಗಾರರಿಗೆ ವಿಶ್ರಾಂತಿ ನೀಡಿತ್ತು. ಕೇವಲ ಒಂದು ಪಂದ್ಯವನ್ನಷ್ಟೇ ಕಳೆದುಕೊಂಡಿತ್ತು. ಇದು ಕೇವಲ ಟಿ20 ಟ್ರೋಫಿ ಗೆಲುವಲ್ಲ, ಒಂದು ಮೈಲುಗಲ್ಲು. ವೆಲ್ ಡನ್ ಇಂಡಿಯಾ! -ಆಕಾಶ್ ಚೋಪ್ರಾ
ಸ್ಕೋರ್‌ಪಟ್ಟಿ
ಬಾಂಗ್ಲಾದೇಶ
ತಮಿಮ್ ಇಕ್ಬಾಲ್ ಸಿ ಠಾಕೂರ್ ಬಿ ಚಾಹಲ್ 15
ಲಿಟನ್ ದಾಸ್ ಸಿ ರೈನಾ ಬಿ ವಾಷಿಂಗ್ಟನ್ 11
ಶಬ್ಬೀರ್ ರೆಹಮಾನ್ ಬಿ ಉನಾದ್ಕತ್ 77
ಸೌಮ್ಯ ಸರ್ಕಾರ್ ಸಿ ಧವನ್ ಬಿ ಚಾಹಲ್ 1
ಮುಶ್ಫಿಕರ್ ರಹೀಂ ಸಿ ಶಂಕರ್ ಬಿ ಚಾಹಲ್ 9
ಮಹಮದುಲ್ಲ ರನೌಟ್ 21
ಶಕಿಬ್ ಅಲ್ ಹಸನ್ ರನೌಟ್ 7
ಮೆಹಿದಿ ಹಸನ್ ಔಟಾಗದೆ 19
ರುಬೆಲ್ ಹೊಸೇನ್ ಬಿ ಉನಾದ್ಕತ್ 0
ಮುಸ್ತಫಿಜುರ್ ರೆಹಮಾನ್ ಔಟಾಗದೆ 0
ಇತರ 6
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 166
ವಿಕೆಟ್ ಪತನ: 1-27, 2-27, 3-33, 4-68, 5-104, 6-133, 7-147, 8-148.
ಬೌಲಿಂಗ್:
ಜೈದೇವ್ ಉನಾದ್ಕತ್ 4-0-33-2
ವಾಷಿಂಗ್ಟನ್ ಸುಂದರ್ 4-0-20-1
ಯುಜುವೇಂದ್ರ ಚಾಹಲ್ 4-0-18-3
ಶಾದೂìಲ್ ಠಾಕೂರ್ 4-0-45-0
ವಿಜಯ್ ಶಂಕರ್ 4-0-48-0
ಭಾರತ
ಶಿಖರ್ ಧವನ್ ಸಿ ಅರೀಫುಲ್ ಬಿ ಶಕಿಬ್ 10
ರೋಹಿತ್ ಶರ್ಮ ಸಿ ಮಹಮದುಲ್ಲ ಬಿ ನಜ್ಮುಲ್ 56
ಸುರೇಶ್ ರೈನಾ ಸಿ ರಹೀಂ ಬಿ ರುಬೆಲ್ 0
ಕೆ.ಎಲ್. ರಾಹುಲ್ ಸಿ ಶಬ್ಬೀರ್ ಬಿ ರುಬೆಲ್ 24
ಮನೀಷ್ ಪಾಂಡೆ ಸಿ ಶಬ್ಬೀರ್ ಬಿ ಮುಸ್ತಫಿಜುರ್ 28
ವಿಜಯ್ ಶಂಕರ್ ಸಿ ಮೆಹಿದಿ ಬಿ ಸರ್ಕಾರ್ 17
ದಿನೇಶ್ ಕಾರ್ತಿಕ್ ಔಟಾಗದೆ 29
ವಾಷಿಂಗ್ಟನ್ ಸುಂದರ್ ಔಟಾಗದೆ 0
ಇತರ 4
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 168
ವಿಕೆಟ್ ಪತನ: 1-32, 2-32, 3-83, 4-98, 5-133, 6-162.
ಬೌಲಿಂಗ್:
ಶಕಿಬ್ ಅಲ್ ಹಸನ್ 4-0-28-1
ಮೆಹಿದಿ ಹಸನ್ ಮಿರಾಜ್ 1-0-17-0
ರುಬೆಲ್ ಹೊಸೇನ್ 4-0-35-2
ನಜ್ಮುಲ್ ಇಸ್ಲಾಮ್ 4-0-32-1
ಮುಸ್ತಫಿಜುರ್ ರೆಹಮಾನ್ 4-1-21-1
ಸೌಮ್ಯ ಸರ್ಕಾರ್ 3-0-33-1
ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್
ಸರಣಿಶ್ರೇಷ್ಠ: ವಾಷಿಂಗ್ಟನ್ ಸುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.