ಸೀನಿಯರ್ ಬಂದರು ದಾರಿ ಬಿಡಿ… ಇಂದು ದ್ವಿತೀಯ ಟಿ20: ಸರಣಿ ಗೆಲುವಿನ ಯೋಜನೆ
ಕೊಹ್ಲಿ, ಅಯ್ಯರ್, ಪಂತ್, ಜಡೇಜ, ಬುಮ್ರಾ ಆಗಮನ
Team Udayavani, Jul 9, 2022, 7:25 AM IST
ಬರ್ಮಿಂಗ್‌ಹ್ಯಾಮ್: ಯುವ ಪ್ರತಿಭೆಗಳನ್ನೇ ಹೊಂದಿರುವ ಭಾರತ ತಂಡ ಗುರುವಾರ ರಾತ್ರಿಯ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡನ್ನು 50 ರನ್ನುಗಳಿಂದ ಬಗ್ಗುಬಡಿದು ತಾಕತ್ತು ತೋರಿದೆ. ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಚೊಚ್ಚಲ ಪಂದ್ಯವಾಡಿದ ಆರ್ಷದೀಪ್ ಸಿಂಗ್ ಅವರೆಲ್ಲ ನೀಡಿದ ಅಮೋಘ ಪ್ರದರ್ಶನ ಟೀಮ್ ಇಂಡಿಯಾದ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಇದೀಗ ಶನಿವಾರ ಮತ್ತು ರವಿವಾರ ಆಡಲಾಗುವ ಉಳಿದೆರಡು ಪಂದ್ಯಗಳಿಗಾಗಿ ಭಾರತ ತಂಡದಲ್ಲಿ ಮಹತ್ತರ ಬದಲಾವಣೆ ಸಂಭವಿಸಿದೆ. ಸೀನಿಯರ್ ಆಟಗಾರರೆಲ್ಲ ಮರಳಿದ್ದಾರೆ. ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ ಅವರ ಆಗಮನವಾಗಿದೆ. ಇವರಲ್ಲಿ ಕೆಲವರಿಗಾದರೂ ಆಡುವ ಬಳಗದಲ್ಲಿ ಅವಕಾಶ ಲಭಿಸುವುದರಲ್ಲಿ ಅನುಮಾನವಿಲ್ಲ.
ವಿಪರ್ಯಾಸವೆಂದರೆ, ಒಂದು ದಿನದ ಹಿಂದಷ್ಟೇ ಟಿ20 ಪದಾರ್ಪಣೆ ಮಾಡಿ ಮೊದಲ ಓವರನ್ನೇ ಮೇಡನ್ ಮಾಡಿದ ಆರ್ಷದೀಪ್ ಸಿಂಗ್ ಅವರಿಗೆ ಉಳಿದೆರಡು ಪಂದ್ಯಗಳಲ್ಲಿ ಸ್ಥಾನ ಇಲ್ಲದಿರುವುದು! ತಂಡದಲ್ಲಿ ಮುಂದುವರಿದ ಪ್ರಮುಖರೆಂದರೆ ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್ ಮಾತ್ರ.
ಕೊಹ್ಲಿಗೆ ಫಾರ್ಮ್ ಚಿಂತೆ
ತೀವ್ರ ರನ್ ಬರಗಾಲದಲ್ಲಿದ್ದರೂ ವಿರಾಟ್ ಕೊಹ್ಲಿಗೆ ಅವಕಾಶ ಸಿಗುವ ಬಗ್ಗೆ ಅನುಮಾನವಿಲ್ಲ. ಆದರೆ ಇವರಿಗೆ ಯಾವ ಕ್ರಮಾಂಕ ನೀಡಬೇಕು, ಯಾರನ್ನು ಹೊರಗಿಡಬೇಕು ಎಂಬುದೇ ಪ್ರಶ್ನೆ. ವನ್‌ಡೌನ್‌ನಲ್ಲಿ ಬರುವ ದೀಪಕ್ ಹೂಡಾ ಪ್ರತಿಯೊಂದು ಪಂದ್ಯದಲ್ಲೂ ಹೊಡಿಬಡಿ ಆಟ ಆಡುತ್ತಿರುವುದರಿಂದ ಇವರನ್ನು ಅಲುಗಿಸುವ ಪ್ರಶ್ನೆಯೇ ಇಲ್ಲ. ಗುರುವಾರ 17 ಎಸೆತಗಳಿಂದ 33 ರನ್ ಹೊಡೆದಿದ್ದರು.
ಮಧ್ಯಮ ಕ್ರಮಾಂಕದ ಮತ್ತೋರ್ವ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರನ್ನು ಕೈಬಿಡಬಹುದಾದರೂ ಈ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ ಕೊಹ್ಲಿ ಆರಂಭಿಕನಾಗಿ ನಾಯಕ ರೋಹಿತ್ ಶರ್ಮ ಅವರೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆಗ ಇಶಾನ್ ಕಿಶನ್ ಜಾಗ ಬಿಡಬೇಕಾಗುತ್ತದೆ. ಅಂದಹಾಗೆ ಕೊಹ್ಲಿ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದ್ದು ಫೆಬ್ರವರಿಯಲ್ಲಿ. ಬಳಿಕ ಐಪಿಎಲ್ ಆಡಿದರೂ “ಬ್ಯಾಟಿಂಗ್ ವರಿ’ ಮುಂದುವರಿದಿದೆ. ಮುಂದಿನ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರಷ್ಟೇ ಕೊಹ್ಲಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಎಂಬುದು ಈಗಿನ ಲೆಕ್ಕಾಚಾರ.
ಉಳಿದಂತೆ ಅಕ್ಷರ್ ಪಟೇಲ್ ಬದಲು ರವೀಂದ್ರ ಜಡೇಜ, ಆರ್ಷದೀಪ್ ಸ್ಥಾನಕ್ಕೆ ಬುಮ್ರಾ ಬರುವುದು ಖಚಿತ. ರಿಷಭ್ ಪಂತ್ ಅವರಿಗಾಗಿ ದಿನೇಶ್ ಕಾರ್ತಿಕ್ ಹೊರಗುಳಿಯಬೇಕಾದೀತೇ, ಈ ಬದಲಾವಣೆ ಸೂಕ್ತವೇ ಎಂಬುದೊಂದು ಪ್ರಶ್ನೆ. ಕಾರ್ತಿಕ್ ಟಿ20 ವಿಶ್ವಕಪ್ ತಂಡದ ಪ್ರಬಲ ಉಮೇದುವಾರರಲ್ಲಿ ಒಬ್ಬರು ಎಂಬುದನ್ನು ಮರೆಯುವಂತಿಲ್ಲ.
ಸಿಡಿಯದ ಬಿಗ್ ಗನ್ಸ್
ಜಾಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಕೂಡ ಬಲಿಷ್ಠ ಟಿ20 ತಂಡ. ಆದರೆ ಮೊದಲ ಪಂದ್ಯದಲ್ಲಿ ಬಿಗ್ ಹಿಟ್ಟರ್‌ಗಳಾದ ಜೇಸನ್ ರಾಯ್, ಬಟ್ಲರ್, ಲಿವಿಂಗ್‌ಸ್ಟೋನ್, ಮಲಾನ್ ಅವರೆಲ್ಲ ಸಿಡಿದು ನಿಲ್ಲುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಬಟ್ಲರ್ ಅವರನ್ನು ಮೊದಲ ಎಸೆತದಲ್ಲೇ ಭುವನೇಶ್ವರ್ ಕ್ಲೀನ್‌ಬೌಲ್ಡ್ ಮಾಡಿದ್ದರು. ಅಪಾಯಕಾರಿ ಲಿವಿಂಗ್‌ಸ್ಟೋನ್‌ಗೆ ಖಾತೆ ತೆರೆಯಲು ಪಾಂಡ್ಯ ಅವಕಾಶವನ್ನೇ ಕೊಡಲಿಲ್ಲ. ಪಾಂಡ್ಯ 33ಕ್ಕೆ 4 ವಿಕೆಟ್ ಬೇಟೆಯಾಡಿ ಆಂಗ್ಲರ ನಡು ಮುರಿದರು. ಪಂದ್ಯದ ಏಕೈಕ ಅರ್ಧ ಶತಕಕ್ಕೂ ಅವರು ಸಾಕ್ಷಿಯಾಗಿದ್ದರು (33 ಎಸೆತ, 51 ರನ್, 4 ಬೌಂಡರಿ, 2 ಸಿಕ್ಸರ್). ಪಾಂಡ್ಯ ಅವರ ಆಲ್‌ರೌಂಡ್ ಶೋ ಟೀಮ್ ಇಂಡಿಯಾ ಪಾಲಿಗೊಂದು ವರದಾನ.
ಗುರುವಾರ ಸಿಡಿಯದ ಇಂಗ್ಲೆಂಡಿನ ಬಿಗ್ ಗನ್‌ಗಳಲ್ಲಿ ಕೆಲವಾದರೂ ಬರ್ಮಿಂಗ್‌ಹ್ಯಾಮ್‌ನಲ್ಲಿ ಸ್ಫೋಟಿಸುವ ಸಾಧ್ಯತೆ ಇದೆ. ಭಾರತ ಹೆಚ್ಚು ಎಚ್ಚರದಿಂದ ಇರಬೇಕು. ಶನಿವಾರವೇ ಸರಣಿ ಗೆಲ್ಲುವುದು ರೋಹಿತ್ ಪಡೆಯ ಯೋಜನೆಯಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.