ಟೀಮ್ ಇಂಡಿಯಾ ಸರಣಿ ಜಯಭೇರಿ
ರೋಹಿತ್ ಶರ್ಮ-ಕೆ.ಎಲ್. ರಾಹುಲ್ ಅಮೋಘ ಶತಕದ ಜತೆಯಾಟ
Team Udayavani, Nov 19, 2021, 11:05 PM IST
ರಾಂಚಿ: ರಾಂಚಿ ಪಂದ್ಯದಲ್ಲೂ ಮಿಂಚಿದ ಟೀಮ್ ಇಂಡಿಯಾ ನ್ಯೂಜಿಲ್ಯಾಂಡನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದು ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.
ರೋಹಿತ್ ಶರ್ಮ-ಕೆ.ಎಲ್. ರಾಹುಲ್ ಜೋಡಿಯ ಅಮೋಘ ಶತಕದ ಜತೆಯಾಟ ಭಾರತದ ಗೆಲುವನ್ನು ಸುಲಭಗೊಳಿಸಿತು.
ಆರಂಭಿಕ ಅಬ್ಬರದ ಬಳಿಕ ಭಾರತದ ಬೌಲಿಂಗ್ ಆಕ್ರಮಣಕ್ಕೆ ಸಿಲುಕಿ ಥಂಡಾ ಹೊಡೆದ ನ್ಯೂಜಿಲ್ಯಾಂಡ್ 6 ವಿಕೆಟಿಗೆ 153 ರನ್ ಗಳಿಸಿದರೆ, ಅಬ್ಬರಿಸುತ್ತಲೇ ಈ ಮೊತ್ತವನ್ನು ಬೆನ್ನಟ್ಟಿದ ಭಾರತ 17.2 ಓವರ್‌ಗಳಲ್ಲಿ 3 ವಿಕೆಟಿಗೆ 155 ರನ್ ಬಾರಿಸಿ ಸತತ 2ನೇ ಜಯಭೇರಿ ಮೊಳಗಿಸಿತು. ಅಂತಿಮ ಪಂದ್ಯ ರವಿವಾರ ಕೋಲ್ಕತಾದಲ್ಲಿ ನಡೆಯಲಿದೆ.
ರಾಹುಲ್-ರೋಹಿತ್ ಆರಂಭಿಕ ವಿಕೆಟಿಗೆ 13.2 ಓವರ್‌ಗಳಿಂದ 117 ರನ್ ಪೇರಿಸಿ ಕಿವೀಸ್ ಮೇಲೆ ಸವಾರಿ ಮಾಡಿದರು. ರಾಹುಲ್ ಸರ್ವಾಧಿಕ 65 ರನ್ ಬಾರಿಸಿದರೆ (49 ಎಸೆತ, 6 ಬೌಂಡರಿ, 2 ಸಿಕ್ಸರ್), ರೋಹಿತ್ 5 ಸಿಕ್ಸರ್ ಸಿಡಿಸಿ 36 ಎಸೆತಗಳಿಂದ 55 ರನ್ ಹೊಡೆದರು. ಕಳೆದ ಪಂದ್ಯದಲ್ಲಿ ಮಿಂಚಿದ ಸೂರ್ಯಕುಮಾರ್ ಯಾದವ್ ಇಲ್ಲಿ ಒಂದೇ ರನ್ನಿಗೆ ಔಟಾದರು. ನೀಶಮ್ ಎಸೆತಗಳೆರಡನ್ನು ಸತತವಾಗಿ ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ರಿಷಭ್ ಪಂತ್ ಭಾರತದ ಸರಣಿ ಗೆಲುವನ್ನು ಸಾರಿದರು.
ರೋಹಿತ್ ಶರ್ಮ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 29 ಸಲ 50 ಪ್ಲಸ್ ರನ್ ಹೊಡೆದು ಕೊಹ್ಲಿ ದಾಖಲೆಯನ್ನು ಸರಿದೂಗಿಸಿದರು. ಇದರಲ್ಲಿ 4 ಶತಕಗಳು ಸೇರಿವೆ. ಹಾಗೆಯೇ ಸರ್ವಾಧಿಕ 13 ಶತಕಗಳ ಜತೆಯಾಟದಲ್ಲಿ ಪಾಲ್ಗೊಂಡ ದಾಖಲೆಗೂ ರೋಹಿತ್ ಪಾತ್ರರಾದರು. ಬಾಬರ್ ಆಜಂ, ಗಪ್ಟಿಲ್ ದ್ವಿತೀಯ ಸ್ಥಾನಕ್ಕೆ ಕುಸಿದರು (ತಲಾ 12).
ಕಿವೀಸ್ ಬಿರುಸಿನ ಆರಂಭ
34 ರನ್ ಮಾಡಿದ ಗ್ಲೆನ್ ಫಿಲಿಪ್ಸ್ ಕಿವೀಸ್ ಸರದಿಯ ಟಾಪ್ ಸ್ಕೋರರ್. ಆರಂಭಿಕರಾದ ಗಪ್ಟಿಲ್, ಮಿಚೆಲ್ ತಲಾ 31 ರನ್ ಮಾಡಿದರು. ಡೆತ್ ಓವರ್‌ಗಳಲ್ಲಿ ಭಾರತದ ಬೌಲರ್ ಅಮೋಘ ನಿಯಂತ್ರಣ ಸಾಧಿಸಿದರು. ಕೇವಲ 28 ರನ್ ನೀಡಿ, ಪ್ರವಾಸಿಗರ 3 ವಿಕೆಟ್ ಉರುಳಿಸಿದರು.
ಮತ್ತೆ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡಿನ ಆರಂಭ ಅತ್ಯಂತ ಅಬ್ಬರದಿಂದ ಕೂಡಿತ್ತು. ಮಾರ್ಟಿನ್ ಗಪ್ಟಿಲ್-ಡ್ಯಾರಿಲ್ ಮಿಚೆಲ್ ಓವರಿಗೆ ಹತ್ತರ ಸರಾಸರಿಯಲ್ಲಿ ರನ್ ಪೇರಿಸುತ್ತ ಹೋದರು. 4.2 ಓವರ್‌ಗಳಲ್ಲಿ 48 ರನ್ ಹರಿದು ಬಂತು. 5ನೇ ಓವರ್‌ನಲ್ಲಿ ದೀಪಕ್ ಚಹರ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಕೇವಲ 15 ಎಸೆತಗಳಿಂದ 31 ರನ್ ಬಾರಿಸಿದ ಗಪ್ಟಿಲ್ ಆಗಸಕ್ಕೆ ಎತ್ತಿದ ಚೆಂಡು ನೇರವಾಗಿ ಪಂತ್ ಕೈಗೆ ಬಂದು ಬಿತ್ತು. ಅಷ್ಟರಲ್ಲಾಗಲೇ ಗಪ್ಟಿಲ್ ಬ್ಯಾಟಿನಿಂದ 3 ಫೋರ್, 2 ಸಿಕ್ಸರ್ ಸಿಡಿದಿತ್ತು.
ಇದನ್ನೂ ಓದಿ:ಟಿ20: ಬಾಂಗ್ಲಾದ ಗೆಲುವು ಕಸಿದ ಪಾಕಿಸ್ಥಾನ
ಗಪ್ಟಿಲ್ ರನ್ ದಾಖಲೆ
ತಮ್ಮ ಬ್ಯಾಟಿಂಗ್ ಅಬ್ಬರದ ವೇಳೆ ಮಾರ್ಟಿನ್ ಗಪ್ಟಿಲ್ ನೂತನ ಮೈಲುಗಲ್ಲು ನೆಟ್ಟರು. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆಯನ್ನು ತಮ್ಮಹೆಸರಿಗೆ ಬರೆಸಿಕೊಂಡರು. 111ನೇ ಪಂದ್ಯ ಆಡಲಿಳಿದಿದ್ದ ಗಪ್ಟಿಲ್ ಗಳಿಕೆ ಈಗ 3,248ಕ್ಕೆ ಏರಿದೆ. ಕೊಹ್ಲಿ ದ್ವಿತೀಯ ಸ್ಥಾನಕ್ಕೆ ಇಳಿದರು (3,227 ರನ್).
ಹರ್ಷಲ್ ಪದಾರ್ಪಣೆ
ಹರ್ಯಾಣ ಹಾಗೂ ಆರ್‌ಸಿಬಿಯ ಪ್ರಧಾನ ಬೌಲರ್ ಹರ್ಷಲ್ ಪಟೇಲ್ ಈ ಪಂದ್ಯದ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಗಾಯಾಳು ಮೊಹಮ್ಮದ್ ಸಿರಾಜ್ ಬದಲು ಪಟೇಲ್ ಅವಕಾಶ ಪಡೆದರು.
ಹರ್ಷಲ್ ಪಟೇಲ್ ಟಿ20 ಪದಾರ್ಪಣೆ ಮಾಡಿದ ಭಾರತದ 6ನೇ ಅತೀ ಹಿರಿಯ ಕ್ರಿಕೆಟಿಗನೆನಿಸಿದರು (30 ವರ್ಷ, 361 ದಿನ). ರಾಹುಲ್ ದ್ರಾವಿಡ್ 38 ವರ್ಷ, 232ನೇ ದಿನದಲ್ಲಿ ಮೊದಲ ಟಿ20 ಆಡಿದ್ದು ಭಾರತದ ದಾಖಲೆ.
ಕಿವೀಸ್ ತಂಡದಲ್ಲಿ 3 ಬದಲಾವಣೆ ಕಂಡುಬಂತು. ಫರ್ಗ್ಯುಸನ್, ರವೀಂದ್ರ, ಆ್ಯಸ್ಟಲ್ ಬದಲು ಮಿಲ್ನೆ, ನೀಶಮ್ ಮತ್ತು ಸೋಧಿ ಆಡಲಿಳಿದರು.
ಸ್ಕೋರ್ ಪಟ್ಟಿ
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್ ಸಿ ಪಂತ್ ಬಿ ಚಹರ್ 31
ಮಿಚೆಲ್ ಸಿ ಸೂರ್ಯಕುಮಾರ್ ಬಿ ಹರ್ಷಲ್ 31
ಚಾಪ್‌ಮನ್ ಸಿ ರಾಹುಲ್ ಬಿ ಅಕ್ಷರ್ 21
ಗ್ಲೆನ್ ಫಿಲಿಪ್ಸ್ ಸಿ ಗಾಯಕ್ವಾಡ್ ಬಿ ಹರ್ಷಲ್ 34
ಟಿಮ್ ಸೀಫರ್ಟ್ ಸಿ ಭುವನೇಶ್ವರ್ ಬಿ ಅಶ್ವಿನ್ 13
ಜೇಮ್ಸ್ ನೀಶಮ್ ಸಿ ಪಂತ್ ಬಿ ಭುವನೇಶ್ವರ್ 3
ಮಿಚೆಲ್ ಸ್ಯಾಂಟ್ನರ್ ಔಟಾಗದೆ 8
ಆಡಮ್ ಮಿಲ್ನೆ ಔಟಾಗದೆ 5
ಇತರ 7
ಒಟ್ಟು (6 ವಿಕೆಟಿಗೆ) 153
ವಿಕೆಟ್ ಪತನ:1-48, 2-79, 3-90, 4-125, 5-137, 6-140.
ಬೌಲಿಂಗ್; ಭುವನೆಶ್ವರ್ ಕುಮಾರ್ 4-0-39-1
ದೀಪಕ್ ಚಹರ್ 4-0-42-1
ಅಕ್ಷರ್ ಪಟೇಲ್ 4-0-26-1
ಆರ್. ಅಶ್ವಿನ್ 4-0-19-1
ಹರ್ಷಲ್ ಪಟೇಲ್ 4-0-25-2
ಭಾರತ
ಕೆ. ಎಲ್ ರಾಹುಲ್ ಸಿ ಫಿಲಿಪ್ಸ್ ಬಿ ಸೌಥಿ 65
ರೋಹಿತ್ ಶರ್ಮ ಸಿ ಗಪ್ಟಿಲ್ ಬಿ ಸೌಥಿ 55
ವೆಂಕಟೇಶ್ ಅಯ್ಯರ್ ಔಟಾಗದೆ 12
ಸೂರ್ಯಕುಮಾರ್ ಬಿ ಸೌಥಿ 1
ರಿಷಭ್ ಪಂತ್ ಔಟಾಗದೆ 12
ಇತರ 10
ಒಟ್ಟು (17.2 ಓವರ್‌ಗಳಲ್ಲಿ 3 ವಿಕೆಟಿಗೆ) 155
ವಿಕೆಟ್ ಪತನ:1-117, 2-135, 3-137.
ಬೌಲಿಂಗ್; ಟಿಮ್ ಸೌಥಿ 4-0-16-3
ಟ್ರೆಂಟ್ ಬೌಲ್ಟ್ 4-0-36-0
ಮಿಚೆಲ್ ಸ್ಯಾಂಟ್ನರ್ 4-0-33-0
ಆಡಮ್ ಮಿಲ್ನೆ 3-0-39-0
ಐಶ್ ಸೋಧಿ 2-0-13-0
ಜೇಮ್ಸ್ ನೀಶಮ್ 0.2-12-0
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.