ಕಟಕ್‌ನಲ್ಲಿ ಚುಟುಕು ಕ್ರಿಕೆಟ್ ಕೌತುಕ
Team Udayavani, Dec 20, 2017, 11:16 AM IST
ಕಟಕ್: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 1-0 ಅಂತರದಿಂದ, ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡ ಭಾರತಕ್ಕಿನ್ನು ಕೊನೆಯದಾಗಿ ಟಿ20 ಸವಾಲು ಎದುರಾಗಲಿದೆ. ಇದು ಈ ವರ್ಷ ಟೀಮ್ ಇಂಡಿಯಾ ಆಡುತ್ತಿರುವ ಕಟ್ಟಕಡೆಯ ಸರಣಿಯೂ ಹೌದು. ಬುಧವಾರ ಕಟಕ್‌ನ “ಬಾರಾಬತಿ ಸ್ಟೇಡಿಯಂ’ನಲ್ಲಿ ಮೊದಲ ಪಂದ್ಯ ನಡೆಯಲಿದೆ.
ಭಾರತ ಟೆಸ್ಟ್ ಸರಣಿಯನ್ನು ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಗೆದ್ದರೆ, ಏಕದಿನ ಸರಣಿಯನ್ನು ರೋಹಿತ್ ಶರ್ಮ ನಾಯಕತ್ವದಲ್ಲಿ ವಶಪಡಿಸಿಕೊಂಡಿತು. 3 ಪಂದ್ಯಗಳ ಟಿ20 ಸರಣಿಯಲ್ಲೂ ರೋಹಿತ್ ಅವರೇ ಟೀಮ್ ಇಂಡಿಯಾ ನಾಯಕರಾಗಿದ್ದಾರೆ. ಈ ಸರಣಿ ಮುಗಿದ ಕೆಲವೇ ದಿನಗಳಲ್ಲಿ ಭಾರತ ತಂಡ ಭಾರೀ ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಹೀಗಾಗಿ ಹರಿಣಗಳ ನಾಡಿನ ಸುದೀರ್ಘ ಪ್ರವಾಸಕ್ಕೆ ಹುರಿಗೊಳ್ಳಲು ಭಾರತದ ಕ್ರಿಕೆಟಿಗರಿಗೆ ಇದೊಂದು ಅಭ್ಯಾಸ ಸರಣಿ ಆಗಿದೆ.
ಕೊಹ್ಲಿ, ಧವನ್, ಭುವನೇಶ್ವರ್ ಮೊದಲಾದ ಅನುಭವಿ ಆಟಗಾರರ ಸೇವೆಯಿಂದ ವಂಚಿತವಾಗಿರುವ ಭಾರತದ “ಮೀಸಲು ಸಾಮರ್ಥ್ಯ’ಕ್ಕೆ ಈ ಸರಣಿಯೊಂದು ವೇದಿಕೆಯಾಗಲಿದೆ. ಐಪಿಎಲ್‌ನಲ್ಲಿ ಮಿಂಚು ಹರಿಸಿರುವ ಬಾಸಿಲ್ ಥಂಪಿ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಮೊದಲಾದವರೆಲ್ಲ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಉಳಿದಂತೆ ಧೋನಿ, ರೋಹಿತ್, ಕಾರ್ತಿಕ್, ಪಾಂಡ್ಯ, ಬುಮ್ರಾ, ಪಾಂಡೆ, ಚಾಹಲ್, ಕುಲದೀಪ್ ಮೊದಲಾದ ಸ್ಟಾರ್ ಆಟಗಾರರ ಬೆಂಬಲ ಟೀಮ್ ಇಂಡಿಯಾಕ್ಕಿದೆ. ಹೀಗಾಗಿ ಇದನ್ನೊಂದು ಸಮತೋಲಿತ ತಂಡ ಎನ್ನಲಡ್ಡಿಯಿಲ್ಲ.
ಕಟಕ್‌ನಲ್ಲಿ ಕಹಿ ನೆನಪು
ಟೆಸ್ಟ್ ಹಾಗೂ ಏಕದಿನಕ್ಕೆ ಹೋಲಿಸಿದರೆ ಟಿ20 ಎಂಬುದು “ಡಿಫರೆಂಟ್ ಬಾಲ್ ಗೇಮ್’. ಒಬ್ಬ ಸಾಮಾನ್ಯ ಆಟಗಾರ, ಒಂದು ದುಬಾರಿ ಓವರ್ ಪಂದ್ಯದ ಗತಿಯನ್ನೇ ಬದಲಿಸಬಲ್ಲದು. ಹೀಗಾಗಿ ಇಲ್ಲಿ ಯಾರನ್ನೂ ಫೇವರಿಟ್ ಅಥವಾ ಬಲಿಷ್ಠ ಎಂದು ಗುರುತಿಸುವುದು ತಪ್ಪಾಗುತ್ತದೆ. ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಭಾರತ 7-4 ಗೆಲುವಿನ ದಾಖಲೆ ಹೊಂದಿದೆ ಎಂದು ಹೇಳಿಕೊಳ್ಳಬಹುದು. ಹಾಗೆಯೇ ಕಟಕ್‌ನಲ್ಲಿ ಆಡಲಾದ ಏಕೈಕ ಟಿ20 ಪಂದ್ಯದಲ್ಲಿ ಭಾರತ 92 ರನ್ನಿಗೆ ಆಲೌಟಾದುದನ್ನೂ ಮರೆಯುವಂತಿಲ್ಲ. ಅದು 2015ರ ದಕ್ಷಿಣ ಆಫ್ರಿಕಾ ಎದುರಿನ ಮುಖಾಮುಖೀ ಆಗಿತ್ತು. ಇದನ್ನು ಧೋನಿ ಪಡೆ 6 ವಿಕೆಟ್‌ಗಳಿಂದ ಕಳೆದುಕೊಂಡಿತ್ತು. ಕಟಕ್‌ನ ಈ ಕಹಿ ನೆನಪನ್ನು ಮರೆಸುವ ರೀತಿಯಲ್ಲಿ ರೋಹಿತ್ ಬಳಗ ಪ್ರದರ್ಶನ ನೀಡಬೇಕಿದೆ.
ಬ್ಯಾಟಿಂಗಿಗೆ ರೊಹಿತ್ ಬಲ
ಭಾರತದ ಬ್ಯಾಟಿಂಗ್ ಲೈನ್‌ಅಪ್ ನಾಯಕ ರೋಹಿತ್ ಶರ್ಮ ಅವರನ್ನು ಹೆಚ್ಚು ಅವಲಂಬಿಸಿದೆ. ಏಕದಿನ ಸರಣಿಯಲ್ಲಿ ರೋಹಿತ್ ಬಾರಿಸಿದ ದ್ವಿಶತಕ ಇಡೀ ಬ್ಯಾಟಿಂಗ್ ಸರದಿಗೆ ಸ್ಫೂರ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಇವರೊಂದಿಗೆ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ರಾಹುಲ್ ಪಾಲಿಗೆ ಈ ಟಿ20 ಸರಣಿ ಅತ್ಯಂತ ಮಹಣ್ತೀದ್ದು. ಲಂಕಾ ಎದುರಿನ ತವರಿನ ಸರಣಿಯಲ್ಲಿ ಕರ್ನಾಟಕದ ಈ ಪ್ರತಿಭಾನ್ವಿತನಿಗೆ ಹೆಚ್ಚಿನ ಅವಕಾಶ ಲಭಿಸಿರಲಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್, ಪಾಂಡೆ, ಕಾರ್ತಿಕ್, ಧೋನಿ, ಪಾಂಡ್ಯ ಅವರೆಲ್ಲ ಭಾರತದ ಇನ್ನಿಂಗ್ಸ್ ಬೆಳೆಸಬೇಕಿದೆ. ಬರೋಡದ ಆಲ್‌ರೌಂಡರ್ ದೀಪಕ್ ಹೂಡಾ ಕೂಡ ರೇಸ್‌ನಲ್ಲಿದ್ದಾರೆ. ಈ ವರ್ಷದ “ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿ’ ಕ್ರಿಕೆಟ್ ಪಂದ್ಯದಲ್ಲಿ 4ನೇ ಅತಿ ವೇಗದ ಟಿ20 ಶತಕ ಬಾರಿಸಿದ ಸಾಧನೆ ಹೂಡಾ ಅವರದ್ದಾಗಿದೆ. ಹೂಡಾ ಅವಕಾಶ ಪಡೆದರೆ ಬಾರತಕ್ಕೆ ಮತ್ತೂಬ್ಬ ಫಿನಿಶರ್ ಲಭಿಸಿದಂತಾಗುತ್ತದೆ. ಈಗಾಗಲೇ ಧೋನಿ-ಪಾಂಡ್ಯ ಈ ಕೆಲಸ ಮಾಡುತ್ತಿದ್ದಾರೆ.
ಭುವಿ ಬದಲು ಥಂಪಿ?
ಡೆತ್ ಓವರ್ ಸೆಪಷಲಿಸ್ಟ್‌ಗಳೆಂದೇ ಗುರುತಿಸಲ್ಪಡುವ ಭುವನೇಶ್ವರ್-ಬುಮ್ರಾ ಈ ವರ್ಷ ಉತ್ತಮ ಬೌಲಿಂಗ್ ಪ್ರದರ್ಶನ ಕಾಯ್ದುಕೊಂಡು ಬಂದಿದ್ದರು. ಆದರೆ ಇಲ್ಲಿ ಭುವನೇಶ್ವರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಬುಮ್ರಾ ಮೇಲಿನ ಭಾರ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಇದೇ ಮೊದಲ ಸಲ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಕೇರಳದ ಪೇಸ್ ಬೌಲರ್ ಬಾಸಿಲ್ ಥಂಪಿ ಕೂಡ ಪರಿಣಾಮಕಾರಿ ಯಾರ್ಕರ್ ಎಸೆಯಬಲ್ಲರು. ಭುವಿ ಜಾಗಕ್ಕೆ ಥಂಪಿ ಬರಬಹುದೆಂಬ ನಿರೀಕ್ಷೆ ದಟ್ಟವಾಗಿದೆ.
ಆದರೆ ಭುವನೇಶ್ವರ್ ಬದಲು ತಂಡಕ್ಕೆ ಆಯ್ಕೆಯಾದವರು ಜೈದೇವ್ ಉನದ್ಕತ್. ಸೌರಾಷ್ಟ್ರದ ಈ ಎಡಗೈ ಪೇಸರ್ ಕಳೆದ ವರ್ಷದ ಜೂನ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅಂತಿಮ ಟಿ20 ಆಡಿದ್ದರು. ಹೈದರಾಬಾದ್‌ನ ಮೊಹಮ್ಮದ್ ಸಿರಾಜ್ ಮತ್ತೂಬ್ಬ ಪೇಸ್ ಬೌಲರ್.
ಕುಲದೀಪ್, ಚಾಹಲ್ ಅವರನ್ನೊಳ ಗೊಂಡ ಭಾರತದ ಸ್ಪಿನ್ ವಿಭಾಗ ಹೆಚ್ಚು ಬಲಿಷ್ಠವಾಗಿದೆ.
ಲಂಕೆಗೆ ಕೊನೆಯ ಅವಕಾಶ
ಶ್ರೀಲಂಕಾ ಸತತ 5 ಟಿ20 ಪಂದ್ಯಗಳ ಸೋಲಿನೊಂದಿಗೆ ಈ ಸರಣಿ ಆರಂಭಿಸುತ್ತಿದೆ. ಲಂಕನ್ನರ ಸೋಲು ಬಾಂಗ್ಲಾದೇಶ ಸರಣಿಯಿಂದ ಮೊದಲ್ಗೊಂಡಿತ್ತು. ತವರಿನಲ್ಲಿ ಭಾರತದ ವಿರುದ್ಧ ಎಲ್ಲ 3 ಪಂದ್ಯಗಳಲ್ಲಿ ಎಡವಿತ್ತು. ಆದರೆ ಪ್ರಸಕ್ತ ಪ್ರವಾಸದಲ್ಲಿ ಲಂಕಾ ಈವರೆಗೆ ವೈಟ್‌ವಾಶ್‌ಗೆ ಸಿಲುಕಿಲ್ಲ, ಅಪಾಯಕಾರಿಯಾಗಿಯೂ ಗೋಚರಿಸಿಲ್ಲ. ತಿರುಗಿ ಬೀಳಲು ಕೊನೆಯ ಅವಕಾಶವೊಂದು ಪ್ರವಾಸಿಗರ ಮುಂದಿದೆ. ತರಂಗ, ಮ್ಯಾಥ್ಯೂಸ್, ಡಿಕ್ವೆಲ್ಲ, ಲಕ್ಮಲ್ ಸೇರಿಕೊಂಡು ಕಮಾಲ್ ಮಾಡಬಹುದೇ? ಕಟಕ್‌ನಲ್ಲಿ ಕುಟುಕುವವರ್ಯಾರು? ಕುತೂಹಲ ಸಹಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.