ನಾಲ್ಕೇ ದಿನದಲ್ಲಿ ಲಂಕಾ ಲಾಗ ಭಾರತದ ದೊಡ್ಡ ಗೆಲುವಿನ ಜಂಟಿ ದಾಖಲೆ
Team Udayavani, Nov 28, 2017, 6:00 AM IST
ನಾಗ್ಪುರ: ನಾಗ್ಪುರದಲ್ಲಿ ಪ್ರವಾಸಿ ಶ್ರೀಲಂಕಾವನ್ನು ಕೇವಲ 4 ದಿನಗಳೊಳಗೆ ಮಗುಚಿದ ಭಾರತ, ತನ್ನ ಟೆಸ್ಟ್ ಇತಿಹಾಸದ ಅತಿ ದೊಡ್ಡ ಗೆಲುವಿನ ದಾಖಲೆಯನ್ನು ಸರಿದೂಗಿಸಿದೆ. 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕೊಹ್ಲಿ ಪಡೆಯ ಗೆಲುವಿನ ಅಂತರ ಇನ್ನಿಂಗ್ಸ್ ಹಾಗೂ 239 ರನ್!
ಇದು ಭಾರತದ ಅತಿ ದೊಡ್ಡ ಗೆಲುವಿನ ಜಂಟಿ ದಾಖಲೆ. ಸರಿಯಾಗಿ 10 ವರ್ಷಗಳ ಹಿಂದೆ (2007), ಬಾಂಗ್ಲಾದೇಶ ವಿರುದ್ಧ ಮಿರ್ಪುರ್‌ನಲ್ಲಿ ನಡೆದ ಟೆಸ್ಟ್ ಪಂದ್ಯವನ್ನೂ ಭಾರತ ಇಷ್ಟೇ ಅಂತರದಿಂದ ಗೆದ್ದಿತ್ತು. ಅಂದು ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಸಾರಧಿಯಾಗಿದ್ದರು.
ಅಶ್ವಿನ್‌ಗೆ ಮತ್ತೆ 4 ವಿಕೆಟ್
405 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಶ್ರೀಲಂಕಾ, ಒಂದಕ್ಕೆ 21 ರನ್ ಮಾಡಿ 3ನೇ ದಿನದಾಟ ಮುಗಿಸಿತ್ತು. 4ನೇ ದಿನವಾದ ಸೋಮವಾರ ಭಾರತದ ಸಾಂ ಕ ದಾಳಿಗೆ ತತ್ತರಿಸಿ 49.3 ಓವರ್‌ಗಳಲ್ಲಿ 166 ರನ್ನಿಗೆ ಆಲೌಟ್ ಆಯಿತು. ಲಹಿರು ಗಾಮಗೆ ಅವರನ್ನು ದೂಸ್ರಾ ಎಸೆತದಲ್ಲಿ ಬೌಲ್ಡ್ ಮಾಡುವ ಮೂಲಕ ಅಶ್ವಿನ್ ಟೀಮ್ ಇಂಡಿಯಾದ ಗೆಲುವನ್ನು ಸಾರಿದರು. ಅಶ್ವಿನ್ ಸಾಧನೆ 63ಕ್ಕೆ 4 ವಿಕೆಟ್. ಮೊದಲ ಸರದಿಯಲ್ಲೂ ಅವರು 4 ವಿಕೆಟ್ ಹಾರಿಸಿದ್ದರು.
ಇದರೊಂದಿಗೆ ಅಶ್ವಿನ್ ತಮ್ಮ 300 ವಿಕೆಟ್ ಬೇಟೆಯನ್ನೂ ಪೂರ್ತಿಗೊಳಿಸಿದರು. ಅಷ್ಟೇ ಅಲ್ಲ, ಅತಿ ಕಡಿಮೆ 54 ಟೆಸ್ಟ್‌ಗಳಲ್ಲಿ ಈ ಸಾಧನೆಗೈದ ಬೌಲರ್ ಎಂಬ ದಾಖಲೆಯನ್ನೂ ನಿರ್ಮಿಸಿದರು. 56 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ ಆಸ್ಟ್ರೇಲಿಯದ ವೇಗಿ ಡೆನ್ನಿಸ್ ಲಿಲ್ಲಿ ಅವರ ದಾಖಲೆ ಪತನಗೊಂಡಿತು. ಮುತ್ತಯ್ಯ ಮುರಳೀಧರನ್ (58 ಟೆಸ್ಟ್), ರಿಚರ್ಡ್ ಹ್ಯಾಡ್ಲಿ, ಮಾಲ್ಕಂ ಮಾರ್ಷಲ್, ಡೇಲ್ ಸ್ಟೇನ್ (ತಲಾ 61 ಟೆಸ್ಟ್) ಮೊದಲಾದವರನ್ನು ಹಿಂದಿಕ್ಕಿದ ಹಿರಿಮೆಯೂ ಅಶ್ವಿನ್ ಅವರದಾಯಿತು.
ಅಶ್ವಿನ್ ಸಹಿತ ದಾಳಿಗಿಳಿದ ಭಾರತದ ಎಲ್ಲ ಬೌಲರ್‌ಗಳೂ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಇಶಾಂತ್ ಶರ್ಮ, ರವೀಂದ್ರ ಜಡೇಜ ಮತ್ತು ಉಮೇಶ್ ಯಾದವ್ ತಲಾ 2 ವಿಕೆಟ್ ಹಾರಿಸಿ ಲಂಕಾ ಕುಸಿತವನ್ನು ತೀವ್ರಗೊಳಿಸಿದರು. ಯಾದವ್ 100 ವಿಕೆಟ್ ಪೂರ್ತಿಗೊಳಿಸಬಹುದೆಂಬ ನಿರೀಕ್ಷೆ ಇತ್ತು. ಸದ್ಯ ಇದು 99ಕ್ಕೆ ಬಂದು ನಿಂತಿದೆ.
ಸುಲಭದಲ್ಲಿ ಶರಣಾಗತಿ
ಎರಡು ದಿನಕ್ಕಿಂತಲೂ ಹೆಚ್ಚಿನ ಅವಧಿ ಬಾಕಿ ಇದ್ದುದರಿಂದ ಹಾಗೂ ವಾತಾವರಣವೂ ಕ್ರಿಕೆಟಿಗೆ ಪ್ರಶಸ್ತವಾಗಿದ್ದುದರಿಂದ ಶ್ರೀಲಂಕಾಕ್ಕೆ ಈ ಪಂದ್ಯವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ತಾಳ್ಮೆ ಹಾಗೂ ಎಚ್ಚರಿಕೆಯಿಂದ ಆಡಿ 4ನೇ ದಿನದಾಟದಲ್ಲಿ ಲಂಕಾ ಪಡೆ ಒಂದಿಷ್ಟು ಹೋರಾಟ ನಡೆಸೀತೆಂದು ಭಾವಿಸಲಾಗಿತ್ತು. ಆದರೆ “ಸಿಂಹಳೀಯ ಸೈನ್ಯ’ ಸುಲಭದಲ್ಲೇ ಶರಣಾಗತಿ ಸಾರಿತು. ಭೋಜನ ವಿರಾಮದ ವೇಳೆ 145 ರನ್ನಿಗೆ 8 ವಿಕೆಟ್ ಉದುರಿಸಿಕೊಂಡು ಸೋಲಿನ ಬಾಗಿಲಿಗೆ ಬಂದು ನಿಂತಿತ್ತು. ದ್ವಿತೀಯ ಅವಧಿಯ 8 ಓವರ್‌ಗಳ ಆಟ ಆಗುವಷ್ಟರಲ್ಲಿ ಚಂಡಿಮಾಲ್ ಬಳಗದ ಕತೆ ಮುಗಿದೇ ಹೋಯಿತು. ದಿನದ 6ನೇ ಓವರಿನಲ್ಲಿ ಆರಂಭಕಾರ ಕರುಣರತ್ನೆ ವಿಕೆಟ್ ಉದುರುವ ಮೂಲಕ ದ್ವೀಪರಾಷ್ಟ್ರದ ಕ್ರಿಕೆಟ್ ಕುಸಿತಕ್ಕೆ ಚಾಲನೆ ಲಭಿಸಿತು.
ನಾಯಕ ದಿನೇಶ್ ಚಂಡಿಮಾಲ್ ಹೊರತುಪಡಿಸಿ ಉಳಿದವರ್ಯಾರಿಂದಲೂ ಭಾರತದ ಬೌಲಿಂಗ್ ದಾಳಿಯನ್ನು ನಿಭಾಯಿಸಲಾಗಲಿಲ್ಲ. ಬಿರುಸಿನಿಂದಲೇ ಬ್ಯಾಟ್ ಬೀಸಿದ ಚಂಡಿಮಾಲ್ 82 ಎಸೆತಗಳಿಂದ 61 ರನ್ ಮಾಡಿದರು. ಇದರಲ್ಲಿ 10 ಬೌಂಡರಿ ಸೇರಿತ್ತು. ಮೊದಲ ಇನ್ನಿಂಗ್ಸ್‌ನಲ್ಲೂ ಚಂಡಿಮಾಲ್ ಅರ್ಧ ಶತಕದೊಂದಿಗೆ ಟಾಪ್ ಸ್ಕೋರರ್ ಎನಿಸಿದ್ದರು (57). ಚಂಡಿಮಾಲ್ ಹೊರತುಪಡಿಸಿದರೆ ಬೌಲರ್ ಸುರಂಗ ಲಕ್ಮಲ್ ಅವರದೇ ಹೆಚ್ಚಿನ ಗಳಿಕೆ (ಅಜೇಯ 31). ಕರುಣರತ್ನೆ (18), ತಿರಿಮನ್ನೆ (23), ಮ್ಯಾಥ್ಯೂಸ್ (10), ಡಿಕ್ವೆಲ್ಲ (4) ಅಗ್ಗಕ್ಕೆ ಔಟಾದರೆ, ಪೆರೆರ ಮತ್ತು ಹೆರಾತ್ ಖಾತೆಯನ್ನೇ ತೆರೆಯಲ್ಲಿ. ಇವರನ್ನು ಅಶ್ವಿನ್ ಒಂದೇ ಎಸೆತದ ಅಂತರದಲ್ಲಿ ಪೆವಿಲಿಯನ್ನಿಗೆ ಅಟ್ಟಿದರು.
ಕೊಹ್ಲಿ ಮೊತ್ತವೂ ಲಂಕೆಗೆ ಮರೀಚಿಕೆ!
ಈ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್ ಆಡಿದ ಭಾರತ ಒಂದು ದ್ವಿಶತಕ, 3 ಶತಕ ದಾಖಲಿಸಿ ಮೆರೆದಿತ್ತು. ಶ್ರೀಲಂಕಾಕ್ಕೆ ಎರಡೂ ಇನ್ನಿಂಗ್ಸ್ ಒಟ್ಟುಗೂಡಿದಂತೆ 3 ಅರ್ಧ ಶತಕ ದಾಖಲಿಸಲಷ್ಟೇ ಸಾಧ್ಯವಾಯಿತು. ಭಾರತ ಎದುರಾಳಿಯ 20 ವಿಕೆಟ್‌ಗಳನ್ನು ಒಟ್ಟು 128.4 ಓವರ್‌ಗಳಲ್ಲಿ ಉಡಾಯಿಸಿತು. ಆದರೆ ಲಂಕಾ ಒಂದು ಇನ್ನಿಂಗ್ಸ್‌ನಲ್ಲಿ 176.1 ಓವರ್ ಎಸೆದೂ ಉರುಳಿಸಿದ್ದು 6 ವಿಕೆಟ್ ಮಾತ್ರ. ವಿರಾಟ್ ಕೊಹ್ಲಿ ಒಬ್ಬರೇ ಬಾರಿಸಿದ ರನ್ನನ್ನು (213) ಮೀರಿ ನಿಲ್ಲಲು 2 ಇನ್ನಿಂಗ್ಸ್‌ಗಳಲ್ಲೂ ಸಾಧ್ಯವಾಗಲಿಲ್ಲ ಎಂಬುದು ಲಂಕೆಯ ಬ್ಯಾಟಿಂಗ್ ಬಡತನವನ್ನು ತೆರೆದಿಡುತ್ತದೆ!
ಕೋಲ್ಕತಾದಲ್ಲಿ ಮಂದ ಬೆಳಕಿನಿಂದಾಗಿ ಟೀಮ್ ಇಂಡಿಯಾ “ಅಚ್ಚರಿಯ ಜಯ’ವೊಂದನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತ್ತು. ಇದೀಗ ನಾಗ್ಪುರದಲ್ಲಿ ದೊಡ್ಡ ಮಟ್ಟದಲ್ಲೇ ಗೆಲುವು ಒಲಿದಿದೆ. ಕೊಹ್ಲಿ ಪಡೆಯ ಫಾರ್ಮ್ ಕಂಡಾಗ “ಕೋಟ್ಲಾ ಕೊಟೆ’ಯೂ ಆತಿಥೇಯರ ವಶವಾಗುವ ನಿರೀಕ್ಷೆ ಬಲವಾಗಿದೆ. ಅಂತಿಮ ಟೆಸ್ಟ್ ಶನಿವಾರದಿಂದ ಆರಂಭವಾಗಲಿದೆ.
ಸ್ಕೋರ್‌ಪಟ್ಟಿ
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್ 205
ಭಾರತ ಪ್ರಥಮ ಇನ್ನಿಂಗ್ಸ್ (6 ವಿಕೆಟಿಗೆ ಡಿಕ್ಲೇರ್) 610
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್
ಸದೀರ ಸಮರವಿಕ್ರಮ ಬಿ ಇಶಾಂತ್ 0
ದಿಮುತ್ ಕರುಣರತ್ನೆ ಸಿ ವಿಜಯ್ ಬಿ ಜಡೇಜ 18
ಲಹಿರು ತಿರಿಮನ್ನೆ ಸಿ ಜಡೇಜ ಬಿ ಯಾದವ್ 23
ಏಂಜೆಲೊ ಮ್ಯಾಥ್ಯೂಸ್ ಸಿ ರೋಹಿತ್ ಬಿ ಜಡೇಜ 10
ದಿನೇಶ್ ಚಂಡಿಮಾಲ್ ಸಿ ಅಶ್ವಿನ್ ಬಿ ಯಾದವ್ 61
ನಿರೋಷನ್ ಡಿಕ್ವೆಲ್ಲ ಸಿ ಕೊಹ್ಲಿ ಬಿ ಇಶಾಂತ್ 4
ದಸುನ್ ಶಣಕ ಸಿ ರಾಹುಲ್ ಬಿ ಅಶ್ವಿನ್ 17
ದಿಲುÅವಾನ್ ಪೆರೆರ ಎಲ್‌ಬಿಡಬ್ಲ್ಯು ಅಶ್ವಿನ್ 0
ರಂಗನ ಹೆರಾತ್ ಸಿ ರಹಾನೆ ಬಿ ಅಶ್ವಿನ್ 0
ಸುರಂಗ ಲಕ್ಮಲ್ ಔಟಾಗದೆ 31
ಲಹಿರು ಗಾಮಗೆ ಬಿ ಅಶ್ವಿನ್ 0
ಇತರ 2
ಒಟ್ಟು (ಆಲೌಟ್) 160
ವಿಕೆಟ್ ಪತನ: 1-0, 2-34, 3-48, 4-68, 5-75, 6-102, 7-107, 8-107, 9-165.
ಬೌಲಿಂಗ್:
ಇಶಾಂತ್ ಶರ್ಮ 12-4-43-2
ಆರ್. ಅಶ್ವಿನ್ 17.3-4-63-4
ರವೀಂದ್ರ ಜಡೇಜ 11-5-28-2
ಉಮೇಶ್ ಯಾದವ್ 9-2-30-2
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ
3ನೇ ಟೆಸ್ಟ್: ಹೊಸದಿಲ್ಲಿ (ಡಿ. 2-6)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.