ಭಾರತ-ಲಂಕಾ: ಏಕದಿನ ವಿಶ್ವಕಪ್‌ಗೆ ಸಿದ್ಧತೆ ಆರಂಭ: 3 ಪಂದ್ಯಗಳ ಏಕದಿನ ಸರಣಿ
ರೋಹಿತ್, ಕೊಹ್ಲಿ, ರಾಹುಲ್ ಪುನರಾಗಮನ; ಬುಮ್ರಾ ನಿರ್ಗಮನ
Team Udayavani, Jan 10, 2023, 8:15 AM IST
ಗುವಾಹಟಿ: ಒಂದೆಡೆ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮೊದಲಾದ ಸೀನಿ ಯರ್ ಆಟಗಾರರ ಪುನರಾಗಮನ; ಇನ್ನೊಂದೆಡೆ ಪೇಸ್ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರ ಕಡೇ ಗಳಿಗೆಯ ನಿರ್ಗಮನ… ಇಂಥ ಮಿಶ್ರ ಅನುಭವ ಹೊತ್ತ ಟೀಮ್ ಇಂಡಿಯಾ ಪ್ರವಾಸಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಯನ್ನು ಆಡಲಿಳಿಯಲಿದೆ. ವರ್ಷಾಂತ್ಯ ಭಾರತದ ಆತಿಥ್ಯದಲ್ಲೇ ನಡೆಯುವ ವಿಶ್ವಕಪ್ ಪಂದ್ಯಾವಳಿಗೆ ದೊಡ್ಡ ಮಟ್ಟದ ಸಿದ್ಧತೆ ಅಗತ್ಯ ಇರುವುದರಿಂದ ನಮ್ಮವರ ಪಾಲಿಗೆ ಇದೊಂದು ಮಹತ್ವದ ಮುಖಾ ಮುಖೀ. ಮಂಗಳವಾರ ಗುವಾಹಟಿ ಯಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದೆ.
ತೀರಾ ರೋಚಕವಾಗಿ ಸಾಗಿದ ಟಿ20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡ ಭಾರತಕ್ಕೆ ಏಕದಿನ ಎನ್ನುವುದು ದೊಡ್ಡ ಸವಾಲೇ ಆಗಿದೆ. ರೋಹಿತ್, ಕೊಹ್ಲಿ, ರಾಹುಲ್ ಅವರೆಲ್ಲ ತಂಡಕ್ಕೆ ಮರಳಿದರೂ ಇವರ ಫಾರ್ಮ್ ಬಗ್ಗೆ ಅನುಮಾನ ಇರುವುದೇ ಇದಕ್ಕೆ ಕಾರಣ. ಕಳೆದ ಟಿ20 ವಿಶ್ವಕಪ್‌ನಲ್ಲಿ ಇವರೆಲ್ಲರ ಬ್ಯಾಟ್‌ಗಳು ಮುಷ್ಕರ ಹೂಡಿದ್ದವು. ಹೀಗಾಗಿ ಶ್ರೀಲಂಕಾ ಎದು ರಿನ ಟಿ20 ಸರಣಿಯಲ್ಲಿ ಹುಡುಗರನ್ನೇ ಆಡಿಸಲಾಯಿತು. ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಭಾರತ ಚೇತೋಹಾರಿ ಪ್ರದರ್ಶನವನ್ನೇ ನೀಡಿತು.
ಏಕದಿನಕ್ಕೆ ಬರುವಾಗ ಕ್ರೀಸ್ ಆಕ್ರಮಿಸಿಕೊಂಡು ನಿಲ್ಲುವುದು ಮುಖ್ಯ. ಹಿಂದೆ, ಏಕದಿನ ಕಾಲದಲ್ಲಿ ಈ ಮಾತನ್ನು ಟೆಸ್ಟ್ ಪಂದ್ಯಗಳಿಗೆ ಹೇಳಲಾಗುತ್ತಿತ್ತು. ಇದು ಟಿ20 ಜಮಾನಾ. ಇಲ್ಲಿನ ತಳಿಗಳಿಗೆ 50 ಓವರ್‌ಗಳನ್ನು ಎದುರಿಸಿ ನಿಲ್ಲುವುದೂ ದೊಡ್ಡ ಸವಾಲಾಗಿ ಕಾಡಿದೆ. ಈಗಿನ ತಂಡದಲ್ಲೂ ಸಾಕಷ್ಟು ಮಂದಿ ಟಿ20 ಹೀರೋಗಳಿರುವುದರಿಂದ ಇವ ರೆಲ್ಲ ಯಾವ ರೀತಿಯ ಪ್ರದರ್ಶನ ನೀಡಿಯಾರು ಎಂಬುದು ಮುಖ್ಯ. ಇದನ್ನು ಅನುಸರಿಸಿ ಏಕದಿನ ವಿಶ್ವಕಪ್‌ಗೆ ತಂಡವೊಂದನ್ನು ರೂಪಿಸಬೇಕಾದ ಬಹು ದೊಡ್ಡ ಜವಾಬ್ದಾರಿ ತಂಡದ ಆಡಳಿತ ಮಂಡಳಿ ಮೇಲಿದೆ.
2023ರ ಮೊದಲ 10 ತಿಂಗಳ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಏಷ್ಯಾ ಕಪ್ ಪಂದ್ಯಾವಳಿ ಹೊರತುಪಡಿಸಿ 15 ಏಕದಿನ ಪಂದ್ಯಗಳನ್ನು ಭಾರತ ಆಡಲಿದೆ. ಪ್ರತಿಯೊಂದು ಪಂದ್ಯವೂ ಟೀಮ್ ಇಂಡಿಯಾ ಪಾಲಿಗೆ ಮಹತ್ವದ್ದು.
ಟಾಪ್-5 ಆಯ್ಕೆಯ ಗೊಂದಲ
ತಂಡದ ಬ್ಯಾಟಿಂಗ್ ಕಾಂಬಿನೇಶನ್ ಕುರಿತು ಹೇಳುವುದಾದರೆ ಟಾಪ್-5 ಆಯ್ಕೆಯದೇ ಗೊಂದಲ. ಇಲ್ಲಿ ಓಪನರ್ ರೋಹಿತ್ ಶರ್ಮ ಮತ್ತು ವನ್‌ಡೌನ್ ಬ್ಯಾಟರ್ ವಿರಾಟ್ ಕೊಹ್ಲಿ ಅವರದು ನೇರ ಆಯ್ಕೆ. ಉಳಿದಂತೆ ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್ ರೇಸ್‌ನಲ್ಲಿದ್ದಾರೆ. ಇವರಲ್ಲಿ ಗಿಲ್-ಇಶಾನ್ ಕಿಶನ್, ಅಯ್ಯರ್-ಸೂರ್ಯಕುಮಾರ್ ನಡುವೆ ಪೈಪೋಟಿ ಇದೆ. ರಾಹುಲ್ ಕೀಪಿಂಗ್ ನಡೆಸುವುದರಿಂದ ಆಯ್ಕೆಯ ಸಮಸ್ಯೆ ಕಾಡದು.
ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆ, ಅವರೊಂದಿಗೆ ಗಿಲ್ ಇನ್ನಿಂಗ್ಸ್ ಆರಂಭಿಲಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನದಲ್ಲಿ ಅಮೋಘ ದ್ವಿಶತಕ ಸಿಡಿಸಿದ ಇಶಾನ್ ಕಿಶನ್ ಅವರನ್ನು ಕೈಬಿಡುವುದು ದುರದೃಷ್ಟಕರ ಎಂದೂ ಅವರು ವಿಷಾದಿಸಿದ್ದಾರೆ.
4ನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್-ಅಯ್ಯರ್ ನಡುವೆ ನೇರ ಸ್ಪರ್ಧೆ ಇದೆ. ಸೂರ್ಯಕುಮಾರ್ ಲಂಕಾ ಎದುರಿನ 3ನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ ದೃಶ್ಯಾವಳಿ ಇನ್ನೂ ಕಣ್ಮುಂದೆ ಗಿರಕಿ ಹೊಡೆಯುತ್ತಿದೆ. ಆದರೆ ಅವರ ಏಕದಿನ ದಾಖಲೆ ಸಾಮಾನ್ಯ. 16 ಪಂದ್ಯಗಳಿಂದ 384 ರನ್ ಗಳಿಸಿದ್ದಾರೆ. ಕೇವಲ 2 ಅರ್ಧ ಶತಕಗಳಿವೆ. ಅಂದಮಾತ್ರಕ್ಕೆ ಸೂರ್ಯನನ್ನು ಕಡೆಗಣಿಸುವುದು ತರವಲ್ಲ. ಆದರೆ ರೋಹಿತ್ ನೀಡಿದ ಸುಳಿವಿನಂತೆ ಸೂರ್ಯಕುಮಾರ್‌ಗೆ ಆಡುವ ಬಳಗದಲ್ಲಿ ಅವಕಾಶ ಕಡಿಮೆ.
ಹಾಗೆಯೇ ಅಯ್ಯರ್ ಕಳೆದ ವರ್ಷದ 15 ಏಕದಿನ ಇನ್ನಿಂಗ್ಸ್‌ಗಳಲ್ಲಿ 55.69 ಸರಾಸರಿಯೊಂದಿಗೆ 724 ರನ್ ಪೇರಿಸಿ ಗಮನ ಸೆಳೆದಿದ್ದಾರೆ. ಸ್ಟ್ರೈಕ್ ರೊಟೇಟ್ ಮಾಡುವಲ್ಲಿ, ಮಿಡ್ಲ್ ಓವರ್‌ಗಳಲ್ಲಿ ಸ್ಪಿನ್ ಆಕ್ರಮಣ ನಿಭಾಯಿಸುವಲ್ಲಿ ಅಯ್ಯರ್ ಭರ್ಜರಿ ಯಶಸ್ಸು ಕಂಡಿದ್ದಾರೆ. ಈಗ ಉಪನಾಯಕನೂ ಆಗಿರುವ ಹಾರ್ದಿಕ್ ಪಾಂಡ್ಯ ಅವರಿಗೆ 6ನೇ ಕ್ರಮಾಂಕ ಮೀಸಲು.
ಸ್ಪಿನ್ ಟ್ರ್ಯಾಕ್
ಬುಮ್ರಾ ಹೊರಬಿದ್ದರೂ ಬೌಲಿಂಗ್ ವಿಭಾಗದಲ್ಲಿ ಆಯ್ಕೆಗೇನೂ ಕೊರತೆ ಇಲ್ಲ. ವೇಗಕ್ಕೆ ಶಮಿ, ಸಿರಾಜ್, ಮಲಿಕ್, ಅರ್ಷದೀಪ್; ಸ್ಪಿನ್ನಿಗೆ ಅಕ್ಷರ್, ಕುಲದೀಪ್, ಚಹಲ್ ಇದ್ದಾರೆ. ಮತ್ತೋರ್ವ ಆಲ್‌ರೌಂಡರ್ ಬೇಕಿದ್ದರೆ ವಾಷಿಂಗ್ಟನ್ ಸುಂದರ್ ಅವರನ್ನು ಪರಿ ಗಣಿಸಬಹುದು. ಭಾರತದ ಟ್ರ್ಯಾಕ್ ಸ್ಪಿನ್ನರ್‌ಗಳಿಗೆ ಒಲಿಯುವುದನ್ನು ಗಮನ ದಲ್ಲಿರಿಸಿ ಬೌಲಿಂಗ್ ಕಾಂಬಿನೇಶನ್ ರೂಪಿಸಬೇಕಾಗುತ್ತದೆ.
ಸ್ಪೆಷಲಿಸ್ಟ್‌ಗಳ ಲಂಕಾ ತಂಡ
ಶ್ರೀಲಂಕಾ ಏಕದಿನ ಸ್ಪೆಷಲಿಸ್ಟ್‌ಗಳನ್ನು ಕಟ್ಟಿಕೊಂಡು ಬಂದಿದೆ. ಭಾರತದಂತೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಫಾರ್ಮ್ ಚಿಂತೆ ಅವರಿಗಿಲ್ಲ. ಕೆಳ ಕ್ರಮಾಂಕದ ತನಕ ಮುನ್ನುಗ್ಗಿ ಬೀಸಬಲ್ಲವರೇ ತುಂಬಿಕೊಂಡಿದ್ದಾರೆ. ಕಳೆದ ವರ್ಷದ ಟಾಪ್ ಸ್ಕೋರರ್ ನಿಸ್ಸಂಕ (11 ಪಂದ್ಯ, 491 ರನ್), ಬಿಗ್ ಹಿಟ್ಟಿಂಗ್ ಆಲ್‌ರೌಂಡರ್ ಶಣಕ, 53.25ರಷ್ಟು ಸರಾಸರಿ ಹೊಂದಿರುವ ಅಸಲಂಕ, 2022ರಲ್ಲಿ ಅತ್ಯಧಿಕ 14 ವಿಕೆಟ್ ಉರುಳಿಸಿ ರುವ ಲೆಗ್‌ಸ್ಪಿನ್ನರ್ ಜೆಫ್ರಿ ವಾಂಡರ್ಸೆ, ಹಸರಂಗ, ಕರುಣಾರತ್ನೆ, ಧನಂಜಯ ಡಿ ಸಿಲ್ವ ಅವರನ್ನೊಳಗೊಂಡ ಶ್ರೀ ಲಂಕಾ ಹೆಚ್ಚು ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ.
ಬುಮ್ರಾ ಹೊರಕ್ಕೆ
ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾಗಮನಕ್ಕೆ ವಿಘ್ನವೊಂದು ಎದುರಾಗಿದೆ. ಇನ್ನೂ ಬೆನ್ನುನೋವು ಪೂರ್ತಿ ವಾಸಿಯಾಗದ ಕಾರಣ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಅವರು ಬೇರ್ಪಟ್ಟಿದ್ದಾರೆ. ಸೋಮವಾರ ಬಿಸಿಸಿಐ ಈ ಕುರಿತು ಹೇಳಿಕೆ ನೀಡಿತು.
ಮಂಗಳವಾರದಿಂದ ಆರಂಭವಾಗಲಿರುವ ಶ್ರೀಲಂಕಾ ಎದುರಿನ 3 ಪಂದ್ಯಗಳ ಏಕದಿನ ಸರಣಿಗಾಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಡಿ. 27ರಂದು ಪ್ರಕಟಗೊಂಡ ಮೂಲ ತಂಡದಲ್ಲಿ ಅವರ ಹೆಸರಿರಲಿಲ್ಲ. ಜ. 3ರಂದು ದಿಢೀರನೆ ಬುಮ್ರಾ ಅವರನ್ನು ಲಂಕಾ ಎದುರಿನ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಸರಣಿಯ ಆರಂಭಕ್ಕೆ ಇನ್ನೇನು ಒಂದು ದಿನ ಇರುವಾಗ ಬುಮ್ರಾ ಕಡೆಯಿಂದ ನಿರಾಶಾದಾಯಕ ಸುದ್ದಿ ಕೇಳಿಬಂದಿದೆ.
“ಬುಮ್ರಾ ತಂಡದ ಜತೆಗೆ ಗುವಾಹಟಿಗೆ ತೆರಳುವುದಿಲ್ಲ. ಬೆನ್ನುನೋವು ಪೂರ್ತಿ ವಾಸಿಯಾಗಿ ಫಿಟ್‌ನೆಸ್‌ಗೆ ಮರಳಲು ಅವರಿಗೆ ಇನ್ನೂ ಸ್ವಲ್ಪ ಕಾಲ ಬೇಕಿದೆ. ಆಸ್ಟ್ರೇಲಿಯ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಅವರ ಸೇವೆ ಬೇಕಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಬಿಸಿಸಿಐ ತಿಳಿಸಿದೆ.
ಗುವಾಹಟಿಯಲ್ಲಿ ನಡೆದದ್ದು ಒಂದೇ ಪಂದ್ಯ
ಗುವಾಹಟಿಯಲ್ಲಿ ಈವರೆಗೆ ನಡೆದದ್ದು ಒಂದೇ ಏಕದಿನ ಪಂದ್ಯ. ಇದನ್ನು ವೆಸ್ಟ್ ಇಂಡೀಸ್ ವಿರುದ್ಧ 2018ರಂದು ಆಡಲಾಗಿತ್ತು. ಬೃಹತ್ ಮೊತ್ತದ ಈ ಮೇಲಾಟದಲ್ಲಿ ಭಾರತ 8 ವಿಕೆಟ್‌ಗಳ ಅಮೋಘ ಜಯಭೇರಿ ಮೊಳಗಿಸಿತ್ತು.
ಶಿಮ್ರನ್ ಹೆಟ್‌ಮೈರ್ ಅವರ 106 ರನ್ ಸಾಹಸದಿಂದ ವಿಂಡೀಸ್ 8 ವಿಕೆಟಿಗೆ 322 ರನ್ ರಾಶಿ ಹಾಕಿತು. ಭಾರತ 42.1 ಓವರ್‌ಗಳಲ್ಲಿ ಕೇವಲ 2 ವಿಕೆಟಿಗೆ 326 ರನ್ ಬಾರಿಸಿತು. ರೋಹಿತ್ ಶರ್ಮ ಅಜೇಯ 152, ವಿರಾಟ್ ಕೊಹ್ಲಿ 140 ರನ್ ಬಾರಿಸಿ ಕೆರಿಬಿಯನ್ನರನ್ನು ನೆಲಕ್ಕೆ ಕೆಡವಿದರು!
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್/ಕುಲದೀಪ್ ಯಾದವ್/ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್/ಅರ್ಷದೀಪ್ ಸಿಂಗ್.
ಶ್ರೀಲಂಕಾ: ಕುಸಲ್ ಮೆಂಡಿಸ್, ಪಥುಮ್ ನಿಸ್ಸಂಕ, ಆವಿಷ್ಕ ಫೆರ್ನಾಂಡೊ, ಧನಂಜಯ ಡಿ ಸಿಲ್ವ, ಚರಿತ ಅಸಲಂಕ, ದಸುನ್ ಶಣಕ (ನಾಯಕ), ವನಿಂದು ಹಸರಂಗ, ಚಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಪ್ರಮೋದ್ ಮದುಶಂಕ/ಲಹಿರು ಕುಮಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.