ಟಿ20 ಸರಣಿ:ಯುವ ಆಟಗಾರರಿಗೆ ಅಗ್ನಿಪರೀಕ್ಷೆ
ಮಧ್ಯಮ ಕ್ರಮಾಂಕ: ಶ್ರೇಯಸ್, ಪಾಂಡೆ ಸ್ಪರ್ಧೆ ; ಗರಿಷ್ಠ ಸಿಕ್ಸರ್: ದಾಖಲೆ ಸನಿಹ ರೋಹಿತ್
Team Udayavani, Aug 3, 2019, 5:32 AM IST
ಲಾಡರ್‌ಹಿಲ್ (ಅಮೆರಿಕ): ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಲು ಸಜ್ಜಾಗಿದೆ. ಟಿ20 ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತವು ಶನಿವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ವೆಸ್ಟ್‌ಇಂಡೀಸ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿ ವೇಳೆ ಆಯ್ಕೆಗಾರರ ಮನಸ್ಸಿನಲ್ಲಿರುವ ಉದಯೋನ್ಮುಖ ಆಟಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ ಎಂದು ಕೆರಿಬಿಯನ್ ಪ್ರವಾಸಕ್ಕೆ ತೆರಳುವ ಮೊದಲು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು.
ಏಕದಿನ ಸರಣಿಗೆ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಆದರೆ ಬುಮ್ರಾ ಅವರನ್ನು ಹೊರತುಪಡಿಸಿ ಪೂರ್ಣ ಪ್ರಮಾಣದ ತಂಡವನ್ನು ಆಯ್ಕೆ ಮಾಡಲಾಗಿದೆ. ಬುಮ್ರಾ ಆ. 22ರಿಂದ ಆರಂಭವಾಗುವ ಟೆಸ್ಟ್ ಸರಣಿ ವೇಳೆ ತಂಡಕ್ಕೆ ಸೇರಿಕೊಳ್ಳುವ ನಿರೀಕ್ಷೆಯಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಪೂರ್ಣ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿದೆ.
ಶ್ರೇಯಸ್, ಪಾಂಡೆ
ಏಕದಿನ ವಿಶ್ವಕಪ್ ವೇಳೆ ಕಡೆಗಣಿಸಲ್ಪಟ್ಟಿದ್ದ ಶ್ರೇಯಸ್ ಅಯ್ಯರ್ ಮತ್ತು ಮನೀಷ್ ಪಾಂಡೆ ಅವರಿಗೆ ಮುಂದಿನ ಕೆಲವು ವಾರ ನಿರ್ಣಾಯಕವಾಗಲಿದೆ. ಮುಂದಿನ ಟಿ20 ಮತ್ತು ಏಕದಿನ ಸರಣಿಯಲ್ಲಿ ಗಮನಾರ್ಹ ನಿರ್ವಹಣೆ ನೀಡಿದಲ್ಲಿ ಅವರು ತಂಡದಲ್ಲಿ ಉಳಿಯುವ ಸಾಧ್ಯತೆಯಿದೆ.
ತಂಡವು ಮಧ್ಯಮ ಕ್ರಮಾಂಕದಲ್ಲಿ ಸೂಕ್ತ ಆಟಗಾರನ ಹುಡುಕಾಟದಲ್ಲಿದೆ. ಹಾಗಾಗಿ ಪಾಂಡೆ ಮತ್ತು ಶ್ರೇಯಸ್‌ಗೆಈ ಸ್ಥಾನ ತುಂಬಲು ಉತ್ತಮ ಸಂದರ್ಭ ಎದುರಾಗಿದೆ. ಕೆರಿಬಿಯನ್‌ನಲ್ಲಿ ಸದ್ಯ ಮುಗಿದ “ಎ’ ತಂಡದೆದುರಿನ ಸರಣಿಯಲ್ಲಿ ಪಾಂಡೆ ಮತ್ತು ಶ್ರೇಯಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದರು.
ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ವೇಗಿಗಳಾದ ಖಲೀಲ್ ಅಹ್ಮದ್ ಮತ್ತು ದೀಪಕ್ ಚಹರ್ ಕೂಡ ಟಿ20 ತಂಡಕ್ಕೆ ಮರಳಿದ್ದಾರೆ. ನವದೀಪ್ ಸೈನಿ ಮತ್ತು ದೀಪಕ್ ಅವರ ಸಹೋದರ ರಾಹುಲ್ ಕೂಡ ತಂಡದಲ್ಲಿದ್ದಾರೆ.
ರೋಹಿತ್ ಆರಂಭಿಕ
ರೋಹಿತ್ ಮತ್ತು ಧವನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್ ಆಡುವ ಸಾಧ್ಯತೆಯಿದೆ. ಅವರು ಮೂರು ವರ್ಷಗಳ ಹಿಂದೆ ಬ್ರೋವರ್ಡ್ ರೀಜನಲ್ ಪಾರ್ಕ್ ಕ್ರೀಡಾಂಗಣದಲ್ಲಿ ಅಜೇಯ 110 ರನ್ ಬಾರಿಸಿದ್ದರು.
ವಿಶ್ವಕಪ್‌ನಲ್ಲಿ ದಾಖಲೆ ಐದು
ಶತಕ ಸಹಿತ ಗರಿಷ್ಠ ರನ್ ಗಳಿಸಿದ ಸಾಧಕರಾಗಿರುವ ರೋಹಿತ್ ಟಿ20ಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ಭವಿಷ್ಯದ ದೃಷ್ಟಿಯಿಂದ ರಿಷಬ್ ಪಂತ್ ಅವರಿಗೆ ಈ ಸರಣಿ ಅತ್ಯಂತ ಪ್ರಾಮುಖ್ಯವಾಗಿದೆ. ಧೋನಿ ಸ್ಥಾನವನ್ನು ತುಂಬಬಲ್ಲ ಸಮರ್ಥ ವಿಕೆಟ್‌ಕೀಪರ್ ಆಗಿರುವ ಪಂತ್ ಉತ್ತಮ ನಿರ್ವಹಣೆ ನೀಡುವ ಒತ್ತಡದಲ್ಲಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳು ಫ್ಲೋರಿಡಾದಲ್ಲಿ ನಡೆ ಯಲಿದ್ದರೆ ಮೂರನೇ ಪಂದ್ಯ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ.
ವಿಂಡೀಸ್ ಅಪಾಯಕಾರಿ
ಸ್ಫೋಟಕ ಖ್ಯಾತಿಯ ಕೈರನ್ ಪೊಲಾರ್ಡ್ ಮತ್ತು ಸ್ಪಿನ್ನರ್ ಸುನೀಲ್ ನಾರಾಯಣ್ ಅವರು ತಂಡಕ್ಕೆ ಮರಳಿದ್ದರಿಂದ ವೆಸ್ಟ್‌ಇಂಡೀಸ್ ಅಪಾಯಕಾರಿ ಎಂದೇ ಹೇಳಬಹುದು. ಆದರೆ ಕ್ರಿಸ್ ಗೇಲ್ ಇಲ್ಲದಿರುವುದು ತಂಡಕ್ಕೆ ದೊಡ್ಡ ಪೆಟ್ಟು. ಗಾಯಗೊಂಡಿರುವ ಆ್ಯಂಡ್ರೆ ರಸೆಲ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ನಮ್ಮ ತಂಡ ಯುವ ಮತ್ತು ಅನುಭವಿ ಆಟಗಾರರನ್ನು ಒಳಗೊಂಡಿದೆ. ಫ್ಲೋರಿಡಾದಲ್ಲಿ ನಾವು ಪಂದ್ಯಗಳನ್ನು ಎದುರು ನೋಡುತ್ತಿದ್ದೇವೆ. ಅಭಿಮಾನಿಗಳನ್ನು ರಂಜಿಸಲು ನಾವು ಸಿದ್ಧರಾಗಿದ್ದೇವೆ ಮತ್ತು ಭಾರತ ವಿರುದ್ಧ ಪ್ರಬಲವಾಗಿ ಹೋರಾಡಲಿದ್ದೇವೆ ಎಂದು ಕೋಚ್ ಫ್ಲಾಯ್ಡ ರೈಫರ್ ಹೇಳಿದ್ದಾರೆ.
ತಂಡಗಳು
ವೆಸ್ಟ್‌ಇಂಡೀಸ್:
ಜಾನ್ ಕ್ಯಾಂಬೆಲ್, ಎವಿನ್ ಲೂವಿಸ್, ಶಿಮ್ರನ್ ಹೆಟ್‌ಮೈರ್, ನಿಕೋಲಾಸ್ ಪೂರನ್, ಪೋಲಾರ್ಡ್, ರೊಮಾನ್ ಪೊವೆಲ್, ಕಾರ್ಲೋಸ್ ಬ್ರಾತ್‌ವೇಟ್ (ನಾಯಕ), ಕೀಮೊ ಪಾಲ್, ಸುನೀಲ್ ನಾರಾಯಣ್, ಕಾಟ್ರೆಲ್, ಒಶಾನೆ ಥಾಮಸ್, ಅಂತೋನಿ ಬ್ರ್ಯಾಂಬಲ್, ಆ್ಯಂಡ್ರೆ ರಸೆಲ್, ಖಾರಿ ಪೀರ್.
ಭಾರತ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಬ್ ಪಂತ್, ಕೃಣಾಲ್ ಪಾಂಡ್ಯ, ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ,
ಖಲೀಲ್ , ದೀಪಕ್ ಚಹರ್, ನವದೀಪ್ ಸೈನಿ.
ಪಂದ್ಯ ಆರಂಭ: ರಾತ್ರಿ 8 ಗಂಟೆ (ಭಾರತೀಯ ಕಾಲಮಾನ)
ರೋಹಿತ್‌ಗೆ ಮತ್ತೆ ಇತಿಹಾಸ ನಿರ್ಮಿಸುವ ಅವಕಾಶ
ಫ್ಲೋರಿಡಾ: ಆರಂಭಿಕ ಆಟಗಾರ ರೋಹಿತ್ ಶರ್ಮ ಅವರಿಗೆ ಮತ್ತೆ ಇತಿಹಾಸ ನಿರ್ಮಿಸುವ ಅವಕಾಶವೊಂದು ಸಿಕ್ಕಿದೆ. ಉಪನಾಯಕರೂ ಆಗಿರುವ ರೋಹಿತ್ ಅವರು ಫ್ಲೋರಿಡಾದಲ್ಲಿ ಶನಿವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟ್ವೆಂಟಿ20 ಪಂದ್ಯದಲ್ಲಿ ಆಡಲಿದ್ದು ಗರಿಷ್ಠ ಸಿಕ್ಸರ್ ಗಳಿಸಿದ ಆಟಗಾರರಾಗಿ ಇತಿಹಾಸ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸಲು ಹಾತೊರೆಯುತ್ತಿದ್ದಾರೆ.
ನಾಲ್ಕು ಸಿಕ್ಸರ್ ಬೇಕು
ಟಿ20 ಕ್ರಿಕೆಟ್‌ನಲ್ಲಿ ಸದ್ಯ ರೋಹಿತ್ 102 ಸಿಕ್ಸರ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅವರು ಕಡಿಮೆಪಕ್ಷ ನಾಲ್ಕು ಸಿಕ್ಸರ್ ಬಾರಿಸಲು ಯಶಸ್ವಿಯಾದರೆ ನ್ಯೂಜಿಲ್ಯಾಂಡಿನ ಮಾರ್ಟಿನ್ ಗಪ್ಟಿಲ್ ಮತ್ತು ಕ್ರಿಸ್ ಗೇಲ್ ಅವರ ಸಾಧನೆಯನ್ನು ಮುರಿಯಲಿದ್ದಾರೆ. ಗಪ್ಟಿಲ್ 103 ಮತ್ತು ಗೇಲ್ 105 ಸಿಕ್ಸರ್ ಬಾರಿಸಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ.
ಕ್ರಿಸ್ ಗೇಲ್ ಈ ಸರಣಿಯಲ್ಲಿ ವೆಸ್ಟ್‌ಇಂಡೀಸ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ರೋಹಿತ್ ಅವರಿಗೆ ದಾಖಲೆ ನಿರ್ಮಿಸಲು ಒಳ್ಳೆಯ ಅವಕಾಶ ಲಭಿಸಿದೆ.
ಟಿ20 ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರೋಹಿತ್ ಈಗಾಗಲೇ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಟಿ20ಯಲ್ಲಿ ಗರಿಷ್ಠ ರನ್ ಗಳಿಸಿದ ಖ್ಯಾತಿ ಹೊಂದಿರುವ ಅವರು ಗರಿಷ್ಠ ಸಂಖ್ಯೆಯ ಶತಕ (ನಾಲ್ಕು) ಕೂಡ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.