ಸಮಬಲದ ಬಳಿಕ ಹೊಸ ಆಟ ಶುರು
Team Udayavani, Oct 29, 2018, 10:33 AM IST
ಮುಂಬಯಿ: ಮೊದಲ ಪಂದ್ಯದಲ್ಲಿ ಸೋಲು, ಬಳಿಕ ಟೈ, ಮೂರನೇ ಪ್ರಯತ್ನದಲ್ಲಿ ಗೆಲುವು.. ಹೀಗೆ ಹಂತ ಹಂತವಾಗಿ ಏಕದಿನ ಸರಣಿಯಲ್ಲಿ ಮುನ್ನುಗ್ಗುತ್ತ ಬರುತ್ತಿರುವ ಪ್ರವಾಸಿ ವೆಸ್ಟ್ ಇಂಡೀಸ್ ಈಗ ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗಿ ಗೋಚರಿಸುತ್ತಿರುವುದು ಸ್ಪಷ್ಟ. ಈ ಎಚ್ಚರಿಕೆಯಲ್ಲೇ ಟೀಮ್ ಇಂಡಿಯಾ ಸೋಮವಾರ ಮುಂಬಯಿಯ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ 4ನೇ ಹಣಾಹಣಿಗೆ ಅಣಿಯಾಗಬೇಕಿದೆ.
ಈವರೆಗಿನ 3 ಪಂದ್ಯಗಳಲ್ಲಿ 1-1 ಸಮಬಲ ದಾಖಲಾಗಿರುವುದರಿಂದ ಎರಡೂ ತಂಡಗಳಿಗೆ ಇದು ಹೊಸ ಆರಂಭ. ಉಳಿದೆರಡು ಪಂದ್ಯಗಳಲ್ಲಿ ಸರಣಿ ಇತ್ಯರ್ಥವಾಗಬೇಕಿರುವುದರಿಂದ ಏಕದಿನದ ನಿಜವಾದ ಜೋಶ್ ಇಲ್ಲಿ ಕಂಡುಬರುವ ಸಾಧ್ಯತೆ ಇದೆ. ಸರಣಿ ಗೆಲುವಿಗೆ ಉಳಿದೆರಡೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡ ಇತ್ತಂಡಗಳ ಮೇಲಿದೆ. ಇಲ್ಲವೇ 2-2 “ಡ್ರಾ’ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ.
ಸೋಲು ಮತ್ತು ವೈಫಲ್ಯಗಳು…
ಶನಿವಾರದ ಪುಣೆ ಪಂದ್ಯದಲ್ಲಿ ಭಾರತಕ್ಕೆ ಅಪರೂಪದ ಸೋಲು ಎದುರಾಗಿತ್ತು. ಇದರಿಂದ ತಂಡದ ಕೆಲವು ವೈಫಲ್ಯಗಳು ಬೆಳಕಿಗೆ ಬಂದಿದ್ದವು. ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಉಳಿದವರು ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾಗಿರುವುದು ಭಾರತಕ್ಕೆ ಎದುರಾಗಿರುವ ದೊಡ್ಡ ಸಮಸ್ಯೆ. ಓಪನಿಂಗ್ ಹಾಗೂ ಮಧ್ಯಮ ಕ್ರಮಾಂಕ ನಿರೀಕ್ಷಿಸಿದಷ್ಟು ಗಟಿಯಾಗಿಲ್ಲ ಎಂಬುದು ಸಾಬೀತಾಗಿದೆ. ಹಾಗೆಯೇ 5 ಮಂದಿ ಸ್ಪೆಷಲಿಸ್ಟ್ ಬೌಲರ್‌ಗಳ ಪ್ರಯೋಗ ಕೂಡ ಕೈಕೊಟ್ಟಿದೆ. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೂ ಮುನ್ನ ಭಾರತ ಕೇವಲ 15 ಪಂದ್ಯಗಳನ್ನಷ್ಟೇ ಆಡಲಿರುವುದರಿಂದ ಇಲ್ಲಿ ಇರಿಸುವ ಪ್ರತಿಯೊಂದು ಹೆಜ್ಜೆಯೂ ಸಕಾರಾತ್ಮಕ ಫಲಿತಾಂಶ ತಂದುಕೊಡುವುದು ಅತೀ ಅಗತ್ಯ.
ದೊಡ್ಡ ಮೊತ್ತದ ಚೇಸಿಂಗ್ ವೇಳೆ ಆರಂಭಿಕ ರಿಂದ ಉತ್ತಮ ಅಡಿಪಾಯ ನಿರ್ಮಾಣ ವಾಗುವುದು ಅತ್ಯಗತ್ಯ. ಆದರೆ ಭಾರತ ಈ ಯೋಜನೆಯಲ್ಲಿ ವಿಫಲವಾಗುತ್ತ ಬಂದಿದೆ. ರೋಹಿತ್ ಶರ್ಮ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ ರನ್ ಬರಗಾಲ ಅನುಭವಿ ಸುತ್ತಿದ್ದಾರೆ. ಎಡಗೈ ಆರಂಭಕಾರ ಶಿಖರ್ ಧವನ್ ಮೂರೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಈ ಸ್ಥಾನದಲ್ಲಿ ಕೆ.ಎಲ್. ರಾಹುಲ್ ಅವರನ್ನು ಆಡಿಸಬಹುದೇ ಎಂಬುದೊಂದು ನಿರೀಕ್ಷೆ.
ಖಲೀಲ್ ಬದಲು ಜಾಧವ್?
ವಿರಾಟ್ ಕೊಹ್ಲಿ ಹ್ಯಾಟ್ರಿಕ್ ಶತಕದಿಂದ ಎದುರಾಳಿಗೆ ಭೀತಿಯೊಡ್ಡಿದ್ದಾರೆ. ಆದರೆ ಇವರಂತೆ ಸ್ಥಿರವಾದ ಬ್ಯಾಟಿಂಗ್ ಫಾರ್ಮ್ ಪ್ರದರ್ಶನ ನೀಡಬಲ್ಲ ಮತ್ತೋರ್ವ ಬ್ಯಾಟ್ಸ್‌ಮನ್ ಭಾರತ ತಂಡದಲ್ಲಿಲ್ಲದಿರುವುದು ದೊಡ್ಡ ಕೊರತೆ. ಅಂಬಾಟಿ ರಾಯುಡು ಇನ್ನಷ್ಟು ಗಟ್ಟಿ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಹಾಗೆಯೇ ರಿಷಬ್ ಪಂತ್ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಭಾರತದ ಟಿ20 ತಂಡದಿಂದ ಹೊರಬಿದ್ದಿರುವ ಮಹೇಂದ್ರ ಸಿಂಗ್ ಧೋನಿ ಅವರ ಫಾರ್ಮ್ ಮಂಕಾಗುತ್ತಲೇ ಇದೆ. ಹೀಗಾಗಿ ಕೇದಾರ್ ಜಾಧವ್ ಅವರನ್ನು ಮರಳಿ ಕರೆಸಿಕೊಂಡಿರುವ ಕ್ರಮ ಸ್ವಾಗತಾರ್ಹ. ಪಾರ್ಟ್ ಟೈಮ್ ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲ ಜಾಧವ್ ಲಯಕ್ಕೆ ಮರಳಿದರೆ ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆ ಒಂದು ಹಂತಕ್ಕೆ ಬಗೆಹರಿಯಲಿದೆ. ಖಲೀಲ್ ಅಹ್ಮದ್ ಬದಲು ಜಾಧವ್ ಅವಕಾಶ ಪಡೆಯುವ ಸಾಧ್ಯತೆ ಇದೆ.
ಬೌಲಿಂಗ್ ವಿಭಾಗದಲ್ಲಿ ಸೀಮರ್‌ಗಳಾದ ಭುವನೇಶ್ವರ್ ಕುಮಾರ್-ಜಸ್‌ಪ್ರೀತ್ ಬುಮ್ರಾ ಪುನರಾಗಮನದಿಂದ ಭಾರತಕ್ಕೆ ಹೆಚ್ಚಿನ ಬಲ ಲಭಿಸಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಇದರಲ್ಲಿ ಯಶಸ್ಸು ಕಂಡದ್ದು ಬುಮ್ರಾ ಮಾತ್ರ. ಭುವನೇಶ್ವರ್ ಡೆತ್ ಓವರ್‌ಗಳಲ್ಲಿ ಬಹಳ ದುಬಾರಿಯಾಗಿ ಗೋಚರಿಸಿದ್ದರು. ಸ್ಪಿನ್ ವಿಭಾಗ ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್ ವಿಂಡೀಸನ್ನು ನಿಯಂತ್ರಿಸುವಲ್ಲಿ ಸಾಮಾನ್ಯ ಯಶಸ್ಸು ಕಂಡಿದ್ದರು.
ವಿಂಡೀಸ್ ತುಂಬು ಆತ್ಮವಿಶ್ವಾಸ
ಪುಣೆಯಲ್ಲಿ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ತುಂಬು ಆತ್ಮವಿಶ್ವಾಸದಲ್ಲಿದೆ. ಬ್ಯಾಟಿಂಗಿನಲ್ಲಿ ಎಂದಿನ ಪ್ರಭುತ್ವ ಸಾಧಿಸಿದ ಹೋಲ್ಡರ್ ಪಡೆ, ಪುಣೆಯಲ್ಲಿ ಬೌಲಿಂಗ್‌ನಲ್ಲೂ ಘಾತಕವಾಗಿ ಪರಿಣಮಿಸಿ ಹೆಚ್ಚು ಅಪಾಯಕಾರಿಯಾಗಿ ಗೋಚರಿಸುತ್ತಿದೆ. ಕೊಹ್ಲಿ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡರೂ ಇನ್ನೊಂದು ತುದಿಯಲ್ಲಿ ವಿಕೆಟ್ ಬೇಟೆ ಯಾಡುತ್ತ ಹೋದದ್ದು ವಿಂಡೀಸಿನ ಬೌಲಿಂಗ್ ಕೌಶಲಕ್ಕೊಂದು ನಿದರ್ಶನ. ಕೊಹ್ಲಿ ವಿಕೆಟನ್ನು ಬೇಗನೇ ಉರುಳಿಸಿ ಭಾರತದ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡುವುದು ಪ್ರವಾಸಿಗರ ಯೋಜನೆ!
ವಿಕೆಟ್ ಕೀಪರ್ ಶೈ ಹೋಪ್ ಮತ್ತು 21ರ ಹರೆಯದ ಎಡಗೈ ಆಟಗಾರ ಶಿಮ್ರನ್ ಹೆಟ್‌ಮೈರ್ ವಿಂಡೀಸ್ ಬ್ಯಾಟಿಂಗ್ ಸರದಿಯ ಎರಡು ಪಿಲ್ಲರ್‌ಗಳಾಗಿದ್ದಾರೆ. ಹೋಪ್ 123 ಹಾಗೂ 95 ರನ್ನುಗಳ 2 ಮಹತ್ವದ ಇನ್ನಿಂಗ್ಸ್ ಆಡಿದ್ದಾರೆ. ಹೆಟ್‌ಮೈರ್ 106, 94 ಹಾಗೂ 37 ರನ್ ಹೊಡೆದು ಪ್ರಚಂಡ ಫಾರ್ಮ್ ಮುಂದುವರಿಸುವ ಸೂಚನೆಯಿತ್ತಿದ್ದಾರೆ. ಆದರೆ ಇವರಿಬ್ಬರು ಬೇಗನೇ ಪೆವಿಲಿಯನ್ ಸೇರಿಕೊಂಡರೆ ಕೆರಿಬಿಯನ್ನರ ಕತೆಯೂ ಅಷ್ಟೇ ಎಂಬುದು ರಹಸ್ಯವೇನಲ್ಲ. ಈ ನಿಟ್ಟಿನಲ್ಲಿ ಭಾರತದ ಬೌಲಿಂಗ್ ಯೋಜನೆ ಸಾಗಬೇಕಿದೆ.
ಎಕ್ಸ್‌ಟ್ರಾ ಇನ್ನಿಂಗ್ಸ್
ಭಾರತ-ವೆಸ್ಟ್ ಇಂಡೀಸ್: ಪುಣೆ ಏಕದಿನ
* ವಿರಾಟ್ ಕೊಹ್ಲಿ ಸತತ 3 ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ ಭಾರತದ ಮೊದಲ ಹಾಗೂ ವಿಶ್ವದ 10ನೇ ಕ್ರಿಕೆಟಿಗನೆನಿಸಿದರು. ಸತತ 4 ಶತಕ ಹೊಡೆದ ಕುಮಾರ ಸಂಗಕ್ಕರ ವಿಶ್ವದಾಖಲೆ ಹೊಂದಿದ್ದಾರೆ. ಉಳಿದ ಹ್ಯಾಟ್ರಿಕ್ ಶತಕ ಸಾಧಕರೆಂದರೆ ಜಹೀರ್ ಅಬ್ಟಾಸ್, ಸಯೀದ್ ಅನ್ವರ್, ಹರ್ಶಲ್ ಗಿಬ್ಸ್, ಎಬಿ ಡಿ ವಿಲಿಯರ್, ಕ್ವಿಂಟನ್ ಡಿ ಕಾಕ್, ರಾಸ್ ಟಯ್ಲರ್, ಬಾಬರ್ ಆಜಂ, ಜಾನಿ ಬೇರ್‌ಸ್ಟೊ.
* ವಿರಾಟ್ ಕೊಹ್ಲಿ ಶತಕಗಳ ಹ್ಯಾಟ್ರಿಕ್ ಸಾಧಿಸಿದ ವಿಶ್ವದ ಮೊದಲ ನಾಯಕ.
* ಕೊಹ್ಲಿ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ 2 ಸಲ 3 ಶತಕ ಹೊಡೆದರು. ಇದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 6 ಪಂದ್ಯಗಳ ಸರಣಿಯಲ್ಲೂ ಕೊಹ್ಲಿ 3 ಸೆಂಚುರಿ ಬಾರಿಸಿದ್ದರು. ಅವರು ದ್ವಿಪಕ್ಷೀಯ ಸರಣಿಯಲ್ಲಿ 3 ಶತಕ ಬಾರಿಸಿದ ಭಾರತದ ಏಕೈಕ ಕ್ರಿಕೆಟಿಗ.
* ಕೊಹ್ಲಿ ಶತಕ ಹೊಡೆದ 6ನೇ ಪಂದ್ಯದಲ್ಲಿ ಭಾರತ ಸೋಲನುಭವಿಸಿತು. ಇದು ತವರಿನಲ್ಲಿ ಎದುರಾದ 2ನೇ ಸೋಲು.
* ಚೇಸಿಂಗ್ ವೇಳೆ ಕೊಹ್ಲಿ ಸೆಂಚುರಿ ಹೊಡೆದ ಪಂದ್ಯಗಳಲ್ಲಿ ಭಾರತ ಮೊದಲ ಸಲ ಸೋಲನುಭವಿಸಿತು.
* ವೆಸ್ಟ್ ಇಂಡೀಸ್ ಈ ಪಂದ್ಯದಲ್ಲಿ 12 ಸಿಕ್ಸರ್ ಬಾರಿಸಿತು. ಇದು ಭಾರತದೆದುರು ವಿಂಡೀಸ್ ಬಾರಿಸಿದ 2ನೇ ಅತ್ಯಧಿಕ ಸಂಖ್ಯೆಯ ಸಿಕ್ಸರ್. 2011ರ ಚೆನ್ನೈ ಏಕದಿನದಲ್ಲಿ 13 ಸಿಕ್ಸರ್ ಸಿಡಿಸಿದ್ದು ದಾಖಲೆ.
* ಶಿಮ್ರನ್ ಹೆಟ್‌ಮೈರ್ ಈ ಸರಣಿಯಲ್ಲಿ 16 ಸಿಕ್ಸರ್ ಬಾರಿಸಿದರು. ಇದು ದ್ವಿಪಕ್ಷೀಯ ಸರಣಿಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗನೋರ್ವ ದಾಖಲಿಸಿದ ಅತ್ಯಧಿಕ ಸಿಕ್ಸರ್‌ಗಳ ಜಂಟಿ ದಾಖಲೆ. 2012ರ ಆಸ್ಟ್ರೇಲಿಯ ವಿರುದ್ಧದ ತವರಿನ ಸರಣಿಯಲ್ಲಿ ಕೈರನ್ ಪೊಲಾರ್ಡ್ ಕೂಡ 16 ಸಿಕ್ಸರ್ ಬಾರಿಸಿದ್ದರು. ಸರಣಿಯಲ್ಲಿ ಇನ್ನೂ 2 ಪಂದ್ಯಗಳಿರುವುದರಿಂದ ಈ ದಾಖಲೆಯನ್ನು ಮುರಿಯುವ ಅವಕಾಶ ಹೆಟ್‌ಮೈರ್ ಮುಂದಿದೆ.
* ಮುನ್ನೂರಕ್ಕೂ ಕಡಿಮೆ ಮೊತ್ತದ ಕಳೆದ 19 ಪಂದ್ಯಗಳಲ್ಲಿ ಭಾರತ ಮೊದಲ ಬಾರಿಗೆ ಚೇಸಿಂಗ್‌ನಲ್ಲಿ ಎಡವಿತು. ಕಳೆದ ವರ್ಷ ಆಂಟಿಗಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧವೇ 190 ರನ್ ಬೆನ್ನಟ್ಟುವಲ್ಲಿ ವಿಫಲವಾದ ಬಳಿಕ ಭಾರತ ಅನುಭವಿಸಿದ ಮೊದಲ ಸೋಲು ಇದಾಗಿದೆ. ಈ 19 ಪಂದ್ಯಗಳಲ್ಲಿ ಭಾರತ 17ರಲ್ಲಿ ಗೆದ್ದಿದೆ. ಅಫ್ಘಾನಿಸ್ಥಾನದೆದುರಿನ ಏಶ್ಯ ಕಪ್ ಪಂದ್ಯ ಟೈ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.