ನ್ಯೂ ಇಂಡಿಯಾ ಕ್ರಿಕೆಟಿಗೆ ಸ್ವಾಗತ, ಸುಸ್ವಾಗತ!
Team Udayavani, Jan 20, 2021, 6:55 AM IST
ಬ್ರಿಸ್ಬೇನ್, : “ಯುವ ಭಾರತ, ಬಲಿಷ್ಠ ಭಾರತ’ ಎಂಬ ಪರಿಕಲ್ಪನೆ ದೇಶದ ಕ್ರಿಕೆಟ್‌ನಲ್ಲೂ ಸಾಕಾರಗೊಂಡಿದೆ. ಅದೂ ದೂರದ ಆಸ್ಟ್ರೇಲಿಯದಲ್ಲಿ ಎಂಬುದು ಹೆಮ್ಮೆಯ ಸಂಗತಿ! ಅಜಿಂಕ್ಯ ರಹಾನೆ ಸಾರಥ್ಯದ “ಯಂಗ್ ಬ್ರಿಗೇಡ್’ ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಅಸಾಮಾನ್ಯ ಸಾಹಸದೊಂದಿಗೆ ಗೆದ್ದು, ಕಾಂಗರೂ ನಾಡಿನ ಕ್ರಿಕೆಟಿಗರನ್ನು ಅವರದೇ ನಾಡಿನಲ್ಲಿ ದಿಂಡುರುಳಿಸಿ ಸರಣಿ ವಶಪಡಿಸಿಕೊಳ್ಳುವುದರೊಂದಿಗೆ ಭಾರತೀಯ ಕ್ರಿಕೆಟಿನ “ಯುವ ಶಕ್ತಿ’ ಜಾಗತಿಕ ಕ್ರೀಡಾಕ್ಷೇತ್ರದಲ್ಲಿ ಅನಾವರಣಗೊಂಡಿದೆ.
ಕೀಪರ್ ರಿಷಭ್ ಪಂತ್, ಓಪನರ್ ಶುಭಮನ್ ಗಿಲ್ ಭಾರತದ ಗೆಲುವಿನ ಹೀರೋಗಳಾಗಿ ಮೂಡಿಬಂದರು. ಇವರ ಸಾಹಸಗಾಥೆ ದೇಶದ ಮುಂದಿನ ಪೀಳಿಗೆಯ ಯಶಸ್ವಿ ಕ್ರಿಕೆಟ್ ಅಧ್ಯಾಯಕ್ಕೆ ಸೊಗಸಾದ ಮುನ್ನುಡಿಯೊಂದನ್ನು ಬರೆಯಿತು. ದೇಶದ ಕ್ರಿಕೆಟ್ ಭವಿಷ್ಯ ಇಂಥ ಯುವ ಆಟಗಾರರ ಕೈಯಲ್ಲಿ ಭದ್ರವಾಗಿದೆ ಎಂಬುದು ಈ ಪ್ರವಾಸದಲ್ಲಿ ಸಾಬೀತಾಯಿತು.
ಬೆಲ್ಲ ನಿರೀಕ್ಷಿಸಿದವರಿಗೆ ಕಜ್ಜಾಯ! :
“ಗಬ್ಟಾ’ ಅಂಗಳದಲ್ಲಿ 328 ರನ್ ಟಾರ್ಗೆಟ್ ಪಡೆದ ಭಾರತಕ್ಕೆ ಅಂತಿಮ ದಿನದಾಟದಲ್ಲಿ ಏನು ಕಾದಿದೆಯೋ ಎಂಬ ಆತಂಕ ಇದ್ದೇ ಇತ್ತು. ಜತೆಗೆ ಮಳೆ ಬಂದು ಪಂದ್ಯ ಡ್ರಾ ಆದೀತು ಎಂಬ ನಿರೀಕ್ಷೆಯೂ ಇತ್ತು. ಆಗ “ಬೋರ್ಡರ್-ಗಾವಸ್ಕರ್ ಟ್ರೋಫಿ’ ಭಾರತದ ಬಳಿಯೇ ಉಳಿಯುತ್ತಿತ್ತು. ನಮಗೆ ಅಷ್ಟು ಸಾಕಿತ್ತು. ಆದರೆ ಬೆಲ್ಲ ನಿರೀಕ್ಷಿಸಿದವರಿಗೆ ಕಜ್ಜಾಯವೇ ಬಂದು ಬಾಯಿಗೆ ಬಿತ್ತು! ಡ್ರಾ ಏಕೆ… ಗೆದ್ದೇ ಟ್ರೋಫಿಯನ್ನೆತ್ತಿ ಪರಾಕ್ರಮ ಮೆರೆಯೋಣ ಎಂಬ ದೃಢ ಸಂಕಲ್ಪ ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿತು.
ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆ :
ಸರಿಯಾಗಿ 100 ಓವರ್‌ಗಳಲ್ಲಿ ಭಾರತ 328 ರನ್ ಗಳಿಸ ಬೇಕಿತ್ತು. ಅಂತಿಮ ದಿನ ಪಂದ್ಯ ಹೇಗೂ ತಿರುವು ಪಡೆಯ ಬಹುದಿತ್ತು. ಗೆದ್ದರೆ ಆಸ್ಟ್ರೇಲಿಯ ಗೆದ್ದೀತು, ಇಲ್ಲವೇ ಪಂದ್ಯ ಡ್ರಾ ಆದೀತು, ಆದರೆ ಭಾರತಕ್ಕೆ ಗೆಲುವು ಒಲಿಯುವುದು ಕಷ್ಟ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು.
ಅಲ್ಲದೇ ಬ್ರಿಸ್ಬೇನ್ ಅಂಗಳದ ಅಷ್ಟೂ ದಾಖಲೆಗಳು ಆಸ್ಟ್ರೇಲಿಯದ ಪರವಾಗಿದ್ದವು. ಕಳೆದ ಕೆಲವು ದಶಕಗಳಿಂದ ಇಲ್ಲಿ ಆಸೀಸ್ ಅಜೇಯವಾಗಿ ಮೆರೆದಾಡುತ್ತಿತ್ತು. ಆದರೆ ಪಂತ್, ಗಿಲ್ ಮತ್ತು ಪೂಜಾರ ಸೇರಿಕೊಂಡು ಒಂದೇ ದಿನದಲ್ಲಿ “ಗಬ್ಟಾ’ದ ಅಷ್ಟೂ ದಾಖಲೆಗಳನ್ನು ಅಳಿಸಿ ಹಾಕಿದರು. ಇಲ್ಲಿ ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆ ನಡೆಸಿ ನೂತನ ಇತಿಹಾಸವನ್ನೇ ಬರೆದರು. ಆಸ್ಟ್ರೇಲಿಯನ್ನರ ಅಹಂ ಅನ್ನು ಒಂದೇಟಿಗೆ ಇಳಿಸಿದರು. ಬದ್ಧತೆ, ಛಲ, ದೃಢ ಸಂಕಲ್ಪದಿಂದ ಹೋರಾಡಿದರೆ ಅಸಾಮಾನ್ಯವಾದುದನ್ನೂ ಸಾಧಿಸಬಹುದು ಎಂಬುದಕ್ಕೆ ಈ ಗೆಲುವೇ ಸಾಕ್ಷಿ.
ಅಂದಹಾಗೆ ಭಾರತ ಸರಿಯಾಗಿ 97 ಓವರ್‌ಗಳಲ್ಲಿ 7 ವಿಕೆಟಿಗೆ 329 ರನ್ ಬಾರಿಸಿ ಗೆದ್ದು ಬಂದಿತು.
ಗಿಲ್-ಪೂಜಾರ ಅಡಿಪಾಯ :
ರೋಹಿತ್ ಶರ್ಮ (7) ಅವರನ್ನು ಬೇಗನೇ ಕಳೆದುಕೊಂಡಾಗ ಭಾರತಕ್ಕೆ ಅಪಾಯ ಎದುರಾಗಿತ್ತು.
ಆದರೆ ಶುಭಮನ್ ಗಿಲ್ ಮತ್ತು ಪೂಜಾರ ಸೇರಿಕೊಂಡು ಆಸೀಸ್ ದಾಳಿಗೆ ಸಡ್ಡು ಹೊಡೆದು ನಿಂತರು. ದ್ವಿತೀಯ ವಿಕೆಟಿಗೆ 114 ರನ್ ಪೇರಿಸಿದರು. ಬ್ರಿಸ್ಬೇನ್ ಟ್ರ್ಯಾಕ್ ಬ್ಯಾಟಿಂಗಿಗೆ ಸಹಕರಿಸುತ್ತಿರುವುದು ಸಾಬೀತಾಯಿತು.
ಶತಕದ ಹಾದಿಯಲ್ಲಿದ್ದ ಗಿಲ್ 91ರ ಮೊತ್ತದಲ್ಲಿ ಲಿಯಾನ್ ಮೋಡಿಗೆ ಸಿಲುಕಿದರು. 146 ಎಸೆತ ಎದುರಿಸಿದ ಅವರು 8 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಪೂಜಾರ 56 ರನ್ನಿಗೆ 211 ಎಸೆತ ತೆಗೆದುಕೊಂಡರು (7 ಬೌಂಡರಿ).
ರಹಾನೆ ಬಿರುಸಿನ ಆಟದ ಮೂಡ್‌ನಲ್ಲಿದ್ದರು. ಆದರೆ ಇನ್ನಿಂಗ್ಸ್ ವಿಸ್ತರಿಸಲು ಕಮಿನ್ಸ್ ಅಡ್ಡಿಯಾದರು. 167ಕ್ಕೆ 3 ವಿಕೆಟ್ ಬಿತ್ತು. ಈ ಹಂತದಲ್ಲಿ ಪಂತ್ ಪ್ರವೇಶವಾಯಿತು.
ಪಂತ್ ಪ್ರಚಂಡ ಬೀಸುಗೆ :
ರಿಷಭ್ ಪಂತ್ ಪಂಥಾಹ್ವಾನವನ್ನು ಸ್ವೀಕರಿಸಿಯೇ ಬಂದಿದ್ದರು! ಗಿಲ್-ಪೂಜಾರ ನಿರ್ಮಿಸಿದ ಅಡಿಪಾಯದ ಮೇಲೆ ಪಂತ್ ರನ್ನಿನ ಇಟ್ಟಿಗೆ ನಿರ್ಮಿಸುತ್ತ ಹೋದರು. ಅವರು ಎಂದಿನ ಬಿರುಸಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತ ಸಾಗಿದಾಗ ಕಾಂಗರೂಗಳಿಗೆ ಸೋಲಿನ ವಾಸನೆ ಬಡಿಯತೊಡಗಿತು!
ಈ ನಡುವೆ ಅಗರ್ವಾಲ್, ಸುಂದರ್ ಮತ್ತು ಠಾಕೂರ್ ಅನಗತ್ಯ ಹೊಡೆತಗಳಿಗೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಆದರೆ ಪಂತ್ ನಿಲುವು ದೃಢವಾಗಿತ್ತು, ಅದು ಭಾರತವನ್ನು ಗೆಲ್ಲಿಸುವುದು! ಅಂತಿಮವಾಗಿ ಜೋಶ್‌ಹ್ಯಾಝಲ್‌ವುಡ್ ಎಸೆತವನ್ನು ಲಾಂಗ್ ಆಫ್ ಬೌಂಡರಿಗೆ ಬಡಿದಟ್ಟುವುದರೊಂದಿಗೆ ನೂತನ ಇತಿಹಾಸವೊಂದು ನಿರ್ಮಾಣಗೊಂಡಿತು. 32 ವರ್ಷಗಳಿಂದ ಬ್ರಿಸ್ಬೇನ್‌ನಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯ ಈ ಅನಿರೀಕ್ಷಿತ ಆಘಾತಕ್ಕೆ ತತ್ತರಿಸಿ ಬಿಕ್ಕಳಿಸಿತು!
138 ಎಸೆತಗಳಿಂದ ಅಜೇಯ 89 ರನ್ (9 ಬೌಂಡರಿ, ಒಂದು ಸಿಕ್ಸರ್) ಬಾರಿಸಿದ ರಿಷಭ್ ಪಂತ್ ಈ ಗೆಲುವಿನ ನಿಜವಾದ ಹೀರೋ. ಹೀಗಾಗಿಯೇ ಅವರು ಮ್ಯಾನ್ ಆಫ್ ದ ಮ್ಯಾಚ್!
ಅಜಿಂಕ್ಯ ರಹಾನೆ ಅಜೇಯ ಸಾಧನೆ :
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಾಂಗರೂ ನಾಡಿನಲ್ಲಿ ಟೀಮ್ ಇಂಡಿಯಾವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದ ಅಜಿಂಕ್ಯ ರಹಾನೆ ಟೀಮ್ ಇಂಡಿಯಾದ ಅಜೇಯ ನಾಯಕನೆಂಬ ಕೀರ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ರಹಾನೆ ಈ ವರೆಗೆ 5 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ನಾಲ್ಕರಲ್ಲಿ ಜಯಭೇರಿ ಮೊಳಗಲ್ಪಟ್ಟಿದೆ. ಒಂದು ಟೆಸ್ಟ್ (ಸಿಡ್ನಿ) ಡ್ರಾಗೊಂಡಿದೆ.
ಆಸ್ಟ್ರೇಲಿಯವನ್ನು ಅವರದೇ ನೆಲದಲ್ಲಿ ಮಣಿಸಿದ ಭಾರತದ ಎರಡನೇ ನಾಯಕನೆಂಬ ಹಿರಿಮೆ ರಹಾನೆ ಅವರದು. ಕಳೆದ ಸಲ ವಿರಾಟ್ ಕೊಹ್ಲಿ ಪಡೆ 2-1 ಅಂತರದಿಂದಲೇ ಆಸ್ಟ್ರೇಲಿಯಕ್ಕೆ ಸೋಲಿನೇಟು ಬಿಗಿದಿತ್ತು. ಆದರೆ “ಅಜೇಯ ರಹಾನೆ’ ಭಾರತಕ್ಕೆ ಮರಳಿದೊಡನೆ ಇಂಗ್ಲೆಂಡ್ ಎದುರಿನ ಸರಣಿಗಾಗಿ ನಾಯಕತ್ವವನ್ನು ಕೊಹ್ಲಿಗೆ ಬಿಟ್ಟುಕೊಡಬೇಕಾದದ್ದು ಮಾತ್ರ ಕ್ರಿಕೆಟಿನ ವಿಪರ್ಯಾಸವೇ ಸರಿ!
“ಇದು ನನ್ನ ಸ್ಮರಣೀಯ ಸರಣಿ’ :
ಭಾರತದ ಗೆಲುವಿನ ಬಳಿಕ ಮಾತನಾಡಿದ ಪಂತ್, ಇದು ನನ್ನ ಜೀವನದ ಶ್ರೇಷ್ಠ ಕ್ಷಣಗಳಲ್ಲಿ ಒಂದಾಗಿದೆ. ನಾನು ಪಂದ್ಯ ಗೆಲ್ಲಿಸಬಲ್ಲ ಆಟಗಾರ ಎಂದು ತಂಡದ ವ್ಯವಸ್ಥಾಪಕ ಬಳಗ ಯಾವಾಗಲೂ ಹೇಳುತ್ತಿತ್ತು. ಆ ನಂಬಿಕೆಯನ್ನು ಉಳಿಸಿಕೊಂಡಿದ್ದಕ್ಕೆ ಸಂತಸವಾಗಿದೆ. ಆಸ್ಟ್ರೇಲಿಯ ವಿರುದ್ಧ ಭಾರತ ಐತಿಹಾಸಿಕ ಜಯ ಸಾಧಿಸಿದ ವೇಳೆ ತಂಡದ ಆಟಗಾರನಾಗಿದ್ದು ನನ್ನ ಪಾಲಿನ ಅದೃಷ್ಟ ಎಂದು ಹೇಳಿದ್ದಾರೆ.
ಕೊಹ್ಲಿ ಮತ್ತು ಪುತ್ರಿಯ ಲಿಂಕ್! :
ಆಸ್ಟ್ರೇಲಿಯದ ಬ್ರಿಸ್ಬೇನ್ ಸೋಲಿಗೆ ವಿರಾಟ್ ಕೊಹ್ಲಿ ಮತ್ತು ಅವರ ಪುತ್ರಿಯನ್ನು ಲಿಂಕ್ ಮಾಡಿ ನೆಟ್ಟಿಗರು ಸ್ವಾರಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.”ಆಸ್ಟ್ರೇಲಿಯ ಬ್ರಿಸ್ಬೇನ್‌ನಲ್ಲಿ ಕೊನೆಯ ಸಲ ಸೋತದ್ದು 1988ರಲ್ಲಿ. ಅಂದು ವಿರಾಟ್ ಕೊಹ್ಲಿ ಜನನವಾಗಿತ್ತು. ಅನಂತರದ ಸೋಲು 2021ರಲ್ಲಿ ಎದುರಾಯಿತು, ಈ ವರ್ಷ ವಿರಾಟ್ ಕೊಹ್ಲಿಗೆ ಮಗಳು ಹುಟ್ಟಿದ್ದಳು’ ಎಂಬ ಟ್ವೀಟ್ ಎಲ್ಲರ ಗಮನ ಸೆಳೆದಿದೆ.
ಎಂತಹ ಅದ್ಭುತ ಗೆಲುವು! ಅಡಿಲೇಡ್‌ನಲ್ಲಿ ಸೋತ ಅನಂತರ ಯಾರ್ಯಾರು ನಮ್ಮನ್ನು ಅನುಮಾನಿಸಿದ್ದರೋ, ಅವರೆಲ್ಲ ಒಮ್ಮೆ ಎದ್ದುನಿಂತು, ಆತ್ಮಾವಲೋಕನ ಮಾಡಿಕೊಳ್ಳಿ. ನನ್ನ ಸಂಗಡಿಗರೇ, ಈ ಐತಿಹಾಸಿಕ ಜಯವನ್ನು ಆನಂದಿಸಿ.
–ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ
1971ರಲ್ಲಿ ನಾವು ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನೆಲದಲ್ಲಿ ಸಾಧಿಸಿದ ಗೆಲುವಿನಷ್ಟೇ ಶ್ರೇಷ್ಠ ಸಾಧನೆ ಇದಾಗಿದೆ. –ಸುನೀಲ್ ಗಾವಸ್ಕರ್.ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ
“ಭಾರತವನ್ನು ಎಂದಿಗೂ, ಇನ್ನೆಂದಿಗೂ ನಿರ್ಲಕ್ಷಿಸಲಾರೆ’ :
ಇದೊಂದು ಅದ್ಭುತ ಟೆಸ್ಟ್ ಸರಣಿ. ಪಂದ್ಯವೆಂದ ಮೇಲೆ ಒಬ್ಬರು ಸೋಲಬೇಕು, ಇನ್ನೊಬ್ಬರು ಗೆಲ್ಲಬೇಕು. ಅಂತಿಮವಾಗಿ ಭಾರತ ಗೆದ್ದಿದೆ. ಭಾರತೀಯರಿಗೆ ಸರಣಿ ಗೆಲುವಿನ ಎಲ್ಲ ಶ್ರೇಯಸ್ಸು ಸಲ್ಲಬೇಕು. ಈ ಸರಣಿಯ ಅನಂತರ ನಾವೊಂದು ಮುಖ್ಯಪಾಠ ಕಲಿತ್ತಿದ್ದೇವೆ. ಭಾರತವನ್ನು ಎಂದಿಗೂ, ಇನ್ನೆಂದಿಗೂ ನಿರ್ಲಕ್ಷಿಸುವುದಿಲ್ಲ. 150 ಕೋಟಿ ಜನರಿರುವ ದೇಶದಲ್ಲಿ ಹಿರಿಯರ ತಂಡಕ್ಕೆ ಆಯ್ಕೆಯಾಗಬೇಕಾದರೆ, ಅಸಾಮಾನ್ಯ ಶಕ್ತಿಯೇ ಇರಬೇಕಾಗುತ್ತದೆ ಎನ್ನುವುದು ಸೋಲಿನ ಅನಂತರ ಲ್ಯಾಂಗರ್ ನೀಡಿದ ಹೇಳಿಕೆ.
ಭಾರತ್ ಮಾತಾ ಕೀ ಜೈ… : ಆಸೀಸ್ ಅಭಿಮಾನಿಯ ಉದ್ಘೋಷ! :
ಸರಣಿಯುದ್ದಕ್ಕೂ ಆಸ್ಟ್ರೇಲಿಯದ ಒಂದು ವೀಕ್ಷಕ ವರ್ಗ ಭಾರತೀಯ ಕ್ರಿಕೆಟಿಗರನ್ನು ಅವಮಾನಿಸುವುದರಲ್ಲೇ ನಿರತವಾಗಿದ್ದರ ನಡುವೆಯೇ ಆಸೀಸ್ ಅಭಿಮಾನಿಯೋರ್ವ “ಭಾರತ್ ಮಾತಾ ಕೀ ಜೈ’ ಎಂದು ಅಭಿಮಾನ ವ್ಯಕ್ತಪಡಿಸಿದ ವಿದ್ಯಮಾನವೊಂದು “ಗಬ್ಬಾ’ದಲ್ಲಿ ಕಂಡುಬಂತು.
ಆಸ್ಟ್ರೇಲಿಯದ ಹಳದಿ ಜೆರ್ಸಿ ಧರಿಸಿದ ಕ್ರಿಕೆಟ್ ಅಭಿಮಾನಿಯೋರ್ವ ಸ್ಟೇಡಿಯಂನ ಗ್ಯಾಲರಿಯಲ್ಲಿ ನಿಂತು “ಬೋಲೋ ಭಾರತ್ ಮಾತಾ ಕೀ…’, “ವಂದೇ ಮಾತರಂ’ ಎಂದು ನೈಜ ಸ್ಫೂರ್ತಿಯಿಂದ ಕೂಗುತ್ತಿದ್ದ. ಇದಕ್ಕೆ ವೀಕ್ಷಕ ವೃಂದ “ಜೈ’ ಎಂದು ಸ್ಪಂದಿಸಿದ ರೀತಿ ಅಮೋಘವಾಗಿತ್ತು. ಈ ದೃಶ್ಯಾವಳಿ ವೈರಲ್ ಆಗಿದೆ.
“ಈ ಸೋಲು ಆ್ಯಶಸ್‌ಗಿಂತ ಹೀನಾಯ’ :
ಆಸ್ಟ್ರೇಲಿಯ ಕ್ರಿಕೆಟಿಗರ ಹೀನಾಯ ಪ್ರದರ್ಶನಕ್ಕೆ ತವರಿನ ಮಾಜಿ ಕ್ರಿಕೆಟಿಗರೇ ಟೀಕಾಪ್ರಹಾರ ಎಸಗಿದ್ದಾರೆ. ಇವರಲ್ಲಿ ಮಾಜಿ ನಾಯಕ ರಿಕಿ ಪಾಂಟಿಂಗ್ ಮುಂಚೂಣಿಯಲ್ಲಿದ್ದಾರೆ. ಇದು ಆ್ಯಶಸ್ ಸೋಲಿಗಿಂತ ಹೀನಾಯ ಎಂದು ಅವರು ಕಿಡಿಕಾರಿದ್ದಾರೆ.
“ಕಳೆದ ಸಲ ವಾರ್ನರ್, ಸ್ಮಿತ್ ಇರಲಿಲ್ಲ. ಹೀಗಾಗಿ ನಾವು ಸೋತೆವು ಎಂದು ಭಾವಿಸಬಹುದು. ಆದರೆ ಈ ಬಾರಿ ಇವರಿಬ್ಬರೂ ತಂಡದಲ್ಲಿದ್ದರು. ಆದರೆ ಭಾರತ ತಂಡದ ಸ್ಟಾರ್ ಆಟಗಾರರೆಲ್ಲ ಹೊರಗುಳಿದಿದ್ದರು. ಆದರೂ ಇಂಡಿಯಾ ಗೆದ್ದಿದೆ. ಇದು ಆ್ಯಶಸ್‌ಗಿಂತ ಹೀನಾಯವಾದ ಸೋಲು. ಆಸ್ಟ್ರೇಲಿಯ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದಿದ್ದಾರೆ ಪಾಂಟಿಂಗ್.
ಲಿಯಾನ್‌ಗೆ ವಿಶೇಷ ಗಿಫ್ಟ್ :
ಪ್ರಶಸ್ತಿ ಸಮಾರಂಭದಲ್ಲಿ ಆಸ್ಟ್ರೇಲಿಯದ ಸ್ಪಿನ್ನರ್ ನಥನ್ ಲಿಯಾನ್‌ಗೆ ಅಚ್ಚರಿಯೊಂದು ಕಾದಿತ್ತು. ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಒಂದು ಕೋರಿಕೆಯನ್ನು ಸಲ್ಲಿಸುತ್ತ, ಲಿಯಾನ್ ಅವರನ್ನು ವೇದಿಕೆಗೆ ಕರೆಯುತ್ತಾರೆ. ಏಕಿರಬಹುದೆಂದು ಆಸೀಸ್ ಕ್ರಿಕೆಟಿಗರಿಗೆಲ್ಲ ಅಚ್ಚರಿ. ಆಗ ರಹಾನೆ ಟೀಮ್ ಇಂಡಿಯಾ ಆಟಗಾರರ ಹಸ್ತಾಕ್ಷರವುಳ್ಳ ಜೆರ್ಸಿಯೊಂದನ್ನು ಲಿಯಾನ್‌ಗೆ ನೀಡುತ್ತಾರೆ. ಇದು 100ನೇ ಟೆಸ್ಟ್ ಆಡಿದ ಆಸೀಸ್ ಸ್ಪಿನ್ನರ್‌ಗೆ ತಮ್ಮ ಕಡೆಯ ಉಡುಗೊರೆ ಎನ್ನುತ್ತಾರೆ. ರಹಾನೆ ಅವರ ಕ್ರೀಡಾಸ್ಫೂರ್ತಿ ಭಾರೀ ಪ್ರಶಂಸೆಗೆ ಪಾತ್ರವಾಯಿತು. ಜೆರ್ಸಿ ಸ್ವೀಕರಿಸಿದ ಲಿಯಾನ್ ಭಾರತ ತಂಡದತ್ತ ಕೈಬೀಸುತ್ತ ಅಭಿನಂದನೆ ಸಲ್ಲಿಸಿದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಭಾರತ ನಂ.1 :
ಆಸ್ಟ್ರೇಲಿಯ ವಿರುದ್ಧ ಸಾಧಿಸಿದ 2-1 ಸರಣಿ ಗೆಲುವಿನ ಬಳಿಕ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ. ಆಸೀಸ್ ಮೂರಕ್ಕೆ ಜಾರಿದೆ. ದ್ವಿತೀಯ ಸ್ಥಾನ ನ್ಯೂಜಿಲ್ಯಾಂಡ್ ಪಾಲಾಗಿದೆ.
ಭಾರತದ ಒಟ್ಟು ಅಂಕ 430ಕ್ಕೆ ಹಾಗೂ ಗೆಲುವಿನ ಪ್ರತಿಶತ ಸಾಧನೆ (ಪಿಸಿಟಿ) 71.7ಕ್ಕೆ ವಿಸ್ತರಿಸಲ್ಪಟ್ಟಿದೆ.ನ್ಯೂಜಿಲ್ಯಾಂಡ್ 420 ಅಂಕ ಹಾಗೂ 70.0 ಪಿಸಿಟಿ, ಆಸ್ಟ್ರೇಲಿಯ 332 ಅಂಕ ಹಾಗೂ 69.2 ಪಿಸಿಟಿ ಹೊಂದಿದೆ.
ಈ ಸಾಧನೆಯೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಭಾರತದ ಅವಕಾಶ ಉಜ್ವಲಗೊಂಡಿದೆ. ಅಗ್ರ 2 ತಂಡಗಳ ನಡುವಿನ ಪ್ರಶಸ್ತಿ ಸಮರ ಜೂನ್‌ನಲ್ಲಿ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿದೆ. ಟೆಸ್ಟ್ ರ್‍ಯಾಂಕಿಂಗ್‌ನಲ್ಲೂ ಭಾರತ ಪ್ರಗತಿ
ಈ ಗೆಲುವಿನೊಂದಿಗೆ ಭಾರತ 117.65 ಅಂಕದೊಂದಿಗೆ ಟೆಸ್ಟ್ ರ್‍ಯಾಂಕಿನಲ್ಲಿ ಎರಡನೇ ಸ್ಥಾನಕ್ಕೇರಿದೆ. ಇದರೊಂದಿಗೆ ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯ ಮೂರನೇ ಸ್ಥಾನಕ್ಕೆ ಕುಸಿದಿದೆ. 118.44 ಅಂಕ ಹೊಂದಿರುವ ನ್ಯೂಜಿಲ್ಯಾಂಡ್ ಅಗ್ರ ಸ್ಥಾನ ಅಲಂಕರಿಸಿದೆ.
ಎಕ್ಸ್‌ಟ್ರಾ ಇನ್ನಿಂಗ್ಸ್ :
l ಆಸ್ಟ್ರೇಲಿಯ ನೆಲದಲ್ಲಿ ಭಾರತ ಸತತ 2ನೇ ಸಲ ಟೆಸ್ಟ್ ಸರಣಿ ವಶಪಡಿಸಿಕೊಂಡಿತು.
l ಭಾರತ ಬ್ರಿಸ್ಬೇನ್‌ನಲ್ಲಿ ಮೊದಲ ಗೆಲುವು ದಾಖಲಿಸಿತು. ಹಿಂದಿನ 6 ಟೆಸ್ಟ್‌ಗಳಲ್ಲಿ ಐದನ್ನು ಸೋತಿತ್ತು. ಒಂದನ್ನು ಡ್ರಾ ಮಾಡಿಕೊಂಡಿತ್ತು.
l 1988ರ ಬಳಿಕ ಬ್ರಿಸ್ಬೇನ್ ಅಂಗಳ ದಲ್ಲಿ ಆಸೀಸ್‌ಮೊದಲ ಸೋಲುಂಡಿತು. ಹಾಗೆಯೇ ಇಲ್ಲಿ ಸತತ 7 ಗೆಲುವುಗಳ ಬಳಿಕ
ಆಸೀಸ್‌ಗೆ ಎದುರಾದ ಮೊದಲ ಸೋಲು ಇದಾಗಿದೆ.
l ಭಾರತ ಬ್ರಿಸ್ಬೇನ್ ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ 300 ಪ್ಲಸ್ ರನ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಜಯ ಸಾಧಿಸಿದ ವಿಶ್ವದ ಮೊದಲ ತಂಡ.
l ಭಾರತ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ 3ನೇ ನಿದರ್ಶನ ಇದಾಗಿದೆ. ವೆಸ್ಟ್ ಇಂಡೀಸ್ ಎದುರಿನ 1975-76ರ ಪೋರ್ಟ್ ಆಫ್ ಸ್ಪೇನ್ ಪಂದ್ಯದಲ್ಲಿ 406 ರನ್ ಬಾರಿಸಿ ಗೆದ್ದದ್ದು ದಾಖಲೆ. ಬಳಿಕ 2008-09ರಲ್ಲಿ ಇಂಗ್ಲೆಂಡ್ ಎದುರಿನ ಚೆನ್ನೈ ಪಂದ್ಯ ವನ್ನು 387 ರನ್ ಬೆನ್ನಟ್ಟಿ ಗೆದ್ದಿತ್ತು.
l ಭಾರತ ತಂಡ ಆಸ್ಟ್ರೇಲಿಯದಲ್ಲಿ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿ ಗೆದ್ದ 3ನೇ ವಿದೇಶಿ ತಂಡ. 2008-09ರ ಪರ್ತ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 414 ರನ್, 1928-29ರ ಮೆಲ್ಬರ್ನ್ ಪಂದ್ಯದಲ್ಲಿ ಇಂಗ್ಲೆಂಡ್ 332 ರನ್ ಚೇಸ್ ಮಾಡಿ ಜಯ ಸಾಧಿಸಿದ್ದವು.
l ಭಾರತ ಅಂತಿಮ ದಿನದಾಟದಲ್ಲಿ 325 ರನ್ ಬಾರಿಸಿತು. ಇದು ಕೊನೆಯ ದಿನ ಗೆಲುವಿಗಾಗಿ ಗಳಿಸಿದ 3ನೇ ದೊಡ್ಡ ಮೊತ್ತ. ಇಂಗ್ಲೆಂಡ್ ಮೊದಲೆರಡು ಸ್ಥಾನದಲ್ಲಿದೆ. 1948ರ ಆ್ಯಶಸ್ ಸರಣಿಯ ಲೀಡ್ಸ್ ಪಂದ್ಯದಲ್ಲಿ 404 ರನ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ 1984ರ ಲಾರ್ಡ್ಸ್ ಪಂದ್ಯದಲ್ಲಿ 344 ರನ್ ಹೊಡೆದಿತ್ತು.
l ರಿಷಭ್ ಪಂತ್ ಅತೀ ಕಡಿಮೆ 27 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್ ಪೇರಿಸಿದ ಭಾರತದ ಕೀಪರ್ ಎನಿಸಿದರು. ಈ ಸಂದರ್ಭದಲ್ಲಿ ಧೋನಿ ದಾಖಲೆ ಪತನಗೊಂಡಿತು (32 ಇನ್ನಿಂಗ್ಸ್). ದಾಖಲೆ ಕ್ವಿಂಟನ್ ಡಿ ಕಾಕ್ ಹೆಸರಲ್ಲಿದೆ (21 ಇನ್ನಿಂಗ್ಸ್). ಪಂತ್ ಸಾವಿರ ರನ್ ಪೂರೈಸಿದ ಭಾರತದ 7ನೇ ಕೀಪರ್.
l ಪೂಜಾರ ಆಸ್ಟ್ರೇಲಿಯದಲ್ಲಿ ಅತ್ಯಧಿಕ 2,657 ಎಸೆತ ಎದುರಿಸಿದ ಭಾರತೀಯ ದಾಖಲೆ ಬರೆದರು. ಕೊಹ್ಲಿ ದಾಖಲೆ ಪತನಗೊಂಡಿತು (2,544).
l ಪೂಜಾರ ಅತ್ಯಂತ ನಿಧಾನ ಗತಿಯ ಅರ್ಧ ಶತಕ ದಾಖಲಿಸಿದರು. ಅವರು 28ನೇ ಫಿಫ್ಟಿಗೆ 196 ಎಸೆತ ಎದುರಿಸಿದರು.
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ 369
ಭಾರತ ಪ್ರಥಮ ಇನ್ನಿಂಗ್ಸ್ 336
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್ 294
ಭಾರತ ದ್ವಿತೀಯ ಇನ್ನಿಂಗ್ಸ್
ರೋಹಿತ್ ಶರ್ಮ ಸಿ ಪೇನ್ ಬಿ ಕಮಿನ್ಸ್ 7
ಶುಭಮನ್ ಗಿಲ್ ಸಿ ಸ್ಮಿತ್ ಬಿ ಲಿಯಾನ್ 91
ಚೇತೇಶ್ವರ್ ಪುಜಾರ ಎಲ್‌ಬಿಡಬ್ಲ್ಯು ಬಿ ಕಮಿನ್ಸ್ 56
ಅಜಿಂಕ್ಯಾ ರಹಾನೆ ಸಿ ಪೇನ್ ಬಿ ಕಮಿನ್ಸ್ 24
ರಿಷಭ್ ಪಂತ್ ಔಟಾಗದೆ 89
ಅಗರ್ವಾಲ್ ಸಿ ವೇಡ್ ಬಿ ಕಮಿನ್ಸ್ 9
ವಾಷಿಂಗ್ಟನ್ ಬಿ ಲಿಯೊನ್ 22
ಶಾರ್ದೂಲ್ ಸಿ ಲಿಯೊನ್ ಬಿ ಹ್ಯಾಝಲ್‌ವುಡ್ 2
ನವದೀಪ್ ಸೈನಿ ಔಟಾಗದೆ 0
ಇತರ 29
ಒಟ್ಟು (7 ವಿಕೆಟಿಗೆ) 329
ವಿಕೆಟ್ ಪತನ: 1-18, 2-132, 3-167, 4-228, 5-265, 6-318, 7-325.
ಬೌಲಿಂಗ್:
ಮಿಚೆಲ್ ಸ್ಟಾರ್ಕ್ 16-0-75-0
ಜೋಶ್ ಹ್ಯಾಝಲ್‌ವುಡ್ 22-5-74-1
ಪ್ಯಾಟ್ ಕಮಿನ್ಸ್ 24-10-55-4
ಕ್ಯಾಮರಾನ್ ಗ್ರೀನ್ 3-1-10-0
ನಥಾನ್ ಲಿಯಾನ್ 31-7-85-2
ಮಾರ್ನಸ್ ಲಬುಶೇನ್ 1-0-4-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.