ದ್ವಿತೀಯ ಸುತ್ತು ಪ್ರವೇಶಿಸಿದ ಸಿಂಧು, ಪ್ರಣಯ್
ಇಂಡೋನೇಶ್ಯ ಓಪನ್' ಬ್ಯಾಡ್ಮಿಂಟನ್
Team Udayavani, Jul 25, 2019, 5:37 AM IST
ಟೋಕಿಯೊ: “ಇಂಡೋನೇಶ್ಯ ಓಪನ್’ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಫೈನಲ್ ತನಕ ಸಾಗಿ ಮುಗ್ಗರಿಸಿದ ಪಿ.ವಿ. ಸಿಂಧು, “ಜಪಾನ್ ಓಪನ್’ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡುಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣಯ್ ಕೂಡ ಮೊದಲ ಸುತ್ತು ದಾಟಿದ್ದಾರೆ. ಆದರೆ ಕೆ. ಶ್ರೀಕಾಂತ್, ಸಮೀರ್ ವರ್ಮ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ.
5ನೇ ಶ್ರೇಯಾಂಕದ ಪಿ.ವಿ. ಸಿಂಧು 37 ನಿಮಿಷಗಳ ಕಾದಾಟದ ಬಳಿಕ ಚೀನದ ಹಾನ್ ಯುಇ ಅವರನ್ನು 21-9, 21-17 ಅಂತರದಿಂದ ಮಣಿಸಿದರು. ಸಿಂಧು ಅವರ ದ್ವಿತೀಯ ಸುತ್ತಿನ ಎದುರಾಳಿ ಜಪಾನಿನ ಅಯಾ ಒಹೊರಿ.
ಶ್ರೀಕಾಂತ್, ಸಮೀರ್‌ಗೆ ಸೋಲು
ಬುಧವಾರ ಬೆಳಗ್ಗೆ ನಡೆದ ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಭಾರತ ಸೋಲಿನ ಆಘಾತದಿಂದ ತತ್ತರಿಸಿತು. ಕೆ. ಶ್ರೀಕಾಂತ್ ಮತ್ತು ಸಮೀರ್ ವರ್ಮ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.
ಕೆ. ಶ್ರೀಕಾಂತ್ ಭಾರತದವರೇ ಆದ ಎಚ್.ಎಸ್. ಪ್ರಣಯ್ ಅವರೆದುರು 3 ಗೇಮ್‌ಗಳ ಹೋರಾಟದ ಬಳಿಕ ಮುಗ್ಗರಿಸಿದರು. ತನಗಿಂತ ಮೇಲಿನ ರ್‍ಯಾಂಕಿನ ಶ್ರೀಕಾಂತ್ ವಿರುದ್ಧ ಪ್ರಣಯ್ 13-21, 21-11, 22-20 ಅಂತರದ ರೋಚಕ ಗೆಲುವು ಒಲಿಸಿಕೊಂಡರು. 59 ನಿಮಿಷಗಳ ಕಾಲ ಇವರಿಬ್ಬರ ಹೋರಾಟ ಸಾಗಿತು.
ಪ್ರಣಯ್ ವಿರುದ್ಧ 8ನೇ ಶ್ರೇಯಾಂಕದ ಶ್ರೀಕಾಂತ್ 21-13 ಅಂತರದ ಗೆಲುವಿನ ದಾಖಲೆ ಹೊಂದಿದ್ದರು. ಆದರೆ ಅವರ ಕಳಪೆ ಫಾರ್ಮ್, ಅಸ್ಥಿರ ಪ್ರದರ್ಶನ ಟೋಕಿಯೋದಲ್ಲೂ ಮುಂದುವರಿದದ್ದು ಪ್ರಣಯ್‌ಗೆ ಲಾಭವಾಗಿ ಪರಿಣಮಿಸಿತು. ಪ್ರಣಯ್‌ಗೆ ಇಲ್ಲಿ ಯಾವುದೇ ಶ್ರೇಯಾಂಕ ಇರಲಿಲ್ಲ.
ಮೊದಲ ಗೇಮ್ ಕಳೆದುಕೊಂಡ ಪ್ರಣಯ್, 2ನೇ ಗೇಮ್‌ನಲ್ಲಿ ಭರ್ಜರಿಯಾಗಿ ತಿರುಗಿ ಬಿದ್ದರು. ನಿರ್ಣಾಯಕ ಗೇಮ್ ಆಚೀಚೆ ತೂಗಾಡುತ್ತ ಹೋಯಿತು. ಕೊನೆಗೆ ಇದು 22-20ರಿಂದ ಪ್ರಣಯ್ ಪಾಲಾಯಿತು. ಶ್ರೀಕಾಂತ್ ಕಳೆದ “ಇಂಡೋನೇಶ್ಯ ಓಪನ್’ನಲ್ಲಿ ದ್ವಿತೀಯ ಸುತ್ತಿನಲ್ಲಿ ಹೊರಬಿದ್ದಿದ್ದರು.
ಸಮೀರ್ ವರ್ಮ ಅವರನ್ನು ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸೆನ್ 21-17, 21-12 ನೇರ ಗೇಮ್‌ಗಳಿಂದ ಮಣಿಸಿದರು. 46 ನಿಮಿಷಗಳಲ್ಲಿ ಇವರ ಆಟ ಮುಗಿಯಿತು.
ಮಿಕ್ಸೆಡ್ ಡಬಲ್ಸ್‌ನಲ್ಲೂ ಆಘಾತ
ಮಿಕ್ಸೆಡ್ ಡಬಲ್ಸ್‌ನಲ್ಲೂ ಭಾರತ ಆಘಾತ ಅನುಭವಿಸಿತು. ಪ್ರಣವ್ ಜೆರ್ರಿ ಚೋಪ್ರಾ-ಸಿಕ್ಕಿ ರೆಡ್ಡಿ ಅವರನ್ನು ಚೀನದ ಝೆಂಡ್ ಸಿ ವೀ-ಹುವಾಂಗ್ ಯಾ ಕ್ವಿಯಾಂಗ್ 21-11, 21-14 ಅಂತರದಿಂದ ಪರಾಭವಗೊಳಿಸಿದರು.
ಡಬಲ್ಸ್‌ನಲ್ಲಿ ಮಿಶ್ರ ಫಲ
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಸೇರಿಕೊಂಡು ಇಂಗ್ಲೆಂಡಿನ ಮಾರ್ಕಸ್ ಎಲ್ಲಿಸ್-ಕ್ರಿಸ್ ಲ್ಯಾಂಗ್ರಿಜ್ ಅವರನ್ನು 21-16, 21-17 ಅಂತರದಿಂದ ಸೋಲಿಸಿ ದ್ವಿತೀಯ ಸುತ್ತಿಗೆ ಏರಿದರು.
ಆದರೆ ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಮೊದಲ ಸುತ್ತಿನಲ್ಲೇ ಎಡವಿದರು. ಇವರೆದುರಿನ ಪಂದ್ಯವನ್ನು ಕೊರಿಯಾದ ಸೊ ಯೊಂಗ್ ಕಿಮ್ ಕೊರಿಯಾ-ಹೀ ಯೊಂಗ್ ಕಾಂಗ್ 21-16, 21-14ರಿಂದ ಗೆದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.