INDvsBAN; ಕಾನ್ಪುರ ಪಂದ್ಯಕ್ಕೂ ಮುನ್ನವೇ ನಿವೃತ್ತಿ ಘೋಷಿಸಿದ ಶಕೀಬ್ ಅಲ್ ಹಸನ್
ಟಿ20 ಗೂ ವಿದಾಯ; ಏಕದಿನ ನಿವೃತ್ತಿಯ ಬಗ್ಗೆ ಸುಳಿವು ನೀಡಿದ ಆಲ್ ರೌಂಡರ್
Team Udayavani, Sep 26, 2024, 3:01 PM IST
ಕಾನ್ಪುರ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿರಿಯ ಆಲ್ ರೌಂಡರ್, ಮಾಜಿ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಅವರು ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮುಂದಿನ ತಿಂಗಳು ಮಿರ್ಪುರ್ ದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯವೇ ತನ್ನ ಟೆಸ್ಟ್ ಪಂದ್ಯವಾಗಿರಲಿದೆ ಎಂದು ಶಕೀಬ್ ಅಲ್ ಹಸನ್ ಹೇಳಿದ್ದಾರೆ.
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ (Green Park Stadium) ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಟಿಯಲ್ಲಿ ಶಕೀಬ್ ತನ್ನ ನಿರ್ಧಾರ ಪ್ರಕಟಿಸಿದರು.
“ಹೊಸ ಆಟಗಾರರನ್ನು ಕರೆತರಲು ಇದು ಸೂಕ್ತ ಸಮಯ. ಟಿ20 ಪಂದ್ಯಗಳಿಗೂ ಇದೇ ಅನ್ವಯ. ನಾನು ಮುಖ್ಯ ಆಯ್ಕೆದಾರ ಮತ್ತು ಬಿಸಿಬಿ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಹೊಸ ಆಟಗಾರರು ತಂಡಕ್ಕೆ ಬರಲು ಇದು ಸರಿಯಾದ ಸಮಯ ಎಂದು ನಾವೆಲ್ಲರೂ ಭಾವಿಸಿದ್ದೇವೆ” ಎಂದು ಶಕೀಬ್ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ಟಿ20 ವಿಶ್ವಕಪ್ ನಲ್ಲಿ ಆಡಿರುವುದೇ ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ ಎಂದು ಶಕೀಬ್ ಹೇಳಿದರು. 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್ ನಿಂದಲೂ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.
2007 ರ ಉದ್ಘಾಟನಾ ಆವೃತ್ತಿಯ ನಂತರ ಪ್ರತಿ ಟಿ20 ವಿಶ್ವಕಪ್ ನಲ್ಲಿ ನಿರಂತರ ಆಡಿರುವ ಹೊಂದಿರುವ ಶಕೀಬ್, 129 ಟಿ20 ಪಂದ್ಯಗಳಲ್ಲಿ 121.18 ಸ್ಟ್ರೈಕ್ ರೇಟ್‌ನಲ್ಲಿ 2,551 ರನ್‌ಗಳನ್ನು ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅವರು 149 ವಿಕೆಟ್ ಗಳನ್ನು ಪಡೆದಿದ್ದಾರೆ.
ಢಾಕಾದ ಮಿರ್ಪುರದಲ್ಲಿರುವ ಐಕಾನಿಕ್ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರ ಮುಂದೆ ತನ್ನ ಅಂತಿಮ ಟೆಸ್ಟ್ ಪಂದ್ಯವನ್ನು ಆಡಲು ಶಕೀಬ್ ಆಶಿಸಿದ್ದಾರೆ. ಆದರೆ ಭದ್ರತಾ ಕಾರಣದಿಂದ ಅವರ ಆ ಆಸೆಯನ್ನು ಈಡೇರುವ ಸಾಧ್ಯತೆಯೂ ಕಡಿಮೆ ಎಂದು ಆಲ್‌ರೌಂಡರ್ ಬಹಿರಂಗಪಡಿಸಿದ್ದಾರೆ.
“ಮಿರ್ಪುರದಲ್ಲಿ ನನ್ನ ಕೊನೆಯ ಟೆಸ್ಟ್ ಆಡುವ ನನ್ನ ಆಸೆಯನ್ನು ನಾನು ವ್ಯಕ್ತಪಡಿಸಿದ್ದೇನೆ, ಅದು ಆಗದಿದ್ದರೆ, ಭಾರತದ ವಿರುದ್ಧದ ಎರಡನೇ ಟೆಸ್ಟ್ ನನ್ನ ಕೊನೆಯದು. ಬಾಂಗ್ಲಾದೇಶಕ್ಕೆ ಹಿಂತಿರುಗುವುದು ಸಮಸ್ಯೆಯಲ್ಲ, ಆದರೆ ನಾನು ಅಲ್ಲಿಗೆ ಹೋದ ನಂತರ ಬಾಂಗ್ಲಾದೇಶವನ್ನು ತೊರೆಯುವುದು ಅಪಾಯಕಾರಿ” ಎಂದು ಶಕಿಬ್ ಹೇಳಿದ್ದಾರೆ.
2007ರ ಮೇ ತಿಂಗಳಲ್ಲಿ ಚಟ್ಟೋಗ್ರಾಮ್ ನಲ್ಲಿ ಭಾರತದ ವಿರುದ್ಧ ಶಕೀಬ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಬಾಂಗ್ಲಾದೇಶದ ಪರ ಅವರು 70 ಟೆಸ್ಟ್ ಗಳನ್ನು ಆಡಿದ್ದು, ಅದರಲ್ಲಿ ಐದು ಶತಕಗಳು ಮತ್ತು 31 ಅರ್ಧ ಶತಕಗಳನ್ನು ಒಳಗೊಂಡಂತೆ 4,600 ರನ್ ಗಳಿಸಿದ್ದಾರೆ, ಬಾಂಗ್ಲಾದೇಶದ ಟೆಸ್ಟ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.