ಶಿಖರ್ ಧವನ್ ಗಾಯಾಳು ಭಾರತದ ಅಭಿಯಾನಕ್ಕೆ ಹಿನ್ನಡೆ
ಆಸೀಸ್ ಪಂದ್ಯದ ವೇಳೆ ಕೈಗೆ ಬಡಿದ ಕೋಲ್ಟರ್ ನೈಲ್ ಎಸೆತ
Team Udayavani, Jun 12, 2019, 5:00 AM IST
ನಾಟಿಂಗ್‌ಹ್ಯಾಮ್: ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಭಾರತದ ಎಡಗೈ ಆರಂಭಕಾರ ಶಿಖರ್ ಧವನ್ ಗಾಯಾಳಾಗಿದ್ದಾರೆ. ಅವರಿಗೆ ಕನಿಷ್ಠ 3 ವಾರಗಳ ವಿಶ್ರಾಂತಿ ಸೂಚಿಸಲಾಗಿದ್ದು, ಉಳಿದೆಲ್ಲ ಲೀಗ್ ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. ಇನ್‌ಫಾರ್ಮ್ ಆಟಗಾರನೊಬ್ಬ ಇಂಥದೊಂದು ಸಂಕಟಕ್ಕೆ ಸಿಲುಕಿರುವುದು ಭಾರತದ ವಿಶ್ವಕಪ್ ಅಭಿಯಾನಕ್ಕೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ದಿಲ್ಲಿಯ ಎಡಗೈ ಆಟಗಾರ ಶಿಖರ್ ಧವನ್ ಬದಲು ದಿಲ್ಲಿಯವರೇ ಆದ ಮತ್ತೋರ್ವ ಎಡಗೈ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ಬದಲಿ ಆಟಗಾರನನ್ನಾಗಿ ಆರಿಸಲಾಗುವುದು ಎಂದು ವರದಿಯಾಗಿದೆ.
ಪಂತ್ 48 ಗಂಟೆಗಳಲ್ಲಿ ತಂಡವನ್ನು ಕೂಡಿ ಕೊಳ್ಳಲಿದ್ದಾರೆ ಎಂದೂ ತಿಳಿದು ಬಂದಿದೆ. ಇಲ್ಲವಾದರೆ ಸದ್ಯ ಇಂಗ್ಲೆಂಡ್‌ನಲ್ಲೇ ಇರುವ ಶ್ರೇಯಸ್ ಅಯ್ಯರ್‌ಗೆ ಈ ಅವಕಾಶ ಲಭಿಸುವ ಸಾಧ್ಯತೆ ಇದೆ. ಆದರೆ ಯಾವುದೂ ಅಧಿಕೃತಗೊಂಡಿಲ್ಲ. ಬದಲಿ ಆಟಗಾರನನ್ನು ಆರಿಸುವುದರಿಂದ ನಾಕೌಟ್ ಹಂತದ ವೇಳೆ ಶಿಖರ್ ಧವನ್ ಮರಳಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವುದು ಅಸಾಧ್ಯ. ಒಮ್ಮೆ ವಿಶ್ವಕಪ್‌ನಿಂದ ಹೊರಬಿದ್ದ ಆಟಗಾರ ಪುನಃ ತಂಡವನ್ನು ಕೂಡಿಕೊಳ್ಳುವ ಹಾಗಿಲ್ಲ ಹಿಗಾಗಿ ಭಾರತದ ಬದಲಿ ಆಟಗಾರನ ಪ್ರಕ್ರಿಯೆ ವಿಳಂಬವಾಗಲೂಬಹುದು.
ಬ್ಯಾಟಿಂಗ್ ವೇಳೆ ಅವಘಡ
ಶಿಖರ್ ಧವನ್ ಆಸ್ಟ್ರೇಲಿಯ ವಿರುದ್ಧದ ಪಂದ್ಯದ ವೇಳೆಯೇ ಈ ಸಂಕಟಕ್ಕೆ ಸಿಲುಕಿದ್ದರು. ಬ್ಯಾಟಿಂಗ್ ನಡೆಸುತ್ತಿದ್ದಾಗ ನಥನ್ ಕೋಲ್ಟರ್ ನೈಲ್ ಅವರ ಎಸೆತವೊಂದು ಕೈಗೆ ಬಡಿದಾಗ ತೀವ್ರ ನೋವು ಕಾಣಿಸಿಕೊಂಡಿತ್ತು. ಈ ನೋವಿನಲ್ಲೇ ಅವರು ಆಟ ಮುಂದುವರಿಸಿದ್ದರು. ಅನಂತರ ಫೀಲ್ಡಿಂಗಿಗೆ ಇಳಿದಿರಲಿಲ್ಲ. ಇವರ ಬದಲು ರವೀಂದ್ರ ಜಡೇಜ ಪೂರ್ತಿ 50 ಓವರ್ ಕ್ಷೇತ್ರರಕ್ಷಣೆ ಮಾಡಿದ್ದರು.
ಮಂಗಳವಾರದ ವೈದ್ಯಕೀಯ ವರದಿ ಪ್ರಕಾರ ಶಿಖರ್‌ಧವನ್ ಅವರ ಬೆರಳಿನ ಮೂಳೆಯಲ್ಲಿ ಸೂಕ್ಷ್ಮ ಮುರಿತವೊಂದು ಕಾಣಿಸಿಕೊಂಡಿದೆ. ಇದು ಸರಿಹೋಗಲು ಕನಿಷ್ಠ 3 ವಾರವಾದರೂ ಬೇಕಿದೆ. ಹೀಗಾಗಿ ಧವನ್ ಅವರ ವಿಶ್ವಕಪ್ ಆಟ ಕೊನೆಗೊಂಡಿದೆ ಎಂದೇ ತಿಳಿಯಬೇಕಾಗುತ್ತದೆ.
ಸದ್ಯ ಶಿಖರ್ ಧವನ್ ಮತ್ತು ಫಿಸಿಯೋ ಪ್ಯಾಟ್ರಿಕ್ ಫರ್ಹಾತ್ ಲೀಡ್ಸ್‌ನಲ್ಲಿದ್ದು, ತಜ್ಞ ವೈದ್ಯರ ಸಂಪರ್ಕದಲ್ಲಿದ್ದಾರೆ. ವೈದ್ಯಕೀಯ ವರದಿ ಕೈಸೇರಿದ ಬಳಿಕ ಬಿಸಿಸಿಐ ಬದಲಿ ಆಟಗಾರನ ಪ್ರಕ್ರಿಯೆ ಆರಂಭಿಸಲಿದೆ. ಇದಕ್ಕೆ ವಿಶ್ವಕಪ್ ಕೂಟದ ತಾಂತ್ರಿಕ ಸಮಿತಿಯ ಒಪ್ಪಿಗೆಯ ಅಗತ್ಯವಿದೆ.
ಭಾರತದ ಮೀಸಲು ಆಟಗಾರರ ಯಾದಿಯಲ್ಲಿ ಪಂತ್ ಜತೆಗೆ ರಾಯುಡು ಕೂಡ ಇದ್ದಾರೆ. ವಿಶ್ವಕಪ್‌ಗಾಗಿ ಪಂತ್ ಅವರನ್ನು ಕೈಬಿಟ್ಟಾಗ ತೀವ್ರ ಟೀಕೆಗಳು ಎದುರಾಗಿದ್ದವು.
ರಾಹುಲ್ ಆರಂಭಕಾರ
ಶಿಖರ್ ಧವನ್ ಗೈರಲ್ಲಿ ರೋಹಿತ್ ಶರ್ಮ ಜತೆ ಸ್ಪೆಷಲಿಸ್ಟ್ ಓಪನರ್ ಆಗಿರುವ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆಯಲಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ಆಡಬಹುದು.
ಶಿಖರ್ ಧವನ್ ಸ್ಥಾನಕ್ಕೆ ಯಾರನ್ನು ಆರಿಸಬೇಕು ಎಂಬ ಕುರಿತು ಮಾಜಿ ಕ್ರಿಕೆಟಿಗರ ಚರ್ಚೆ ತೀವ್ರಗೊಂಡಿದೆ. ಸುನೀಲ್ ಗಾವಸ್ಕರ್ ಮತ್ತು ಕೆವಿನ್ ಪೀಟರ್‌ಸನ್ ಅವರು ರಿಷಭ್ ಪಂತ್ ಬಗ್ಗೆ ಒಲವು ತೋರಿಸಿದ್ದಾರೆ. ಆದರೆ ಗೌತಮ್ ಗಭೀರ್ ಅವರು ಅಂಬಾಟಿ ರಾಯುಡು ಅವರೇ ಸೂಕ್ತ ಎಂದಿದ್ದಾರೆ.
‘ರಿಷಭ್ ಪಂತ್ ಐಪಿಎಲ್ನಲ್ಲಿ ಸ್ಫೋಟಕ ಫಾರ್ಮ್ ಪ್ರದರ್ಶಿಸಿದ್ದರು. ಹೀಗಾಗಿ ಮೊದಲ ಆಯ್ಕೆಗೆ ಅರ್ಹರು. ಆದರೆ ಧವನ್ 18 ದಿನಗಳಲ್ಲಿ ಗುಣಮುಖರಾಗಲಿದ್ದಾರೆ ಎಂಬ ರೀತಿಯಲ್ಲಿ ವೈದ್ಯಕೀಯ ವರದಿ ಲಭಿಸಿದೆ. ಆಗ ಧವನ್ ಅವರೇ ಆಡುವುದನ್ನು ನಾನು ನಿರೀಕ್ಷಿಸಲಿದ್ದೇನೆ’ ಎಂದು ಗಾವಸ್ಕರ್ ಹೇಳಿದ್ದಾರೆ.
‘ಶಿಖರ್ ಬದಲು ಪಂತ್ ಸೂಕ್ತ ಆಯ್ಕೆ ಆಗಬಲ್ಲರು. ರಾಹುಲ್ ಅವರನ್ನು ಆರಂಭಿಕನನ್ನಾಗಿ ಇಳಿಸಿ ಪಂತ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಬೇಕು’ ಎಂಬುದು ಕೆವಿನ್ ಪೀಟರ್‌ಸನ್ ಸಲಹೆ.
ಆದರೆ ಗೌತಮ್ ಗಂಭೀರ್ ಅವರದು ಬೇರೆಯೇ ತರ್ಕ. ‘ಧವನ್ ಜಾಗಕ್ಕೆ ಅಂಬಾಟಿ ರಾಯುಡು ಆಯ್ಕೆಯಾಗದೇ ಹೋದಲ್ಲಿ ಅವರ ಕ್ರಿಕೆಟ್ ಬದುಕೇ ಕೊನೆಗೊಳ್ಳುವ ಸಾಧ್ಯತೆ ಇದೆ. ರಾಯುಡು ಏಕದಿನದಲ್ಲಿ 45ರ ಬ್ಯಾಟಿಂಗ್ ಸರಾಸರಿ ಹೊಂದಿಯೂ ವಿಶ್ವಕಪ್ ಆಡಲಿಲ್ಲವೆಂದರೆ ಅದು ನಿಜಕ್ಕೂ ಬೇಸರದ ಸಂಗತಿ. ಆಗ ಅಂಬಾಟಿ ಕೇವಲ ಐಪಿಎಲ್ನಲ್ಲಷ್ಟೇ ಆಡುತ್ತ ಉಳಿಯಬೇಕಾಗುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.