ಐಪಿಎಲ್ 2018: ಅಪ್ಪಂದಿರು ಗೆದ್ದು ಬೀಗಿದರು…
Team Udayavani, May 29, 2018, 6:00 AM IST
ಮುಂಬಯಿ: ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದ ಚೆನ್ನೈ ಸೂಪರ್ ಕಿಂಗ್ಸ್ 3ನೇ ಪ್ರಶಸ್ತಿ ಎತ್ತುವುದರೊಂದಿಗೆ 2018ರ “ಫ್ಯಾಂಟಸಿ ಕ್ರಿಕೆಟ್’ಗೆ ತೆರೆ ಬಿದ್ದಿದೆ. “ಡ್ಯಾಡ್ಸ್ ಟೀಮ್’ (ಅಪ್ಪಂದಿರ ತಂಡ) ಎಂದೇ ಕರೆಸಿಕೊಂಡಿದ್ದ ಧೋನಿ ಪಡೆ ತಮ್ಮದು “ಯೆಲ್ಲೋ ಆರ್ಮಿ’ (ಹಳದಿ ಸೈನ್ಯ) ಕೂಡ ಹೌದೆಂದು ಸಾಬೀತುಪಡಿಸುವ ಮೂಲಕ ಇತಿ ಹಾಸವನ್ನೇ ನಿರ್ಮಿಸಿದ್ದಾರೆ.
ನಿಷೇಧದ ಬಳಿಕವೂ ಚೆನ್ನೈ ತಂಡ ಅದೇ ಹಳೆಯ ಆಟಗಾರರನ್ನೇ ನೆಚ್ಚಿಕೊಂಡಿದ್ದಕ್ಕೆ ವ್ಯಾಪಕ ಟೀಕೆ ಎದುರಾಗಿತ್ತು. ಸ್ವತಃ ಚೆನ್ನೈ ಅಭಿಮಾನಿಗಳೂ ಈ ಬಗ್ಗೆ ಅಪಸ್ವರ ಎತ್ತಿದ್ದರು. ತಂಡದ ಬಹುತೇಕ ಸದಸ್ಯರೆಲ್ಲ ಅಪ್ಪಂದಿರಾಗಿದ್ದಾರೆ, ಇವರೆಂಥ ಟಿ20 ಆಡುತ್ತಾರೆ, ಇದು ಯುವಕರ ಆಟ… ಎಂಬ ತರ್ಕಗಳಿಗೆ ಇದು ಹಾದಿ ಮಾಡಿಕೊಟ್ಟಿತ್ತು. ಆದರೀಗ ಚೆನ್ನೈ ಅಭಿಮಾನಿಗಳಷ್ಟು ಸಂಭ್ರಮಿಸುವವರು ಬೇರೆ ಯಾರೂ ಇಲ್ಲ!
ನಾಯಕ ಧೋನಿ ನಿವೃತ್ತಿಗೆ ಹತ್ತಿರವಿರುವ ಆಟಗಾರ, ಶೇನ್ ವಾಟ್ಸನ್ ಎಂದೋ ನಿವೃತ್ತಿ ಹೇಳಿಯಾಗಿದೆ, ಅಂಬಾಟಿ ರಾಯುಡು 33ರ ಹರೆಯದಲ್ಲಿದ್ದಾರೆ, ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳುವುದೊಂದು ಬಾಕಿ, ಡ್ವೇನ್ ಬ್ರಾವೊ ವೆಸ್ಟ್ ಇಂಡೀಸ್ ಕ್ರಿಕೆಟಿಗೇ ಬೇಡವಾಗಿದ್ದಾರೆ, ಮುರಳಿ ವಿಜಯ್ ಟೆಸ್ಟ್ ಪಂದ್ಯಕ್ಕಷ್ಟೇ ಫಿಟ್, ರವೀಂದ್ರ ಜಡೇಜ-ಸುರೇಶ್ ರೈನಾ ಅವರನ್ನು ಟೀಮ್ ಇಂಡಿಯಾ ಕೈಹಿಡಿಯುವುದೇ ಕಷ್ಟ ಎಂಬ ಸ್ಥಿತಿ… ಹೀಗೆ ಸಾಗಿತ್ತು ಚೆನ್ನೈ ತಂಡವನ್ನು ಅವಲೋಕಿಸುವ ರೀತಿ. ಆದರೆ ಮದುವೆಯಾಗಿ, ಮಕ್ಕಳಾಗಿರುವ ಆಟಗಾರರನ್ನೇ ಅಧಿಕ ಸಂಖ್ಯೆಯಲ್ಲಿ ಹೊಂದಿರುವ ಈ ತಂಡವೀಗ ಐಪಿಎಲ್ ಚಾಂಪಿಯನ್ ಆಗಿರುವುದೆಂದರೆ ಏನರ್ಥ?! ಟಿ20 ಕ್ರಿಕೆಟ್ ಕೇವಲ “ಯುವಕರ ಆಟ’ ಎಂಬ ವ್ಯಾಖ್ಯಾನವನ್ನೇ ಬದಲಿಸಿದ ಹೆಗ್ಗಳಿಕೆ ಚೆನ್ನೈ ತಂಡದ್ದು. ಇದಕ್ಕಾಗಿ ಧೋನಿ ಪಡೆಗೊಂದು ಹ್ಯಾಟ್ಸ್ ಅಪ್ ಹೇಳಲೇ ಬೇಕು!
“ವಯಸ್ಸು ಬ್ಯಾಟಿಂಗ್ ಜತೆಗೆ ಫೀಲ್ಡಿಂಗ್ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಒಪ್ಪಲೇ ಬೇಕು. ಆದರೆ ನಾಯಕನಾದವನು ಆಟಗಾರರನ್ನು ಹೇಗೆ ಬಳಸಿಕೊಳ್ಳು ತ್ತಾನೆ ಎಂಬುದು ಮುಖ್ಯ. ಉದಾಹರಣೆಗೆ, ಒಂದು ರನ್ ತಡೆಯುವಂತೆ ವಾಟ್ಸನ್ ಅವರಿಗೆ ಪ್ರೇರೇಪಿಸಿದರೆ ಅವರು ಬಿದ್ದು ಗಾಯಾಳಾಗಿ ಮುಂದಿನ ಪಂದ್ಯಕ್ಕೆ ಲಭಿಸದೇ ಹೋಗುವ ಸಾಧ್ಯತೆ ಇರುತ್ತದೆ. ಆದರೆ ಆಟಗಾರರು ತಮ್ಮ ಬಲಹೀನತೆಗಳನ್ನು ಒಪ್ಪಿ ಕೊಳ್ಳಲೇಬೇಕು…’ ಎಂದರು.
“ಇದು ಅಮೋಘ ಬ್ಯಾಟಿಂಗ್ ಪರಾಕ್ರಮಕ್ಕೆ ಸಂದ ಗೆಲುವು. ಭುವನೇಶ್ವರ್, ರಶೀದ್ ಅವರಂಥ ಘಾತಕ ಬೌಲರ್‌ಗಳನ್ನು ಹೊಂದಿದ್ದ ತಂಡದ ಮೇಲೆ ನಾವು ಸವಾರಿ ಮಾಡಿದೆವು. ವಾಟ್ಸನ್‌ಗೆ ಸ್ಪೆಷಲ್ ಥ್ಯಾಂಕ್ಸ್. ವಿಜಯೋತ್ಸವದ ಬಗ್ಗೆ ನಿರ್ಧರಿಸಿಲ್ಲ. ಚೆನ್ನೈಗೆ ತೆರಳಿ ಅಲ್ಲಿ ಫ್ರಾಂಚೈಸಿಗೆ ಹತ್ತಿರವಾದವರನ್ನು, ಅಭಿಮಾನಿಗಳನ್ನು ಭೇಟಿಯಾದ ಬಳಿಕ ಮುಂದಿನ ನಿರ್ಧಾರ…’ ಎಂದು ಧೋನಿ ಹೇಳಿದರು.
ವಯಸ್ಸು ಅಪ್ರಸ್ತುತ…
“ನಮ್ಮ ತಂಡದವರ ವಯಸ್ಸು ಮತ್ತು ಫಿಟ್‌ನೆಸ್ ಬಗ್ಗೆ ಸಾಕಷ್ಟು ಟೀಕೆ, ಅಪಸ್ವರಗಳು ಕೇಳಿಬಂದಿದ್ದವು. ಆದರೆ ನಾವ್ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಯಾವ ಆಟಗಾರ ಯಾವ ಇಸವಿಯಲ್ಲಿ ಜನಿಸಿದ, ಅವನು 19-20ರ ಆಸುಪಾಸಿನಲ್ಲಿದ್ದಾನೋ ಎಂಬುದು ನಮ್ಮ ಪಾಲಿಗೆ ಅಪ್ರಸ್ತುತವಾಗಿತ್ತು. ಇದು ವಯಸ್ಸನ್ನೂ ಮೀರಿದ ಸಾಧನೆ ಎಂಬುದೀಗ ಸಾಬೀತಾಗಿದೆ’ ಎಂದು ಹೇಳುವ ಮೂಲಕ ಧೋನಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಧೋನಿ ಮತ್ತು ಏಳರ ನಂಟು
ಅಂಕೆ-ಸಂಖ್ಯೆಯಲ್ಲೂ ತನಗೆ ನಂಬಿಕೆ ಇಲ್ಲ ಎಂಬುದಾಗಿ ಧೋನಿ ಈ ಸಂದರ್ಭದಲ್ಲಿ ಹೇಳಿದರು. ಇದಕ್ಕೊಂದು ಕಾರಣವಿದೆ… ಧೋನಿಗೆ “7’ನೇ ನಂಬರ್ ಅದೃಷ್ಟ ಸೂಚಕವೇ ಎಂಬ ಪ್ರಶ್ನೆ ಹಾಗೂ ಕುತೂಹಲವೊಂದು ಗೆಲುವಿನ ಬಳಿಕ ಗರಿಗೆದರಿತ್ತು. ಧೋನಿಯ ಜೆರ್ಸಿ ನಂಬರ್ 7, ಚೆನ್ನೈ ಪಾಲಿಗೆ ಇದು 7ನೇ ಫೈನಲ್, ಧೋನಿ ಜನ್ಮದಿನ ಕೂಡ 7ನೇ ತಿಂಗಳ 7ನೇ ದಿನದಂದು ಬರುತ್ತದೆ, ಫೈನಲ್ ಪಂದ್ಯದ ದಿನಾಂಕ 27… ಹೀಗೆ ಧೋನಿ ಹಾಗೂ ಏಳರ ನಂಟು ಮುಂದುವರಿಯುತ್ತದೆ. “ನನಗೆ ಇದರಲ್ಲೆಲ್ಲ ನಂಬಿಕೆ ಇಲ್ಲ. ನನ್ನ ಪಾಲಿಗೆ ಪ್ರತಿಯೊಂದು ಗೆಲುವು ಕೂಡ ಸ್ಪೆಷಲ್. ಈ ಗೆಲುವನ್ನು ನಾನು ಬೇರೆ ಯಾವುದೇ ಗೆಲುವಿನೊಂದಿಗೆ ಹೋಲಿಸು ವುದಿಲ್ಲ. ಜನರೆಲ್ಲ ಅಂಕೆ-ಸಂಖ್ಯೆ, ಅಂಕಿಅಂಶದ ಬಗ್ಗೆ ಸಾಕಷ್ಟು ಹೇಳುತ್ತಾರೆ. ಆದರೆ ಸಾಧನೆಯಷ್ಟೇ ಮುಖ್ಯ’ ಎಂದು ಧೋನಿ ಅಭಿಪ್ರಾಯಪಟ್ಟರು.
ಆರ್‌ಸಿಬಿ ಟ್ವೀಟರ್: ಎಬಿಡಿ ಅನ್‌ಫಾಲೋ
ಬೆಂಗಳೂರು, ಮೇ 28: ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ ಬೆನ್ನಲ್ಲೇ ಮತ್ತೂಂದು ಶಾಕ್ ನೀಡಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಆಡುವುದಾಗಿ ಟ್ವಿಟರ್‌ನಲ್ಲಿ ಹೇಳಿದ್ದ ಎಬಿಡಿ ಮುಂದಿನ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವುದೇ ಅನುಮಾನ ಎನ್ನುವ ಸುಳಿವೊಂದನ್ನು ನೀಡಿದ್ದಾರೆ!
ಹೌದು, ಸ್ವತಃ ಎಬಿಡಿ ಟ್ವಿಟರ್‌ನಲ್ಲಿ ಆರ್‌ಸಿಬಿ ಫ್ರಾಂಚೈಸಿಯ ಅಧಿಕೃತ ಟ್ವೀಟರ್ ಖಾತೆಯನ್ನು ಅನ್‌ಫಾಲೋ ಮಾಡಿದ್ದಾರೆ. ಇದರಿಂದ ಮುಂದೆ ಆರ್‌ಸಿಬಿ ಪರ ಆಡುವುದು ಅನುಮಾನ ಎನ್ನಲಾಗಿದೆ. ಇದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸುವುದರಲ್ಲಿ ಅನುಮಾನವಿಲ್ಲ. ಅವರು ಕೇವಲ ದೇಶಿ ಲೀಗ್‌ನಲ್ಲಿ ಆಡುವುದಾಗಿ ಹೇಳಿದ್ದರು. ಆಗಲೇ ಎಬಿಡಿ ಆರ್‌ಸಿಬಿಯಲ್ಲಿ ಮುಂದುವರಿಯುವುದು ಅನುಮಾನವಿತ್ತು. ಇದೀಗ ನಿಜ ವಾಗುವ ಸಾಧ್ಯತೆ ದಟ್ಟವಾಗಿದೆ.
ಐಪಿಎಲ್ ಫೈನಲ್‌ನಲ್ಲಿ 2 ಮೇಡನ್ ಓವರ್!
ರವಿವಾರದ ಚೆನ್ನೈ-ಹೈದರಾಬಾದ್ ನಡುವಿನ ಪಂದ್ಯ ವಿಶಿಷ್ಟ ದಾಖಲೆಯೊಂದಕ್ಕೆ ಸಾಕ್ಷಿಯಾಯಿತು. ಐಪಿಎಲ್ ಫೈನಲ್‌ನಲ್ಲಿ ಮೊದಲ ಬಾರಿಗೆ ಮೇಡನ್ ಓವರ್ ದಾಖಲಾಯಿತು. ಅದೂ ಒಂದಲ್ಲ, 2 ಮೇಡನ್ ಓವರ್!
ಚೆನ್ನೈನ ಲುಂಗಿ ಎನ್‌ಗಿಡಿ ಮತ್ತು ಹೈದರಾಬಾದ್‌ನ ಭುವನೇಶ್ವರ್ ಕುಮಾರ್ ಮೇಡನ್ ಓವರ್ ಎಸೆದ ಬೌಲರ್‌ಗಳು. ಮೊದಲ ಐಪಿಎಲ್ ಫೈನಲ್ ಆಡುತ್ತಿರುವ ಎನ್‌ಗಿಡಿ ಪ್ರಶಸ್ತಿ ಸುತ್ತಿನಲ್ಲಿ ಮೊದಲ ಮೇಡನ್ ಓವರ್ ಎಸೆದ ದಾಖಲೆ ಸ್ಥಾಪಿಸಿದರು. ಬಳಿಕ ಹೈದರಾಬಾದ್ ಬೌಲಿಂಗ್ ವೇಳೆ ಭುವನೇಶ್ವರ್ ಅವರಿಂದಲೂ ಮೇಡನ್ ಓವರ್ ದಾಖಲಾಯಿತು. ಈ ವೇಳೆ ರನ್ ಗಳಿಸಲು ಪರದಾಡಿದವರು ಕೇನ್ ವಿಲಿಯಮ್ಸನ್ ಮತ್ತು ಶೇನ್ ವಾಟ್ಸನ್. ಆದರೆ ಬಳಿಕ ವಾಟ್ಸನ್ ಇದಕ್ಕೆ ಬಡ್ಡಿ ಸಮೇತ ಹೇಗೆ ಉತ್ತರಿಸಿದರು ಎಂಬುದು ಈಗ ಇತಿಹಾಸ!
ಸ್ಪೆಷಲ್ ಸೀಸನ್: ಶೇನ್ ವಾಟ್ಸನ್
ರವಿವಾರ ರಾತ್ರಿ ವಾಂಖೇಡೆ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಸಾರ್ವಭೌಮತ್ವ ವೊಂದಕ್ಕೆ ಸಾಕ್ಷಿಯಾದ ಶೇನ್ ವಾಟ್ಸನ್ “ಇದೊಂದು ಸ್ಪೆಷಲ್ ಸೀಸನ್’ ಎಂಬುದಾಗಿ 2018ರ ಐಪಿಎಲ್ ಕೂಟವನ್ನು ಬಣ್ಣಿಸಿದ್ದಾರೆ. ಮೊದಲ ಸಲ ಚೆನ್ನೈ ತಂಡದ ಪರ ಆಡಿದ ವಾಟ್ಸನ್ 57 ಎಸೆತಗಳಲ್ಲಿ ಅಜೇಯ 117 ರನ್ ಬಾರಿಸಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದರು.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ನನ್ನ ಪಾಲಿನ ಸ್ಪೆಷಲ್ ಐಪಿಎಲ್ ಸೀಸನ್. ಕಳೆದ ವರ್ಷ ನನ್ನ ಹಾಗೂ ಆರ್‌ಸಿಬಿ ನಂಟು ಮುಗಿದಿತ್ತು. ಇದಕ್ಕೂ ಮುನ್ನ ರಾಜಸ್ಥಾನ್ ಪರ ಆಡಿದ್ದೆ. ಚೆನ್ನೈಯನ್ನು ಪ್ರತಿನಿಧಿಸುತ್ತಿರುವುದು ಇದೇ ಮೊದಲು. ತಂಡದ ಗೆಲುವಿನಲ್ಲಿ ನನ್ನ ಪಾತ್ರವೂ ಇರುವುದರಿಂದ ಬಹಳ ಸಂತೋಷವಾಗುತ್ತಿದೆ’ ಎಂದು ವಾಟ್ಸನ್ ಹೇಳಿದರು.
ಖಾತೆ ತೆರೆಯಲು 11 ಎಸೆತ ತೆಗೆದುಕೊಂಡ ಬಳಿಕ ಹೈದರಾಬಾದ್ ಬೌಲರ್‌ಗಳ ಮೇಲೆರಗಿ ಹೋದ ವಾಟ್ಸನ್, ಮ್ಯಾಚ್ ವಿನ್ನಿಂಗ್ ಸೆಂಚುರಿ ಹೊಡೆದದ್ದು ಈಗ ಇತಿಹಾಸ. “ಆ 10 ಎಸೆತಗಳಲ್ಲಿ ರನ್ ಗಳಿಸದೇ ಹೋದಾಗ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವುದು ನನ್ನ ಯೋಜನೆಯಾಗಿತ್ತು. ಕನಿಷ್ಠ ಎಸೆತಕ್ಕೊಂದು ರನ್ ಗಳಿಸಬೇಕಿತ್ತು. ಭುವಿ ಹೊಸ ಚೆಂಡಿನಲ್ಲಿ ಘಾತಕ ದಾಳಿ ಸಂಘಟಿಸಿದ್ದರು’ ಎಂದು ವಾಟ್ಸನ್ ನೆನಪಿಸಿಕೊಂಡರು.
ಫೈನಲ್ ಪಂದ್ಯಕ್ಕಾಗಿ ಶೇನ್ ವಾಟ್ಸನ್ ಸಂಪೂರ್ಣ ಫಿಟ್‌ನೆಸ್ ಹೊಂದಿರಲಿಲ್ಲ. ಕಳೆದ ಕೆಲವು ಪಂದ್ಯಗಳಲ್ಲಿ ಅವರು ಬೌಲಿಂಗ್ ನಡೆಸಿರಲಿಲ್ಲ. ಪ್ಲೇ-ಆಫ್ ಪಂದ್ಯಗಳಿ ಗಾಗಿ ಕೊನೆಯ ಲೀಗ್ ಪಂದ್ಯದ ವೇಳೆ ವಿಶ್ರಾಂತಿ ನೀಡಲಾಗಿತ್ತು. “ಮುಂದಿನ 3-4 ತಿಂಗಳು ನಾನು ಕ್ರಿಕೆಟ್‌ನಿಂದ ದೂರ ಇರುತ್ತೇನೆ. ಪರಿಪೂರ್ಣ ಫಿಟ್‌ನೆಸ್ ಸಾಧಿಸಲು ಇದು ನೆರವಾಗಲಿದೆ. ಅವಕಾಶ ನೀಡಿದ ಫ್ಲೆಮಿಂಗ್ ಹಾಗೂ ಧೋನಿ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳು’ ಎಂದು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿರುವ ವಾಟ್ಸನ್ ಹೇಳಿದರು.
ಒಂದಿಷ್ಟು ಐಪಿಎಲ್ ಇಲೆವೆನ್ ತಂಡಗಳು
ಐಪಿಎಲ್‌ನಲ್ಲಿ ನಾನಾ ರೀತಿಯ “ಹನ್ನೊಂದರ ಬಳಗ’ವನ್ನು ಪ್ರಕಟಿಸುವುದೊಂದು ವಾಡಿಕೆ. ಸಾಮಾನ್ಯವಾಗಿ ಸಾಧಕರ ಇಲೆವೆನ್‌ಗೆ ಹೆಚ್ಚಿನ ಪ್ರಾಶಸ್ತ್ಯ ಲಭಿಸುತ್ತದೆ. ಇಲ್ಲಿ ಕೆಲವು ವಿಶಿಷ್ಟ ತಂಡಗಳನ್ನು ರಚಿಸಲಾಗಿದೆ.
ವಾಂಖೇಡೆ: ಚೆನ್ನೈಗೆ ಅದೃಷ್ಟ ಲಕ್ಷ್ಮೀ
ಐಪಿಎಲ್ ಚಾಂಪಿಯನ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಆವೃತ್ತಿಯ ಕೂಟದಲ್ಲಿ ಮುಂಬಯಿಯ ವಾಂಖೇಡೆ ಕ್ರೀಡಾಂಗಣ ಅದೃಷ್ಟ ಲಕ್ಷ್ಮೀಯಾಗಿ ಪರಿಣಮಿಸಿದೆ. ಲೀಗ್‌ನ 2 ಪಂದ್ಯ ಹಾಗೂ ಫೈನಲ್ ಸೇರಿದಂತೆ ಒಟ್ಟು 3 ಪಂದ್ಯಗಳನ್ನು ವಾಂಖೇಡೆ ಕ್ರೀಡಾಂಗಣದಲ್ಲಿ ಆಡಿದ ಚೆನ್ನೈ ಇವೆಲ್ಲವನ್ನೂ ಭರ್ಜರಿಯಾಗಿ ಗೆದ್ದಿತು. ಕ್ರಮವಾಗಿ ಮುಂಬೈ ಇಂಡಿಯನ್ಸ್ ಹಾಗೂ ಕ್ವಾಲಿಫೈಯರ್ 1ರಲ್ಲಿ ಹೈದರಾಬಾದ್ ತಂಡವನ್ನು ಮಣಿಸಿತ್ತು. ಫೈನಲ್‌ನಲ್ಲಿ ಪುನಃ ಹೈದರಾಬಾದ್ ಮೇಲೆ ಸವಾರಿ ಮಾಡಿ ಟ್ರೋಫಿ ಎತ್ತಿ ಹಿಡಿಯಿತು.
ಆಡದವರ ಇಲೆವೆನ್
ಇಲ್ಲೊಂದು ವಿಚಿತ್ರ “ಇಲೆವೆನ್’ ತಂಡವಿದೆ. ಇದು ಈ ಬಾರಿಯ ಐಪಿಎಲ್‌ನಲ್ಲಿ ಆಡದವರ ಬಳಗ! ತಂಡದಲ್ಲಿದ್ದೂ ಒಂದೇ ಒಂದು ಪಂದ್ಯವನ್ನಾಡದ ಆಟಗಾರರ ತಂಡವೊಂದನ್ನು ರಚಿಸಿದರೆ ಹೇಗಿರಬಹುದು? ಇಂಥದೊಂದು ಕುತೂಹಲವನ್ನು ತಣಿಸುವ ಪ್ರಯತ್ನ ಮಾಡಲಾಗಿದೆ.
ಆಡದವರ ತಂಡ: ಮನೋಜ್ ಕಾರ್ಲಾ (ಡೆಲ್ಲಿ), ಕ್ಯಾಮರಾನ್ ಡೆಲ್‌ಪೋರ್ಟ್ (ಕೆಕೆಆರ್), ಸೌರಭ್ ತಿವಾರಿ (ಮುಂಬೈ), ಇಶಾಂತ್ ಜಗ್ಗಿ (ಕೆಕೆಆರ್), ಗುರುಕೀರತ್ ಸಿಂಗ್ ಮಾನ್ (ಡೆಲ್ಲಿ), ಜಯಂತ್ ಯಾದವ್ (ಡೆಲ್ಲಿ), ಬೆನ್ ಡ್ವಾಶುìಯಿಸ್ (ಪಂಜಾಬ್), ಅನುಕೂಲ್ ರಾಯ್ (ರಾಜಸ್ಥಾನ್), ದುಷ್ಮಂತ ಚಮೀರ (ರಾಜಸ್ಥಾನ್), ಆ್ಯಡಂ ಮಿಲೆ° (ಮುಂಬೈ), ಅನಿಕೇತ್ ಚೌಧರಿ (ಆರ್‌ಸಿಬಿ).
ಹರ್ಷ ಭೋಗ್ಲೆ ಇಲೆವೆನ್
ಖ್ಯಾತ ಕ್ರಿಕೆಟ್ ತಜ್ಞ ಹರ್ಷ ಭೋಗ್ಲೆ ಅವರು ಈ ಬಾರಿಯ ಐಪಿಎಲ್ ಸಾಧಕರ ಹನ್ನೊಂದರ ಬಳಗವೊಂದನ್ನು ಪ್ರಕಟಿಸಿದ್ದಾರೆ.
ಹರ್ಷ ಭೋಗ್ಲೆ ತಂಡ: ಸುನೀಲ್ ನಾರಾಯಣ್, ಕೆ.ಎಲ್. ರಾಹುಲ್, ಕೇನ್ ವಿಲಿಯಮ್ಸನ್, ರಿಷಬ್ ಪಂತ್, ಮಹೇಂದ್ರ ಸಿಂಗ್ ಧೋನಿ (ನಾಯಕ), ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ರಶೀದ್ ಖಾನ್, ಸಿದ್ಧಾರ್ಥ್ ಕೌಲ್, ಉಮೇಶ್ ಯಾದವ್, ಜಸ್‌ಪ್ರೀತ್ ಬುಮ್ರಾ.
ಓವರ್‌ಸೀಸ್ ಇಲೆವೆನ್
ಈ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನವಿತ್ತ ವಿದೇಶಿ ಕ್ರಿಕೆಟಿಗರ ತಂಡ. ಆರಂಭದಲ್ಲಷ್ಟೇ ಮಿಂಚಿದ ಕ್ರಿಸ್ ಗೇಲ್, ಅಷ್ಟೇನೂ ಪರಿಣಾಮ ಬೀರದ ಶಕಿಬ್ ಅಲ್ ಹಸನ್ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಓವರ್‌ಸೀಸ್ ಇಲೆವೆನ್: ಜಾಸ್ ಬಟ್ಲರ್, ಶೇನ್ ವಾಟ್ಸನ್, ಕೇನ್ ವಿಲಿಯಮ್ಸನ್ (ನಾಯಕ), ಎಬಿ ಡಿ ವಿಲಿಯರ್, ಮೊಯಿನ್ ಅಲಿ, ಡ್ವೇನ್ ಬ್ರಾವೊ, ರಶೀದ್ ಖಾನ್, ಸುನೀಲ್ ನಾರಾಯಣ್, ಆ್ಯಂಡ್ರೂé ಟೈ, ಮುಜೀಬ್ ಉರ್ ರೆಹಮಾನ್, ಲುಂಗಿ ಎನ್‌ಗಿಡಿ.
ಏಶ್ಯನ್ ಇಲೆವೆನ್
ಇದು ಈ ಐಪಿಎಲ್‌ನಲ್ಲಿ ಮಿಂಚಿದ ಏಶ್ಯದ ಕ್ರಿಕೆಟಿಗರನ್ನಷ್ಟೇ ಒಳಗೊಂಡಿರುವ ತಂಡ. ಸಹಜವಾಗಿಯೇ ಇದರಲ್ಲಿ ಭಾರತೀಯರದ್ದೇ ಸಿಂಹಪಾಲು. ಅಫ್ಘಾನ್, ಬಾಂಗ್ಲಾ, ನೇಪಾಲದ ಕ್ರಿಕೆಟಿಗರನ್ನೂ ಒಳಗೊಂಡಿದೆ.
ಏಶ್ಯನ್ ಇಲೆವೆನ್: ಕೆ.ಎಲ್. ರಾಹುಲ್, ಅಂಬಾಟಿ ರಾಯುಡು, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಮಹೇಂದ್ರ ಸಿಂಗ್ ಧೋನಿ (ನಾಯಕ), ಶಕಿಬ್ ಅಲ್ ಹಸನ್, ರಶೀದ್ ಖಾನ್, ಸಂದೀಪ್ ಲಮಿಚಾನೆ, ಮುಜೀಬ್ ಉರ್ ರೆಹಮಾನ್, ಉಮೇಶ್ ಯಾದವ್.
ಅನ್ ಕ್ಯಾಪ್ಡ್ ಇಲೆವೆನ್
ಇದು ಐಪಿಎಲ್‌ನಲ್ಲಿ ಮಿಂಚಿದ ಆದರೆ ಈ ವರೆಗೆ ಭಾರತ ತಂಡವನ್ನು ಪ್ರತಿನಿಧಿಸದ ಯುವ ಆಟಗಾರರ ತಂಡ. ಇವರಲ್ಲಿ ಅನೇಕರಿಗೆ ಟೀಮ್ ಇಂಡಿಯಾ ಬಾಗಿಲು ತೆರೆಯುವ ಸಾಧ್ಯತೆ ಇದೆ.
ಅನ್ ಕ್ಯಾಪ್ಡ್ ಇಲೆವೆನ್: ಪೃಥ್ವಿ ಶಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಕೃಣಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಮಾಯಾಂಕ್ ಮಾರ್ಕಂಡೆ, ಎಂ. ಪ್ರಸಿದ್ಧ್ ಕೃಷ್ಣ, ಸಿದ್ಧಾರ್ಥ್ ಕೌಲ್, ಅಂಕಿತ್ ರಜಪೂತ್.
ಎಕ್ಸ್‌ಟ್ರಾ ಇನ್ನಿಂಗ್ಸ್
ಚೆನ್ನೈ ಸೂಪರ್ ಕಿಂಗ್ಸ್ ಅತೀ ಹೆಚ್ಚು 3 ಸಲ ಐಪಿಎಲ್ ಪ್ರಶಸ್ತಿ ಗೆದ್ದ 2ನೇ ತಂಡವಾಗಿ ಮೂಡಿಬಂತು. ಮೊದಲ ತಂಡ ಮುಂಬೈ ಇಂಡಿಯನ್ಸ್.
ಚೆನ್ನೈ ಸೂಪರ್ ಕಿಂಗ್ಸ್ ಟಿ20 ಮಾದರಿಯ ಕೂಟದಲ್ಲಿ ಅತ್ಯಧಿಕ ಪ್ರಶಸ್ತಿ ಗೆದ್ದ ಯಾದಿಯಲ್ಲಿ 2ನೇ ಸ್ಥಾನ ಪಡೆಯಿತು (5 ಪ್ರಶಸ್ತಿ). ಸಿಯಾಲ್‌ಕೋಟ್ ಸ್ಟಾಲಿಯನ್ಸ್ 8 ಪ್ರಶಸ್ತಿ ಗೆದ್ದು ಅಗ್ರಸ್ಥಾನದಲ್ಲಿದೆ. ಸಿಯಾಲ್‌ಕೋಟ್ ಮತ್ತು ಚೆನ್ನೈ ಸರ್ವಾಧಿಕ 9 ಸಲ ಟಿ20 ಕೂಟದ ಫೈನಲ್ ತಲುಪಿದ ದಾಖಲೆ ಹೊಂದಿವೆ.
ಹೈದರಾಬಾದ್ ವಿರುದ್ಧ ಆಡಿದ ಈ ಋತುವಿನ ಎಲ್ಲ 4 ಪಂದ್ಯಗಳಲ್ಲೂ ಚೆನ್ನೈ ಜಯ ಸಾಧಿಸಿತು. ಐಪಿಎಲ್ ಋತುವೊಂದರಲ್ಲಿ ತಂಡವೊಂದು ನಿರ್ದಿಷ್ಟ ಎದುರಾಳಿ ವಿರುದ್ಧ 4 ಜಯ ಸಾಧಿಸಿದ ಪ್ರಥಮ ನಿದರ್ಶನ ಇದಾಗಿದೆ.
ಮಹೇಂದ್ರ ಸಿಂಗ್ ಧೋನಿ 3 ಐಪಿಎಲ್ ಪ್ರಶಸ್ತಿ ಜಯಿಸಿದ 2ನೇ ನಾಯಕನೆನಿಸಿದರು. ರೋಹಿತ್ ಶರ್ಮ ಮೊದಲಿಗ. ಗೌತಮ್ ಗಂಭೀರ್ ಅನಂತರದ ಸ್ಥಾನದಲ್ಲಿದ್ದಾರೆ (2 ಸಲ ಚಾಂಪಿಯನ್).
ಅಂಬಾಟಿ ರಾಯುಡು ಸರ್ವಾಧಿಕ 4 ಐಪಿಎಲ್ ಪ್ರಶಸ್ತಿ ವಿಜೇತ ತಂಡದ 2ನೇ ಸದಸ್ಯನೆನಿಸಿದರು. ಇದಕ್ಕೂ ಮುನ್ನ ಅವರು 3 ಸಲ ಮುಂಬೈ ತಂಡದ ಗೆಲುವಿನ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಯಾದಿಯಲ್ಲಿರುವ ಮತ್ತೂಬ್ಬ ಆಟಗಾರ ರೋಹಿತ್ ಶರ್ಮ.
ಶೇನ್ ವಾಟ್ಸನ್ ಐಪಿಎಲ್‌ನಲ್ಲಿ 4ನೇ, ಈ ಋತುವಿನಲ್ಲಿ 2ನೇ ಶತಕ ಹೊಡೆದರು. ಉಳಿದ ಸರ್ವಾಧಿಕ ಐಪಿಎಲ್ ಶತಕ ಸಾಧಕರೆಂದರೆ ಕ್ರಿಸ್ ಗೇಲ್ (6) ಮತ್ತು ವಿರಾಟ್ ಕೊಹ್ಲಿ (4).
ಧೋನಿ ಟಿ20 ನಾಯಕನಾಗಿ 7 ಫೈನಲ್‌ಗಳಲ್ಲಿ ಗೆದ್ದ ಸಾಧನೆಗೈದರು. ಇದು ಧೋನಿ ನಾಯಕತ್ವದ 12ನೇ ಟಿ20 ಫೈನಲ್. ಶೋಯಿಬ್ ಮಲಿಕ್ ಮತ್ತು ರೋಹಿತ್ ಶರ್ಮ 5 ಟಿ20 ಪ್ರಶಸ್ತಿ ಗೆದ್ದ ನಾಯಕರಾಗಿದ್ದಾರೆ.
ಡ್ವೇನ್ ಬ್ರಾವೊ 11 ಟಿ20 ಕೂಟದ ಫೈನಲ್ ಗೆದ್ದ ತಂಡದ ಸದಸ್ಯನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರಿಗಿಂತ ಮುಂದಿರುವ ಏಕೈಕ ಆಟಗಾರ ಕೈರನ್ ಪೊಲಾರ್ಡ್ (12 ಫೈನಲ್ ಗೆಲುವು). ಭಾರತೀಯ ದಾಖಲೆ ಸುರೇಶ್ ರೈನಾ, ರೋಹಿತ್ ಶರ್ಮ, ಎಂ.ಎಸ್. ಧೋನಿ ಮತ್ತು ಅಂಬಾಟಿ ರಾಯುಡು ಹೆಸರಲ್ಲಿದೆ (8).
ಶೇನ್ ವಾಟ್ಸನ್ ಐಪಿಎಲ್ ಫೈನಲ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಸ್ಥಾಪಿಸಿದರು (ಅಜೇಯ 117). 2014ರ ಕೆಕೆಆರ್ ಎದುರಿನ ಫೈನಲ್‌ನಲ್ಲಿ ಪಂಜಾಬ್ ತಂಡದ ವೃದ್ಧಿಮಾನ್ ಸಾಹಾ ಅಜೇಯ 115 ರನ್ ಹೊಡೆದ ದಾಖಲೆ ಪತನಗೊಂಡಿತು.
ಶೇನ್ ವಾಟ್ಸನ್ ಟಿ20 ಕೂಟದ ಫೈನಲ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಸಾಧಕರ ಯಾದಿಯಲ್ಲಿ 2ನೇ ಸ್ಥಾನ ಅಲಂಕರಿಸಿದರು (ಅಜೇಯ 117). ಕಳೆದ ವರ್ಷದ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಕ್ರಿಸ್ ಗೇಲ್ ಅಜೇಯ 126 ರನ್ ಅಬ್ಬರಿಸಿದ್ದು ದಾಖಲೆ.
ಧೋನಿ ಐಪಿಎಲ್‌ನಲ್ಲಿ ಅತ್ಯಧಿಕ ಸ್ಟಂಪಿಂಗ್ ಮಾಡಿದ ಕೀಪರ್ ಎನಿಸಿದರು (33). ರಾಬಿನ್ ಉತ್ತಪ್ಪ ಅವರ 32 ಸ್ಟಂಪಿಂಗ್ ದಾಖಲೆ ಪತನಗೊಂಡಿತು.
ಅಂಕಿ ಸಂಖ್ಯೆಯಲ್ಲಿ ಐಪಿಎಲ್-2018
ಅತ್ಯುತ್ತಮ ಬೌಲಿಂಗ್: ಪಂಜಾಬ್‌ನ ಅಂಕಿತ್ ರಜಪೂತ್ (ಹೈದರಾಬಾದ್ ವಿರುದ್ಧ 14ಕ್ಕೆ 5). ಈ ಐಪಿಎಲ್‌ನಲ್ಲಿ 5 ವಿಕೆಟ್ ಕಿತ್ತ ಏಕೈಕ ಬೌಲರ್.
ಅತ್ಯಧಿಕ ಅರ್ಧ ಶತಕ: ಕೇನ್ ವಿಲಿಯಮ್ಸನ್ (8).
ಶಿಖರ್ ಧವನ್ (12 ಕ್ಯಾಚ್). 10 ಪ್ಲಸ್ ಕ್ಯಾಚ್ ಪಡೆದ ಉಳಿದ ಫೀಲ್ಡರ್‌ಗಳೆಂದರೆ ರವೀಂದ್ರ ಜಡೇಜ (11) ಮತ್ತು ಕೆ. ಗೌತಮ್ (10).
ದಿನೇಶ್ ಕಾರ್ತಿಕ್ (18 ಕ್ಯಾಚ್/ಸ್ಟಂಪಿಂಗ್).
ಅತ್ಯಧಿಕ ವಿಕೆಟ್: ಆ್ಯಂಡ್ರೂé ಟೈ (14 ಪಂದ್ಯ, 24 ವಿಕೆಟ್). ಟೈ ಈ ಸಲ 3 ಸಲ 4 ವಿಕೆಟ್ ಉರುಳಿಸಿದ್ದು, ಇದು ಐಪಿಎಲ್ ದಾಖಲೆ.
ಅತ್ಯಧಿಕ ಸಿಕ್ಸರ್: ರಿಷಬ್ ಪಂತ್ (37).
ಅತ್ಯಧಿಕ ಬೌಂಡರಿ: ರಿಷಬ್ ಪಂತ್ (68).
ಅತೀ ಕಡಿಮೆ ಸ್ಕೋರ್: ಮುಂಬೈ ಇಂಡಿಯನ್ಸ್ (ಹೈದರಾಬಾದ್ ವಿರುದ್ಧ 87 ಆಲೌಟ್).
ಸರ್ವಾಧಿಕ ವೈಯಕ್ತಿಕ ಮೊತ್ತ: ರಿಷಬ್ ಪಂತ್ (ಹೈದರಾಬಾದ್ ವಿರುದ್ಧ ಅಜೇಯ 128 ರನ್).
ಅತ್ಯಧಿಕ ಡಾಟ್ ಬಾಲ್: ರಶೀದ್ ಖಾನ್ (167).
ಅತ್ಯಧಿಕ ಸ್ಕೋರ್: 6ಕ್ಕೆ 245-ಕೆಕೆಆರ್. ಎದುರಾಳಿ-ಪಂಜಾಬ್.
ಪಂದ್ಯವೊಂದರ ಅತ್ಯಧಿಕ ಮೊತ್ತ: 459 ರನ್ (ಕೆಕೆಆರ್-ಪಂಜಾಬ್ ನಡುವಿನ ಇಂದೋರ್ ಪಂದ್ಯ).
ಅತ್ಯಧಿಕ ರನ್: ಕೇನ್ ವಿಲಿಯಮ್ಸನ್ (735).
ಕೂಟದ ಸಿಕ್ಸರ್: 872 (ಇದು ಐಪಿಎಲ್ ಋತುವಿನ ದಾಖಲೆ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.