ಮುಂಬೈ ಮುಂದೆ ಉಳಿವಿನ ಚಿಂತೆ
Team Udayavani, May 4, 2018, 6:00 AM IST
ಇಂದೋರ್: ತೀವ್ರ ಸಂಕಟದಲ್ಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶುಕ್ರವಾರ ರಾತ್ರಿ ತನ್ನ ಮುಂದಿನ ಹಾದಿ ಏನು, ಎತ್ತ ಎಂಬುದನ್ನು ಬಹುತೇಕ ಅಂತಿಮಗೊಳಿಸಲಿದೆ. ಗೆದ್ದರೆ ಅದು ಈ ಐಪಿಎಲ್‌ನಲ್ಲಿ ಸ್ವಲ್ಪ ದೂರ ಮುಂದುವರಿಯಬಹುದು; ಸೋತರೆ ಕೂಟದಿಂದ ನಿರ್ಗಮಿಸುವ ಮೊದಲ ತಂಡ ಎಂಬ ಮುನ್ಸೂಚನೆಯೊಂದನ್ನು ರವಾನಿಸಲಿದೆ!
ಅಂದಹಾಗೆ ಶುಕ್ರವಾರ ರೋಹಿತ್ ಪಡೆ ತೃತೀಯ ಸ್ಥಾನಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೋರಾಡಲಿದೆ. ಇದು ಪಂಜಾಬ್‌ನ 2ನೇ ತವರಾದ ಇಂದೋರ್‌ನಲ್ಲಿ ನಡೆಯುವ ಪ್ರಸಕ್ತ ಋತುವಿನ ಮೊದಲ ಪಂದ್ಯ. ಪಂಜಾಬ್-ಮುಂಬೈ ನಡುವಿನ ಮೊದಲ ಲೀಗ್ ಪಂದ್ಯವೂ ಹೌದು.
ಪ್ಲೇ-ಆಫ್ ಪ್ರವೇಶಿಸಿದರೆ ಪವಾಡ!
3 ಬಾರಿಯ ಐಪಿಎಲ್ ಚಾಂಪಿಯನ್ ಎಂಬ ಖ್ಯಾತಿಯ ಮುಂಬೈ ಇಂಡಿಯನ್ಸ್ ಈ ಬಾರಿ ಏಕೋ ಬಹಳ ಮಂಕಾಗಿದೆ. ಆಡಿದ 8 ಪಂದ್ಯಗಳಲ್ಲಿ ಕೇವಲ ಎರಡನ್ನಷ್ಟೇ ಗೆದ್ದು ಅಂತಿಮ ಸ್ಥಾನಕ್ಕೆ ಕುಸಿದಿದೆ. ಪ್ಲೇ-ಆಫ್ ತಲುಪಬೇಕಾದರೆ ಕನಿಷ್ಠ 7 ಗೆಲುವು (14 ಅಂಕ) ಅಗತ್ಯ ಎಂಬುದೊಂದು ಲೆಕ್ಕಾಚಾರ. ಮುಂಬೈ ಇನ್ನೂ 6 ಪಂದ್ಯಗಳನ್ನು ಆಡಬೇಕಿರುವುದರಿಂದ ಈ ಗುರಿ ತಲುಪಲು ಸಾಧ್ಯವಿದೆ. ಆದರೆ ಈಗಿನ ತೀವ್ರ ಒತ್ತಡದ ಸ್ಥಿತಿಯಲ್ಲಿ ಸತತ ಗೆಲುವನ್ನು ಕಾಣುತ್ತ ಹೋಗುವುದು ಸುಲಭವಲ್ಲ. ಅಕಸ್ಮಾತ್ ಇದನ್ನು ಸಾಧಿಸಿದರೆ ಇದೊಂದು ಪವಾಡವಾಗಲಿದೆ. ಇದಕ್ಕೆ ಶುಕ್ರವಾರದಿಂದಲೇ ಗೆಲುವಿನ ಆಭಿಯಾನ ಆರಂಭಿಸುವುದು ಅಗತ್ಯ.
ಪಂಜಾಬ್ ಫೇವರಿಟ್, ಆದರೆ…
ಅನುಮಾನವೇ ಇಲ್ಲ, ಈ ಮುಖಾಮುಖೀಯಲ್ಲಿ ಪಂಜಾಬ್ ತಂಡವೇ ಫೇವರಿಟ್. ಅಲ್ಲದೇ ಒಂದು ವಾರದ ಸುದೀರ್ಘ ವಿಶ್ರಾಂತಿಯ ಬಳಿಕ ಪಂಜಾಬ್ ಕಣಕ್ಕಿಳಿಯಲಿದೆ. ಕ್ರಿಸ್ ಗೇಲ್, ಕೆ.ಎಲ್. ರಾಹುಲ್ ಅವರಿಗೆಲ್ಲ ತಮ್ಮ ಬ್ಯಾಟಿಂಗ್ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲು ಈ ಅವಧಿ ಧಾರಾಳ. “ಯುನಿವರ್ಸ್ ಬಾಸ್’ ಗೇಲ್ ಪಂಜಾಬ್ ತಂಡ ಸೇರಿಕೊಂಡ ಬಳಿಕ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದೊಂದು ಬೋನಸ್. ಜಮೈಕನ್ ದೈತ್ಯ ಈಗಾಗಲೇ 252 ರನ್ ಪೇರಿಸಿದ್ದಾರೆ. ಐಪಿಎಲ್‌ನಲ್ಲಿ ಶರವೇಗದ ಅರ್ಧ ಶತಕ ದಾಖಲಿಸಿರುವ ರಾಹುಲ್ 268 ರನ್ ಪೇರಿಸಿ ಅಗ್ರಸ್ಥಾನದಲ್ಲಿದ್ದಾರೆ.
ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ಆ್ಯಂಡ್ರೂé ಟೈ (9 ವಿಕೆಟ್), ಅಫ್ಘಾನಿಸ್ಥಾನದ ಮಿಸ್ಟರಿ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ (7 ವಿಕೆಟ್), ಅಂಕಿತ್ ರಜಪೂತ್ (7 ವಿಕೆಟ್) ಉತ್ತಮ ಲಯದಲ್ಲಿದ್ದಾರೆ. ಆದರೆ ಇಂಥ ಬಲಿಷ್ಠ ತಂಡವನ್ನೂ ಸುಲಭದಲ್ಲಿ ಮಗುಚಲು ಸಾಧ್ಯ ಎಂಬುದನ್ನು ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ತೋರಿಸಿ ಕೊಟ್ಟಿದೆ. ಹೈದರಾಬಾದ್‌ನಲ್ಲಿ 133 ರನ್ನುಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ಪಂಜಾಬ್ 19.2 ಓವರ್‌ಗಳಲ್ಲಿ 119 ರನ್ನಿಗೆ ಗಂಟುಮೂಟೆ ಕಟ್ಟಿತ್ತು; ಗೇಲ್-ರಾಹುಲ್ ಮೊದಲ ವಿಕೆಟಿಗೆ 55 ರನ್ ಒಟ್ಟುಗೂಡಿಸಿದ ಬಳಿಕವೂ ಪಂಜಾಬ್ ಪಂಕ್ಚರ್ ಆಗಿತ್ತು! ಈ ಫಲಿತಾಂಶ ಮುಂಬೈಗೆ ಸ್ಫೂರ್ತಿ ಆದೀತೇ?!
ಕೈಕೊಡುತ್ತಿರುವ ಓಪನಿಂಗ್
ಮುಂಬೈ ಸೂರ್ಯಕುಮಾರ್ ಯಾದವ್ (283 ರನ್), ಎವಿನ್ ಲೆವಿಸ್ (194 ರನ್), ರೋಹಿತ್ ಶರ್ಮ (196) ಬ್ಯಾಟಿಂಗನ್ನು ಹೆಚ್ಚು ಅವಲಂಬಿಸಿದೆ. ಕೆಳ ಕ್ರಮಾಂಕದಲ್ಲಿ ಪಾಂಡ್ಯ ಸೋದರರನ್ನು ನಂಬಿಕೊಳ್ಳಬಹುದು. ಬುಮ್ರಾ ಜತೆಗೆ ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಯುವ ಲೆಗ್ ಸ್ಪಿನ್ನರ್ ಮಾಯಾಂಕ್ ಮಾರ್ಕಂಡೆ ಮ್ಯಾಚ್ ವಿನ್ನರ್ ಆಗಬಲ್ಲ ಛಾತಿ ಹೊಂದಿದ್ದಾರೆ.
ಆದರೆ ಆರಂಭಿಕ ವಿಕೆಟಿಗೆ ರನ್ ಹರಿದು ಬಾರದಿರುವುದು ಮುಂಬೈಗೆ ಎದುರಾಗಿರುವ ಗಂಭೀರ ಸಮಸ್ಯೆ. ಈವರೆಗಿನ 8 ಇನ್ನಿಂಗ್ಸ್ ಗಳಲ್ಲಿ ಮೊದಲ ವಿಕೆಟಿಗೆ ಮುಂಬೈ ಗಳಿಸಿದ ರನ್ ಗಮನಿಸಿ: 7, 11, 102, 0, 1, 12, 69, 5. ಡೆಲ್ಲಿ ವಿರುದ್ಧ ಮೊದಲ ವಿಕೆಟಿಗೆ 9 ಓವರ್‌ಗಳಿಂದ 102 ರನ್ ಪೇರಿಸಿತಾದರೂ ಈ ಪಂದ್ಯವನ್ನು ಅಂತಿಮ ಎಸೆತದಲ್ಲಿ ಕಳೆದುಕೊಂಡಿತು. ಸಾಧನೆ ಜತೆಗೆ ಅದೃಷ್ಟ ಕೂಡ ಮುಂಬೈ ಕೈಹಿಡಿಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.