ಸುಧಾರಣೆಗೆ ಅವಕಾಶ: ಅಶ್ವಿನ್
Team Udayavani, Apr 10, 2019, 6:30 AM IST
ಮೊಹಾಲಿ: ಇದು ಮತ್ತೂಂದು “ಕ್ಲೋಸ್ ಗೇಮ್’ ಆಗಿದ್ದು, ಇಂಥ ಪಂದ್ಯಗಳಿಂದ ಸುಧಾರಣೆಗೆ ಹೆಚ್ಚಿನ ಅವಕಾಶ ಲಭಿಸುತ್ತದೆ ಎಂಬುದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಹೇಳಿದ್ದಾರೆ. ಸೋಮವಾರ ರಾತ್ರಿ ಬಲಿಷ್ಠ ಸನ್‌ರೈಸರ್ ಹೈದರಾಬಾದ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡುತ್ತಿದ್ದರು.
“ಈ ಸರಣಿಯಲ್ಲಿ ನಮ್ಮದ್ದೆಲ್ಲ ಬಹುತೇಕ ಕ್ಲೋಸ್ ಗೇಮ್‌ಗಳೇ ಆಗಿದ್ದವು. ಇಂಥ ಫಲಿತಾಂಶದಿಂದ ತಪ್ಪುಗಳನ್ನು ತಿದ್ದಿಕೊಳ್ಳಲು ಹೆಚ್ಚಿನ ಅವಕಾಶ ಲಭಿಸುತ್ತದೆ. ಈ ಪಂದ್ಯದ ಕೊನೆಯ 10 ಓವರ್‌ಗಳಲ್ಲಿ ನಾವು ನೂರಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟೆವು. ಈ ಸಮಸ್ಯೆಯನ್ನು ಮುಂದಿನ ಪಂದ್ಯಗಳಲ್ಲಿ ಹೋಗಲಾಡಿಸಿಕೊಳ್ಳಬೇಕಿದೆ’ ಎಂದು ಅಶ್ವಿನ್ ಹೇಳಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 4 ವಿಕೆಟಿಗೆ 150 ರನ್ ಗಳಿಸಿದರೆ, ಪಂಜಾಬ್ 19.5 ಓವರ್‌ಗಳಲ್ಲಿ 4 ವಿಕೆಟಿಗೆ 151 ರನ್ ಮಾಡಿ 4ನೇ ಜಯ ಸಾಧಿಸಿತು. ಈ ಪಂದ್ಯದ ಅಂತ್ಯಕ್ಕೆ ಕೆಕೆಆರ್, ಚೆನ್ನೈ ಮತ್ತು ಪಂಜಾಬ್ ತಲಾ 8 ಅಂಕಗಳೊಂದಿಗೆ ಮೊದಲ 3 ಸ್ಥಾನ ಅಲಂಕರಿಸಿವೆ.
ರಾಹುಲ್, ಮಾಯಾಂಕ್ ಮಿಂಚು
ಪಂಜಾಬ್ ಚೇಸಿಂಗ್ ವೇಳೆ ಕರ್ನಾಟಕದ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಅರ್ಧ ಶತಕ ಬಾರಿಸುವ ಜತೆಗೆ ದ್ವಿತೀಯ ವಿಕೆಟಿಗೆ 114 ರನ್ ಬಾರಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಅಜೇಯ 71 ರನ್ ಹೊಡೆದ ರಾಹುಲ್‌ಗೆ ಪಂದ್ಯ ಶ್ರೇಷ್ಠ ಗೌರವ ಒಲಿದು ಬಂತು (53 ಎಸೆತ, 7 ಬೌಂಡರಿ, 1 ಸಿಕ್ಸರ್). ಅಗರ್ವಾಲ್ 55 ರನ್ ಬಾರಿಸಿದರು (3 ಬೌಂಡರಿ, 3 ಸಿಕ್ಸರ್).
ರಾಹುಲ್-ಅಗರ್ವಾಲ್ ಆಟದ ವೇಳೆ ಪಂಜಾಬ್ ಬಹಳ ಬೇಗನೇ ಗೆಲ್ಲಬಹುದೆಂಬ ನಿರೀಕ್ಷೆ ಮೂಡಿತ್ತು. ಆದರೆ ಅಂತಿಮ ಓವರಿನಲ್ಲಿ 11 ರನ್ ತೆಗೆಯುವ ಸವಾಲು ಎದುರಾಯಿತು. ನಬಿ ಪಾಲಾದ ಈ ಓವರಿನ ಮೊದಲ 3 ಎಸೆತಗಳಲ್ಲಿ ಕರನ್ 5 ರನ್ ಹೊಡೆದರು (2, 2, 1). ಮುಂದಿನ ಎಸೆತವನ್ನು ರಾಹುಲ್ ಬೌಂಡರಿಗೆ ಅಟ್ಟಿದರು. 5ನೇ ಎಸೆತದಲ್ಲಿ 2 ರನ್ ಹೊಡೆದು ತಂಡದ ಗೆಲುವನ್ನು ಸಾರಿದರು.
ಎಕ್ಸ್‌ಟ್ರಾ ಇನ್ನಿಂಗ್ಸ್
– ಮೊಹಾಲಿಯಲ್ಲಿ ಪಂಜಾಬ್ ಸತತ 7 ಪಂದ್ಯಗಳನ್ನು ಗೆದ್ದು ಹೊಸ ದಾಖಲೆ ಬರೆಯಿತು. ಇದಕ್ಕೂ ಮೊದಲು 2008 ಮತ್ತು 2014ರ ಋತುವಿನಲ್ಲಿ ಪಂಜಾಬ್ ಸತತ 6 ಪಂದ್ಯಗಳನ್ನು ಗೆದ್ದದ್ದು ದಾಖಲೆಯಾಗಿತ್ತು. ಈ ವರೆಗೆ ಒಂದೇ ಅಂಗಳದಲ್ಲಿ ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ದಾಖಲೆ ಮುಂಬೈ ಮತ್ತು ಚೆನ್ನೈ ಹೆಸರಲ್ಲಿದೆ. ಈ ತಂಡಗಳು ವಾಂಖೇಡೆ (2013-14) ಮತ್ತು ಚಿಪಾಕ್‌ನಲ್ಲಿ (2013-15) ಸತತ 10 ಪಂದ್ಯಗಳನ್ನು ಜಯಿಸಿವೆ.
– ಡೇವಿಡ್ ವಾರ್ನರ್ ಸತತ 7 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 50 ಪ್ಲಸ್ ರನ್ ಬಾರಿಸಿದರು. ಈ ಸಂದರ್ಭದಲ್ಲಿ ಹೈದರಾಬಾದ್ ಮೊದಲ ಸಲ ಸೋಲನುಭವಿಸಿತು.
– ವಾರ್ನರ್ 2 ತಂಡಗಳ ವಿರುದ್ಧ ಸತತ 7 ಇನ್ನಿಂಗ್ಸ್‌ಗಳಲ್ಲಿ 50 ಪ್ಲಸ್ ರನ್ ಹೊಡೆದ ಮೊದಲ ಕ್ರಿಕೆಟಿಗ. ಅವರು 2014-17ರ ಅವಧಿ ಯಲ್ಲಿ ಆರ್‌ಸಿಬಿ ವಿರುದ್ಧವೂ ಈ ಸಾಧನೆ ಮಾಡಿದ್ದರು.
– ವಾರ್ನರ್ ತಮ್ಮ ಅರ್ಧ ಶತಕಕ್ಕೆ 49 ಎಸೆತ ಎದುರಿಸಿದರು. ಇದು ಹೈದರಾಬಾದ್ ಪರ ದಾಖಲಾದ ಅತ್ಯಂತ ನಿಧಾನ ಗತಿಯ ಅರ್ಧ ಶತಕ. 2016ರಲ್ಲಿ ಪುಣೆ ವಿರುದ್ಧ ಮನೀಷ್ ಪಾಂಡೆ 48 ಎಸೆತಗಳಲ್ಲಿ ಅರ್ಧ ಶತಕ ಹೊಡೆದಿದ್ದರು.
– ದೀಪಕ್ ಹೂಡಾ ಪಂದ್ಯವೊಂದರಲ್ಲಿ ಅತ್ಯಧಿಕ 3 ಕ್ಯಾಚ್ ಮಾಡಿದ ಹೈದರಾಬಾದ್‌ನ 4ನೇ ಫೀಲ್ಡರ್. ಉಳಿದ ಮೂವರೆಂದರೆ ಕ್ಯಾಮರೂನ್ ವೈಟ್, ರಶೀದ್ ಖಾನ್ ಮತ್ತು ಮನೀಷ್ ಪಾಂಡೆ.
– ಐಪಿಎಲ್‌ನಲ್ಲಿ ಕೆ.ಎಲ್. ರಾಹುಲ್ 4ನೇ, ಮಾಯಾಂಕ್ ಅಗರ್ವಾಲ್ 5ನೇ ಅರ್ಧ ಶತಕ ಹೊಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.