IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team Udayavani, Apr 26, 2024, 7:40 AM IST
ಕೋಲ್ಕತಾ: ಉತ್ತಮ ಫಾರ್ಮ್ ನಲ್ಲಿರುವ ಕೋಲ್ಕತಾ ನೈಟ್‌ರೈಡರ್ ತಂಡವು ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ
ಸಾಧಾರಣ ತಂಡವಾದ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದು ಗೆಲುವಿನ ಉತ್ಸಾಹ ದಲ್ಲಿದೆ. ಬ್ಯಾಟಿಂಗ್ ಪ್ರಯತ್ನದಿಂದಲೇ ಹೆಚ್ಚಿನ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ್ದ ಕೆಕೆಆರ್ ತಂಡವು ಬೌಲರ್‌ಗಳೂ ಉತ್ಕೃಷ್ಟ ನಿರ್ವಹಣೆ ನೀಡಲಿ ಎಂದು ಹಾರೈಸುತ್ತಿದೆ.
ಅಂಕಪಟ್ಟಿಯಲ್ಲಿ 10 ಅಂಕ ಹೊಂದಿರುವ ಕೆಕೆಆರ್ ತಂಡವು ದ್ವಿತೀಯ ಸ್ಥಾನದಲ್ಲಿದೆ. 14 ಅಂಕ ಹೊಂದಿರುವ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನದಲ್ಲಿದೆ. ಅಗ್ರ ಕ್ರಮಾಂಕದ ಆಟಗಾರರು ಪ್ರಚಂಡ ಆಟ ಪ್ರದರ್ಶಿಸುತ್ತಿದ್ದಾರೆ. ಸುನೀಲ್ ನಾರಾಯಣ್ (286), ಫಿಲ್ ಸಾಲ್ಟ್ (249) ಬಿರುಸಿನ ಆಟ ಆಡಿದ್ದರೆ ಆ್ಯಂಡ್ರೆ ರಸೆಲ್ (155), ನಾಯಕ ಶ್ರೇಯಸ್ ಅಯ್ಯರ್ (190) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಿಂಕು ಸಿಂಗ್ ಕೂಡ ಮಿಂಚಿದ್ದಾರೆ.
ತಂಡದ ಹೆಚ್ಚಿನೆಲ್ಲ ನುರಿತ ಆಟಗಾರರು ಉತ್ತಮ ರನ್‌ಧಾರಣೆ ಹೊಂದಿದ್ದಾರೆ. ಅವರ ಕೊಡುಗೆಯಿಂದಲೇ ತಂಡವು ಇಷ್ಟರವರೆಗೆ ಆಡಿದ 7 ಪಂದ್ಯಗಳಲ್ಲಿ ನಾಲ್ಕು ಬಾರಿ 200 ಪ್ಲಸ್ ಮೊತ್ತ ಪೇರಿಸಿದ ಸಾಧನೆ ಮಾಡಿದೆ. ವೆಂಕಟೇಶ್ ಅಯ್ಯರ್ ಮಾತ್ರ ಬ್ಯಾಟಿಂಗಿನಲ್ಲಿ ವೈಫಲ್ಯ ಅನುಭವಿಸಿದ್ದರೆ ನಿತೀಶ್ ರಾಣಾ ಅವರು ಬೆರಳ ನೋವಿನಿಂದ ಬಳಲುತ್ತಿದ್ದಾರೆ.
ಬೌಲಿಂಗ್ ಮಿಂಚಬೇಕಿದೆ:
ಬ್ಯಾಟಿಂಗ್‌ನಂತೆ ತಂಡದ ಬೌಲಿಂಗ್ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಸುನೀಲ್ ನಾರಾಯಣ್ ಅವರನ್ನು ಬಿಟ್ಟರೆ ಉಳಿದ ಯಾವುದೇ ಬೌಲರ್ ಬಿಗು ದಾಳಿ ಸಂಘಟಿಸಿಲ್ಲ. ನುರಿತ ಬೌಲರ್ ಆಗಿರುವ ಮತ್ತು ಸಾರ್ವಕಾಲಿಕ ಗರಿಷ್ಠ ಮೊತ್ತಕ್ಕೆ (24.75 ಕೋಟಿ ರೂ.)ಕೆಕೆಆರ್ ಪಾಲಾಗಿರುವ ಮಿಚೆಲ್ ಸ್ಟಾರ್ಕ್ ಇನ್ನೂ ತನ್ನ ಸಾಮರ್ಥ್ಯ ಪ್ರದರ್ಶಿಸಿಲ್ಲ. ಸ್ಟಾರ್ಕ್ ಅವರನ್ನು ಹೋಲಿಸಿದರೆ ಹರ್ಷಿತ್ ರಾಣಾ ಮತ್ತು ವೈಭವ್ ಅರೋರ ಗಮನಾರ್ಹ ಬೌಲಿಂಗ್ ನಿರ್ವಹಣೆ ನೀಡಿದ್ದಾರೆ.
ಧವನ್ ಸೇರ್ಪಡೆ ? :
ಉತ್ತಮ ಆಟಗಾರರನ್ನು ಹೊಂದಿದ್ದರೂ ಪಂಜಾಬ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿ ಸಿದೆ. ಪ್ರಮುಖ ಆಟಗಾರರಾದ ಪ್ರಭ್‌ಸಿಮ್ರಾನ್ ಸಿಂಗ್, ಲಿಯಮ್ ಲಿವಿಂಗ್‌ಸ್ಟೋನ್, ರಿಲೀ ರೊಸೊ ಮತ್ತು ಜಾನಿ ಬೇರ್‌ಸ್ಟೋ ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡಿದ್ದಾರೆ. ಆದರೆ ಶಶಾಂಕ್ ಮತ್ತು ಅಶುತೋಷ್ ಅವರ ಉತ್ತಮ ಆಟ ದಿಂದಾಗಿ ಪಂಜಾಬ್ ಹೋರಾಡುತ್ತಿದೆ. ಭುಜದ ನೋವಿನಿಂದಾಗಿ ಕಳೆದ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ನಾಯಕ ಶಿಖರ್ ಧವನ್ ಮರಳಿರುವ ಕಾರಣ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠಗೊಂಡಿದೆ. ಅವರು ಉತ್ತಮವಾಗಿ ಆಡಿದರೆ ತಂಡ ಉತ್ತಮ ಮೊತ್ತ ಪೇರಿಸುವ ಸಾಧ್ಯತೆಯಿದೆ.
ಪಿಚ್ ವರದಿ:
ಈಡನ್ ಗಾರ್ಡನ್ಸ್‌ನ ಪಿಚ್ ಬ್ಯಾಟಿಂಗಿಗೆ ಉತ್ತಮವಾಗಿದೆ. ಪಿಚ್ ಬೌನ್ಸ್ ಆಗುತ್ತಿರುವ ಕಾರಣ ವೇಗಿಗಳು ಹೆಚ್ಚಿನ ಲಾಭ ಪಡೆಯುವ ಸಾಧ್ಯತೆಯಿದೆ. ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಿ ದಾಳಿ ಸಂಘಟಿಸುವ ನಿರೀಕ್ಷೆಯಿದೆ.
ಬಿಸಿಲಿನಿಂದ ಕೂಡಿದ ವಾತಾವರಣ ಇದ್ದು ಸಂಜೆಯ ವೇಳೆ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಳೆ ಬರುವ ಸಾಧ್ಯತೆಯಿಲ್ಲ.
ಸ್ಟಾರ್ಕ್ ಆಯ್ಕೆಗೆ ಲಭ್ಯ :
ಕೋಲ್ಕತಾ: ಮಿಚೆಲ್ ಸ್ಟಾರ್ಕ್ ಅವರ ಗಾಯದ ಬಗ್ಗೆ ಕಳವಳಪಡುವ ಅಗತ್ಯವಿಲ್ಲ, ಅವರು ಆಯ್ಕೆಗೆ ಲಭ್ಯರಿರುತ್ತಾರೆ ಎಂದು ಕೆಕೆಆರ್ ತಂಡದ ಆಲ್‌ರೌಂಡರ್ ರಮಣದೀಪ್ ಸಿಂಗ್ ಹೇಳಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯಕ್ಕಾಗಿ ಕೆಕೆಆರ್ ಆಟಗಾರರು ಗುರುವಾರ ಕಠಿನ ತರಬೇತಿಯಲ್ಲಿ ಪಾಲ್ಗೊಂಡಿದ್ದರೂ ಸ್ಟಾರ್ಕ್ ಸ್ವಲ್ಪ ಹೊತ್ತು ಮಾತ್ರ ತರಬೇತಿ ನಡೆಸಿದ್ದರು.
ಹರಾಜಿನಲ್ಲಿ ಸ್ಟಾರ್ಕ್ ದಾಖಲೆ ಮೊತ್ತಕ್ಕೆ ಕೆಕೆಆರ್ ಪಾಲಾಗಿದ್ದರೂ ಅವರಿಂದ ಉತ್ಕೃಷ್ಟ ಬೌಲಿಂಗ್ ನಿರ್ವಹಣೆ ಬಂದಿಲ್ಲ. ಅವರು ಈ ಋತುವಿನಲ್ಲಿ ಭಾರೀ ರನ್ ಬಿಟ್ಟುಕೊಟ್ಟಿದ್ದು ಕೇವಲ 6 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ಇದರ ನಡುವೆ ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಅವರು ಬೆರಳ ಗಾಯಕ್ಕೆ ಒಳಗಾಗಿದ್ದರು. ಸ್ಟಾರ್ಕ್ ತಂಡದ ಎಡರು ಅಭ್ಯಾಸ ಅವಧಿಯ ವೇಳೆ ನೆಟ್‌ನಲ್ಲಿ ಬೌಲಿಂಗ್ ಮಾಡದಿರುವುದು ಅವರ ಕ್ಷಮತೆಗೆ ಬಗ್ಗೆ ಸಂಶಯ ಪಡುವಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.