IPL 2024 ಆರಂಭದ ದಿನಾಂಕ ಅಂತಿಮ; ಮಹತ್ವದ ಮಾಹಿತಿ ನೀಡಿದ ಅರುಣ್ ಧುಮಾಲ್
Team Udayavani, Feb 20, 2024, 4:15 PM IST
ಮುಂಬೈ: ವರ್ಣರಂಜಿತ ಟಿ20 ಕ್ರಿಕೆಟ್ ಕೂಟ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 17ನೇ ಆವೃತ್ತಿಗೆ ಬಿಸಿಸಿಐ ಸಕಲ ಸಿದ್ದತೆ ನಡೆಸುತ್ತಿದೆ. ಆದರೆ ಇದುವರೆಗೆ ಐಪಿಎಲ್ 2024 ಕೂಟದ ಆರಂಭದ ದಿನಾಂಕವನ್ನು ಖಚಿತಪಡಿಸಿಲ್ಲ. ಇದೀಗ ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಬಾರಿಯ ಐಪಿಎಲ್ ಕೂಟವು ಮಾರ್ಚ್ 22ರಂದು ಆರಂಭವಾಗಲಿದೆ ಎಂದರು.
ಚೆನ್ನೈನಲ್ಲಿ ಈ ಬಾರಿಯ ಕೂಟವು ಆರಂಭವಾಗಲಿದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರನ್ನರ್ ಅಪ್ ಗುಜರಾತ್ ಟೈಟಾನ್ಸ್ ತಂಡವನ್ನು ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಎದುರಿಸಲಿದೆ ಎಂದಿದ್ದಾರೆ.
“ನಾವು ಮಾರ್ಚ್ 22 ರಂದು ಪಂದ್ಯಾವಳಿಯ ಆರಂಭವನ್ನು ನೋಡುತ್ತಿದ್ದೇವೆ. ನಾವು ಸರ್ಕಾರಿ ಏಜೆನ್ಸಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಮೊದಲು ಆರಂಭಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ” ಎಂದು ಅರುಣ್ ಧುಮಾಲ್ ಪಿಟಿಐಗೆ ತಿಳಿಸಿದರು.
ಎರಡು ಭಾಗದಲ್ಲಿ ವೇಳಾಪಟ್ಟಿ
ಎಪ್ರಿಲ್ -ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವ ಕಾರಣ ಎರಡು ಹಂತದಲ್ಲಿ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಅರುಣ್ ಧುಮಾಲ್ ಹೇಳಿದರು. ಮೊದಲ 15 ದಿನದ ವೇಳಾಪಟ್ಟಿಯು ಮೊದಲು ಘೋಷಣೆಯಾಗಲಿದೆ. ಉಳಿದ ವೇಳಾಪಟ್ಟಿಯು ಲೋಕಸಭಾ ಚುನಾವಣೆಯ ಪಟ್ಟಿ ಬಿಡುಗಡೆಯಾದ ಬಳಿಕ ರಿಲೀಸ್ ಆಗಲಿದೆ ಎಂದು ಅವರು ತಿಳಿಸಿದರು.
2024ರ ಲೋಕಸಭಾ ಚುನಾವಣೆಯ ಹೊರತಾಗಿಯೂ ಐಪಿಎಲ್ 2024 ಭಾರತದಲ್ಲಿಯೇ ನಡೆಯಲಿದೆ ಎಂದು ಅವರು ಖಚಿತ ಪಡಿಸಿದರು. 2009 ಮತ್ತು 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಐಪಿಎಲ್ ಕೂಟವನ್ನು ಭಾರತದ ಹೊರಗೆ ನಡೆಸಲಾಗಿತ್ತು. 2009ರಲ್ಲಿ ಪೂರ್ಣ ಕೂಟವು ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದರೆ, 2014ರಲ್ಲಿ ಭಾಗಶಃ ಕೂಟವು ಯುಎಇ ನಲ್ಲಿ ನಡೆದಿತ್ತು. ಈ ಬಾರಿ ಸಂಪೂರ್ಣ ಕೂಟವು ಭಾರತದಲ್ಲಿಯೇ ನಡೆಯಲಿದೆ ಎಂದು ಧುಮಾಲ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.