IPL; ಲಕ್ನೋ ವಿರುದ್ಧ ಜಯದ ನಗೆ ಬೀರಿದ ಡೆಲ್ಲಿ ಕ್ಯಾಪಿಟಲ್ಸ್
ಆಡಿದ ಮೊದಲ ಪಂದ್ಯದಲ್ಲೇ ಮಿಂಚಿದ ಆಸೀಸ್ ಆಲ್ ರೌಂಡರ್
Team Udayavani, Apr 12, 2024, 11:07 PM IST
ಲಕ್ನೋ: ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದೆದುರು ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳ ಜಯ ಸಾಧಿಸಿದೆ. ಲಕ್ನೋ ಆಡಿದ 5 ನೇ ಪಂದ್ಯದಲ್ಲಿ 2 ನೇ ಸೋಲು ಅನುಭವಿಸಿದರೆ, ಡೆಲ್ಲಿ ಆಡಿದ 6 ನೇ ಪಂದ್ಯದಲ್ಲಿ 2 ನೇ ಜಯ ಕಂಡಿತು.
ಲಕ್ನೋ ಸೂಪರ್ ಜೈಂಟ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೊನೆ ಹಂತದಲ್ಲಿ ಆಯುಷ್ ಬದೋನಿ ಅವರು ಸಿಡಿಸಿದ ಅರ್ಧಶತಕದಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟಿಗೆ 167 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು.
ಗುರಿ ಬೆನ್ನಟ್ಟಿದ ಡೆಲ್ಲಿ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಅವರ ಐಪಿಎಲ್ ಪದಾರ್ಪಣ ಪಂದ್ಯದಲ್ಲೇ ಆಕರ್ಷಕ ಅರ್ಧ ಶತಕ ಮತ್ತು ಪ್ರಥ್ವಿ ಶಾ, ನಾಯಕ ರಿಷಭ್ ಪಂತ್ ಅವರ ಆಟದ ನೆರವಿನಿಂದ ಜಯ ಸಾಧಿಸಿತು. ಶಾ 32,
ಆಸೀಸ್ ಆಟಗಾರ ಜೇಕ್ ಫ್ರೇಸರ್ 55 ರನ್( 35 ಎಸೆತ) ಗಳಿಸಿ ಔಟಾದರು.ಅವರು 5 ಭರ್ಜರಿ ಸಿಕ್ಸರ್ ಸಿಡಿಸಿದರು. ಪಂತ್ 41(24 ಎಸೆತ) ಗಳಿಸಿ ಔಟಾದರು. 18.1 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಜಯದ ನಗೆ ಬೀರಿತು. ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್ 15, ಶಾಯ್ ಹೋಪ್ 11 ರನ್ ಗಳಿಸಿ ಔಟಾಗದೆ ಉಳಿದರು.
ಖಲೀಲ್ ಅಹ್ಮದ್ ಮತ್ತು ಕುಲದೀಪ್ ಯಾದವ್ ಅವರ ಮಾರಕ ದಾಳಿಗೆ ಕುಸಿದ ಲಕ್ನೋ ತಂಡವು ಒಂದು ಹಂತದಲ್ಲಿ 13 ಓವರ್‌ಗಳ ಮುಕ್ತಾಯಕ್ಕೆ 94 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಆಬಳಿಕ ಅಂತಿಮ 7 ಓವರ್‌ಗಳಲ್ಲಿ ಓವರೊಂದಕ್ಕೆ 10ರಂತೆ ರನ್ ಪೇರಿಸಿದ ಲಕ್ನೋ ತಂಡವು ಸಮಾಧಾನಪಟ್ಟುಕೊಂಡಿತು. ಬದೋನಿ ಮತ್ತು ಅರ್ಷದ್ ಖಾನ್ ಅವರ ಭರ್ಜರಿ ಆಟದಿಂದಾಗಿ ತಂಡದ ಮೊತ್ತ 167 ರನ್ ತಲುಪುವಂತಾಯಿತು.
ಇನ್ನಿಂಗ್ಸ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಕೆಎಲ್ ರಾಹುಲ್ ಉತ್ತಮವಾಗಿ ಆಡಿ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಮೊದಲ ವಿಕೆಟಿಗೆ ಅವರಿಬ್ಬರು 28 ರನ್ ಪೇರಿಸಿದ ಬಳಿಕ ಬೇರ್ಪಟ್ಟರು. ಈ ಜೋಡಿಯನ್ನು ಮುರಿದ ಖಲೀಲ್ ಅಹ್ಮದ್ ಲಕ್ನೋಗೆ ದೊಡ್ಡ ಹೊಡೆತ ನೀಡಿದರು. ಅಹ್ಮದ್ ಸ್ವಲ್ಪ ಹೊತ್ತಿನಲ್ಲಿಯೇ ಪಡಿಕ್ಕಲ್ ಅವರ ವಿಕೆಟನ್ನು ಹಾರಿಸಿದರು.
ಗಾಯದ ಸಮಸ್ಯೆಯಿಂದಾಗಿ ಕಳೆದ ಮೂರು ಪಂದ್ಯ ಕಳೆದುಕೊಂಡಿದ್ದ ಕುಲದೀಪ್ ಈ ಪಂದ್ಯದ ಮೂಲಕ ತಂಡಕ್ಕೆ ಮರಳಿದ್ದರು. ಅವರು ಎಸೆದ ಮೊದಲ ಓವರಿನಲ್ಲಿಯೇ ಅಪಾಯಕಾರಿ ಮಾರ್ಕಸ್ ಸ್ಟೋಯಿನಿಸ್ ಅವರ ವಿಕೆಟನ್ನು ಹಾರಿಸಿ ಲಕ್ನೋಗೆ ಪ್ರಬಲ ಹೊಡೆತ ನೀಡಿದರು. ಅವರು ಆಬಳಿಕ ನಿಕೋಲಸ್ ಪೂರಣ್ ಮತ್ತು ನಾಯಕ ರಾಹುಲ್ ಅವರ ವಿಕೆಟನ್ನು ಹಾರಿಸಿದ್ದರಿಂದ ತಂಡ ಶೋಚನೀಯ ಸ್ಥಿತಿಗೆ ಬೀಳುವಂತಾಯಿತು. ತಂಡ ಮೊದಲ 13 ಓವರ್‌ಗಳ ಮುಕ್ತಾಯಕ್ಕೆ 94 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತ್ತು.
ತಂಡ ಶೋಚನೀಯ ಸ್ಥಿತಿಯಲ್ಲಿದ್ದರೂ ಎಚ್ಚರಿಕೆಯ ಆಟವಾಡಿದ ಆಯುಷ್ ಬದೋನಿ ಅವರು ಕೊನೆ ಹಂತದಲ್ಲಿ ಡೆಲ್ಲಿಯ ದಾಳಿಯನ್ನು ದಿಟ್ಟವಾಗಿ ಎದುರಿಸಿ ತಂಡಕ್ಕೆ ಜೀವ ತುಂಬಿದರು. ಮುರಿಯದ ಎಂಟನೇ ವಿಕೆಟಿಗೆ ಅರ್ಷದ್ ಖಾನ್ ಜತೆಗೆ 73 ರನ್ ಪೇರಿಸಿ ತಂಡ ಉತ್ತಮ ಮೊತ್ತ ಪೇರಿಸಲು ಕಾರಣರಾದರು. 35 ಎಸೆತ ಎದುರಿಸಿದ ಬದೋನಿ 5 ಬೌಂಡರಿ ಮತ್ತು 1 ಸಿ ಕ್ಸರ್ ನೆರವಿನಿಂದ 55 ರನ್ ಗಳಿಸಿ ಅಜೇಯರಾಗಿ ಉಳಿದರು.
ಬಿಗು ದಾಳಿ ಸಂಘಟಿಸಿದ ಕುಲದೀಪ್ ಯಾದವ್ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 20 ರನ್ ನೀಡಿ ಮೂರು ವಿಕೆಟ್ ಹಾರಿಸಿದರೆ ಖಲೀಲ್ ಅಹ್ಮದ್ 41 ರನ್ನಿಗೆ 2 ವಿಕೆಟ್ ಪಡೆದರು. ಇಶಾಂತ್ ಶರ್ಮ ಮತ್ತು ಮುಕೇಶ್ ಕುಮಾರ್ ತಲಾ ಒಂದು ವಿಕೆಟ್ ಕಿತ್ತರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.