ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಅನಿಸುತ್ತಿದೆ
Team Udayavani, Jul 10, 2017, 3:55 AM IST
ಬೆಂಗಳೂರು: ಭಾರತ ವೇಗದ ಅಥ್ಲೀಟ್ ದ್ಯುತಿ ಚಾಂದ್ ದೇಹದಲ್ಲಿ ಆ್ಯಂಡ್ರೊಜನ್ ಪ್ರಮಾಣ ಹೆಚ್ಚಿದೆ. ಹೀಗಾಗಿ ಅವರನ್ನು ನಿಷೇಧಿಸಬೇಕು ಎನ್ನುವ ದೂರನ್ನು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಒಕ್ಕೂಟ (ಐಎಎಎಫ್) ಮತ್ತೂಮ್ಮೆ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಈ ವಿವಾದದ ಬೆನ್ನಲ್ಲೇ ಏಷ್ಯನ್ ಅಥ್ಲೆಟಿಕ್ಸ್ ಕೂಟದ 100 ಮೀ.ನಲ್ಲಿ ಒಡಿಶಾ ಮೂಲದ ದ್ಯುತಿ ಕಂಚಿನ ಪದಕ ಗೆದ್ದಿದ್ದಾರೆ. ಇವರನ್ನೊಳಗೊಂಡ 4/100 ಮೀ. ರಿಲೇ ತಂಡವೂ ಕಂಚಿನ ಪದಕ ಗೆದ್ದಿತು. ಈ ನಡುವೆ ಐಎಎಎಫ್ ದ್ಯುತಿ ಆ್ಯಂಡ್ರೊಜನ್ ವಿವಾದಕ್ಕೆ ಸಂಬಂಧ ಪಟ್ಟಂತೆ ಪ್ರಕರಣವನ್ನು ಮತ್ತೂಮ್ಮೆ ಎತ್ತಿ ಹಿಡಿದಿದೆ. ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ದ್ಯುತಿ ನಿಷೇಧಕ್ಕೆ ಒತ್ತಡ ತರುವ ಪ್ರಯತ್ನದಲ್ಲಿದೆ.
2015ರಲ್ಲಿ ಐಎಎಎಫ್ ನೀಡಿದ ದೂರನ್ನು ಕ್ರೀಡಾ ನ್ಯಾಯಾಲಯ ತಳ್ಳಿ ಹಾಕಿತ್ತು. ಸಾಕ್ಷಿ ಆಧಾರದ ಕೊರತೆಯಿಂದ ದ್ಯುತಿಯನ್ನು ನಿರಪರಾಧಿ ಎಂದು ಘೋಷಣೆ ಮಾಡಿತ್ತು. ಇಂದು ಅದೇ ನ್ಯಾಯಾಲಯ ಪ್ರಕರಣವನ್ನು ಮತ್ತೂಮ್ಮೆ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಸಾಕ್ಷಿ ಆಧಾರ ದ್ಯುತಿ ಪರವೂ ಬರಬಹುದು. ಇಲ್ಲ ವಿರುದ್ಧವೂ ಬರಬಹುದು. ಒಂದು ವೇಳೆ ವಿರುದ್ಧ ಬಂದರೆ ಏನೋ ತಪ್ಪು ಮಾಡದ ಅಥ್ಲೀಟ್ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿ ಬರಬಹುದು. ಇದೇ ಚಿಂತೆ ಈಗ ದ್ಯುತಿಯನ್ನು ಕಾಡುತ್ತಿದೆ.
ಹೀಗಿದ್ದರೂ ದ್ಯುತಿ ಧೈರ್ಯದ ನಿರ್ಧಾರಕ್ಕೆ ಬಂದಿದ್ದಾರೆ. ನನ್ನದಲ್ಲದ ತಪ್ಪಿಗೆ ನನ್ನನ್ನು ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಗುಡುಗಿದ್ದಾರೆ. ಅಷ್ಟೇ ಅಲ್ಲ ಇದರ ಹಿಂದೆ ಭಾರತಕ್ಕೆ ಮುಜುಗರ ತರುವ ಪ್ರಯತ್ನ ಇದ್ದರೂ ಇರಬಹುದು ಎಂದು ಅಂದಾಜಿಸಿದ್ದಾರೆ. ಕ್ರೀಡಾ ನ್ಯಾಯಾಲಯದಲ್ಲಿ ಐಎಎಎಫ್ ನನ್ನ ವಿರುದ್ಧ ಪ್ರಶ್ನಿಸಲಿ. ಅದರ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತೇನೆ. ನನ್ನ ದೇಶ, ನನ್ನ ಜನ ನನ್ನೊಂದಿಗಿದ್ದಾರೆ. ಅವರೆಲ್ಲರ ಆಶೀರ್ವಾದ ಇರುವ ತನಕ ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ದ್ಯುತಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ ಉದಯವಾಣಿ ಜತೆ ದ್ಯುತಿ ದೂರವಾಣಿ ಸಂದರ್ಶನದಲ್ಲಿ ಮತ್ತಷ್ಟು ಮಾತನಾಡಿದ್ದಾರೆ, ತನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಅದರ ವಿರುದ್ಧ ಹೋರಾಟ. ತನ್ನ ನಿರ್ಧಾರ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ 2 ಕಂಚಿನ ಪದಕ. ವಿಶ್ವ ಚಾಂಪಿಯನ್‌ಶಿಪ್ ಸವಾಲು ಸೇರಿದಂತೆ ಅನೇಕ ವಿಷಯದ ಬಗ್ಗೆ ಮಾತನಾಡಿದರು. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ ನೋಡಿ.
ಏಷ್ಯನ್ ಅಥ್ಲೆಟಿಕ್ಸ್ ಕೂಟದಲ್ಲಿ ಗೆದ್ದ 2 ಕಂಚಿನ ಪದಕ ನಿಮಗೆ ಖುಷಿ ಕೊಟ್ಟಿದೆಯಾ?
ಅನುಮಾನವೇ ಬೇಡ, ಪದಕ ನೀಡಿರುವ ಖುಷಿಯನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. 2013ರಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಕೂಟದ 200 ಮೀ.ನಲ್ಲಿ ಕಂಚಿನ ಪದಕ ಗೆದ್ದಿದ್ದೆ. ಇದಾದ ಬಳಿಕ ವೈಯಕ್ತಿಕ ಹಾಗೂ ರಿಲೇನಲ್ಲಿ ಗೆದ್ದ 2 ಪದಕ ಕಠಿಣ ಪರಿಶ್ರಮಕ್ಕೆ ಸಂದ ಜಯ.
ಕಂಚಿನ ಪದಕ ಗೆದ್ದರೂ ವಿಶ್ವ ಚಾಂಪಿಯನ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದೀರಿ?
100 ಮೀ. ವೈಯಕ್ತಿಕ ಹಾಗೂ ರಿಲೇನಲ್ಲಿ ವಿಶ್ವ ಕೂಟಕ್ಕೆ ಅರ್ಹತೆ ಪಡೆಯುತ್ತೇನೆ ಎನ್ನುವ ನಿರೀಕ್ಷೆ ಹೊಂದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಜು.23ರವರೆಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಗಾಗಿ ಸಮಯಾವಕಾಶ ಇದೆ. ಇದಕ್ಕೂ ಮೊದಲು ಯಾವುದಾದರೂ ಒಂದು ಅಂತಾರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದರೆ ಚಿನ್ನ ಗೆದ್ದು ಅರ್ಹತೆ ಪಡೆಯಲು ಪ್ರಯತ್ನ ಪಡಬಹುದು.
ಚಿನ್ನ ಗೆಲ್ಲುವಲ್ಲಿ ನೀವು ಎಡವಿದ್ದೆಲ್ಲಿ?
ಕಜಕೀಸ್ಥಾನದ ವಿಕ್ಟೋರಿಯಾ ಹಾಗೂ ಒಲ್ಗಾ ಸಫೊÅನೊವಾ ದೈಹಿಕವಾಗಿ ನನಗಿಂತ ಹೆಚ್ಚು ಬಲಾಡ್ಯರು. ನನಗಿಂತ ಎತ್ತರದವರಾಗಿದ್ದು ಏಷ್ಯಾದಲ್ಲೇ ಅವರಿಬ್ಬರು ಪ್ರಬಲ ಓಟಗಾರ್ತಿಯರು. ಹಾಗಂತ ಅವರೆದುರು ಹೀನಾಯ ಪ್ರದರ್ಶನ ನೀಡಿಲ್ಲ. ಕಠಿಣ ಸ್ಪರ್ಧೆ ನೀಡಿದ್ದೇನೆ. ಇನ್ನಷ್ಟು ಅಭ್ಯಾಸ, ಪ್ರಯತ್ನ ನಡೆಸಿದರೆ ಅವರನ್ನು ಹಿಮ್ಮೆಟ್ಟಬಹುದು.
ಆ್ಯಂಡ್ರೊಜನ್ ಪ್ರಮಾಣ ನಿಮ್ಮ ದೇಹದಲ್ಲಿ ಹೆಚ್ಚಿದೆ ಎನ್ನುವ ಆರೋಪವನ್ನು ಐಎಎಎಫ್ ಮಾಡುತ್ತಿದೆ? ಮತ್ತೂಮ್ಮೆ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದ ಮೆಟ್ಟಿಲೇರುತ್ತಿದೆ?
ಆರೋಪ ಮಾಡುತ್ತಿದೆ. ಹಾಗಂತ ಇದರಲ್ಲಿ ನನ್ನ ತಪ್ಪೇನಿದೆ ಅಂಥ ನೀವೆ ಹೇಳಿ? ಭಗವಂತನ ಮೇಲೆ ನಂಬಿಕೆ ಇಟ್ಟಿದ್ದೇನೆ. ಅವನೇ ಎಲ್ಲ ನೋಡಿಕೊಳ್ಳುತ್ತಾನೆ.
ನಿಮ್ಮ ವಿರುದ್ಧ ಐಎಎಎಫ್ ಮೇಲ್ಮನವಿ ಗೆದ್ದು ಕ್ರೀಡಾ ನ್ಯಾಯಾಲಯ ನಿಮ್ಮ ವಿರುದ್ಧ ನಿಷೇಧದಂಥಹ ಶಿಸ್ತು ಕ್ರಮ ಕೈಗೊಂಡರೆ?
ಖಂಡಿತ ಹೆದರುವುದಿಲ್ಲ… ನನ್ನದಲ್ಲದ ತಪ್ಪಿಗೆ ನನ್ನನ್ನು ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ಅವರು ಪ್ರಶ್ನಿಸಲಿ. ಅದರ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತೇನೆ. ನನ್ನ ದೇಶ, ನನ್ನ ಜನ ನನ್ನೊಂದಿಗಿದ್ದಾರೆ. ಅವರೆಲ್ಲರ ಆಶೀರ್ವಾದ ಇರುವ ತನಕ ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ.
ನಿಮ್ಮ ವಿರುದ್ಧ ಷಡ್ಯಂತ್ರ ಏನಾದರೂ ನಡೆಯುತ್ತಿದೆಯಾ?
ಯಾವತ್ತೂ ಹಾಗೆ ಅನ್ನಿಸಿರಲಿಲ್ಲ. ಈಗೀಗ ನನಗೂ ಷಡ್ಯಂತ್ರ ಎಂದೆನಿಸಲು ಶುರುವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ತರುವ ಪ್ರಯತ್ನ ಇದ್ದರೂ ಇರಬಹುದು.
ಮನೆಯವರ ಬೆಂಬಲ ಹೇಗಿದೆ?
ಅವರ ಪ್ರೋತ್ಸಾಹದ ನುಡಿಗಳು ಇಲ್ಲದಿರುತ್ತಿದ್ದರೆ ನಾನು ಇಂದು ಇಲ್ಲಿ ತನಕ ಬಂದು ನಿಲ್ಲುತ್ತಲೇ ಇರುತ್ತಿರಲಿಲ್ಲ.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.