ಆ್ಯಂಡರ್ಸನ್ 500 ವಿಕೆಟ್; ಇಂಗ್ಲೆಂಡಿನ ಮೊದಲ ಸಾಧಕ
Team Udayavani, Sep 10, 2017, 7:40 AM IST
ಲಂಡನ್: ಇಂಗ್ಲೆಂಡಿನ ವೇಗಿ ಜೇಮ್ಸ್ ಆ್ಯಂಡರ್ಸನ್ ಲಾರ್ಡ್ಸ್ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ “500 ವಿಕೆಟ್ ಕ್ಲಬ್’ಗೆ ಸೇರ್ಪಡೆಗೊಂಡ ಅಪರೂಪದ ಬೌಲರ್ ಆಗಿ ಮೂಡಿಬಂದರು. ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಉರುಳಿಸಿದ ಇಂಗ್ಲೆಂಡಿನ ಮೊದಲ ಬೌಲರ್ ಎಂಬುದು ಆ್ಯಂಡರ್ಸನ್ ಪಾಲಿನ ಹೆಗ್ಗಳಿಕೆ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಆರಂಭಕಾರ ಕ್ರೆಗ್ ಬ್ರಾತ್‌ವೇಟ್ ಅವರನ್ನು ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಆ್ಯಂಡರ್ಸನ್ 500 ವಿಕೆಟ್ ಬೇಟೆಯನ್ನು ಪೂರ್ತಿಗೊಳಿಸಿದರು. ಇದು ಅವರ 129ನೇ ಟೆಸ್ಟ್.
ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಆಡಲಿಳಿಯುವಾಗ ಆ್ಯಂಡರ್ಸನ್ ಖಾತೆಯಲ್ಲಿ 497 ವಿಕೆಟ್ ಇತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಕಿತ್ತು ಇದನ್ನು 499ಕ್ಕೆ ವಿಸ್ತರಿಸಿದರು. ದ್ವಿತೀಯ ಇನ್ನಿಂಗ್ಸಿನ 2ನೇ ಓವರಿನ ಅಂತಿಮ ಎಸೆತದಲ್ಲಿ 500 ವಿಕೆಟ್ ಸಾಧನೆಯನ್ನು ಪೂರ್ತಿಗೊಳಿಸಿದರು.
ಆ್ಯಂಡರ್ಸನ್ ಟೆಸ್ಟ್ ಇತಿಹಾಸದಲ್ಲಿ 500 ವಿಕೆಟ್ ಕಿತ್ತ ಕೇವಲ 6ನೇ ಬೌಲರ್ ಹಾಗೂ 3ನೇ ವೇಗಿ. 800 ವಿಕೆಟ್ ಉರುಳಿಸಿದ ಮುತ್ತಯ್ಯ ಮುರಳೀಧರನ್‌ಗೆ ಅಗ್ರಸ್ಥಾನ. ಅನಂತರದ ಸ್ಥಾನದಲ್ಲಿರುವವರು ಶೇನ್ ವಾರ್ನ್ (708), ಅನಿಲ್ ಕುಂಬ್ಳೆ (619), ಗ್ಲೆನ್ ಮೆಕ್‌ಗ್ರಾತ್ (563) ಮತ್ತು ಕೋರ್ಟ್ನಿ ವಾಲ್ಶ್ (519).
ಇಂಗ್ಲೆಂಡಿನ ಉಳಿದ ಯಾವುದೇ ಬೌಲರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ 400ರ ಗಡಿಯನ್ನೂ ಮುಟ್ಟಿಲ್ಲ ಎಂಬುದನ್ನು ಗಮನಿಸುವಾಗ ಆ್ಯಂಡರ್ಸನ್ ಸಾಧನೆ ನಿಜಕ್ಕೂ ಅಸಾಮಾನ್ಯವೆನಿಸುತ್ತದೆ. ದ್ವಿತೀಯ ಸ್ಥಾನದಲ್ಲಿರುವ ಆಂಗ್ಲ ಬೌಲರ್ ಸ್ಟುವರ್ಟ್ ಬ್ರಾಡ್. ಲಾರ್ಡ್ಸ್ ಪಂದ್ಯಕ್ಕೂ ಮುನ್ನ ಬ್ರಾಡ್ ಗಳಿಕೆ 387 ವಿಕೆಟ್. ಇತ್ತೀಚೆಗಷ್ಟೇ ಅವರು ಇಯಾನ್ ಬೋಥಂ ದಾಖಲೆಯನ್ನು ಮುರಿದಿದ್ದರು (383 ವಿಕೆಟ್).
ಲಾರ್ಡ್ಸ್‌ನಲ್ಲಿ ಸರ್ವಾಧಿಕ ವಿಕೆಟ್
ಈ ಸಾಧನೆಯ ವೇಳೆ “ಆ್ಯಂಡಿ’ ಇನ್ನೊಂದು ಮೈಲುಗಲ್ಲನ್ನೂ ನೆಟ್ಟರು. ಕ್ರಿಕೆಟಿನ ಪ್ರತಿಷ್ಠಿತ ಅಂಗಳವಾದ ಲಾರ್ಡ್ಸ್‌ನಲ್ಲಿ ಸರ್ವಾಧಿಕ 84 ವಿಕೆಟ್ ಕಿತ್ತ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು (21 ಟೆಸ್ಟ್). ಕಾಕತಾಳೀಯವೆಂದರೆ, ಅವರ 500ನೇ ವಿಕೆಟೇ ಲಾರ್ಡ್ಸ್ ಅಂಗಳದ ದಾಖಲೆಯ ವಿಕೆಟ್ ಕೂಡ ಆಗಿತ್ತು! ಲಾರ್ಡ್ಸ್‌ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಈವರೆಗಿನ ದಾಖಲೆ ಸ್ಟುವರ್ಟ್ ಬ್ರಾಡ್ ಹೆಸರಲ್ಲಿತ್ತು. ಈ ಪಂದ್ಯಕ್ಕೂ ಮುನ್ನ ಬ್ರಾಡ್ ಇಲ್ಲಿ 76 ವಿಕೆಟ್ ಉರುಳಿಸಿದ್ದಾರೆ.
ಇದರೊಂದಿಗೆ ಒಂದೇ ಅಂಗಳದಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ಸಾಧನೆಯೂ ಆ್ಯಂಡರ್ಸನ್ ಅವರದಾಯಿತು. ಹರಾರೆಯಲ್ಲಿ 83 ವಿಕೆಟ್ ಹಾರಿಸಿದ ಹೀತ್ ಸ್ಟ್ರೀಕ್ ದಾಖಲೆ ಪತನಗೊಂಡಿತು (19 ಟೆಸ್ಟ್). ಉಳಿದಂತೆ ಮೆಲ್ಬರ್ನ್ನಲ್ಲಿ ಡೆನ್ನಿಸ್ ಲಿಲ್ಲಿ 82 ವಿಕೆಟ್, ಕೊಲಂಬೋದ ಎಸ್‌ಎಸ್‌ಸಿಯಲ್ಲಿ ಚಾಮಿಂಡ ವಾಸ್ 80 ವಿಕೆಟ್, ಕ್ರೈಸ್ಟ್‌ಚರ್ಚ್‌ನಲ್ಲಿ ರಿಚರ್ಡ್ ಹ್ಯಾಡ್ಲಿ 76 ವಿಕೆಟ್ ಉರುಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.