ಕಬಡ್ಡಿ: ಚಿನ್ನದ ಪದಕ ಗೆದ್ದ ಗ್ರಾಮೀಣ ಪ್ರತಿಭೆ ಚೇತನ್ ಗೌಡ
ಅದಮ್ಯ ಉತ್ಸಾಹ, ನಿರಂತರ ಅಭ್ಯಾಸ, ಕಠಿನ ಪರಿಶ್ರಮದಿಂದ ಸಾಧನೆಗೈದ ಯುವಕ
Team Udayavani, Aug 31, 2019, 5:00 AM IST
ಪ್ರತಿಭೆ ಮತ್ತು ಕಠಿಣ ಪರಿಶ್ರಮ ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ನಮ್ಮ ಕಣ್ಣಮುಂದಿವೆ. ಇಂತಹ ಪ್ರತಿಭೆಯಲ್ಲಿ ಓರ್ವ ಕಬಡ್ಡಿ ಸಾಧಕ ಚೇತನ್ ಗೌಡ.
ಭಾರತದ ಗ್ರಾಮೀಣ ಆಟ ಕಬಡ್ಡಿ, ಗ್ರಾಮೀಣ ಯುವ ಪೀಳಿಗೆಯ ಕನಸಿನ ಕೂಸು. ಕಬಡ್ಡಿಯ ಕುರಿತು ಅಪಾರ ಪ್ರೀತಿ ಬೆಳೆಸಿಕೊಂಡು ಸಣ್ಣ ವಯಸ್ಸಿನಲ್ಲೇ ಬಹಳಷ್ಟು ತೊಡಕುಗಳನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವವರು ಚೇತನ್ ಗೌಡ. ಈತ ಪ್ರಸ್ತುತ ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಾರೆ. ಇವರು ಮಿತ್ತೂರು ಸಮೀಪದ ಕುವೆತ್ತಿಲ ನಿವಾಸಿ ಶಾಂತಪ್ಪ ಗೌಡ ಹಾಗೂ ಲತಾ ದಂಪತಿ ಪುತ್ರ.
ಶಾಲಾ ಹಂತದಲ್ಲಿಯೇ ಆ್ಯತ್ಲೆಟಿಕ್ಸ್‌ನಲ್ಲಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡ ಕ್ರೀಡಾ ಪ್ರತಿಭೆ ಚೇತನ್. ಇಂತಹ ಸಂದರ್ಭ ಈತನ ಆಸಕ್ತಿಯನ್ನು ಗಮನಿಸಿದ ದೈಹಿಕ ಶಿಕ್ಷಣ ಶಿಕ್ಷಕಿ ಸುಚಿತಾ ಅವರು ಚಿನ್ನವನ್ನು ಒರೆಗೆ ಹಚ್ಚುವಂತೆ ಈತನಲ್ಲಿ ಇರುವ ಸಾಮರ್ಥ್ಯವು ಹೊರಹೊಮ್ಮುವಂತೆ ಮಾರ್ಗದರ್ಶನ ನೀಡಿ ಇದೀಗ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತ ರಾಗಿದ್ದಾರೆ.
ಚೇತನ್‌ಗೆ ಬಾಲ್ಯದಲ್ಲಿಯೇ ಕಬಡ್ಡಿಯಲ್ಲಿ ಅತೀವ ಪ್ರೀತಿ. ಅದಮ್ಯ ಉತ್ಸಾಹ. ಎಳವೆಯಿಂದಲೇ ಕಬಡ್ಡಿ ನೋಡುತ್ತಾ ಬೆಳೆದ ಈತ ತನ್ನ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಗುರುಗಳ ಮನೆಯವರ ಪ್ರೋತ್ಸಾಹ ಈತನನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.
ತಂದೆಯೇ
ಮೊದಲು ಗುರು
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಚೇತನ್‌ಗೆ ಅವರ ತಂದೆಯೇ ಮೊದಲ ಗುರು. ಈ ಪ್ರತಿಭೆಗೆ ಪ್ರೋತ್ಸಾಹ ನೀಡಿ ಎಲ್ಲಾವೂ ನಿನ್ನಿಂದ ಸಾಧ್ಯ. ನೀನು ಸಾಧಿಸಬಲ್ಲೆ ಎಂದು ಹುರಿದುಂಬಿಸಿ, ಆತನಲ್ಲಿದ್ದ ಪ್ರತಿಭೆಯನ್ನು ಬಡಿದೆಬ್ಬಿಸಿದ ಮಾರ್ಗದರ್ಶಕ. ಈತನ ಕನಸಿಗೆ ಸಾಕಾರ ನೀಡಿದ ಪರಿಣಾಮವಾಗಿ ಅವಿರತ ಪ್ರಯತ್ನದಿಂದ ಹರಿಯಾಣದಲ್ಲಿ ನಡೆದ ಆಲ್ ಇಂಡಿಯಾ ಕಬಡ್ಡಿ ಚಾಂಪಿಯನ್‌ಶಿಪ್ ಪದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಗೋಲ್ಡ್ ಮೆಡಲ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಹೀಗೆಯೇ ತನ್ನನ್ನು ಬೆಳೆಸಿ, ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿದ ಗುರುಗಳನ್ನು ನೆನಪಿಸುವ ಚೇತನ್ ಗೌಡ ಅದೆಷ್ಟೇ ನೋವಿರಲಿ, ಕ್ರೀಡಾಪಟುವೊಬ್ಬ ಮೈದಾನಕ್ಕೆ ಕಾಲಿಟ್ಟಾಗ ಆ ಎಲ್ಲ ನೋವನ್ನು ಮಾಯ ಮಾಡುವ ಶಕ್ತಿ ಕ್ರೀಡೆಗಿದೆ. ಅದೇ ರೀತಿಯಲ್ಲಿ ಮಾನಸಿಕ ನೆಮ್ಮದಿ ಜತೆಗೆ ದೈಹಿಕ ಸ್ಥೈರ್ಯ ನೀಡುತ್ತದೆ ಎನ್ನುತ್ತಾರೆ. ಸಾಧನೆಯ ಹಾದಿಯಲ್ಲಿ ತೊಡಕುಗಳು ಸಹಜ. ಅವೆಲ್ಲವನ್ನೂ ಹಿಮ್ಮೆಟ್ಟಿ ನಿಂತಾಗ ಯಶಸ್ಸು ಖಂಡಿತ ದೊರೆಯುತ್ತದೆ ಎನ್ನುವುದು ಕ್ರೀಡಾಪಟು ಚೇತನ್ ಗೌಡ ಅವರ ಅಭಿಪ್ರಾಯ.
ಕಬಡ್ಡಿಯಲ್ಲಿ ವಿಶೇಷ ಸಾಧಕನಾಗಿ ಹೊರಹೊಮ್ಮಬೇಕೆಂಬ ಮಹದಾಸೆಯನ್ನು ಹೊಂದಿರುವ ಚೇತನ್ ಗೌಡ ತನ್ನ ಮುಂದಿನ ಕ್ರೀಡಾ ಭವಿಷ್ಯದಲ್ಲಿ ಧ್ರುವತಾರೆಯಂತೆ ಹೊಳೆದು ತನ್ನ ಹೆಸರನ್ನು ಜಗದೆಲ್ಲೆಡೆ ಪಸರಿಸಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
ಆಲ್‌ರೌಂಡರ್ ಆಟಗಾರ
ಈಗಾಗಲೇ ಒಪನ್ ಮ್ಯಾಚ್ ಮತ್ತು ರಾಜ್ಯಮಟ್ಟದ ಮ್ಯಾಚ್‌ಗಳಲ್ಲಿ ಗುರುತಿಸಿಕೊಂಡು ಯುವಪೀಳಿಗೆಯಲ್ಲಿ ಸಾಧಿಸುವ ಛಲ ತುಂಬಲು ಅವರು ಮಾದರಿಯಾಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ, ಕೇನ್ಯಾದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ಯುವಕ ಮಂಡಲವನ್ನು ಪ್ರತಿನಿಧಿಸುವ ಚೇತನ್ ಗೌಡ ಒಬ್ಬ ಆಲ್ ರೌಂಡರ್ ಆಟಗಾರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.