ಕಿರಿಯರಿಗೆ ಕಿರೀಟ; ಭಾರತಕ್ಕೆ ಕೀರ್ತಿ
Team Udayavani, Feb 4, 2018, 6:00 AM IST
ಮೌಂಟ್ ಮಾಂಗನಿ (ನ್ಯೂಜಿಲ್ಯಾಂಡ್): ಭಾರತದ ಅಸಂಖ್ಯ ಕ್ರೀಡಾಭಿಮಾನಿಗಳ ಕನಸು, ನಿರೀಕ್ಷೆಗಳೆಲ್ಲ ದೂರದ ನ್ಯೂಜಿಲ್ಯಾಂಡಿನಲ್ಲಿ ಸಾಕಾರಗೊಂಡ ಮಹೋನ್ನತ ಕ್ಷಣವಿದು. ಭಾರತದ ಭವಿಷ್ಯದ ಕ್ರಿಕೆಟ್ ತಾರೆಗಳ ವೈಭವ, ಮೆರೆದಾಟವನ್ನೆಲ್ಲ ಕಣ್ತುಂಬಿಸಿಕೊಂಡ ಸಂಭ್ರಮದ ಗಳಿಗೆ ಇದು. ಇದು ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಫೈನಲ್. ಈ ಕಿರಿಯರ ಕ್ರಿಕೆಟ್ ಸಾಮ್ರಾಜ್ಯಕ್ಕೆ ಭಾರತ 4ನೇ ಸಲ ಅಧಿಪತಿಯಾಗಿದೆ.
ಶನಿವಾರ ನಡೆದ ಪ್ರಶಸ್ತಿ ಸೆಣಸಾಟದಲ್ಲಿ “ಗೋಡೆ’ ರಾಹುಲ್ ದ್ರಾವಿಡ್ ಅವರಿಂದ ತರಬೇತಿ ಪಡೆದ, ಪೃಥ್ವಿ ಶಾ ನೇತೃತ್ವದ “ಜೂನಿಯರ್ ಟೀಮ್ ಇಂಡಿಯಾ’ ಆಸ್ಟ್ರೇಲಿಯವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿ ಕಿರೀಟ ಏರಿಸಿಕೊಂಡು ಮೆರೆದಿದೆ. ಇತ್ತ ದೇಶದಲ್ಲಿ ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿದೆ!
ಇಲ್ಲಿನ “ಬೇ ಓವಲ್’ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ಭಾರೀ ಮೊತ್ತದ ಮುನ್ಸೂಚನೆ ನೀಡಿ 47.2 ಓವರ್‌ಗಳಲ್ಲಿ 216 ರನ್ನಿಗೆ ಕುಸಿದರೆ, ಯಾವುದೇ ಒತ್ತಡವಿಲ್ಲದೆ ಜವಾಬು ನೀಡತೊಡಗಿದ ನೆಚ್ಚಿನ ಭಾರತ 38.5 ಓವರ್‌ಗಳಲ್ಲಿ ಎರಡೇ ವಿಕೆಟ್ ನಷ್ಟಕ್ಕೆ 220 ರನ್ ಬಾರಿಸಿ ಇತಿಹಾಸ ನಿರ್ಮಿಸಿತು. ಇದು ದ್ರಾವಿಡ್ ಕೋಚಿಂಗ್ ಅವಧಿಯಲ್ಲಿ ಭಾರತೀಯ ಕ್ರಿಕೆಟಿಗೆ ಲಭಿಸಿದ ಅತಿ ದೊಡ್ಡ ಯಶಸ್ಸು. 2016ರಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲೇ ಆಡಿದ್ದ ಭಾರತ ಫೈನಲ್‌ನಲ್ಲಿ ವೆಸ್ಟ್ ಇಂಡೀಸಿಗೆ ಶರಣಾಗಿ ನಿರಾಸೆ ಅನುಭವಿಸಿತ್ತು. ಅಂದು ಜಾರಿದ ವಿಶ್ವಕಪ್ ಇಂದು ಭಾರತದ ಮಡಿಲನ್ನು ಸೇರಿದೆ.
ಇದಕ್ಕೂ ಮುನ್ನ 2000, 2008 ಮತ್ತು 2012ರಲ್ಲಿ ಭಾರತ ಚಾಂಪಿಯನ್ ಆಗಿ ಮೂಡಿಬಂದಿತ್ತು. 2018ರ ಜಯಭೇರಿಯೊಂದಿಗೆ ಭಾರತ ಅತ್ಯಧಿಕ 4 ಸಲ ಅಂಡರ್-19 ವಿಶ್ವಕಪ್ ಗೆದ್ದ ತಂಡವಾಗಿ ಹೊರಹೊಮ್ಮಿತು. ಭಾರತ ಮತ್ತು ಆಸ್ಟ್ರೇಲಿಯ ತಲಾ 3 ಚಾಂಪಿಯನ್‌ಶಿಪ್‌ನೊಂದಿಗೆ ಪ್ರಶಸ್ತಿ ಸುತ್ತಿಗೆ ಏರಿಬಂದಿದ್ದವು. ಇಲ್ಲಿ ಯಾರೇ ಗೆದ್ದರೂ ಇತಿಹಾಸ ನಿರ್ಮಾಣಗೊಳ್ಳುತ್ತಿತ್ತು. ಈ ಅದೃಷ್ಟ ಭಾರತದ್ದಾಯಿತು.
ಮನ್‌ಜೋತ್ ಮೋಹಕ ಶತಕ
ಭಾರತದ ಚೇಸಿಂಗ್ ವೇಳೆ ದಿಲ್ಲಿಯ ಎಡಗೈ ಆರಂಭಕಾರ ಮನ್‌ಜೋತ್ ಕಾಲ್ರಾ ಮನಮೋಹಕ ಶತಕ ಬಾರಿಸಿ ಎಲ್ಲರ ಮನಗೆದ್ದರು. ಭಾರತದ ಮೊತ್ತದಲ್ಲಿ ಕಾಲ್ರಾ ಕಾಣಿಕೆ ಅಜೇಯ 101 ರನ್. ಕಾಲ್ರಾ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಸೆಂಚುರಿ ಬಾರಿಸಿದ ಭಾರತದ 2ನೇ ಬ್ಯಾಟ್ಸ್‌ಮನ್. ದಿಲ್ಲಿಯವರೇ ಆದ ಉನ್ಮುಕ್¤ ಚಾಂದ್ ಮೊದಲಿಗ. ನಾಯಕನೂ ಆಗಿದ್ದ ಆರಂಭಕಾರ ಚಾಂದ್ 2012ರಲ್ಲಿ ಆಸ್ಟ್ರೇಲಿಯ ವಿರುದ್ಧವೇ ಅಜೇಯ 111 ರನ್ ಬಾರಿಸಿದ್ದರು. 102 ಎಸೆತಗಳನ್ನು ನಿಭಾಯಿಸಿದ ಕಾಲಾÅ 8 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ ಮೆರೆದರು. ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಭಾರತದ ವೀಕ್ಷಕರಿಗೆ ಭರಪೂರ ಕ್ರಿಕೆಟ್ ರಂಜನೆ ಒದಗಿಸಿದರು. ಈ ಫೈನಲ್‌ನಲ್ಲಿ ಕಾಲಾÅ ಹೊರತುಪಡಿಸಿ ಬೇರೆ ಯಾರೂ ಸಿಕ್ಸರ್ ಎತ್ತದಿರುವುದು ಗಮನಿಸಬೇಕಾದ ಸಂಗತಿ.
ಉಳಿದಂತೆ ನಾಯಕ ಪೃಥ್ವಿ ಶಾ 29 ರನ್ (41 ಎಸೆತ, 4 ಬೌಂಡರಿ), ಶುಭಮ್ ಗಿಲ್ 31 ರನ್ (30 ಎಸೆತ, 4 ಬೌಂಡರಿ) ಹಾಗೂ ಹಾರ್ವಿಕ್ ದೇಸಾಯಿ ಅಜೇಯ 47 ರನ್ (61 ಎಸೆತ, 5 ಬೌಂಡರಿ) ಹೊಡೆದು ತಂಡವನ್ನು ನಿರಾಯಾಸವಾಗಿ ದಡ ತಲುಪಿಸಿದರು.
ಮನ್‌ಜೋತ್ ಕಾಲ್ರಾ ಒಟ್ಟು 3 ಉಪಯುಕ್ತ ಜತೆಯಾಟಗಳಲ್ಲಿ ಭಾಗಿಯಾದರು. ಶಾ-ಕಾಲಾÅ ಆರಮಭಿಕ ವಿಕೆಟಿಗೆ 11.4 ಓವರ್‌ಗಳಿಂದ 74 ರನ್ ಪೇರಿಸಿದಾಗಲೇ ಭಾರತದ ಗೆಲುವು ಖಾತ್ರಿಯಾಗಿತ್ತು. ಬಳಿಕ ಕಾಲಾÅ-ಗಿಲ್ 2ನೇ ವಿಕೆಟಿಗೆ 60 ರನ್ ಒಟ್ಟುಗೂಡಿಸಿದರು. ಅನಂತರ ಕಾಲಾÅ-ದೇಸಾಯಿ ಮುರಿಯದ 3ನೇ ವಿಕೆಟಿಗೆ 89 ರನ್ ಸೂರೆಗೈದರು.
ಜೋಶ್ ತೋರದ ಆಸೀಸ್
“ಬಿ’ ವಿಭಾಗದ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯವನ್ನೇ ಮಣಿಸಿ ಗೆಲುವಿನ ಅಭಿಯಾನ ಆರಂಭಿಸಿದ್ದ ಭಾರತ ತಂಡ, ಆಸ್ಟ್ರೇಲಿಯವನ್ನು ಬಗ್ಗುಬಡಿಯುವ ಮೂಲಕವೇ ಚಾಂಪಿಯನ್ ಆದದ್ದು ಈ ಕೂಟದ ವಿಶೇಷ. ಲೀಗ್ ಸೋಲಿಗೆ ಹಾಗೂ 2012ರ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಆಸ್ಟ್ರೇಲಿಯದ ಯೋಜನೆ ಕಾರ್ಯಗತವಾಗಲೇ ಇಲ್ಲ.
ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದ ಭಾರತ, ಈ ಪಂದ್ಯಾವಳಿಯುದ್ದಕ್ಕೂ ಅಧಿಕಾರಯುತ ಗೆಲುವುಗಳ ಮೂಲಕ ತನ್ನ ಪಾರಮ್ಯ ಸಾಧಿಸುತ್ತ ಬಂತು. ಇದಕ್ಕೆ ಪ್ರಶಸ್ತಿ ಸೆಣಸಾಟವೂ ಹೊರತಾಗಲಿಲ್ಲ. ಪೃಥ್ವಿ ಶಾ ಪಡೆಯ ಎದುರು ಜಾಸನ್ ಸಂಗ ಸಾರಥ್ಯದ ಆಸ್ಟ್ರೇಲಿಯ ತೀರಾ ಸಾಮಾನ್ಯ ತಂಡವಾಗಿ ಕಂಡುಬಂತು. ಅದು ಎಲ್ಲಿಯೂ “ಫೈನಲ್ ಜೋಶ್’ ತೋರಲಿಲ್ಲ. ಭಾರತದ ಪ್ರಾಬಲ್ಯದ ಮುಂದೆ ಕಾಂಗರೂ ಕ್ರಿಕೆಟಿಗರು ಸಂಪೂರ್ಣ ಮಂಕಾದರು.
ಕಾಂಗರೂ ಓಟಕ್ಕೆ ಕಡಿವಾಣ
ಮೊದಲು ಬ್ಯಾಟಿಂಗಿಗೆ ಇಳಿದಿದ್ದ ಆಸ್ಟ್ರೇಲಿಯ ಒಂದು ಹಂತದಲ್ಲಿ 4 ವಿಕೆಟಿಗೆ 183 ರನ್ ಪೇರಿಸಿ ಮುನ್ನುಗ್ಗುತ್ತಿತ್ತು. ಇದನ್ನು ಕಂಡಾಗ ಕಾಂಗರೂ ಮೊತ್ತ 250ರ ಗಡಿ ದಾಟುವ ಎಲ್ಲ ಸಾಧ್ಯತೆ ಇತ್ತು. ಆದರೆ ಕೊನೆಯ 12 ಓವರ್‌ಗಳಲ್ಲಿ ಭಾರತದ ಬೌಲಿಂಗ್ ಹರಿತಗೊಂಡಿತು. ಆಸೀಸ್‌ನ ಕೊನೆಯ 6 ವಿಕೆಟ್ ಬರೀ 33 ರನ್ ಅಂತರದಲ್ಲಿ ಉರುಳಿ ಹೋಯಿತು!
ಭಾರತ ಸಾಂ ಕ ಬೌಲಿಂಗ್ ಆಕ್ರಮಣದ ಮೂಲಕ ಆಸೀಸ್ ಮೇಲೆರಗಿತು. ಪೊರೆಲ್, ಶಿವ ಸಿಂಗ್, ನಾಗರಕೋಟಿ, ರಾಯ್ ತಲಾ 2 ವಿಕೆಟ್ ಹಾರಿಸಿದರು. ಮಾವಿಗೆ ಒಂದು ವಿಕೆಟ್ ಲಭಿಸಿತು.
ಆಸ್ಟ್ರೇಲಿಯ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಜೊನಾಥನ್ ಮೆರ್ಲೊ (76) ಮತ್ತು ಪರಮ್ ಉಪ್ಪಲ್ (34) ಉತ್ತಮ ಹೋರಾಟ ಸಂಘಟಿಸಿ 4ನೇ ವಿಕೆಟಿಗೆ 75 ರನ್ ಪೇರಿಸಿದರು. ಎಡ್ವರ್ಡ್ಸ್ 28, ಮೆಕ್‌ಸ್ವೀನಿ 23 ರನ್ ಮಾಡಿದರು.
ಇದೇ ಕೊನೆಯ ಸಾಧನೆ ಅಲ್ಲ: ದ್ರಾವಿಡ್
ಭಾರತದ ಗೆಲುವಿನ ಬಹುಪಾಲು ಶ್ರೇಯಸ್ಸು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಲ್ಲುವುದರಲ್ಲಿ ಅನುಮಾನವಿಲ್ಲ. ಈ ಸಂದರ್ಭದಲ್ಲಿ ಕಿರಿಯ ಕ್ರಿಕೆಟಿಗರ ಸಾಹಸವನ್ನು ಪ್ರಶಂಸಿದ ದ್ರಾವಿಡ್, ಇದು ಈ ಕ್ರಿಕೆಟಿಗರ ಕೊನೆಯ ಸಾಧನೆಯಲ್ಲ ಎಂದರು.
“ಇದು ಸುದೀರ್ಘ ಕಾಲ ನೆನಪಲ್ಲಿ ಉಳಿಯುವ ಸ್ಮರಣೀಯ ಸಾಧನೆ. ಇದೊಂದು ಪ್ರತಿಭಾನಿತ್ವರ ಗೊಂಚಲು. ಇವರ ಪಾಲಿಗೆ ಇದೇ ಕೊನೆಯ ಮಹಾನ್ ಸಾಧನೆ ಅಲ್ಲ. ಭವಿಷ್ಯದಲ್ಲಿ ಇದಕ್ಕಿಂತ ಮಿಗಿಲಾದ ಸಾಧನೆಗಳನ್ನು ಇವರು ಮಾಡಲಿದ್ದಾರೆ. ಭಾರತದ ವಿಶ್ವಕಪ್ ಗೆಲುವಿನಲ್ಲಿ ಕ್ರಿಕೆಟಿಗರ ಸಾಂ ಕ ಪರಿಶ್ರಮ ಎದ್ದು ಕಾಣುತ್ತದೆ. ಇಲ್ಲಿ ನಾನು ವೈಯಕ್ತಿಕವಾಗಿ ಯಾರ ಹೆಸರನ್ನೂ ಹೇಳಬಯಸುವುದಿಲ್ಲ. ಇವರ ಯಶಸ್ಸಿಗಾಗಿ ಸಹಾಯಕ ಸಿಬಂದಿಗಳೆಲ್ಲ ಶಕ್ತಿಮೀರಿ ಶ್ರಮಿಸಿದ್ದಾರೆ’ ಎಂದು ದ್ರಾವಿಡ್ ಹೇಳಿದರು.
ಶ್ರೇಯಸ್ಸೆಲ್ಲ ರಾಹುಲ್ ಸರ್‌ಗೆ: ಪೃಥ್ವಿ ಶಾ
ಈ ಸಂದರ್ಭದಲ್ಲಿ ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ಗೆಲುವಿನ ಎಲ್ಲ ಶ್ರೇಯಸ್ಸು ಕೋಚ್ ರಾಹುಲ್ ದ್ರಾವಿಡ್ ಸರ್‌ಗೆ ಸಲ್ಲಬೇಕು ಎಂದವರು ವಿಶ್ವವಿಜೇತ ಭಾರತ ತಂಡದ ನಾಯಕ ಪೃಥ್ವಿ ಶಾ.
“ಯಶಸ್ಸಿನ ಎಲ್ಲ ಶ್ರೇಯಸ್ಸು ಸಹಾಯಕ ಸಿಬಂದಿಗಳಿಗೆ, ಅದರಲ್ಲೂ ಮುಖ್ಯವಾಗಿ ಕೋಚ್ ರಾಹುಲ್ ಸರ್ ಅವರಿಗೆ ಸಲ್ಲುತ್ತದೆ. ಅವರೋರ್ವ ಲೆಜೆಂಡ್. ಹಾಗೆಯೇ ತಂಡದ ಎಲ್ಲ ಆಟಗಾರರೂ ಯಶಸ್ಸಿನಲ್ಲಿ ಭಾಗಿಗಳು. ಫೈನಲ್ ಬಗ್ಗೆ ಹೇಳಬೇಕಾದರೆ, ಮನ್‌ಜೋತ್ ಶತಕ ಅತ್ಯಂತ ನಿರ್ಣಾಯಕವಾಗಿತ್ತು. ಕೂಟದಲ್ಲಿ ಗಿಲ್, ಮಾವಿ, ನಾಗರಕೋಟಿ ಸಾಧನೆ ಅಮೋಘವಾಗಿತ್ತು’ ಎಂದರು.
ವಿಶ್ವವಿಜೇತರಿಗೆ ಬಿಸಿಸಿಐ ಬಹುಮಾನ
ಅಂಡರ್-19 ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ವಿಜೇತ ಭಾರತ ತಂಡಕ್ಕೆ ಹಾಗೂ ಸಹಾಯಕ ಸಿಬಂದಿಗಳಿಗೆ ಬಿಸಿಸಿಐ ಬಹುಮಾನ ಘೋಷಿಸಿದೆ. ಇದರಲ್ಲಿ ದೊಡ್ಡ ಪಾಲು, 50 ಲಕ್ಷ ರೂ. ಮೊತ್ತ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಲ್ಲಲಿದೆ. ಉಳಿದಂತೆ ತಂಡದ ಎಲ್ಲ ಆಟಗಾರರಿಗೆ ತಲಾ 30 ಲಕ್ಷ ರೂ. ಪಡೆಯಲಿದ್ದಾರೆ. ಫೀಲ್ಡಿಂಗ್ ಕೋಚ್ ಅಭಯ್ ಶರ್ಮ ಮತ್ತು ಬೌಲಿಂಗ್ ಕೋಚ್ ಪರಸ್ ಮಾಂಬ್ರೆ ಅವರಿಗೆ ತಲಾ 20 ಲಕ್ಷ ರೂ. ಸಿಗಲಿದೆ. ಪ್ರಶಸ್ತಿ ವಿಜೇತ ಬಹುಮಾನದ ಮೊತ್ತವನ್ನು ಸಂಪ್ರದಾಯದಂತೆ ಆಟಗಾರರೆಲ್ಲ ಹಂಚಿಕೊಳ್ಳಲಿದ್ದಾರೆ.
“ಭಾರತ ಗುರು-ಶಿಷ್ಯ ಪರಂಪರೆಗೆ ಹೆಸರುವಾಸಿಯಾದ ದೇಶ. ಸಹಜವಾಗಿಯೇ ಇಲ್ಲಿ ಗುರುವಿಗೆ ಅಗ್ರಸ್ಥಾನ. ಕ್ರಿಕೆಟ್ ಮಟ್ಟಿಗೆ ಹೇಳುವುದಾದರೆ ಈ ಗೌರವ ತರಬೇತುದಾರನಿಗೆ ಸಲ್ಲಬೇಕು. ಹೀಗಾಗಿ ರಾಹುಲ್ ದ್ರಾವಿಡ್ ಅವರಿಗೆ ಅಧಿಕ ಮೊತ್ತ ಸಿಗಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
2008 ಹಾಗೂ 2012ರ ಗೆಲುವಿನ ವೇಳೆ ಭಾರತದ ಕೋಚ್ ಆಗಿದ್ದ ಡೇವ್ ವಾಟ್‌ಮೋರ್ ಮತ್ತು ಭರತ್ ಅರುಣ್ ಅವರಿಗೆ ನಾಯಕರಾದ ವಿರಾಟ್ ಕೊಹ್ಲಿ, ಉನ್ಮುಕ್¤ ಚಾಂದ್ ಅವರಿಗಿಂತ ಹೆಚ್ಚಿನ ಮೊತ್ತ ನೀಡಿದ್ದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖೀಸಿದರು.
ವಿಶ್ವಕಪ್ ಗೆದ್ದ ತಂಡವನ್ನು ಬಿಸಿಸಿಐ ಪ್ರಭಾರ ಅಧ್ಯಕ್ಷ ಸಿ.ಕೆ. ಖನ್ನಾ ಅಭಿನಂದಿಸಿದ್ದಾರೆ.
ಬಿಸಿಸಿಐಗೆ ಬಡತನವೇ?!
ಆದರೆ ಬಿಸಿಸಿಐ ಘೋಷಿಸಿದ ಪ್ರಶಸ್ತಿ ಮೊತ್ತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೊತ್ತ ಕಡಿಮೆಯಾಯಿತು, ಆಟಗಾರರಿಗೆ ಕನಿಷ್ಠ ಒಂದು ಕೋಟಿ ರೂ. ಮೊತ್ತವನ್ನದಾರೂ ನೀಡಬೇಕಿತ್ತು ಎಂದಿರುವ ಇವರು, ಬಿಸಿಸಿಐ ಅಷ್ಟೊಂದು ಬಡತನದಲ್ಲಿದ್ದೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಅಭಿನಂದನೆಗಳ ಮಹಾಪೂರ
ಅಂಡರ್-19 ವಿಶ್ವಕಪ್ ವಿಜೇತ ತಂಡಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ “ದ್ರಾವಿಡ್ ಬಾಯ್ಸ’ ಸಾಧನೆಯದ್ದೇ ಕಲರವ! ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹವಾಗ್, ಯುವರಾಜ್ ಸಿಂಗ್ ಸೇರಿದಂತೆ ಖ್ಯಾತನಾಮರೆಲ್ಲ ಕಂಗ್ರಾಟ್ಸ್ ಹೇಳಿದ್ದಾರೆ.ಗಡಿಯಾಚೆಯಿಂದ ಪಾಕಿಸ್ಥಾನದ ಮಾಜಿ ಕ್ರಿಕೆಟಿಗರಾದ ವಕಾರ್ ಯೂನಿಸ್, ಶಾಹಿದ್ ಅಫ್ರಿದಿ ಕೂಡ ಪೃಥ್ವಿ ಶಾ ಬಳಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
“ನಮ್ಮ ಯುವ ಕ್ರಿಕೆಟಿಗರ ಮಹಾನ್ ಸಾಧನೆಯಿಂದ ನಿಜಕ್ಕೂ ರೋಮಾಂಚನಗೊಂಡಿದ್ದೇನೆ. ಅಂಡರ್-19 ವಿಶ್ವಕಪ್ ಗೆದ್ದ ತಂಡಕ್ಕೆ ಅಭಿನಂದನೆಗಳು. ಪ್ರತಿಯೋರ್ವ ಭಾರತೀಯನನ್ನೂ ಇದು ಹೆಮ್ಮೆಪಡುವಂತೆ ಮಾಡಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
“ಅಂಡರ್-19 ವಿಶ್ವಕಪ್ ಕ್ರಿಕೆಟ್ ಗೆದ್ದ ಭಾರತದ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಅಭಿನಂದನೆಗಳು. ನಾಯಕ ಪೃಥ್ವಿ ಶಾ ಮತ್ತು ಹುಡುಗರಿಗೆ, ಕೋಚ್ ರಾಹುಲ್ ದ್ರಾವಿಡ್ ಸಹಿತ ಬೆಂಬಲ ಸಿಬಂದಿಗಳ ಕಠಿನ ಪರಿಶ್ರಮದ ಫಲವಿದು’ ಎಂದು ರಾಷ್ಟ್ರಪತಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.”ವಾಟ್ ಎ ವಿನ್ ಫಾರ್ ದ ಯು19 ಬಾಯ್ಸ! ಇದೊಂದು ಪ್ರಗತಿಯ ಮೆಟ್ಟಿಲು. ಇನ್ನೂ ಬಹಳಷ್ಟು ದೂರ ಕ್ರಮಿಸಲಿಕ್ಕಿದೆ. ಈ ಕ್ಷಣವನ್ನು ಎಂಜಾಯ್ ಮಾಡಿ’ ಎಂದು ವಿರಾಟ್ ಕೊಹ್ಲಿ ಶುಭ ಹಾರೈಸಿದ್ದಾರೆ.
“ಶ್ರೇಷ್ಠ ಮಟ್ಟದ ತಂಡ ಸಾಧನೆಯಿಂದ ದೊಡ್ಡ ಕನಸು ಸಾಕಾರಗೊಂಡಿದೆ. ನಮ್ಮ ವಿಶ್ವವಿಜೇತರಿಗೆ ಅಭಿನಂದನೆಗಳು. ನೀವು ನಮ್ಮನ್ನೆಲ್ಲ ಹೆಮ್ಮೆಪಡುವಂತೆ ಮಾಡಿದ್ದೀರಿ. ದ್ರಾವಿಡ್, ಮಾಂಬ್ರೆ ಅವರ ಅಮೋಘ ಮಾರ್ಗದರ್ಶನಕ್ಕೊಂದು ಸಲಾಂ’ ಎಂಬುದಾಗಿ ತೆಂಡುಲ್ಕರ್ ಹೇಳಿದ್ದಾರೆ.
ಮನ್‌ಜೋತ್ ಕಾಲ್ರಾ ಸಾಧನೆ ನಿರೀಕ್ಷಿತ: ಕೋಚ್
“ವ್ಯವಸ್ಥೆಯ ಉತ್ಪನ್ನ ಅಲ್ಲದೇ ಹೋದಾಗ ಮಾತ್ರ ನೀವು ತಾರಾ ಆಟಗಾರರಾಗಬಲ್ಲಿರಿ’ ಎಂಬ ಸಾಲನ್ನು ಡೆಲ್ಲಿ ಕ್ರಿಕೆಟ್ ಮಂಡಳಿಯ ಕಚೇರಿಯಲ್ಲಿ ಕಾಣಬಹುದು. ಇದಕ್ಕೆ ತಾಜಾ ಉದಾಹರಣೆ, ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿ ಮೆರೆದ ಎಡಗೈ ಆರಂಭಕಾರ ಮನ್‌ಜೋತ್ ಕಾಲ್ರಾ. ವಯಸ್ಸಿನ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿವಾದದಲ್ಲಿ ಹೋರಾಡಿ ಗೆದ್ದ ಕಾಲ್ರಾ ಈಗ ಕಿರಿಯರ ಕ್ರಿಕೆಟ್ ತಂಡದ ಹೀರೋಗಳಲ್ಲಿ ಒಬ್ಬರಾಗಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಕಾಲ್ರಾ ಅವರ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್, “ಮನ್‌ಜೋತ್ ಸಾಧನೆಯಿಂದ ನನಗೆ ಅಚ್ಚರಿಯಾಗಲಿಲ್ಲ. ಅವನು ಈ ಶತಕಕ್ಕೆ ಅರ್ಹನಾಗಿದ್ದ. ಅವನೋರ್ವ ಪ್ರತಿಭೆಯ ಗಣಿ. ವಿಧೇಯ ಶಿಷ್ಯ. ಕಠಿನ ಪರಿಶ್ರಮಿ. ಈ ಸಂದರ್ಭದಲ್ಲಿ ನಾನು ಆತನ ತಂದೆ ಪ್ರವೀಣ್ ಮತ್ತು ತಾಯಿ ರಂಜಿತಾ ಅವರಿಗೆ ಸಂಪೂರ್ಣ ಶ್ರೇಯಸ್ಸು ಸಲ್ಲಿಸುತ್ತೇನೆ. ಇವರು ತಮ್ಮ ಹಿರಿಯ ಮಗ ಹಿತೇಶ್‌ನನ್ನು ನನ್ನ ಬಳಿ ತರಬೇತಿಗೆ ಕಳುಹಿಸಿದ್ದರು. ಆದರೆ ಆತ ಕ್ರಿಕೆಟ್‌ನಲ್ಲಿ ಮೇಲೇರಲಿಲ್ಲ. ಬೇಸರಿಸದೆ ಮನ್‌ಜೋತ್‌ನನ್ನು ನನ್ನ ಬಳಿಯೇ ಸೇರಿಸಿದರು’ ಎಂದಿದ್ದಾರೆ. ದಿಲ್ಲಿ ಕ್ರಿಕೆಟ್ ವಲಯದಲ್ಲಿ “ಗುರೂಜಿ’ ಎಂದೇ ಗುರುತಿಸಲ್ಪಡುವ ಭಾರದ್ವಾಜ್ ಅವರು ಗಂಭೀರ್, ಉನ್ಮುಕ್¤ ಚಾಂದ್, ಐಪಿಎಲ್ ಹೀರೋ ನಿತೀಶ್ ರಾಣ ಅವರಿಗೂ ಕೋಚ್ ಆಗಿದ್ದರು.
ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ ಅಂಡರ್-19
ಜಾಕ್ ಎಡ್ವರ್ಡ್ಸ್ ಸಿ ನಾಗರಕೋಟಿ ಬಿ ಪೊರೆಲ್ 28
ಮ್ಯಾಕ್ಸ್ ಬ್ರಿಯಾಂಟ್ ಸಿ ಶರ್ಮ ಬಿ ಪೊರೆಲ್ 14
ಜಾಸನ್ ಸಂಗ ಸಿ ದೇಸಾಯಿ ಬಿ ನಾಗರಕೋಟಿ 13
ಜೊನಾಥನ್ ಮೆರ್ಲೊ ಸಿ ಶಿವ ಸಿಂಗ್ ಬಿ ರಾಯ್ 76
ಪರಮ್ ಉಪ್ಪಲ್ ಸಿ ಮತ್ತು ಬಿ ರಾಯ್ 34
ನಥನ್ ಮೆಕ್‌ಸ್ವೀನಿ ಸಿ ಮತ್ತು ಬಿ ಶಿವ ಸಿಂಗ್ 23
ವಿಲ್ ಸದರ್‌ಲ್ಯಾಂಡ್ ಸಿ ದೇಸಾಯಿ ಬಿ ಶಿವ ಸಿಂಗ್ 5
ಬಾಕ್ಸ್‌ಟರ್ ಹೋಲ್ಟ್ ರನೌಟ್ 13
ಜಾಕ್ ಇವಾನ್ಸ್ ಬಿ ನಾಗರಕೋಟಿ 1
ರಿಯಾನ್ ಹ್ಯಾಡ್ಲಿ ಸಿ ದೇಸಾಯಿ ಬಿ ಮಾವಿ 1
ಲಾಯ್ಡ ಪೋಪ್ ಔಟಾಗದೆ 0
ಇತರ 8
ಒಟ್ಟು (47.2 ಓವರ್‌ಗಳಲ್ಲಿ ಆಲೌಟ್) 216
ವಿಕೆಟ್ ಪತನ: 1-32, 2-52, 3-59, 4-134, 5-183, 6-191, 7-212, 8-214, 9-216.
ಬೌಲಿಂಗ್:
ಶಿವಂ ಮಾವಿ 8.2-1-46-1
ಇಶಾನ್ ಪೊರೆಲ್ 7-1-30-2
ಶಿವ ಸಿಂಗ್ 10-0-36-2
ಕಮಲೇಶ್ ನಾಗರಕೋಟಿ 9-0-41-2
ಅಭಿಷೇಕ್ ಶರ್ಮ 6-0-30-0
ಅನುಕೂಲ್ ರಾಯ್ 7-0-32-2
ಭಾರತ
ಪೃಥ್ವಿ ಶಾ ಬಿ ಸದರ್‌ಲ್ಯಾಂಡ್ 29
ಮನ್‌ಜೋತ್ ಕಾಲ್ರಾ ಔಟಾಗದೆ 101
ಶುಭಮನ್ ಗಿಲ್ ಬಿ ಉಪ್ಪಲ್ 31
ಹಾರ್ವಿಕ್ ದೇಸಾಯಿ ಔಟಾಗದೆ 47
ಇತರ 12
ಒಟ್ಟು (38.5 ಓವರ್‌ಗಳಲ್ಲಿ 2 ವಿಕೆಟಿಗೆ) 220
ವಿಕೆಟ್ ಪತನ: 1-71, 2-131.
ಬೌಲಿಂಗ್:
ರಿಯಾನ್ ಹ್ಯಾಡ್ಲಿ 7-0-37-0
ಜಾಕ್ ಇವಾನ್ಸ್ 5-1-30-0
ವಿಲ್ ಸದರ್‌ಲ್ಯಾಂಡ್ 6.5-0-36-1
ಜಾಕ್ ಎಡ್ವರ್ಡ್ಸ್ 1-0-15-0
ಲಾಯ್ಡ ಪೋಪ್ 5-0-42-0
ಜೊನಾಥನ್ ಮೆರ್ಲೊ 4-0-21-0
ಪರಮ್ ಉಪ್ಪಲ್ 10-0-38-1
ಪಂದ್ಯಶ್ರೇಷ್ಠ: ಮನ್‌ಜೋತ್ ಕಾಲ್ರಾ
ಸರಣಿಶ್ರೇಷ್ಠ: ಶುಭಮನ್ ಗಿಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.