Team Udayavani, Mar 31, 2019, 11:04 AM IST
ಮೊಹಾಲಿ : ಕರ್ನಾಟಕದ ಕ್ರಿಕೆಟಿಗರಾದ ಕೆ.ಎಲ್. ರಾಹುಲ್, ಮಾಯಾಂಕ್ ಅಗರ್ವಾಲ್ ಮತ್ತು ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಅವರ ಅಮೋಘ ಬ್ಯಾಟಿಂಗ್ ಸಾಹಸದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಶನಿವಾರದ ಮೊದಲ ಐಪಿಎಲ್ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಮೊಹಾಲಿಯಲ್ಲಿ ನಡೆದ ಪ್ರಸಕ್ತ ಋತುವಿನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದರೆ, ಆತಿಥೇಯ ಪಂಜಾಬ್ 18.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 177 ರನ್ ಬಾರಿಸಿ ಗೆದ್ದು ಬಂದಿತು. ಇದು 3 ಪಂದ್ಯಗಳಲ್ಲಿ ಅಶ್ವಿನ್ ಪಡೆ ದಾಖಲಿಸಿದ 2ನೇ ಜಯವಾದರೆ, ಮುಂಬೈ ಇಷ್ಟೇ ಪಂದ್ಯಗಳಲ್ಲಿ ಅನುಭವಿಸಿದ 2ನೇ ಸೋಲಾಗಿದೆ.
ರಾಹುಲ್, ಅಗರ್ವಾಲ್ ಕಮಾಲ್
ರಾಹುಲ್, ಗೇಲ್, ಅಗರ್ವಾಲ್ ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ಪಂಜಾಬ್ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ರಾಹುಲ್-ಗೇಲ್ ಸೇರಿಕೊಂಡು ಮೊದಲ ವಿಕೆಟಿಗೆ 7.2 ಓವರ್‌ಗಳಿಂದ 53 ರನ್ ಸೇರಿಸಿದರು. ಇದರಲ್ಲಿ 40 ರನ್ ಗೇಲ್ ಒಬ್ಬರದೇ ಆಗಿತ್ತು (24 ಎಸೆತ, 3 ಬೌಂಡರಿ, 4 ಸಿಕ್ಸರ್). ಗೇಲ್ ನಿರ್ಗಮನದ ಬಳಿಕ ಕರ್ನಾಟಕದ ಜೋಡಿ ಕಮಾಲ್ ಮಾಡತೊಡಗಿತು. ರಾಹುಲ್ -ಅಗರ್ವಾಲ್ 64 ರನ್ ಜತೆಯಾಟ ನಿಭಾಯಿಸಿದರು. ಗೇಲ್‌ಗಿಂತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಅಗರ್ವಾಲ್ 21 ಎಸೆತಗಳಿಂದ 43 ರನ್ ಚಚ್ಚಿದರು (4 ಬೌಂಡರಿ, 2 ಸಿಕ್ಸರ್). ರಾಹುಲ್ ಅವರದು ಅಜೇಯ 71 ರನ್ನುಗಳ ಕೊಡುಗೆ (57 ಎಸೆತ, 6
ಬೌಂಡರಿ, 1 ಸಿಕ್ಸರ್). ಡೇವಿಡ್ ಮಿಲ್ಲರ್ 15 ರನ್ ಮಾಡಿ ಔಟಾಗದೆ ಉಳಿದರು.
ಡಿ ಕಾಕ್ ಹೊಡಿಬಡಿ ಆಟ
ಮುಂಬೈ ಇಂಡಿಯನ್ಸ್ ಭರ್ಜರಿ ಆರಂಭದ ಬಳಿಕ ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿತು. ಆದರೆ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಸಿಡಿದು ನಿಂತದ್ದರಿಂದ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.
ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ರೋಹಿತ್ ಶರ್ಮ ಸೇರಿಕೊಂಡು ಪಂಜಾಬ್ ಬೌಲರ್‌ಗಳ ಮೇಲೆರಗಿ ಹೋದರು. ಹತ್ತರ ಸರಾಸರಿಯಲ್ಲಿ ರನ್ ಪೇರಿಸತೊಡಗಿದ ಈ ಜೋಡಿ 5.2 ಓವರ್‌ಗಳಿಂದ 51 ರನ್ ರಾಶಿ ಹಾಕಿತು. ಮೊದಲೆರಡು ಪಂದ್ಯಗಳಲ್ಲಿ 30ರ ಗಡಿ ದಾಟುವಲ್ಲಿ ವಿಫಲರಾಗಿದ್ದ ಡಿ ಕಾಕ್ ಇಲ್ಲಿ ಸಹಜ ಆಟಕ್ಕೆ ಕುದುರಿದರು. 39 ಎಸೆತ ಗಳಿಂದ 60 ರನ್ ಸಿಡಿಸಿದರು. ಇದರಲ್ಲಿ 6 ಬೌಂಡರಿ, 2 ಸಿಕ್ಸರ್
ಒಳಗೊಂಡಿತ್ತು. ಇದು ಮುಂಬೈ ಸರದಿಯ ಏಕೈಕ ಅರ್ಧ ಶತಕವಾಗಿತ್ತು.
ರೋಹಿತ್ ಶರ್ಮ ಕೂಡ ನುಗ್ಗಿ ಬೀಸಿ 18 ಎಸೆತಗಳಿಂದ 32 ರನ್ ಬಾರಿಸಿದರು. 5 ಸಲ ಚೆಂಡು ಬೌಂಡರಿ ದಾಟಿತು. ಮುಂಬೈ ಕಪ್ತಾನನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದ ವಿಲ್‌ಜೋನ್ ಪಂಜಾಬ್‌ಗೆ ಮೊದಲ ಯಶಸ್ಸು ತಂದಿತ್ತರು. ಸ್ಕೋರ್ 62ಕ್ಕೆ ಏರುವಷ್ಟರಲ್ಲಿ ಸೂರ್ಯಕುಮಾರ್ ಯಾದವ್‌ಗೆ (11) ಮುರುಗನ್ ಅಶ್ವಿನ್ ನಿರ್ಗಮನದ ಹಾದಿ ತೋರಿಸಿದರು.
ಮುಂದಿನದು ಡಿ ಕಾಕ್-ಯುವರಾಜ್ ಸಿಂಗ್ ಜೋಡಿಯ ಆಟ. ಇವರ ಜತೆಯಾಟದ ವೇಳೆಯೂ ಹತ್ತರ ಸರಾಸರಿಯಲ್ಲಿ ರನ್ ಹರಿದು ಬರತೊಡಗಿತು. 13ನೇ ಓವರಿನ ಕೊನೆಯ ಎಸೆತದಲ್ಲಿ ಡಿ ಕಾಕ್ ಔಟಾಗುವಾಗ ಮುಂಬೈ 120 ರನ್ ಮಾಡಿ ಸುಸ್ಥಿತಿಯಲ್ಲಿತು ಆದರೆ ಇಲ್ಲಿಂದ ಮುಂದೆ ಪಂಜಾಬ್ ಬೌಲರ್‌ಗಳು ಹಿಡಿತ ಸಾಧಿಸತೊಡಗಿದರು. ಮುಂಬೈ ಓಟಕ್ಕೆ ಬ್ರೇಕ್ ಬಿತ್ತು.
ಯುವರಾಜ್ ಸಿಂಗ್ 22 ಎಸೆತಗಳಿಂದ 18 ರನ್ (2 ಬೌಂಡರಿ) ಮಾಡಿ ಔಟಾದರೆ, ಕೈರನ್ ಪೊಲಾರ್ಡ್ ಮತ್ತೆ ಬ್ಯಾಟಿಂಗ್ ಬರಗಾಲ ಅನುಭವಿಸಿದರು (7). ಕೃಣಾಲ್ ಪಾಂಡ್ಯ (10) ಕೂಡ ವಿಫಲರಾದರು. ಆದರೆ ಹಾರ್ದಿಕ್ ಪಾಂಡ್ಯ ಕೈಬಿಡಲಿಲ್ಲ. ಡೆತ್ ಓವರ್‌ಗಳಲ್ಲಿ ಸಿಡಿದು ನಿಂತ ಅವರು 19 ಎಸೆತಗಳಿಂದ 31 ರನ್ನುಗಳ ಕೊಡುಗೆ ಸಲ್ಲಿಸಿದರು. ಈ ವೇಳೆ 3 ಬೌಂಡರಿ, ಒಂದು ಸಿಕ್ಸರ್ ದಾಖಲಾಯಿತು. ಪಂಜಾಬ್ ಬೌಲಿಂಗ್ ಸರದಿಯಲ್ಲಿ ಅಶ್ವಿನ್‌ದ್ವಯರನ್ನು ಹೊರತುಪಡಿಸಿ ಉಳಿದವರಿಂದ ನಿಯಂತ್ರಣ ಸಾಧಿಸಲಾಗಲಿಲ್ಲ. ಮುರುಗನ್ ಅಶ್ವಿನ್ 25 ರನ್ನಿಗೆ 2 ವಿಕೆಟ್ ಹಾರಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಮೂರೂ ವೇಗಿಗಳಿಂದ 40 ಪ್ಲಸ್ ರನ್ ಸೋರಿಹೋಯಿತು.
ಗೇಲ್ 300 ಸಿಕ್ಸರ್!
ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಐಪಿಎಲ್ ನಲ್ಲಿ 300 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಂಬೈ ಎದುರಿನ ಪಂದ್ಯದಲ್ಲಿ ಅವರು ಈ ಮೈಲುಗಲ್ಲು ನೆಟ್ಟರು. ಇದು ಅವರ 115ನೇ ಐಪಿಎಲ್ ಪಂದ್ಯ. ಉಳಿದವರ್ಯಾರೂ 200 ಸಿಕ್ಸರ್ ಗಳ ಗಡಿಯನ್ನೇ ಮುಟ್ಟಿಲ್ಲ ಎಂಬುದು ಗೇಲ್ ಪಾರಮ್ಯಕ್ಕೆ ಸಾಕ್ಷಿ. ಎಬಿ ಡಿ ವಿಲಿಯರ್ 143 ಪಂದ್ಯಗಳಿಂದ 192 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.