ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಕಿದಂಬಿ ಶ್ರೀಕಾಂತ್‌ಗೆ ಪ್ರಶಸ್ತಿ
Team Udayavani, Oct 30, 2017, 6:40 AM IST
ಪ್ಯಾರಿಸ್: ಭಾರತೀಯ ಶಟ್ಲರ್ ಕಿದಂಬಿ ಶ್ರೀಕಾಂತ್ ಫ್ರೆಂಚ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ಶ್ರೀಕಾಂತ್ ರವಿವಾರ ನಡೆದ ಫೈನಲ್ ಹೋರಾಟದಲ್ಲಿ ಜಪಾನಿನ ಕೆಂಟ ನಿಶಿಮೊಟೊ ಅವರನ್ನು 21-14, 21-13 ನೇರ ಗೇಮ್‌ಗಳಿಂದ ಉರುಳಿಸಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು.
ಈ ವರ್ಷ ಸೂಪರ್ ಸೀರೀಸ್ ಕೂಟಗಳಲ್ಲಿ ಐದನೇ ಬಾರಿ ಫೈನಲ್ ತಲುಪಿದ ಸಾಧನೆ ಮಾಡಿದ್ದ ಶ್ರೀಕಾಂತ್ ಸತತ ಎರಡನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಅವರು ಕಳೆದ ವಾರ ಡೆನ್ಮಾರ್ಕ್ ಓಪನ್ ಕೂಟದ ಪ್ರಶಸ್ತಿ ಜಯಿಸಿದ್ದರು. ಈಗಾಗಲೇ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದ ಶ್ರೀಕಾಂತ್ ಇದೀಗ ಈ ಋತುವಿನಲ್ಲಿ ತನ್ನ ನಾಲ್ಕನೇ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಸದ್ಯ ಉತ್ತುಂಗ ಫಾರ್ಮ್ನಲ್ಲಿರುವ ಶ್ರೀಕಾಂತ್ ಅವರು ನಿಶಿಮೊಟೊ ಅವರಿಗೆ ಯಾವುದೇ ಹಂತದಲ್ಲೂ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ.
ಕ್ಯಾಲೆಂಡರ್ ವರ್ಷವೊಂದರಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದ ಕೇವಲ ನಾಲ್ಕನೇ ಸಿಂಗಲ್ಸ್ ಆಟಗಾರರೆಂಬ ಹೆಗ್ಗಳಿಕೆಗೆ ಶ್ರೀಕಾಂತ್ ಪಾತ್ರರಾದರು.
ಪ್ರಣಯ್‌ಗೆ ಸೋಲುಣಿಸಿದ ಶ್ರೀಕಾಂತ್
ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸೆಮಿಫೈನಲ್ ಪಂದ್ಯ “ಆಲ್ ಇಂಡಿಯನ್’ ಸ್ಪರ್ಧೆಯಾಗಿತ್ತು. ಇಲ್ಲಿ ಕೆ. ಶ್ರೀಕಾಂತ್ 3 ಗೇಮ್‌ಗಳ ಹೋರಾಟದ ಬಳಿಕ ಎಚ್.ಎಸ್. ಪ್ರಣಯ್ ಅವರಿಗೆ ಸೋಲುಣಿಸಿದರು. ಶ್ರೀಕಾಂತ್ ಗೆಲುವಿನ ಅಂತರ 14-21, 21-19, 21-18. ಇದರೊಂದಿಗೆ ಪ್ರಣಯ್ ವಿರುದ್ಧ ಆಡಿದ 4 ಪಂದ್ಯಗಳಲ್ಲಿ ಶ್ರೀಕಾಂತ್ ಗೆಲುವಿನ ದಾಖಲೆ 3-1ಕ್ಕೆ ವಿಸ್ತರಿಸಿತು.
ಮೊದಲ ಗೇಮ್‌ನಲ್ಲಿ ಮೊದಲ ಅಂಕ ಸಂಪಾದಿಸಿದ್ದು ಶ್ರೀಕಾಂತ್. ಆದರೆ ಪ್ರಣಯ್ 9-7, ಬಳಿಕ 17-13 ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದರು. ಈ ಗೇಮ್ ವಶಪಡಿಸಿಕೊಂಡರು. ದ್ವಿತೀಯ ಹಾಗೂ ತೃತೀಯ ಗೇಮ್‌ನಲ್ಲೂ ಪ್ರಣಯ್ ಒಂದು ಹಂತದಲ್ಲಿ 11-10ರ ಲೀಡ್ ಹೊಂದಿದ್ದರು. ಆದರೆ ಶ್ರೀಕಾಂತ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು.
ಅನಂತರದ ಸೆಮಿಫೈನಲ್‌ನಲ್ಲಿ ಕೆಂಟಾ ನಿಶಿಮೊಟೊ 21-17, 21-15 ನೇರ ಗೇಮ್‌ಗಳಿಂದ ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟೊನ್ಸೆನ್ ಅವರಿಗೆ ಸೋಲುಣಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.