ಕ್ಲಾಸೆನ್ ಟಾಪ್ ಕ್ಲಾಸ್ ಬ್ಯಾಟಿಂಗ್; ಭಾರತಕ್ಕೆ ಸತತ ಎರಡನೇ ಸೋಲು
Team Udayavani, Jun 12, 2022, 10:50 PM IST
ಕಟಕ್: ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಭಾರತ ಕಟಕ್ ಟಿ20 ಪಂದ್ಯವನ್ನು 4 ವಿಕೆಟ್‌ಗಳಿಂದ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ದಕ್ಷಿಣ ಆಫ್ರಿಕಾ ಸತತ 2 ಪಂದ್ಯಗಳನ್ನು ಗೆದ್ದು ಓಟ ಬೆಳೆಸಿದೆ.
ಮತ್ತೆ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 148 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿದರೆ, ದಕ್ಷಿಣ ಆಫ್ರಿಕಾ 18.2 ಓವರ್‌ಗಳಲ್ಲಿ 6 ವಿಕೆಟಿಗೆ 149 ರನ್ ಬಾರಿಸಿತು. ಇದು ಕಟಕ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಅನುಭವಿಸಿದ ಸತತ 2ನೇ ಸೋಲು ಕೂಡ ಆಗಿದೆ. ಸರಣಿಯ 3ನೇ ಪಂದ್ಯ ಮಂಗಳವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ.
ಗಾಯಾಳು ಕೀಪರ್ ಡಿ ಕಾಕ್ ಬದಲು ಆಡಲಿಳಿದ ಹೆನ್ರಿಕ್ ಕ್ಲಾಸೆನ್ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು. ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆಲುವಿನ ಹೀರೋ ಆಗಿ ಮೂಡಿಬಂದರು. ಅವರು 46 ಎಸೆತಗಳಿಂದ 81 ರನ್ ಬಾರಿಸಿದರು. 7 ಫೋರ್, 5 ಸಿಕ್ಸರ್ ಸಿಡಿಸಿ ಭಾರತದ ಬೌಲರ್‌ಗಳನ್ನು ಕಾಡಿದರು. ಇದು ಕ್ಲಾಸೆನ್ ಅವರ 4ನೇ ಅರ್ಧ ಶತಕ.
ಭಾರತದೆದುರು ದಕ್ಷಿಣ ಆಫ್ರಿಕಾ ಬ್ಯಾಟರ್‌ನ ಸರ್ವಾಧಿಕ ಗಳಿಕೆಯೂ ಹೌದು. 2019ರ ಬೆಂಗಳೂರು ಪಂದ್ಯದಲ್ಲಿ ಡಿ ಕಾಕ್ ಹೊಡೆದ ಅಜೇಯ 79 ರನ್ನುಗಳ ದಾಖಲೆ ಪತನಗೊಂಡಿತು.
ಭುವನೇಶ್ವರ್ ಬಿಗಿ ದಾಳಿ
ಭುವನೇಶ್ವರ್ ಕುಮಾರ್ ಪವರ್ ಪ್ಲೇ ಒಳಗಾಗಿ ಅವರು 3 ವಿಕೆಟ್ ಉದುರಿಸಿ ಘಾತಕವಾಗಿ ಪರಿಣಮಿಸಿದರು. ಇದರಲ್ಲಿ ಕಳೆದ ಪಂದ್ಯದ ಹೀರೋ ಡುಸೆನ್ ವಿಕೆಟ್ ಕೂಡ ಸೇರಿತ್ತು. ದಿಲ್ಲಿಯಲ್ಲಿ ಟಾಪ್ ಸ್ಕೋರರ್ ಆಗಿದ್ದ ಡುಸೆನ್ ಇಲ್ಲಿ ಗಳಿಸಿದ್ದು ಒಂದೇ ರನ್. ಭುವಿ ಬಲೆಗೆ ಬಿದ್ದ ಉಳಿದಿಬ್ಬರೆಂದರೆ ಹೆಂಡ್ರಿಕ್ಸ್ ಮತ್ತು ಪ್ರಿಟೋರಿಯಸ್. ಕೊನೆಯಲ್ಲಿ ಪಾರ್ನೆಲ್ ವಿಕೆಟ್ ಕಿತ್ತರು. ಭುವಿ ಸಾಧನೆ 13ಕ್ಕೆ 4 ವಿಕೆಟ್.
ಭುವನೇಶ್ವರ್ ಕುಮಾರ್ ಪವರ್ ಪ್ಲೇಯಲ್ಲಿ 3 ವಿಕೆಟ್ ಉರುಳಿಸಿದ 2ನೇ ನಿದರ್ಶನ ಇದಾಗಿದೆ. ಮೊದಲ ಸಲ ಪದಾರ್ಪಣ ಪಂದ್ಯದಲ್ಲೇ ಈ ಸಾಧನೆಗೈದಿದ್ದರು. ಅದು 2012ರಲ್ಲಿ ಬೆಂಗಳೂರಿನಲ್ಲಿ ನಡೆದ ಪಾಕಿಸ್ಥಾನ ವಿರುದ್ಧದ ಪಂದ್ಯವಾಗಿತ್ತು.
ಭುವನೇಶ್ವರ್ ಹೊರತುಪಡಿಸಿ ಉಳಿದ ಬೌಲರ್‌ಗಳು ಕೈಚಳಕ ತೋರಿಸಲು ವಿಫಲರಾದರು. ಹೀಗಾಗಿ ನಾಯಕ ಟೆಂಬ ಬವುಮ-ಹೆನ್ರಿಕ್ ಕ್ಲಾಸೆನ್ ಜೋಡಿ ಬೆಳೆಯುತ್ತ ಹೋಯಿತು. ಇವರು 41 ಎಸೆತಗಳಿಂದ 64 ರನ್ ಒಟ್ಟುಗೂಡಿಸಿ ಗೆಲುವಿನ ಮಾರ್ಗವನ್ನು ತೆರೆದಿರಿಸಿದರು. ಬವುಮ ಗಳಿಕೆ 35 ರನ್.
ಭಾರತಕ್ಕೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. 5ನೇ ಎಸೆತ ದಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದ ಕಾಗಿಸೊ ರಬಾಡ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ಒದಗಿಸಿದರು. ಇದರೊಂದಿಗೆ ಟಿ20 ಅಂತಾ ರಾಷ್ಟ್ರೀಯ ಪಂದ್ಯಗಳಲ್ಲಿ 50 ವಿಕೆಟ್ ಪೂರ್ತಿಗೊಳಿಸಿದರು. ಗಾಯ ಕ್ವಾಡ್ ಗಳಿಕೆ ಕೇವಲ ಒಂದು ರನ್.
ಇಶಾನ್ ಕಿಶನ್ ಮೊದಲ ಪಂದ್ಯದ ಲಯದಲ್ಲೇ ಸಾಗಿದರು. ಆ್ಯನ್ರಿಚ್ ನೋರ್ಜೆ ಅವರಿಗೆ ಮೊದಲ ಓವರ್‌ನಲ್ಲೇ 2 ಸಿಕ್ಸರ್‌ಗಳ ರುಚಿ ತೋರಿಸಿದರು. ಡ್ವೇನ್ ಪ್ರಿಟೋರಿಯಸ್ ಅವರನ್ನು ಸಿಕ್ಸರ್ ಮೂಲಕ ಬರಮಾಡಿಕೊಂಡರು. ಆರಂಭಿಕ ಆಘಾತದಿಂದ ಚೇತರಿಸಿ ಕೊಂಡ ಭಾರತ ಪವರ್ ಪ್ಲೇ ಮುಕ್ತಾಯಕ್ಕೆ 1 ವಿಕೆಟಿಗೆ 42 ರನ್ ಗಳಿಸಿತ್ತು.
ಪವರ್ ಪ್ಲೇ ಮುಗಿದ ಬೆನ್ನಲ್ಲೇ ಇಶಾನ್ ಕಿಶನ್ ವಿಕೆಟ್ ಕೆಡವಿದ ನೋರ್ಜೆ ಭಾರತಕ್ಕೆ ಬಲವಾದ ಆಘಾತವಿತ್ತರು. ಇಶಾನ್ ಗಳಿಕೆ 21 ಎಸೆತಗಳಿಂದ 34 ರನ್ (4 ಬೌಂಡರಿ, 3 ಸಿಕ್ಸರ್). ಬೆನ್ನಲ್ಲೇ ರಿಷಭ್ ಪಂತ್ ಕೂಡ (5) ಪೆವಿಲಿಯನ್ ಸೇರಿಕೊಂಡರು. ಈ ಬಾರಿ ಕೊನೆಯವರಾಗಿ ದಾಳಿಗೆ ಇಳಿದ ಕೇಶವ್ ಮಹಾರಾಜ್ ಮೊದಲ ಎಸೆತದಲ್ಲೇ ಭಾರತದ ನಾಯಕನಿಗೆ ಕಂಟಕವಾಗಿ ಕಾಡಿದರು. 10 ಓವರ್ ಮುಕ್ತಾಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 78 ರನ್ ಮಾಡಿತ್ತು.
ಹಾರ್ದಿಕ್ ಪಾಂಡ್ಯ ಮೇಲಿನ ನಿರೀಕ್ಷೆ ಹುಸಿಯಾಯಿತು. ಅವರು ಕೇವಲ 9 ರನ್ ಮಾಡಿ ಪಾರ್ನೆಲ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು.
ಇನ್ನೊಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಶ್ರೇಯಸ್ ಆಕರ್ಷಕ ಆಟದ ಮೂಲಕ ರಂಜಿಸತೊಡಗಿದರು. ಆದರೆ ಪ್ರಿಟೋರಿಯಸ್ ಇದಕ್ಕೆ ಅಡ್ಡಗಾಲಿಕ್ಕಿದರು. 40 ರನ್ ಮಾಡಿದ ಅಯ್ಯರ್ ಭಾರತದ ಸರದಿಯ ಟಾಪ್ ಸ್ಕೋರರ್ ಆಗಿದ್ದರು. 35 ಎಸೆತಗಳ ಈ ಆಟದಲ್ಲಿ 2 ಬೌಂಡರಿ, 2 ಸಿಕ್ಸರ್ ಸೇರಿತ್ತು. 98 ರನ್ನಿಗೆ ಭಾರತದ 5ನೇ ವಿಕೆಟ್ ಉರುಳಿತು. 15 ಓವರ್ ಅಂತ್ಯಕ್ಕೆ ಭಾರತ 5ಕ್ಕೆ 104 ರನ್ ಮಾಡಿತ್ತು. 10ರಿಂದ 15ನೇ ಓವರ್ ನಡುವೆ ಭಾರತದಿಂದ ಗಳಿಸಲು ಸಾಧ್ಯವಾದದ್ದು 26 ರನ್ ಮಾತ್ರ.
ದಿನೇಶ್ ಕಾರ್ತಿಕ್‌ಗಿಂತ ಮೊದಲೇ ಕ್ರೀಸ್ ಇಳಿದ ಅಕ್ಷರ್ ಪಟೇಲ್ 10 ರನ್ ಮಾಡಿ ನಿರ್ಗಮಿಸಿದರು. ಆದರೆ ಕಾರ್ತಿಕ್‌ಗೆ ಇಲ್ಲಿ ಡೆತ್ ಓವರ್‌ಗಳಲ್ಲಿ ಸಿಡಿಯುವ ಅವಕಾಶ ಸಿಕ್ಕಿತು. ಇದನ್ನು ಅವರು ವ್ಯರ್ಥಗೊಳಿಸಲಿಲ್ಲ. 21 ಎಸೆತಗಳಿಂದ 30 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ 2 ಬೌಂಡರಿ, 2 ಸಿಕ್ಸರ್ ಸೇರಿತ್ತು. ಎರಡೂ ಸಿಕ್ಸರ್‌ಗಳನ್ನು ಅವರು ಅಂತಿಮ ಓವರ್‌ನಲ್ಲಿ ಬಾರಿಸಿದರು.
ದಿನೇಶ್ ಕಾರ್ತಿಕ್-ಹರ್ಷಲ್ ಪಟೇಲ್ ಕೊನೆಯ 3 ಓವರ್‌ಗಳಲ್ಲಿ 36 ರನ್ ಪೇರಿಸಿ ಮೊತ್ತವನ್ನು 148ಕ್ಕೆ ಏರಿಸುವಲ್ಲಿ ಯಶಸ್ವಿಯಾದರು.
ಗಂಟೆ ಬಾರಿಸಿದ ಸಿಎಂ
ಅಂತಾರಾಷ್ಟ್ರೀಯ ಪಂದ್ಯದ ಆರಂಭವನ್ನು ಸಾರುವ ಸಂಪ್ರದಾಯ ಮೊದಲ ಸಲ ಕಟಕ್‌ನಲ್ಲಿ ಕಂಡುಬಂತು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗಂಟೆ ಬಾರಿಸಿ ಪಂದ್ಯ ಉದ್ಘಾಟನೆಯನ್ನು ಸಾರಿದರು.
ಇದಕ್ಕೂ ಮೊದಲು ಕ್ರೀಡಾಂಗಣಕ್ಕೆ ತೆರಳುವ ಮಾರ್ಗದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭುವನೇಶ್ವದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಪಟ್ನಾಯಕ್ ಅವರನ್ನು ಭೇಟಿಯಾದರು. ಇದು 15 ವರ್ಷಗಳ ಬಳಿಕ ಇವರಿಬ್ಬರ ನಡುವಿನ ಮೊದಲ ಭೇಟಿಯಾಗಿತ್ತು.
ಡಿ ಕಾಕ್ ಗಾಯಾಳು
ದಕ್ಷಿಣ ಆಫ್ರಿಕಾ 2 ಬದಲಾವಣೆಗಳೊಂದಿಗೆ ಆಡಲಿಳಿಯಿತು. ವಿಕೆಟ್ ಕೀಪರ್ ಕಂ ಓಪನರ್ ಕ್ವಿಂಟನ್ ಡಿ ಕಾಕ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಗಾಯಾಳಾಗಿ ಹೊರಗುಳಿದರು. ಇವರ ಬದಲು ಹೆನ್ರಿಕ್ ಕ್ಲಾಸೆನ್ ಮತ್ತು ರೀಝ ಹೆಂಡ್ರಿಕ್ಸ್ ಅವಕಾಶ ಪಡೆದರು. ಭಾರತ ತಂಡದಲ್ಲಿ ಯಾವುದೇ ಪರಿವರ್ತನೆ ಸಂಭವಿಸಲಿಲ್ಲ.
ಸ್ಕೋರ್ ಪಟ್ಟಿ
ಭಾರತ
ಋತುರಾಜ್ ಗಾಯಕ್ವಾಡ್ ಸಿ ಮಹಾರಾಜ್ ಬಿ ರಬಾಡ 1
ಇಶಾನ್ ಕಿಶನ್ ಸಿ ಡುಸೆನ್ ಬಿ ನೋರ್ಜೆ 34
ಶ್ರೇಯಸ್ ಅಯ್ಯರ್ ಸಿ ಕ್ಲಾಸೆನ್ ಬಿ ಪ್ರಿಟೋರಿಯಸ್ 40
ರಿಷಭ್ ಪಂತ್ ಸಿ ಡುಸೆನ್ ಬಿ ಮಹಾರಾಜ್ 5
ಹಾರ್ದಿಕ್ ಪಾಂಡ್ಯ ಬಿ ಪಾರ್ನೆಲ್ 9
ಅಕ್ಷರ್ ಪಟೇಲ್ ಬಿ ನೋರ್ಜೆ 10
ದಿನೇಶ್ ಕಾರ್ತಿಕ್ ಔಟಾಗದೆ 30
ಹರ್ಷಲ್ ಪಟೇಲ್ ಔಟಾಗದೆ 12
ಇತರ 7
ಒಟ್ಟು (6 ವಿಕೆಟಿಗೆ) 148
ವಿಕೆಟ್ ಪತನ: 1-3, 2-48, 3-68, 4-90, 5-98, 6-112.
ಬೌಲಿಂಗ್:
ಕಾಗಿಸೊ ರಬಾಡ 4-0-15-1
ವೇನ್ ಪಾರ್ನೆಲ್ 4-0-23-1
ಆ್ಯನ್ರಿಚ್ ನೋರ್ಜೆ 4-0-36-2
ಡ್ವೇನ್ ಪ್ರಿಟೋರಿಯಸ್ 4-0-40-1
ತಬ್ರೇಜ್ ಶಮ್ಸಿ 2-0-21-0
ಕೇಶವ್ ಮಹಾರಾಜ್ 2-0-12-1
ದಕ್ಷಿಣ ಆಫ್ರಿಕಾ
ಟೆಂಬ ಬವುಮ ಬಿ ಚಹಲ್ 35
ರೀಝ ಹೆಂಡ್ರಿಕ್ಸ್ ಬಿ ಭುವನೇಶ್ವರ್ 4
ಡ್ವೇನ್ ಪ್ರಿಟೋರಿಯಸ್ ಸಿ ಆವೇಶ್ ಬಿ ಭುವನೇಶ್ವರ್ 4
ವಾನ್ ಡರ್ ಡುಸೆನ್ ಬಿ ಭುವನೇಶ್ವರ್ 1
ಹೆನ್ರಿಕ್ ಕ್ಲಾಸೆನ್ ಸಿ ಬಿಷ್ಣೋಯಿ ಬಿ ಹರ್ಷಲ್ 81
ಡೇವಿಡ್ ಮಿಲ್ಲರ್ ಔಟಾಗದೆ 20
ವೇನ್ ಪಾರ್ನೆಲ್ ಬಿ ಭುವನೇಶ್ವರ್ 1
ಕಾಗಿಸೊ ರಬಾಡ ಔಟಾಗದೆ 0
ಇತರ 3
ಒಟ್ಟು (18.2 ಓವರ್‌ಗಳಲ್ಲಿ 6 ವಿಕೆಟಿಗೆ) 149
ವಿಕೆಟ್ ಪತನ: 1-5, 2-13, 3-29, 4-93, 5-144, 6-147.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-13-4
ಆವೇಶ್ ಖಾನ್ 3-0-17-0
ಹಾರ್ದಿಕ್ ಪಾಂಡ್ಯ 3-0-31-0
ಯಜುವೇಂದ್ರ ಚಹಲ್ 4-0-49-1
ಹರ್ಷಲ್ ಪಟೇಲ್ 3-0-17-1
ಅಕ್ಷರ್ ಪಟೇಲ್ 1-0-19-0
ಶ್ರೇಯಸ್ ಅಯ್ಯರ್ 0.2-0-2-0
ಪಂದ್ಯಶ್ರೇಷ್ಠ: ಹೆನ್ರಿಕ್ ಕ್ಲಾಸೆನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.