LSG; ಗೋಯೆಂಕಾ ಭೇಟಿಯಾದ ರಾಹುಲ್; ಯಾವುದೇ ಭರವಸೆ ನೀಡದ ಎಲ್‌ಎಸ್‌ಜಿ ಮಾಲಕ
Team Udayavani, Aug 27, 2024, 4:14 PM IST
ಮುಂಬೈ: ದಿನಕಳೆದಂತೆ ಐಪಿಎಲ್ ಮೆಗಾ ಹರಾಜಿನ (IPL Mega Auction) ಬಗ್ಗೆ ಕುತೂಹಲ ಹೆಚ್ಚಾಗುತ್ತಲೇ ಹೋಗುತ್ತಿದೆ. ಯಾವೆಲ್ಲಾ ಆಟಗಾರರನ್ನು ತಂಡಗಳು ಉಳಿಸಿಕೊಳ್ಳಲಿದೆ, ಯಾರನ್ನೆಲ್ಲಾ ಕೈಬಿಡಲಿದೆ ಎನ್ನುವ ಕುತೂಹಲ, ಊಹಾಪೋಹಗಳು ಹೆಚ್ಚುತ್ತಿದೆ. ಸ್ಟಾರ್ ಆಟಗಾರ, ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕ ಕೆಎಲ್ ರಾಹುಲ್ (KL Rahul) ಅವರು ತಂಡ ತೊರೆಯಲಿದ್ದಾರೆ ಎಂಬ ವರದಿ ಕಳೆದ ಸೀಸನ್ ನಿಂದಲೇ ಬರುತ್ತಿದೆ. ಇದೀಗ ಸ್ವತಃ ರಾಹುಲ್ ಅದಕ್ಕೆ ಅಂತ್ಯ ಹಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಕಳೆದ ಸೀಸನ್ ನ ಕೊನೆಯಲ್ಲಿ ಎಲ್‌ಎಸ್ ಜಿ ಹೀನಾಯವಾಗಿ ಪಂದ್ಯ ಸೋತ ಬಳಿಕ ಫ್ರಾಂಚೈಸಿ ಮಾಲಕ ಸಂಜೀವ್ ಗೋಯೆಂಕಾ (Sanjiv Goenka) ಅವರು ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೈದಾನದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗುವಂತೆ ಈ ಪ್ರಸಂಗ ನಡೆದಿತ್ತು. ಹೀಗಾಗಿ ರಾಹುಲ್ ತಂಡ ತೊರೆಯಲಿದ್ದಾರೆ ಎನ್ನಲಾಗಿತ್ತು.
ಆದರೆ ಇದೀಗ ಸ್ವತಃ ರಾಹುಲ್ ಮತ್ತು ಸಂಜೀವ್ ಗೋಯೆಂಕಾ ಭೇಟಿಯಾಗಿ ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕ್ರಿಕ್ ಬಝ್ ವರದಿಯ ಪ್ರಕಾರ, ಮಾಲಿಕ ಮತ್ತು ಕಪ್ತಾನನ ನಡುವೆ ಸಭೆಯು ಒಂದು ಗಂಟೆಗಳ ಕಾಲ ನಡೆದಿದೆ. ಅಲಿಪೋರ್ ನಲ್ಲಿ ನಡೆದ ಈ ಮೀಟಿಂಗ್ ನಲ್ಲಿ ಮುಂದಿನ ಸೀಸನ್ ಗಾಗಿ ರಾಹುಲ್ ಮತ್ತು ಇತತ ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಚರ್ಚೆ ನಡೆಸಲಾಗಿದೆ.
ಲಕ್ನೋ ತಂಡದಲ್ಲಿಯೇ ಮುಂದುವರಿಯುವ ಬಗ್ಗೆ ರಾಹುಲ್ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಫ್ರಾಂಚೈಸಿ ಇದರ ಬಗ್ಗೆ ಯಾವುದೇ ಖಚಿತ ಉತ್ತರ ನೀಡಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“ಹೌದು, ರಾಹುಲ್ ಕೋಲ್ಕತ್ತಾಗೆ ಬಂದು ಆರ್‌ಪಿಜಿ ಕೇಂದ್ರ ಕಚೇರಿಯಲ್ಲಿ ಡಾ ಗೋಯೆಂಕಾ ಅವರನ್ನು ಭೇಟಿ ಮಾಡಿದರು. ತಾನು ತಂಡದಲ್ಲಿ ಉಳಿದುಕೊಳ್ಳಲು ಬಯಸುತ್ತಾರೆ ಎಂದು ರಾಹುಲ್ ಸ್ಪಷ್ಟವಾಗಿ ಹೇಳಿದ್ದಾರೆ. ಆದಾಗ್ಯೂ, ಬಿಸಿಸಿಐ ರೆಟೆನ್ಶನ್ ನೀತಿಯನ್ನು ಪ್ರಕಟ ಮಾಡುವವರೆಗೆ, ಎಲ್‌ಎಸ್‌ಜಿ ಆಡಳಿತವು ತಮ್ಮ ಯೋಜನೆಗಳನ್ನು ಹೊರಹಾಕಲು ಬಯಸುವುದಿಲ್ಲ” ಎಂದು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರೊಬ್ಬರ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.
ಮೆಂಟರ್ ಜಾಗಕ್ಕೆ ಜಹೀರ್?
ಕ್ರಿಕ್ ಬಝ್ ವರದಿಯ ಪ್ರಕಾರ ಟೀಂ ಇಂಡಿಯಾದ ಮಾಜಿ ಬೌಲರ್ ಜಹೀರ್ ಖಾನ್ ಅವರು ಲಕ್ನೋ ಸೂಪರ್ ಜೈಂಟ್ಸ್ ಕೋಚಿಂಗ್ ಪ್ಯಾನೆಲ್ ಸೇರಲಿದ್ದಾರೆ. ಎಲ್ ಎಸ್ ಜಿ ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್ ಆಗಿ ಜಹೀರ್ ಸೇರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಎಲ್ ಎಸ್ ಜಿ ಕೋಚಿಂಗ್ ಯುನಿಟ್ ನಲ್ಲಿ ಜಸ್ಟಿನ್ ಲ್ಯಾಂಗರ್, ಆಡಂ ವೋಗ್ಸ್, ಲ್ಯಾನ್ಸ್ ಕ್ಲೂಸ್ನರ್ ಮತ್ತು ಜಾಂಟಿ ರೋಡ್ಸ್ ಅವರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.