Maharaja Cup: ಮಂಗಳೂರನ್ನು ಮಣಿಸಿದ ಹುಬ್ಬಳ್ಳಿ
ಅನೀಶ್ವರ್ 95, ಶ್ರೀಜಿತ್ 77
Team Udayavani, Aug 27, 2024, 12:45 AM IST
ಬೆಂಗಳೂರು: ಮಹಾರಾಜ ಕಪ್ ಟಿ20 ಕೂಟದ ಸೋಮವಾರದ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 42 ರನ್‌ಗಳಿಂದ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ತಂಡವು ಅನೀಶ್ವರ್ ಗೌತಮ್, ಕೆ. ಶ್ರೀಜಿತ್ ಅವರ ಅದ್ಭುತ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 3 ವಿಕೆಟಿಗೆ 209 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕೆ ಉತ್ತರಿಸಿದ ಮಂಗಳೂರು ಡ್ರ್ಯಾಗನ್ಸ್ 19.2 ಓವರ್‌ಗಳಲ್ಲಿ 167 ರನ್ನಿಗೆ ಆಲೌಟಾಯಿತು.
ಎಲ್ಲ ವಿಭಾಗಗಳಲ್ಲೂ ಹುಬ್ಬಳ್ಳಿ ಅತ್ಯುತ್ತಮ ಪ್ರದರ್ಶನ ನೀಡಿತು. ಟಾಸ್ ಸೋತು ಮೊದಲು ಬ್ಯಾಟಿಂಗಿಗೆ ಇಳಿಸ ಲ್ಪಟ್ಟ ಹುಬ್ಬಳ್ಳಿ ಕೇವಲ 13 ರನ್ ಗಳಿಸಿದಾಗ 2 ವಿಕೆಟ್ ಕಳೆದುಕೊಂಡು ಪರದಾಡುತ್ತಿತ್ತು. ಈ ಹಂತದಲ್ಲಿ ಕೆ.ಶ್ರೀಜಿತ್ ಮತ್ತು ಅನೀಶ್ವರ್ ತಂಡದ ಕೈಹಿಡಿದರು. 44 ಎಸೆತ ಎದುರಿಸಿದ ಶ್ರೀಜಿತ್ 7 ಬೌಂಡರಿ, 6 ಸಿಕ್ಸರ್ ನೆರವಿನಿಂದ 77 ರನ್ ಚಚ್ಚಿದರು. ಇವರೊಂದಿಗೆ ಬ್ಯಾಟ್ ಮಾಡಿದ ಅನೀಶ್ವರ್ ತಮ್ಮ ಅಬ್ಬರವನ್ನು 95 ರನ್‌ಗಳವರೆಗೆ ವಿಸ್ತರಿಸಿ, ಕೇವಲ 5 ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಒಟ್ಟು 58 ಎಸೆತ ಎದುರಿಸಿದ ಅನೀಶ್ 8 ಬೌಂಡರಿ 5 ಸಿಕ್ಸರ್ ಚಚ್ಚಿದರು.
ಕೊನೆಯ ಹಂತದಲ್ಲಿ ನಾಯಕ ಮನೀಶ್ ಪಾಂಡೆ 11 ಎಸೆತಗಳಲ್ಲಿ 24 ರನ್ ಸಿಡಿಸಿದರು. ಬೃಹತ್ ಮೊತ್ತ ಬೆನ್ನಟ್ಟಿ ಹೋದ ಮಂಗಳೂರಿಗೆ ಹುಬ್ಬಳ್ಳಿಯ ಮಧ್ಯಮ ವೇಗಿ ನಿಶ್ಚಿತ್ ಪೈ, ಬಲಗೈ ಆಫ್ಸ್ಪಿನ್ನರ್ ರಿಷಿ ಬೋಪಣ್ಣ ಕಡಿವಾಣ ಹಾಕಿದರು. 21 ರನ್ ನೀಡಿದ ನಿಶ್ಚಿತ್ 3 ವಿಕೆಟ್ ಕಿತ್ತರು. ರಿಷಿ 28 ರನ್ ನೀಡಿ 3 ವಿಕೆಟ್ ಪಡೆದರು. ಮಂಗಳೂರು ಪರ ನಾಯಕ ಶ್ರೇಯಸ್ ಗೋಪಾಲ್ 38, ಲೋಚನ್ ಗೌಡ 35, ಕೆ.ಸಿದ್ಧಾರ್ಥ್ 30 ರನ್ ಗಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.