ಅಗರ್ವಾಲ್ ಡಬಲ್ ಬಾಂಗ್ಲಾಕ್ಕೆ ಭಾರೀ ಟ್ರಬಲ್
ಭಾರತ 493/6, ಮುನ್ನಡೆ 343 ರನ್
Team Udayavani, Nov 15, 2019, 10:59 PM IST
ಇಂದೋರ್: ಆರಂಭಕಾರ ಮಾಯಾಂಕ್ ಅಗರ್ವಾಲ್ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿ ಇಂದೋರ್ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಮೇಲುಗೈ ಒದಗಿಸಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 6 ವಿಕೆಟಿಗೆ 493 ರನ್ ಪೇರಿಸಿದ್ದು, ಒಟ್ಟು 343 ರನ್ನುಗಳ ಬೃಹತ್ ಮುನ್ನಡೆ ಗಳಿಸಿದೆ.
37 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಾಯಾಂಕ್, ಶುಕ್ರವಾರ ಬಿರುಸಿನ ಆಟಕ್ಕಿಳಿದು ದ್ವಿತೀಯ ದ್ವಿಶತಕ ಸಂಭ್ರಮವನ್ನಾಚರಿಸಿದರು. ಮಾಯಾಂಕ್ ಕೊಡುಗೆ ಭರ್ಜರಿ 243 ರನ್. ಇದು ಬಾಂಗ್ಲಾದ ಒಟ್ಟು ಮೊತ್ತಕ್ಕಿಂತ 93 ರನ್ ಜಾಸ್ತಿ! ಉಳಿದಂತೆ ಚೇತೇಶ್ವರ್ ಪೂಜಾರ (54), ಅಜಿಂಕ್ಯ ರಹಾನೆ (86) ಮತ್ತು ರವೀಂದ್ರ ಜಡೇಜ (ಬ್ಯಾಟಿಂಗ್ 60) ಅರ್ಧ ಶತಕ ಬಾರಿಸಿ ಮಿಂಚಿದರು. ಆದರೆ ಕ್ಯಾಪ್ಟನ್ ಕೊಹ್ಲಿ ಖಾತೆ ತೆರೆಯದೆ ನಿರಾಸೆ ಮೂಡಿಸಿದರು. ಭಾರತ ಹರಿಸಿದ ರನ್ ಪ್ರವಾಹದಿಂದಾಗಿ ಬಾಂಗ್ಲಾದ ನಾಲ್ವರು ಬೌಲರ್‌ಗಳೂ “ಶತಕ’ ದಾಖಲಿಸಿದರು!
ಅಗರ್ವಾಲ್ ಸಿಡಿಲಬ್ಬರದ ಆಟ
ಅಗರ್ವಾಲ್ ಆಟ ಸೆಹವಾಗ್ ಶೈಲಿಗೆ ಯಾವ ರೀತಿಯಲ್ಲೂ ಕಡಿಮೆ ಇರಲಿಲ್ಲ. ಅವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಹೋಳ್ಕರ್ ಅಂಗಳ ರನ್ನಿನ ಹೊಳೆ ಯಾಗಿ ಮಾರ್ಪಟ್ಟಿತು. ಭಾರತ ಒಂದೇ ದಿನದಲ್ಲಿ 407 ರನ್ ಸೂರೆಗೈದಿತು! 330 ಎಸೆತ ಎದುರಿಸಿದ ಅಗರ್ವಾಲ್ 28 ಬೌಂಡರಿ, 8 ಸಿಕ್ಸರ್ ಸಿಡಿಸಿ ಭರಪೂರ ರಂಜನೆ ಒದಗಿಸಿದರು. ಅವರ 160 ರನ್ ಬೌಂಡರಿ ಹೊಡೆತಗಳ ಮೂಲಕವೇ ಬಂದಿತು!
ಭಾರತ ಒಂದಕ್ಕೆ 86 ರನ್ ಮಾಡಿದಲ್ಲಿಂದ ದಿನ ದಾಟ ಮುಂದುವರಿಸಿತ್ತು. ಬಾಂಗ್ಲಾ ಬೌಲರ್‌ಗಳನ್ನು ಲೀಲಾಜಾಲವಾಗಿ ಬಡಿದಟ್ಟತೊಡಗಿದ ಅಗರ್ವಾಲ್, ದಕ್ಷಿಣ ಆಫ್ರಿಕಾ ಸರಣಿಯ ವೇಳೆ ತೋರ್ಪಡಿಸಿದ ತಮ್ಮ ಭರ್ಜರಿ ಆಟದ ವೈಖರಿ ಯನ್ನು ಬಾಂಗ್ಲಾಕ್ಕೂ ಪರಿಚಯಿಸಿದರು. 183 ಎಸೆತಗಳಲ್ಲಿ ಅವರ 3ನೇ ಟೆಸ್ಟ್ ಶತಕ ಪೂರ್ತಿ ಗೊಂಡಿತು. ದ್ವಿಶತಕಕ್ಕೆ ಎದುರಿಸಿದ್ದು 303 ಎಸೆತ. ಸಿಕ್ಸರ್ ಸಿಡಿಸುವ ಮೂಲಕವೇ ಅವರು ತಮ್ಮ ಡಬಲ್ ಸೆಂಚುರಿ ಹಾಗೂ ಜೀವನಶ್ರೇಷ್ಠ ಸಾಧನೆಯನ್ನು ದಾಖಲಿಸಿದ್ದು ವಿಶೇಷ.
ಪೂಜಾರ ಜತೆಗೂಡಿ ದ್ವಿತೀಯ ವಿಕೆಟಿಗೆ 91 ರನ್ ಪೇರಿಸಿದ ಅಗರ್ವಾಲ್, ಉಪನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ 4ನೇ ವಿಕೆಟಿಗೆ 190 ರನ್ ರಾಶಿ ಹಾಕಿದರು. ರವೀಂದ್ರ ಜಡೇಜ ಬೆಂಬಲದಿಂದ 5ನೇ ವಿಕೆಟಿಗೆ 23.5 ಓವರ್‌ಗಳಿಂದ 123 ರನ್ ಸೂರೆಗೈದದ್ದು ಅಗರ್ವಾಲ್ ಅವರ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿ.
ದ್ವಿಶತಕದ ಬಳಿಕ ಇನ್ನಷ್ಟು ಬಿರುಸಾದ ಅಗರ್ವಾಲ್ ತುಸು ಎಚ್ಚರಿಕೆಯಿಂದ ಆಡಿದ್ದರೆ ಬಹುಶಃ ಶನಿವಾರ ತ್ರಿಶತಕವನ್ನೂ ಪೂರೈಸ ಬಹುದಿತ್ತೋ ಏನೋ. ಮಿರಾಜ್ ಎಸೆತವನ್ನು ಮತ್ತೂಂದು ಸಿಕ್ಸರ್‌ಗೆ ಬಡಿದಟ್ಟುವ ಅವರ ಪ್ರಯತ್ನ ವಿಫಲವಾಯಿತು. ಜಾಯೇದ್ ಅದ್ಭುತ ಕ್ಯಾಚ್ ಪಡೆದು ಅಗರ್ವಾಲ್ ಆಟಕ್ಕೆ ತೆರೆ ಎಳೆದರು.
ಶತಕ ವಂಚಿತ ರಹಾನೆ
ರಹಾನೆ ಅವರಿಂದ ಅಭಿಮಾನಿಗಳು ಶತಕದ ನಿರೀಕ್ಷೆಯಲ್ಲಿದ್ದರು. ಆದರೆ 86 ರನ್ ಗಳಿಸಿದ ವೇಳೆ ಅವರು ಜಾಯೇದ್ ಮೋಡಿಗೆ ಸಿಲು ಕಿದರು (172 ಎಸೆತ, 9 ಬೌಂಡರಿ). 54 ರನ್ ಮಾಡಿದ ಪೂಜಾರ ಕೂಡ ಜಾಯೇದ್‌ಗೆ ವಿಕೆಟ್ ಒಪ್ಪಿಸಿದರು (72 ಎಸೆತ, 9 ಬೌಂಡರಿ). ಭಾರತದ 6 ವಿಕೆಟ್‌ಗಳಲ್ಲಿ 4 ವಿಕೆಟ್ ಜಾಯೇದ್ ಪಾಲಾಯಿತು. ಜಡೇಜ 76 ಎಸೆತಗಳಿಂದ ಅಜೇಯ 60 ರನ್ ಬಾರಿಸಿದ್ದು (6 ಬೌಂಡರಿ, 2 ಸಿಕ್ಸರ್), ಉಮೇಶ್ ಯಾದವ್ ಹತ್ತೇ ಎಸೆತಗಳಿಂದ 25 ರನ್ ಬಾರಿಸಿದ್ದಾರೆ (1 ಬೌಂಡರಿ, 3 ಸಿಕ್ಸರ್).
ಇಂದೋರ್ ಟೆಸ್ಟ್ ದಾಖಲೆ
ಸತತ 4 ಟೆಸ್ಟ್‌ಗಳಲ್ಲಿ ದ್ವಿಶತಕ
ಭಾರತ ಸತತ 4 ಟೆಸ್ಟ್ ಗಳಲ್ಲಿ ದ್ವಿಶತಕ ದಾಖಲಿಸಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣ ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ 215, ಪುಣೆಯಲ್ಲಿ ವಿರಾಟ್ ಕೊಹ್ಲಿ ಅಜೇಯ 254, ರಾಂಚಿಯಲ್ಲಿ ರೋಹಿತ್ ಶರ್ಮ 212 ರನ್ ಹೊಡೆದಿದ್ದರು. ಇದೀಗ ಮತ್ತೆ ಅಗರ್ವಾಲ್ ಸರದಿ.
ಬ್ರಾಡ್‌ಮನ್‌ಗಿಂತ ಮಿಗಿಲು
ಇದು ಮಾಯಾಂಕ್ ಅಗರ್ವಾಲ್ ಅವರ 12ನೇ ಇನ್ನಿಂಗ್ಸ್. ಅವರು ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2 ದ್ವಿಶತಕ ಬಾರಿಸಿದ ಸಾಧಕರ ಯಾದಿಯಲ್ಲಿ ಡಾನ್ ಬ್ರಾಡ್‌ಮನ್ ಅವರನ್ನು ಮೀರಿಸಿ ದ್ವಿತೀಯ ಸ್ಥಾನ ಅಲಂಕರಿಸಿದರು. ಬ್ರಾಡ್‌ಮನ್ ಮೊದಲೆರಡು ದ್ವಿಶತಕಗಳಿಗೆ 13 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಭಾರತದವರೇ ಆದ ವಿನೋದ್ ಕಾಂಬ್ಳಿ ಮೊದಲ 5 ಇನ್ನಿಂಗ್ಸ್ ಗಳಲ್ಲಿ 2 ಡಬಲ್ ಸೆಂಚುರಿ ಬಾರಿಸಿರುವುದು ದಾಖಲೆ.
ಒಂದೇ ದಿನದಲ್ಲಿ 200 ರನ್
ಮಾಯಾಂಕ್ ಅಗರ್ವಾಲ್ ಒಂದೇ ದಿನದಾಟದಲ್ಲಿ 200 ರನ್ ಬಾರಿಸಿದ ಭಾರತದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ಅವರು ದ್ವಿತೀಯ ದಿನದ ಬ್ಯಾಟಿಂಗ್ ವೇಳೆ ಒಟ್ಟು 206 ರನ್ ಹೊಡೆದರು. ವೀರೇಂದ್ರ ಸೆಹವಾಗ್ 2009-10ರ ಶ್ರೀಲಂಕಾ ಎದುರಿನ ಮುಂಬಯಿ ಟೆಸ್ಟ್ ವೇಳೆ ಒಂದೇ ದಿನ 284 ರನ್ ಬಾರಿಸಿದ್ದು ದಾಖಲೆ. ಸೆಹವಾಗ್ 3 ಸಲ ಈ ಸಾಧನೆ ಮಾಡಿದ್ದಾರೆ. ಉಳಿದಿಬ್ಬರೆಂದರೆ ಕರುಣ್ ನಾಯರ್ (232) ಮತ್ತು ಧೋನಿ (206).
2ನೇ ಅತ್ಯುತ್ತಮ ಸಾಧನೆ
ಮಾಯಾಂಕ್ ಅಗರ್ವಾಲ್ ಬಾಂಗ್ಲಾ ವಿರುದ್ಧ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ ಭಾರತದ 2ನೇ ಕ್ರಿಕೆಟಿಗನೆನಿಸಿದರು (243). 2004-05ರ ಢಾಕಾ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅಜೇಯ 248 ರನ್ ಹೊಡೆದದ್ದು ದಾಖಲೆ. 2016-17ರ ಹೈದರಾಬಾದ್ ಪಂದ್ಯದಲ್ಲಿ 204 ರನ್ ಪೇರಿಸಿದ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.
8 ಸಿಕ್ಸರ್‌ಗಳ ದಾಖಲೆ
ಭಾರತದ ಇನ್ನಿಂಗ್ಸ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಜಂಟಿ ದಾಖಲೆಗೂ ಅಗರ್ವಾಲ್ ಪಾತ್ರರಾದರು. ಅವರು ಈ ಅಬ್ಬರದ ಬೀಸುಗೆಯ ವೇಳೆ 8 ಸಿಕ್ಸರ್ ಸಿಡಿಸಿದರು. “ಸಿಕ್ಸರ್ ಸಿದ್ಧು’ ಎಂದೇ ಖ್ಯಾತರಾಗಿದ್ದ ನವಜೋತ್ ಸಿಂಗ್ ಸಿದ್ಧು 1993-94ರ ಶ್ರೀಲಂಕಾ ಎದುರಿನ ಲಕ್ನೋ ಟೆಸ್ಟ್ ಪಂದ್ಯದಲ್ಲೂ 8 ಸಿಕ್ಸರ್ ಹೊಡೆದಿದ್ದರು.
ದಿನವೊಂದರಲ್ಲಿ 400 ರನ್
ಭಾರತ ದ್ವಿತೀಯ ದಿನದಾಟದಲ್ಲಿ 407 ರನ್ ಪೇರಿಸಿತು. ಇದರೊಂದಿಗೆ ದಿನದಾಟದಲ್ಲಿ 3ನೇ ಸಲ 400 ಪ್ಲಸ್ ರನ್ ಬಾರಿಸಿದ ಸಾಧನೆಗೈದಿತು. 2009-10ರ ಶ್ರೀಲಂಕಾ ವಿರುದ್ಧದ ಮುಂಬಯಿ ಟೆಸ್ಟ್ ಪಂದ್ಯದ 2ನೇ ದಿನ 443 ರನ್, ಅದೇ ಸರಣಿಯ ಕಾನ್ಪುರ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ 417 ರನ್ ರಾಶಿ ಹಾಕಿತ್ತು.
ಯಾದವ್ ಸ್ಫೋಟಕ ಆಟ
ಉಮೇಶ್ ಯಾದವ್ ಮೂಲತಃ ಬೌಲರ್. ಆದರೆ ಇತ್ತೀಚೆಗೆ ಸ್ಫೋಟಕ ಬ್ಯಾಟಿಂಗ್ ಮೂಲಕವೂ ಸುದ್ದಿಯಾಗುತ್ತಿದ್ದಾರೆ. 2ನೇ ದಿನದಾಟದ ಅಂತ್ಯಕ್ಕೆ ಅವರು 10 ಎಸೆತಗಳಿಂದ 25 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (1 ಬೌಂಡರಿ, 3 ಸಿಕ್ಸರ್). ಇದರೊಂದಿಗೆ ಸತತ 2 ಟೆಸ್ಟ್‌ಗಳ 17 ಎಸೆತಗಳಿಂದ ಅವರು 55 ರನ್ ಬಾರಿಸಿದಂತಾಯಿತು. ಈ ವೇಳೆ 8 ಸಿಕ್ಸರ್ ಸಿಡಿದಿದೆ.
ಮಾಯಾಂಕ್ 2ನೇ ದ್ವಿಶತಕ
ಇದು ಮಾಯಾಂಕ್ ಅಗರ್ವಾಲ್ ಬಾರಿಸಿದ 2ನೇ ಡಬಲ್ ಸೆಂಚುರಿ ಹಾಗೂ ಜೀವನಶ್ರೇಷ್ಠ ಗಳಿಕೆ. ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ 215 ರನ್ ಹೊಡೆದದ್ದು ಅವರ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ದ್ವಿಶತಕ ಹೊಡೆದ ಭಾರತದ ಆರಂಭಿಕರ ಯಾದಿಯಲ್ಲಿ ಅಗರ್ವಾಲ್‌ಗೆ ಜಂಟಿ 3ನೇ ಸ್ಥಾನ. ವಿನೂ ಮಂಕಡ್, ವಾಸಿಮ್ ಜಾಫರ್‌ಕೂಡ 2 ದ್ವಿಶತಕ ಬಾರಿಸಿದ್ದಾರೆ. ದಾಖಲೆ ವೀರೇಂದ್ರ ಸೆಹವಾಗ್ ಹೆಸರಲ್ಲಿದೆ (6). ಸುನೀಲ್ ಗಾವಸ್ಕರ್ 3 ದ್ವಿಶತಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ ಸೂಚನೆ, ಮಾಯಾಂಕ್ ಪಾಲನೆ!
ಇಂದೋರ್: ಮಾಯಾಂಕ್ ಅಗರ್ವಾಲ್ ಬ್ಯಾಟಿಂಗ್ ಅಬ್ಬರ ತೋರ್ಪಡಿಸುತ್ತಿದ್ದಾಗ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಕೈಸನ್ನೆ ಮೂಲಕ “ಡಬಲ್ ಹಂಡ್ರೆಡ್ ಪ್ಲಿಸ್…’ ಎಂಬ ಸೂಚನೆ ರವಾನಿಸಿದರು. “ಓಕೆ ಬಾಸ್’ ಎಂಬ ರೀತಿಯಲ್ಲಿ ಮಾಯಾಂಕ್ ಪ್ರತಿಕ್ರಿಯಿಸಿದರು. ದ್ವಿಶತಕ ಪೂರ್ತಿಗೊಳಿಸಿದೊಡನೆಯೇ, “ನಿಮ್ಮ ಬಯಕೆ ಈಡೇರಿಸಿದ್ದೇನೆ’ ಎಂಬ ರೀತಿಯಲ್ಲಿ ಅಗರ್ವಾಲ್ ಮರು ಸನ್ನೆ ಮಾಡಿದರು. ಇದಕ್ಕೆ ಕೊಹ್ಲಿ “ಹಾಗಾದರೆ ತ್ರಿಶತಕ ಬಾರಿಸಿ’ ಎಂದು ಮತ್ತೂಮ್ಮೆ ಸೂಚಿಸಿದರು. ಇದನ್ನು ಮಾತ್ರ ಈಡೇರಿಸಲು ಅಗರ್ವಾಲ್ ಅವರಿಂದಾಗಲಿಲ್ಲ!
ಎಲ್‌ಬಿ ತೀರ್ಪಿನಿಂದ ತಬ್ಬಿಬ್ಟಾದ ಅಗರ್ವಾಲ್
ಇಂದೋರ್: ದ್ವಿಶತಕವೀರ ಮಾಯಾಂಕ್ ಅಗರ್ವಾಲ್ 2ನೇ ದಿನದಾಟದ ಮೊದಲ ಅವಧಿಯಲ್ಲಿ ತಪ್ಪು ತೀರ್ಪಿನಿಂದ ಆಘಾತಕ್ಕೊಳಗಾದ ಘಟನೆ ನಡೆಯಿತು. 82 ರನ್ ಗಳಿಸಿದ್ದಾಗ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್ ಎಸೆತವೊಂದು ಅವರನ್ನು ವಂಚಿಸಿ ಪ್ಯಾಡ್‌ಗೆ ಬಡಿಯಿತು. ಹೇಗೆ ನೋಡಿದರೂ ಅವರು ಎಲ್‌ಬಿ ಆಗುವ ಸಾಧ್ಯತೆಯಿರಲಿಲ್ಲ. ಆದರೆ ಅಂಪಾಯರ್ ಮರಾಯ್ಸ ಎರಾಸ್ಮಸ್ ಔಟ್ ತೀರ್ಪು ನೀಡಿದರು!
ಇದರಿಂದ ತಬ್ಬಿಬ್ಟಾದ ಮಾಯಾಂಕ್ ಅಗರ್ವಾಲ್ ಇನ್ನೊಂದು ತುದಿಯಲ್ಲಿದ್ದ ಅಜಿಂಕ್ಯ ರಹಾನೆ ಸಲಹೆ ಪಡೆದು ಡಿಆರ್‌ಎಸ್‌ಗೆ ಮನವಿ ಸಲ್ಲಿಸಿದರು. ಅಲ್ಲಿ ನಾಟೌಟ್ ಎಂಬ ತೀರ್ಪು ಬಂದ ಬಳಿಕ ನಿರಾಳಗೊಂಡರು.
ಸ್ಕೋರ್ ಪಟ್ಟಿ
ಬಾಂಗ್ಲಾದೇಶ ಪ್ರಥಮ ಇನ್ನಿಂಗ್ಸ್ 150
ಭಾರತ ಪ್ರಥಮ ಇನ್ನಿಂಗ್ಸ್
ಅಗರ್ವಾಲ್ ಸಿ ಜಾಯೇದ್ ಬಿ ಮಿರಾಜ್ 243
ರೋಹಿತ್ ಶರ್ಮ ಸಿ ದಾಸ್ ಬಿ ಜಾಯೇದ್ 6
ಪೂಜಾರ ಸಿ ಸೈಫ್ ಬಿ ಜಾಯೇದ್ 54
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಜಾಯೇದ್ 0
ರಹಾನೆ ಸಿ ತೈಜುಲ್ ಬಿ ಜಾಯೇದ್ 86
ರವೀಂದ್ರ ಜಡೇಜ ಬ್ಯಾಟಿಂಗ್ 60
ವೃದ್ಧಿಮಾನ್ ಸಾಹಾ ಬಿ ಇಬಾದತ್ 12
ಉಮೇಶ್ ಯಾದವ್ ಬ್ಯಾಟಿಂಗ್ 25
ಇತರ 7
ಒಟ್ಟು (6 ವಿಕೆಟಿಗೆ) 493
ವಿಕೆಟ್ ಪತನ: 1-14, 2-105, 3-119, 4-309, 5-432, 6-454.
ಬೌಲಿಂಗ್:
ಇಬಾದತ್ ಹೊಸೈನ್ 31-5-115-1
ಅಬು ಜಾಯೇದ್ 25-3-108-4
ತೈಜುಲ್ ಇಸ್ಲಾಮ್ 28-4-120-0
ಮೆಹಿದಿ ಹಸನ್ ಮಿರಾಜ್ 27-0-125-1
ಮಹಮದುಲ್ಲ 3-0-24-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.