Melbourne Test : ಪಾಕಿಸ್ಥಾನ ವಿರುದ್ಧ ಆಸ್ಟ್ರೇಲಿಯ 318 ಆಲೌಟ್
Team Udayavani, Dec 27, 2023, 11:52 PM IST
ಮೆಲ್ಬರ್ನ್: ಪ್ರವಾಸಿ ಪಾಕಿಸ್ಥಾನ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯ ತಂಡವು 318 ರನ್ ಗಳಿಸಿ ಆಲೌಟಾಗಿದೆ. ಇದಕ್ಕುತ್ತರವಾಗಿ ಪಾಕಿಸ್ಥಾನ ತಂಡವು ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿದ್ದು ದ್ವಿತೀಯ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡಿದ್ದು 194 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಪಾಕಿಸ್ಥಾನ ಇನ್ನೂ 124 ರನ್ ಗಳಿಸಬೇಕಾಗಿದೆ.
ಮೂರು ವಿಕೆಟಿಗೆ 187 ರನ್ನುಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ತಂಡಕ್ಕೆ ಮಾರ್ನಸ್ ಲಬುಶೇನ್ ಮತ್ತು ಮಿಚೆಲ್ ಮಾರ್ಷ್ ಆಸರೆಯಾಗಿದ್ದರು. ಅವರಿಬ್ಬರ ಉತ್ತಮ ಆಟದಿಂದಾಗಿ ತಂಡ ಉತ್ತಮ ಮೊತ್ತ ಪೇರಿಸುವ ಸೂಚನೆ ನೀಡಿತು. ಲಬುಶೇನ್ 155 ಎಸೆತ ಎದುರಿಸಿದ್ದು 5 ಬೌಂಡರಿ ನೆರವಿನಿಂದ 63 ರನ್ ಹೊಡೆದರು. ಈ ನಡುವೆ ಆಕ್ರಮಣಕಾರಿಯಾಗಿ ಆಡಿದ ಮಿಚೆಲ್ ಮಾರ್ಷ್ 60 ಎಸೆತಗಳಿಂದ 41 ರನ್ ಸಿಡಿಸಿದರು.
ಇಲ್ಲಿನ ಪಿಚ್ ಸೀಮ್ ಬೌಲರ್‌ಗಳಿಗೆ ನೆರವು ನೀಡುತ್ತಿದ್ದ ಕಾರಣ ಪಾಕಿಸ್ಥಾನದ ಬೌಲರ್‌ಗಳು ಆಸ್ಟ್ರೇಲಿಯದ ರನ್‌ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾಯಿತು. ಪಾಕಿನ ಬಿಗು ದಾಳಿಗೆ ಕುಸಿದ ಆಸ್ಟ್ರೇಲಿಯ ತಂಡವು ಕೊನೆಯ ಏಳು ವಿಕೆಟ್‌ಗಳನ್ನು 131 ರನ್ ಅಂತರದಲ್ಲಿ ಕಳೆದುಕೊಂಡಿತು. ಇತರ ರೂಪದಲ್ಲಿ ಪಾಕ್ 52 ರನ್ ಬಿಟ್ಟುಕೊಟ್ಟ ಕಾರಣ ಆಸ್ಟ್ರೇಲಿಯದ ಮೊತ್ತ ಮುನ್ನೂರರ ಗಡಿ ದಾಟುವಂತಾಯಿತು.
ಪಾಕಿಸ್ಥಾನದ ಆರಂಭ ಉತ್ತಮವಾ ಗಿತ್ತು. ಆರಂಭಿಕ ಅಬ್ದುಲ್ಲ ಶಫೀಕ್ ಮತ್ತು ಶಾನ್ ಮಸೂದ್ ಅವರು ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 90 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಇದರೆ ಈ ಜೋಡಿ ಮುರಿದ ಬಳಿಕ ಆಸ್ಟ್ರೇಲಿಯ ಮೇಲುಗೈ ಸಾಧಿಸಿತು. ಮುಂದಿನ 46 ರನ್ ಪೇರಿಸುವಷ್ಟರಲ್ಲಿ ತಂಡದ ನಾಲ್ಕು ವಿಕೆಟ್ ಉರುಳಿದ್ದವು. ಇದರಿಂದಾಗಿ ತಂಡ 170 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು.
ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯ 360 ರನ್ನುಗಳಿಂದ ಜಯಿಸಿದೆ. ಸರಣಿಯ ಮೂರನೇ ಪಂದ್ಯ ಸಿಡ್ನಿಯಲ್ಲಿ ಜ. 3ರಿಂದ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ 318 (ಲಬುಶೇನ್ 63, ಉಸ್ಮಾನ್ ಖ್ವಾಜಾ 42, ಡೇವಿಡ್ ವಾರ್ನರ್ 38, ಮಿಚೆಲ್ ಮಾರ್ಷ್ 41, ಆಮಿರ್ ಜಮಾಲ್ 64ಕ್ಕೆ 3); ಪಾಕಿಸ್ಥಾನ 6 ವಿಕೆಟಿಗೆ 194 (ಅಬ್ದುಲ್ಲ ಶಫೀಕ್ 62, ಶಾನ್ ಮಸೂದ್ 54, ಪ್ಯಾಟ್ ಕಮಿನ್ಸ್ 37ಕ್ಕೆ 3).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.