IPL 2022: ಚೆನ್ನೈ ಜೈಕಾರ; ಮುಂಬೈ ಸೋಲಿನ ದಾಖಲೆ
Team Udayavani, Apr 22, 2022, 12:09 AM IST
ಮುಂಬಯಿ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ ಏಳರಲ್ಲೂ ಏಳ್ಗತಿ ಕಾಣಲು ವಿಫಲವಾಗಿದೆ. ಹಾಲಿ ಚಾಂಪಿಯನ್ ಚೆನ್ನೈ ಎದುರಿನ ಗುರುವಾರದ ರೋಚಕ ಮುಖಾಮುಖಿಯಲ್ಲಿ ಅದು ಅಂತಿಮ ಎಸೆತದಲ್ಲಿ 3 ವಿಕೆಟ್‌ಗಳ ಸೋಲಿನ ಮುಖಭಂಗ ಅನುಭವಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಸತತವಾಗಿ ಮೊದಲ 7 ಪಂದ್ಯಗಳನ್ನು ಸೋತ ಮೊದಲ ತಂಡವೆಂಬ ಅವಮಾನಕ್ಕೆ ಸಿಲುಕಿತು.
ಭಾರೀ ಆಘಾತದ ಬಳಿಕ ಚೇತರಿಸಿಕೊಂಡ ಮುಂಬೈ 7 ವಿಕೆಟಿಗೆ 155 ರನ್ ಗಳಿಸಿತು. ಚೆನ್ನೈ ಭರ್ತಿ 20 ಓವರ್‌ಗಳಲ್ಲಿ 7 ವಿಕೆಟಿಗೆ 156 ರನ್ ಬಾರಿಸಿ ತನ್ನ 2ನೇ ಗೆಲುವನ್ನು ಒಲಿಸಿಕೊಂಡಿತು.
ಧೋನಿ ಫಿನಿಶರ್ :
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಾನಿನ್ನೂ “ಗ್ರೇಟ್ ಫಿನಿಶರ್’ ಆಗಿಯೇ ಉಳಿದಿದ್ದೇನೆ ಎಂಬುದನ್ನು ಈ ಪಂದ್ಯದಲ್ಲಿ ಸಾಬೀತು ಪಡಿಸಿದರು. ಅಂತಿಮ ಎಸೆತವನ್ನು ಬೌಂಡರಿಗೆ ಬಡಿದಟ್ಟುವ ಮೂಲಕ ಅವರು ಚೆನ್ನೈ ಗೆಲುವನ್ನು ಸಾರಿದರು.
ಜೈದೇವ್ ಉನಾದ್ಕತ್ ಕೊನೆಯ ಓವರ್ ಎಸೆಯಲು ಬಂದಾಗ ಪಂದ್ಯ ಮುಂಬೈ ಕೈಯಲ್ಲೇ ಇತ್ತು. ಆಗ ಚೆನ್ನೈ ಜಯಕ್ಕೆ 4 ವಿಕೆಟ್‌ಗಳಿಂದ 17 ರನ್ ಅಗತ್ಯವಿತ್ತು. ಉನಾದ್ಕತ್ ಮೊದಲ ಎಸೆತದಲ್ಲೇ ಪ್ರಿಟೋರಿಯಸ್ ವಿಕೆಟ್ ಹಾರಿಸಿದರು. ಮುಂದಿನ ಎಸೆತದಲ್ಲಿ ಬ್ರಾವೊ ಸಿಂಗಲ್ ತೆಗೆದರು. ಮುಂದಿನದು ಧೋನಿ ದರ್ಬಾರು. ಅವರು 3ನೇ ಎಸೆತವನ್ನು ಸಿಕ್ಸರ್‌ಗೆ ರವಾನಿಸಿದರು. 4ನೇ ಎಸೆತದಲ್ಲಿ ಫೋರ್ ಬಿತ್ತು. ಅನಂತರ 2 ರನ್. ಕೊನೆಯ ಎಸೆತದಲ್ಲಿ ಬೌಂಡರಿ ಸವಾಲು ಎದುರಾಯಿತು. ಲೋ ಫುಲ್‌ಟಾಸ್ ಎಸೆತವನ್ನು ಧೋನಿ ಬೌಂಡರಿಗೆ ಸಿಡಿಸಿಯೇ ಬಿಟ್ಟರು. ಧೋನಿ ಗಳಿಕೆ 13 ಎಸೆತಗಳಿಂದ ಅಜೇಯ 28 ರನ್ (3 ಫೋರ್, 1 ಸಿಕ್ಸರ್). ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ 8 ಸಲ ಅಂತಿಮ ಎಸೆತದಲ್ಲಿ ಗೆದ್ದ ಸಾಧನೆ ಚೆನ್ನೈ ತಂಡದ್ದಾಯಿತು. ಆರಂಭದಲ್ಲೇ ಮುಂಬೈಯನ್ನು ಕಾಡಿದ ಮುಕೇಶ್ ಚೌಧರಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ರೋಹಿತ್ ಸೊನ್ನೆ ದಾಖಲೆ! :
ಮಧ್ಯಮ ವೇಗಿ ಮುಕೇಶ್ ಚೌಧರಿ ಪಂದ್ಯದ ಮೊದಲ ಓವರ್‌ನಲ್ಲೇ ಮುಂಬೈಗೆ ಅವಳಿ ಆಘಾತವಿಕ್ಕಿದರು. ನಾಯಕ ರೋಹಿತ್ ಶರ್ಮ ಮತ್ತು ಬಹುಕೋಟಿ ಕ್ರಿಕೆಟರ್ ಇಶಾನ್ ಕಿಶನ್ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಇಬ್ಬರದೂ ಶೂನ್ಯ ಸಂಪಾದನೆ. ರೋಹಿತ್ ಮಿಡ್-ಆನ್ ಫೀಲ್ಡರ್ ಸ್ಯಾಂಟ್ನರ್‌ಗೆ ಕ್ಯಾಚ್ ನೀಡಿ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ 14 ಸೊನ್ನೆ ಸುತ್ತಿದ ಸಂಕಟಕ್ಕೆ ತುತ್ತಾದರು. ಅಜಿಂಕ್ಯ ರಹಾನೆ, ಪಾರ್ಥಿವ್ ಪಟೇಲ್, ಅಂಬಾಟಿ ರಾಯುಡು, ಮನ್‌ದೀಪ್ ಸಿಂಗ್, ಹರ್ಭಜನ್ ಸಿಂಗ್, ಪೀಯೂಷ್ ಚಾವ್ಲಾ 13 ಸೊನ್ನೆ ಸುತ್ತಿದ ದಾಖಲೆಯನ್ನು ರೋಹಿತ್ ಮುರಿದರು.
ಇಶಾನ್ ಕಿಶನ್ ಕ್ಲೀನ್ ಬೌಲ್ಡ್ ಆಗಿ ವಾಪಸಾದರು. ಮುಂಬೈ ಆರಂಭಿಕರಿಬ್ಬರೂ ಖಾತೆ ತೆರೆಯದೆ ವಾಪಸಾದ ಕೇವಲ 2ನೇ ನಿದರ್ಶನ ಇದಾಗಿದೆ. 2009ರ ಡೆಲ್ಲಿ ವಿರುದ್ಧದ ಈಸ್ಟ್ ಲಂಡನ್ ಪಂದ್ಯದಲ್ಲಿ ಲ್ಯೂಕ್ ರಾಂಚಿ ಮತ್ತು ಜೀನ್‌ಪಾಲ್ ಡ್ಯುಮಿನಿ ಕೂಡ ಇದೇ ಸಂಕಟಕ್ಕೆ ಸಿಲುಕಿದ್ದರು.
ಮುಕೇಶ್ ಚೌಧರಿ ಆರ್ಭಟ ಇಲ್ಲಿಗೇ ನಿಲ್ಲಲಿಲ್ಲ. ದ್ವಿತೀಯ ಓವರ್‌ನಲ್ಲಿ “ಬೇಬಿ ಎಬಿಡಿ’ ಡಿವಾಲ್ಡ್ ಬ್ರೇವಿಸ್ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು. 4 ರನ್ ಮಾಡಿದ ಅವರು ಕೀಪರ್ ಧೋನಿಗೆ ಕ್ಯಾಚ್ ನೀಡಿದರು. 2 ರನ್ ಮಾಡಿದ ವೇಳೆ ರವೀಂದ್ರ ಜಡೇಜ ಜೀವದಾನ ನೀಡದರೂ ಬ್ರೇವಿಸ್‌ಗೆ ಇದರ ಲಾಭ ಎತ್ತಲಾಗಲಿಲ್ಲ.
ಚೌಧರಿಯ 3ನೇ ಓವರ್‌ನ ಮೊದಲ ಎಸೆತದಲ್ಲೇ ತಿಲಕ್ ವರ್ಮ ವಾಪಸಾಗಬೇಕಿತ್ತು. ಆದರೆ ಸ್ಲಿಪ್‌ನಲ್ಲಿದ್ದ ಬ್ರಾವೊ ಸುಲಭ ಕ್ಯಾಚ್ ಕೈಚೆಲ್ಲಿದರು. ಪವರ್ ಪ್ಲೇ ಮುಕ್ತಾಯಕ್ಕೆ ಮುಂಬೈ 3 ವಿಕೆಟಿಗೆ 42 ರನ್ ಗಳಿಸಿತು. ಚೆನ್ನೈ ಸತತ 3 ಪಂದ್ಯಗಳ ಪವರ್ ಪ್ಲೇಯಲ್ಲಿ 3 ವಿಕೆಟ್ ಕೆಡವಿತು.
ತಂಡ ತೀವ್ರ ಸಂಕಟದಲ್ಲಿದ್ದಾಗ ಸೂರ್ಯಕುಮಾರ್ ಯಾದವ್ ಸ್ವಲ್ಪ ಹೊತ್ತು ನೆರವಿಗೆ ನಿಂತರು. ತಮ್ಮ ಸಹಜ ಶೈಲಿಯ ಆಟದ ಮೂಲಕ 21 ಎಸೆತಗಳಿಂದ 32 ರನ್ ಹೊಡೆದರು (3 ಬೌಂಡರಿ, 1 ಸಿಕ್ಸರ್). ಈ ವಿಕೆಟ್ ಪತನದಲ್ಲೂ ಚೌಧರಿ ಪಾಲಿತ್ತು. ಅವರು ಕ್ಯಾಚ್ ಪಡೆದಿದ್ದರು. ವಿಕೆಟ್ ಸ್ಯಾಂಟ್ನರ್ ಪಾಲಾಯಿತು. ಅರ್ಧ ಹಾದಿ ಮುಗಿಯುವಾಗ ಮುಂಬೈ ಕೇವಲ 56 ರನ್ನಿಗೆ 4 ವಿಕೆಟ್ ಕಳೆದುಕೊಂಡ ಸಂಕಟದಲ್ಲಿತ್ತು.
ಮೊದಲ ಪಂದ್ಯವಾಡಿದ ಹೃತಿಕ್ ಶೊಕೀನ್ ಎಸೆತಕ್ಕೊಂದರಂತೆ 25 ರನ್ ಮಾಡಿದರು (3 ಬೌಂಡರಿ). 15 ಓವರ್ ಮುಕ್ತಾಯಕ್ಕೆ ತಂಡದ ಸ್ಕೋರ್ ನೂರಕ್ಕೆ ಏರಿತ್ತು. ಬಳಿಕ ತಿಲಕ್ ವರ್ಮ ಪಂದ್ಯವನ್ನು ತಮ್ಮ ಹತೋಟಿಗೆ ತಂದುಕೊಂಡರು. ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಮುಂಬೈ ಸರದಿಯ ಏಕಾಂಗಿ ಹೋರಾಟಗಾರನೆನಿಸಿದ ತಿಲಕ್ ವರ್ಮ 43 ಎಸೆತಗಳಿಂದ 51 ರನ್ ಹೊಡೆದು ಅಜೇಯರಾಗಿ ಉಳಿದರು. ಸಿಡಿಸಿದ್ದು 3 ಬೌಂಡರಿ ಹಾಗೂ 2 ಸಿಕ್ಸರ್. ಇವರೊಂದಿಗೆ ಜೈದೇವ್ ಉನಾದ್ಕತ್ ಅಜೇಯ 19 ರನ್ ಮಾಡಿದರು.
3 ಬದಲಾವಣೆ :
ಈ ಪಂದ್ಯಕ್ಕಾಗಿ ಮುಂಬೈ 3 ಬದಲಾವಣೆ ಮಾಡಿಕೊಂಡಿತು. ರಿಲೀ ಮೆರಿಡಿತ್ ಮತ್ತು ಆಫ್ ಸ್ಪಿನ್ನರ್ ಹೃತಿಕ್ ಶೊಕೀನ್ ಮೊದಲ ಸಲ ಆಡಲಿಳಿದರು. ಡೇನಿಯಲ್ ಸ್ಯಾಮ್ಸ್ ವಾಪಸ್ ತಂಡ ಕೂಡಿಕೊಂಡರು.
ಚೆನ್ನೈ ಮೊಯಿನ್ ಆಲಿ ಮತ್ತು ಕ್ರಿಸ್ ಜೋರ್ಡನ್ ಆವರನ್ನು ಕೈಬಿಟ್ಟಿತು. ಇವರ ಬದಲು ಡ್ವೇನ್ ಪ್ರಿಟೋರಿಯಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಆಡಲಿಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.