ಮಯಾಮಿ ಓಪನ್: ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಹಾಲೆಪ್
Team Udayavani, Mar 27, 2019, 6:53 AM IST
ಮಯಾಮಿ: ಮತ್ತೆ ನಂ.ವನ್ ಪಟ್ಟವನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿರುವ ರೊಮೇನಿಯಾದ ಸಿಮೋನಾ ಹಾಲೆಪ್ “ಮಯಾಮಿ ಓಪನ್’ ಟೆನಿಸ್ ಕೂಟದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್, ಕೆವಿನ್ ಆ್ಯಂಡರ್ಸನ್ 4ನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ರಾತ್ರಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಹಾಲೆಪ್ ಅಮೆರಿಕದ ವೀನಸ್ ವಿಲಿಯಮ್ಸ್ ಅವರನ್ನು 6-3, 6-3 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ವೀನಸ್ ವಿರುದ್ಧ ಕಳೆದ 4 ಪಂದ್ಯಗಳಲ್ಲಿ ಗೆದ್ದಿರುವ ಹಾಲೆಪ್ ಮತ್ತೂಮ್ಮೆ ವೀನಸ್ ಅವರನ್ನು ಸೋಲಿಸಿದ್ದಾರೆ. ಹಾಲೆಪ್ ಅವರು ವೀನಸ್ ವಿರುದ್ಧ “ಆಸ್ಟ್ರೇಲಿಯನ್ ಓಪನ್’ ಕೂಟದಲ್ಲೂ ಜಯಿಸಿದ್ದರು. ಅಲ್ಲಿ ಕೂಡ ವೀನಸ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ್ದರು. ನವೋಮಿ ಒಸಾಕಾ ಅವರ ನಿರ್ಗಮನದ ಬಳಿಕ ಈ ಕೂಟದಲ್ಲಿ ಅಗ್ರ ಶ್ರೇಯಾಂಕದಲ್ಲಿ ಹಾಲೆಪ್ ಆಡುತ್ತಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಹಾಲೆಪ್ ಚೀನದ ವಾಂಗ್ ಕ್ವಿಯಾಂಗ್ ಅವರನ್ನು ಎದುರಿಸಲಿದ್ದಾರೆ. ಕ್ವಿಯಾಂಗ್ ಅವರು ತಮ್ಮದೇ ದೇಶದ ವಾಂಗ್ ಯೂಫಾನ್ ಅವರನ್ನು 7-5, 6-4 ಸೆಟ್‌ಗಳಿಂದ ಪರಾಭವಗೊಳಿಸಿದರು. ಉಳಿದಂತೆ ತೈವಾನ್‌ನ ಸೀ ಸು-ವೀ ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಅವರ ವಿರುದ್ಧ 6-3, 6-7 (0-7), 6-2 ಸೆಟ್‌ಗಳಿಂದ ಜಯ ಸಾಧಿಸಿದರು.
ಮುಂದುವರಿದ ಫೆಡರರ್ ಗೆಲುವಿನ ಓಟ
ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್ ಅವರ ಗೆಲುವಿನ ಓಟ ಮುಂದುವರಿದಿದ್ದು 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಫೆಡರರ್ ಸರ್ಬಿಯಾದ ಫಿಲಿಪ್ ಕ್ರಾಜಿನೋವಿಕ್ ಅವರನ್ನು 7-5, 6-3 ನೇರ ಸೆಟ್‌ಗಳಿಂದ ಸೋಲಿಸಿದರು. ಮೊದಲ ಸೆಟ್‌ನ ಆರಂಭದಲ್ಲಿ ಕ್ರಾಜಿನೋವಿಕ್ 2-1 ಮುನ್ನಡೆ ಸಾಧಿಸಿದರೂ ಅನುಭವಿ ಫೆಡರರ್ ಎದುರು ಮಂಕಾಗಿ ಮೊದಲ ಸೆಟ್ ಸೋತರು. ದ್ವಿತೀಯ ಸೆಟ್ ಆರಂಭದಲ್ಲೇ ಮೇಲುಗೈ ಸಾಧಿಸಿದ ಫೆಡರರ್ ಅವರು ಕ್ರಾಜಿನೋವಿಕ್‌ಗೆ ಹೆಚ್ಚಿನ ಅವಕಾಶ ನೀಡದೇ ಸುಲಭವಾಗಿ ಜಯಿಸಿದರು. ಫೆಡರರ್ ಅವರ ಮುಂದಿನ ಎದುರಾಳಿ ಡೆನಿಲ್ ಮೆಡ್ವೆಡೆವ್. ಡೆನಿಲ್ ಅವರು ಅಮೆರಿಕದ ಅರ್ಹತಾ ಆಟಗಾರ ರಿಲೇ ಒಪ್ಲೆಕಾ ವಿರುದ್ಧ ಭಾರೀ ಹೋರಾಟದ ಬಳಿಕ 7-6 (7-5), 6-7 (5-7), 7-6 (7-0) ಸೆಟ್‌ಗಳಿಂದ ಜಯಿಸಿದರು.
ಉಳಿದಂತೆ ಕೆವಿನ್ ಆ್ಯಂಡರ್ಸನ್ ಪೋರ್ಚುಗೀಸ್‌ನ ಜೊವೊ ಸೌಸ ಅವರನ್ನು 6-4, 7-6 (8-6) ಸೆಟ್‌ಗಳಿಂದ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಅವರು ಶ್ರೇಯಾಂಕ ರಹಿತ ಆಟಗಾರ ಆಸ್ಟ್ರೇಲಿಯದ ಜೋರ್ಡಾನ್ ಥಾಂಪ್ಸನ್ ಅವರನ್ನು ಎದುರಿಸಲಿದ್ದಾರೆ. ಥಾಂಪ್ಸನ್ ಅವರು ಗ್ರಿಗೋರ್ ಡಿಮಿಟ್ರೋವ್ ಅವರನ್ನು 7-5, 7-5 ಸೆಟ್‌ಗಳಿಂದ ಸೋಲಿಸಿದರು. ಕೆನಡದ ಯುವ ಟೆನಿಸಿಗ ಡೆನಿಸ್ ಶಪೊವಾಲೊವ್ ರಶ್ಯದ ಆ್ಯಂಡ್ರೆ ರುಬ್ಲೆವ್ ಅವರನ್ನು 6-3, 7-6 (7-5) ಸೆಟ್‌ಗಳಿಂದ ಸೋಲಿಸಿ ಮತ್ತೋರ್ವ ಯುವ ಆಟಗಾರ ಸ್ಟಿಫನಸ್ ಸಿಸಿಪಸ್ ಅವರನ್ನು ಎದುರಿಸಲು ಸಿದ್ದರಾಗಿದ್ದಾರೆ. ಸಿಸಿಪಸ್ ಆರ್ಜೆಂಟೀನಾದ ಲಿಯೋನಾರ್ಡೊ ಮಯೆರ್ ವಿರುದ್ಧ 6-4, 6-4 ಸೆಟ್‌ಗಳ ಗೆಲುವು ದಾಖಲಿಸಿದರು.
ಕೂಟದಿಂದ ಹೊರ ನಡೆದ ಬಿಯಾಂಕ್
“ಇಂಡಿಯನ್ ವೆಲ್ಸ್’ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ “ಮಯಾಮಿ ಕೂಟ’ದಲ್ಲಿ ಪಾಲ್ಗೊಂಡ ಕೆನಡದ ಬಿಯಾಂಕ್ ಆ್ಯಂಡ್ರಿಸ್ಕೂ ಅವರ ಸಂತೋಷಕ್ಕೆ ತೆರೆಬಿದ್ದಿದೆ. ಸೋಮವಾರ ರಾತ್ರಿ ಆನೆಟ್ ಕೊಂಟಾವೇಟ್ ವಿರುದ್ಧ 6-1, 2-0 ಮುನ್ನಡೆಯಲ್ಲಿದ್ದ ವೇಳೆ ಭುಜದ ನೋವಿಗೆ ತುತ್ತಾದ ಬಿಯಾಂಕ್ ಕೂಟದಿಂದ ಹೊರನಡೆಯಬೇಕಾಯಿತು. ಇವರ ನಿರ್ಗಮನದಿಂದ ಆನೆಟ್ ಅವರಿಗೆ ವಾಕ್ ಓವರ್ ಲಭಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅಲ್ಲಿ ಅವರು ಸೀ ಸು-ವೀ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.