ಮುಂಬೈ-ಕೋಲ್ಕತಾ ಯಾರಿಗೆ ಫೈನಲ್ ಅದೃಷ್ಟ?
Team Udayavani, May 19, 2017, 11:40 AM IST
ಬೆಂಗಳೂರು: ಹತ್ತನೇ ಐಪಿಎಲ್‌ಗೆ “ಬೆಂಗಳೂರು’ ಎಂಬ ಶಬ್ದ ಎಲ್ಲ ದಿಕ್ಕುಗಳಿಂದಲೂ ಕಹಿಯಾಗಿರುವ ಹೊತ್ತಿನಲ್ಲಿ ಉದ್ಯಾನ ನಗರಿಯ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಮತ್ತೂಂದು ನಿರ್ಣಾ ಯಕ ಪಂದ್ಯದ ಆತಿಥ್ಯ ವಹಿಸಲಿದೆ. ಶುಕ್ರವಾರ ಇಲ್ಲಿ 2ನೇ ಕ್ವಾಲಿಫಯರ್ ಪಂದ್ಯ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್‌ರೈಡರ್ ತಂಡಗಳು ಸೆಣಸಲಿವೆ. ಇಲ್ಲಿ ಗೆದ್ದ ತಂಡ ರವಿವಾರ ಹೈದರಾಬಾದ್‌ನಲ್ಲಿ ಪುಣೆ ವಿರುದ್ಧ ಫೈನಲ್ ಆಡಲಿರುವುದರಿಂದ ಇದು ಐಪಿಎಲ್‌ನ “ಸೆಮಿಫೈನಲ್’ ಎನಿಸಿದೆ.
ಇಲ್ಲಿ ಪಂದ್ಯಕ್ಕಿಂತ ಮಿಗಿಲಾದ ಕುತೂಹಲ ವೆಂದರೆ ಬೆಂಗಳೂರಿನ ಹವಾಮಾನದ್ದು. ಬುಧ ವಾರ ರಾತ್ರಿ ಹೈದರಾಬಾದ್-ಕೋಲ್ಕತಾ ನಡುವಿನ ಎಲಿಮಿನೇಟರ್ ಪಂದ್ಯದ ವೇಳೆ ತನ್ನ ಪ್ರತಾಪ ತೋರಿದ ಮಳೆ ಶುಕ್ರವಾರವೂ ಸುರಿಯುವ ಸಂಭವವಿದೆ. ಹೀಗಾಗಿ ಪಂದ್ಯ ನಿರ್ವಿಘ್ನವಾಗಿ ಸಾಗಲಿದೆ ಎಂದು ಹೇಳುವ ಧೈರ್ಯ ಸಾಲದು. ಹೀಗಾಗಿ ಇತ್ತಂಡಗಳ ಸಾಧನೆಗಿಂತ ನಸೀಬು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಹೆಚ್ಚಿದೆ. ಗುರುವಾರ ಸಂಜೆಯೂ ಬೆಂಗಳೂರಿನಲ್ಲಿ ಮಳೆ ಯಾಗಿದೆ ಎಂಬುದೊಂದು ಎಚ್ಚರಿಕೆಯ ಗಂಟೆ!
ಬುಧವಾರದ ಮಳೆ ಕೋಲ್ಕತಾದ ಅದೃಷ್ಟದ ಬಾಗಿಲನ್ನು ತೆರೆಯಿತು. 6 ಓವರ್‌ಗಳ ಚೇಸಿಂಗ್‌ನಲ್ಲಿ ಅದು ಹೈದರಾಬಾದ್ ವಿರುದ್ಧ ಗೆಲುವಿನ ಕೇಕೆ ಹಾಕಿತು. ಅಕಸ್ಮಾತ್ ಈ 6 ಓವರ್‌ಗಳ ಆಟವೂ ಸಾಗದೆ, ಪಂದ್ಯ ರದ್ದಾದದ್ದಿದ್ದರೆ ಆಗ ಲೀಗ್ ಹಂತದಲ್ಲಿ ಕೆಕೆಆರ್‌ಗಿಂತ ಮೇಲಿದ್ದ ಹೈದರಾಬಾದ್ ಮುನ್ನಡೆಯುತ್ತಿತ್ತು. ಅಕಸ್ಮಾತ್ ಶುಕ್ರವಾರದ 2ನೇ ಕ್ವಾಲಿಫಯರ್ ಪಂದ್ಯ ರದ್ದಾದರೆ ಆಗ ಮುಂಬೈ ಫೈನಲಿಗೆ ನೆಗೆಯುತ್ತದೆ. ಅದು ಲೀಗ್ ಹಂತದ ಅಗ್ರ ತಂಡವಾಗಿರುವುದೇ ಇದಕ್ಕೆ ಕಾರಣ.
ಲೀಗ್: ಮುಂಬೈ ಅವಳಿ ಜಯ
ಲೀಗ್ ಹಂತದ ಎರಡೂ ಮುಖಾಮುಖೀಗಳಲ್ಲಿ ಮುಂಬೈ ಇಂಡಿಯನ್ಸ್ ಪಡೆ ಕೆಕೆಆರ್‌ಗೆ ಸೋಲುಣಿಸಿದ್ದನ್ನು ಮರೆಯುವಂತಿಲ್ಲ. ಮುಂಬೈ ಪರವಾಗಿರುವ ಇನ್ನೂ ಒಂದು ಉಲ್ಲೇಖನೀಯ ಸಂಗತಿಯೆಂದರೆ, ಅದು 10ನೇ ಐಪಿಎಲ್‌ನಲ್ಲಿ ಗೆಲುವಿನ ಖಾತೆ ತೆರೆದದ್ದೇ ಕೋಲ್ಕತಾ ವಿರುದ್ಧ. ಮೊದಲ ಪಂದ್ಯದಲ್ಲಿ ಪುಣೆಗೆ ಶರಣಾದ ಮುಂಬೈ, ಎ. 8ರ ವಾಂಖೇಡೆ ಸಮರದಲ್ಲಿ ಕೋಲ್ಕತಾವನ್ನು 4 ವಿಕೆಟ್‌ಗಳಿಂದ ಮಣಿಸಿತು. ಪಾಂಡೆ ಸಾಹಸದಿಂದ (81) ಕೆಕೆಆರ್ 7ಕ್ಕೆ 178 ರನ್ ಪೇರಿಸಿದರೆ, ಮುಂಬೈ ಕೇವಲ ಒಂದು ಎಸೆತ ಬಾಕಿ ಇರುವಾಗ 6 ವಿಕೆಟಿಗೆ 180 ರನ್ ಬಾರಿಸಿ ಗೆದ್ದು ಬಂದಿತು. ರಾಣ 50 ಹಾಗೂ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 11 ಎಸೆತಗಳಲ್ಲಿ 29 ರನ್ ಸಿಡಿಸಿ ಮುಂಬೈ ಗೆಲುವನ್ನು ಸಾರಿದರು. ಪಾಂಡ್ಯ ಸಿಡಿಯುವ ಮುನ್ನ 4 ಓವರ್‌ಗಳಿಂದ 60 ರನ್ ತೆಗೆಯುವ ಕಠಿನ ಸವಾಲು ಮುಂಬೈ ಮುಂದಿತ್ತು ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬೇಕು.
ಮೇ 13ರ ಈಡನ್ ಸಮರದಲ್ಲಿ ಕೆಕೆಆರ್ ತವರಿನ ಲಾಭ ಪಡೆದು ಗೆದ್ದು ಬಂದೀತೆಂಬ ನಿರೀಕ್ಷೆ ಇತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಗಂಭೀರ್ ಟೀಮ್ 9 ರನ್ನುಗಳ ಸೋಲಿಗೆ ತುತ್ತಾಯಿತು. ಮುಂಬೈ 5ಕ್ಕೆ 173 ರನ್ ಹೊಡೆದರೆ, ಕೋಲ್ಕತಾ 8 ವಿಕೆಟಿಗೆ 164 ರನ್ ಮಾತ್ರ ಗಳಿಸಿತು. ಮುಂಬೈ ಗೆಲುವಿನ ಹ್ಯಾಟ್ರಿಕ್ ಸಾಧಿಸುವುದೇ ಅಥವಾ ಕೆಕೆಆರ್ ದೊಡ್ಡ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವುದೇ ಎಂಬುದು ಶುಕ್ರವಾರದ ಇನ್ನೊಂದು ಕುತೂಹಲ.
ಮುಂಬೈಗೆ ಪುಣೆ ಏಟು
ಮುಂಬೈ ಇಂಡಿಯನ್ಸ್ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಪುಣೆ ಕೈಯಲ್ಲಿ ಸೋಲಿನೇಟು ತಿಂದು ಬಂದ ತಂಡ. ತನ್ನದೇ ಅಂಗಳದಲ್ಲಿ 163 ರನ್ನುಗಳ ಸಾಮಾನ್ಯ ಮೊತ್ತವನ್ನು ಬೆನ್ನಟ್ಟಲು ರೋಹಿತ್ ಪಡೆಯಿಂದ ಸಾಧ್ಯವಾಗಿರಲಿಲ್ಲ. ಇದು ಟಿ-20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳನ್ನೇ ಹೊಂದಿರುವ ತಂಡಕ್ಕೆ ಎದುರಾದ ದೊಡ್ಡ ಹಿನ್ನಡೆ. ಅಷ್ಟೇ ಅಲ್ಲ, ಪುಣೆ ವಿರುದ್ಧ ಅನುಭವಿಸಿದ ಹ್ಯಾಟ್ರಿಕ್ ಸೋಲು ಕೂಡ ಆಗಿತ್ತು.ಸಿಮನ್ಸ್, ರೋಹಿತ್, ಪೊಲಾರ್ಡ್, ಪಾಂಡ್ಯಾಸ್, ರಾಯುಡು ನೈಜ ಸಾಮರ್ಥ್ಯ ತೋರ್ಪಡಿಸಿದರೆ ಮುಂಬೈ ಬ್ಯಾಟಿಂಗ್ ಮತ್ತೆ ಅಪಾಯಕಾರಿಯಾಗಿ ಗೋಚರಿಸಬಹುದು. ಪುಣೆ ವಿರುದ್ಧ ಅನುಭವಿ ಹರ್ಭಜನ್ ಬದಲು ಕಣ್ì ಶರ್ಮ ಅವರಿಗೆ ಅವಕಾಶ ನೀಡಲಾಗಿತ್ತು. ಶುಕ್ರವಾರ ಮತ್ತೆ ಭಜ್ಜಿ ದಾಳಿಗೆ ಇಳಿಯಬಹುದು. ಮೆಕ್ಲೆನಗನ್, ಮಾಲಿಂಗ, ಬುಮ್ರಾ ಅವರೆಲ್ಲ ಇತರ ಬೌಲಿಂಗ್ ಅಸ್ತ್ರಗಳು.
ಬೌಲರ್‌ಗಳ ಮೇಲಾಟ?
ಕೋಲ್ಕತಾ ನೈಟ್‌ರೈಡರ್ ಕೂಡ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ತಂಡ. ಗಂಭೀರ್, ಲಿನ್, ಉತ್ತಪ್ಪ, ಪಾಂಡೆ, ನಾರಾಯಣ್, ಸೂರ್ಯಕುಮಾರ್, ಪಠಾಣ್ ಅವರೆಲ್ಲ ಸಿಡಿದು ನಿಲ್ಲಬಲ್ಲ ಸಾಹಸಿಗರೇ ಆಗಿದ್ದಾರೆ. ಆದರೆ ಬೆಂಗಳೂರಿನ ಒದ್ದೆ ಟ್ರ್ಯಾಕ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಇದು ಬೌಲರ್‌ಗಳ ಮೇಲಾಟ ವಾಗಲೂಬಹುದು. ಆಗ ಹೈದರಾಬಾದ್ ವಿರುದ್ಧ ಘಾತಕ ದಾಳಿ ಸಂಘಟಿಸಿದ ಸ್ಫೂರ್ತಿ ಕೆಕೆಆರ್‌ಗೆ ನೆರವಾಗಲೂಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.