ಕರ್ನಾಟಕಕ್ಕೆ 2 ರನ್‌ಗಳ ರೋಮಾಂಚಕ ಗೆಲುವು
Team Udayavani, Jan 12, 2018, 8:31 AM IST
ವಿಶಾಖಪಟ್ಟಣ: ದಕ್ಷಿಣ ವಲಯ “ಸಯ್ಯದ್ ಮುಷ್ತಾಕ್ ಅಲಿ ಟಿ20 ಸರಣಿ’ಯ ಮಹತ್ವದ ಪಂದ್ಯ ವೊಂದರಲ್ಲಿ ಹೈದರಾಬಾದನ್ನು 2 ರನ್ನುಗಳಿಂದ ರೋಚಕವಾಗಿ ಮಣಿಸಿದ ಕರ್ನಾಟಕ ನಾಕೌಟ್ ಪ್ರವೇಶದ ಸಾಧ್ಯತೆಯನ್ನು ತೆರೆದಿರಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 5 ವಿಕೆಟಿಗೆ 205 ರನ್ ಪೇರಿಸಿ ಕಠಿನ ಸವಾಲೊಡ್ಡಿತು. ಇದನ್ನು ಬೆನ್ನಟ್ಟಿ ಕೊಂಡು ಬಂದ ಹೈದರಾಬಾದ್ ಅಂತಿಮ ಓವರಿನಲ್ಲಿ ಎಡವಿ 9 ವಿಕೆಟಿಗೆ 203 ರನ್ ಮಾತ್ರ ಗಳಿಸಿ ಶರಣಾಯಿತು. ಇದು 3 ಪಂದ್ಯಗಳಲ್ಲಿ ಕರ್ನಾಟಕ ಸಾಧಿಸಿದ 2ನೇ ಗೆಲುವು. ಮೊದಲ ಪಂದ್ಯದಲ್ಲಿ ಗೋವಾ ವಿರುದ್ಧ ಗೆದ್ದಿದ್ದ ವಿನಯ್ ಪಡೆ, ಬಳಿಕ ಆಂಧ್ರಪ್ರದೇಶದ ವಿರುದ್ಧ ಎಡವಿತ್ತು. ಈ ಜಯದೊಂದಿಗೆ ಕರ್ನಾಟಕ 8 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ನೆಗೆದಿದೆ. ಹೈದರಾಬಾದ್ ಕೂಡ 3 ಪಂದ್ಯಗಳಿಂದ 8 ಅಂಕ ಹೊಂದಿದ್ದು, 3ನೇ ಸ್ಥಾನದಲ್ಲಿದೆ. ಮೂರನ್ನೂ ಗೆದ್ದಿರುವ ತಮಿಳುನಾಡು ಅಗ್ರಸ್ಥಾನಿಯಾಗಿದೆ (12 ಅಂಕ). ಕರ್ನಾಟಕ ಇನ್ನು ತಮಿಳುನಾಡು ಮತ್ತು ಕೇರಳ ವಿರುದ್ಧ ಆಡಲಿಕ್ಕಿದೆ.
ಅಂತಿಮ ಓವರ್ ಚಮತ್ಕಾರ
ಸ್ಟುವರ್ಟ್ ಬಿನ್ನಿ ಪಾಲಾದ ಕೊನೆಯ ಓವರಿನಲ್ಲಿ ಹೈದರಾಬಾದ್ ಜಯಕ್ಕೆ ಕೇವಲ 8 ರನ್ ಅಗತ್ಯವಿತ್ತು. 4 ವಿಕೆಟ್‌ಗಳು ಕೈಲಿದ್ದವು. ಆದರೆ ಬಿಗಿಯಾದ ಫೀಲ್ಡಿಂಗ್ ಹಾಗೂ ಬಿನ್ನಿ ಅವರ ಜಾಣ್ಮೆಯ ಬೌಲಿಂಗ್ ಕರ್ನಾಟಕದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಮೊದಲ ಎಸೆತದಲ್ಲಿ ಆಕಾಶ್ ಭಂಡಾರಿ ಒಂದು ರನ್ ತೆಗೆದರು. 2ನೇ ಎಸೆತದಲ್ಲಿ ಸಂದೀಪ್ ರನೌಟ್. 3ನೇ ಎಸೆತದಲ್ಲಿ ಒಂದು ಬೈ ರನ್ ಬಂತು. 4ನೇ ಎಸೆತ ಟಾಪ್ ಯಾರ್ಕರ್ ಆಗಿತ್ತು. ಇದರಲ್ಲಿ ಮೆಹಿª ಹಸನ್ ಸಿಂಗಲ್ ತೆಗೆದರು. ಮುಂದಿನದು ನೋಬಾಲ್. ಮರು ಎಸೆತದಲ್ಲಿ ಭಂಡಾರಿ ರನೌಟ್. ಆದರೆ ಆಗ ಒಂದು ರನ್ ಪೂರ್ತಿಯಾಗಿತ್ತು. ಅಂತಿಮ ಎಸೆತದಲ್ಲಿ ಹೈದರಾಬಾದ್ ಜಯಕ್ಕೆ 3 ರನ್ ಅಗತ್ಯವಿತ್ತು. ಆದರೆ ವೈಡ್ ಯಾರ್ಕರ್ ಎಸೆತವೊಂದು ಮೊಹಮ್ಮದ್ ಸಿರಾಜ್ ಬ್ಯಾಟಿಗೆ ಸವರಿ ಹೋಯಿತು. ಕೀಪರ್ ಗೌತಮ್ ಹಾರುತ್ತ ಕ್ಯಾಚ್ ಪಡೆದರು. ಕರ್ನಾಟಕದ ಜಯಭೇರಿ ಮೊಳಗಲ್ಪಟ್ಟಿತು!
ಕರ್ನಾಟಕದ ಮೊತ್ತ ಇನ್ನೂರರ ಗಡಿ ದಾಟುವಲ್ಲಿ ನೆರ ವಾದದ್ದು ಕರುಣ್ ನಾಯರ್ ಮತ್ತು ಕೆ. ಗೌತಮ್ ಅವರ ಸಿಡಿಲಬ್ಬರದ ಬ್ಯಾಟಿಂಗ್. ಆರಂಭಿಕನಾಗಿ ಬಂದ ನಾಯರ್ 42 ಎಸೆತಗಳಿಂದ 77 ರನ್ ಬಾರಿಸಿದರೆ (10 ಬೌಂಡರಿ, 1 ಸಿಕ್ಸರ್), ಗೌತಮ್ 31 ಎಸೆತ ಎದುರಿಸಿ 57 ರನ್ ಸೂರೆ ಗೈದರು. ಇದರಲ್ಲಿ 4 ಬೌಂಡರಿ, 4 ಸಿಕ್ಸರ್ ಒಳಗೊಂಡಿತ್ತು.
ರೆಡ್ಡಿ-ಅಗರ್ವಾಲ್ ಆರ್ಭಟ
ಹೈದರಾಬಾದ್ ಪರ ಓಪನರ್ ಅಕ್ಷತ್ ರೆಡ್ಡಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವೊಂದನ್ನು ನೀಡಿ ಬರೀ 29 ಎಸೆತಗಳಿಂದ 70 ರನ್ ಚಚ್ಚಿದರು. ಇದರಲ್ಲಿ 7 ಸಿಕ್ಸರ್, 3 ಬೌಂಡರಿ ಸೇರಿತ್ತು. ಮತ್ತೂಬ್ಬ ಆರಂಭಕಾರ ತನ್ಮಯ್ ಅಗರ್ವಾಲ್ 38 ರನ್ ಹೊಡೆದರು (23 ಎಸೆತ, 1 ಬೌಂಡರಿ, 4 ಸಿಕ್ಸರ್). ಇವರು 5.5 ಓವರ್‌ಗಳಲ್ಲಿ 60 ರನ್ ಪೇರಿಸಿ ಕರ್ನಾಟಕಕ್ಕೆ ಭೀತಿಯೊಡ್ಡಿದರು. ಒಂದು ಹಂತದಲ್ಲಿ ಹೈದರಾಬಾದ್ 11ನೇ ಓವರಿನಲ್ಲಿ ಒಂದೇ ವಿಕೆಟಿಗೆ 126 ರನ್ ಪೇರಿಸಿ ಮುನ್ನುಗ್ಗುತ್ತಿತ್ತು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-20 ಓವರ್‌ಗಳಲ್ಲಿ 5 ವಿಕೆಟಿಗೆ 205 (ನಾಯರ್ 77, ಕೆ. ಗೌತಮ್ 57, ವಿನಯ್ ಔಟಾಗದೆ 15, ರವಿಕಿರಣ್ 33ಕ್ಕೆ 2). ಹೈದರಾಬಾದ್-20 ಓವರ್‌ಗಳಲ್ಲಿ 9 ವಿಕೆಟಿಗೆ 203 (ಅಕ್ಷತ್ ರೆಡ್ಡಿ 70, ಅಗರ್ವಾಲ್ 38, ಸಂದೀಪ್ 34, ಬಿನ್ನಿ 29ಕ್ಕೆ 3).
2 ರನ್ ವಿವಾದ !
ಕರ್ನಾಟಕ-ಹೈದರಾಬಾದ್ ನಡುವಿನ ಥ್ರಿಲ್ಲಿಂಗ್ ಪಂದ್ಯ 2 ರನ್ನುಗಳ ವಿವಾದವೊಂದರಿಂದ ಸುದ್ದಿಯಾಗಿದೆ. ಕರ್ನಾಟಕದ 2ನೇ ಓವರ್ ವೇಳೆ ಚೆಂಡನ್ನು ತಡೆಯುವಾಗ ಮೆಹಿª ಹಸನ್ ಬೌಂಡರಿ ಗೆರೆ ತುಳಿದದ್ದು ಅಂಪಾಯರ್ ಗಮನಕ್ಕೆ ಬರಲಿಲ್ಲ. ಹೀಗಾಗಿ ಎರಡೇ ರನ್ ಲಭಿಸಿತು. ಬಳಿಕ ಟಿವಿ ರೀಪ್ಲೇಯಲ್ಲಿ ಇದು ಸ್ಪಷ್ಟವಾಯಿತು. ಹೈದರಾಬಾದ್ ಚೇಸಿಂಗ್ ಆರಂಭಕ್ಕೂ ಮುನ್ನ ಕರ್ನಾಟಕಕ್ಕೆ ಆ 2 ಹೆಚ್ಚುವರಿ ರನ್ನುಗಳನ್ನು ನೀಡಲಾಯಿತು.
ಆದರೆ ಹೈದರಾಬಾದ್ ನಾಯಕ ಅಂಬಾಟಿ ರಾಯುಡು, ನಾವು 206ರ ಬದಲು 204 ರನ್ನನ್ನೇ ಗುರಿ ಇರಿಸಿಕೊಂಡು ಆಡುತ್ತೇವೆ ಎಂದು ಅಂಪಾಯರ್ ಜತೆ ವಾದಕ್ಕಿಳಿದರು. ಪಂದ್ಯದ ಕೊನೆಯಲ್ಲಿ ಹೈದರಾಬಾದ್ 9ಕ್ಕೆ 203 ರನ್ ಮಾಡಿತು. ರಾಯುಡು ಪ್ರಕಾರ ಪಂದ್ಯ ಟೈ ಆಗಿತ್ತು. ಅವರು ಸೂಪರ್ ಓವರ್ ನಿರೀಕ್ಷೆಯಲ್ಲಿದ್ದರು. ಇದಕ್ಕಾಗಿ 9 ನಿಮಿಷ ಅಂಗಳದಲ್ಲೇ ಕಳೆದರು. ಆದರೆ 2 ರನ್ನನ್ನು ಮೊದಲೇ ಕರ್ನಾಟಕಕ್ಕೆ ನೀಡಿದ್ದಾಗಿ ಅಂಪಾಯರ್‌ಗಳು ಹೇಳಿದ್ದರಿಂದ ರಾಯುಡು ವಾದಕ್ಕೆ ಯಾವುದೇ ಮಾನ್ಯತೆ ಲಭಿಸಲಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.