ನೀರಜ್ ಚೋಪ್ರಾ ಮತ್ತೆ ಚಿನ್ನದ ಮಿಂಚು
Team Udayavani, Jul 31, 2018, 10:31 AM IST
ಲ್ಯಾಪಿನ್ಲಾಟಿ (ಫಿನ್ ಲ್ಯಾಂಡ್ ): ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೂಮ್ಮೆ ಚಿನ್ನದ ಪದಕದಿಂದ ಮಿನುಗಿದ್ದಾರೆ. ಫಿನ್ ಲ್ಯಾಂಡಿನ ಲ್ಯಾಪಿನ್ಲಾಟಿಯಲ್ಲಿ ನಡೆದ “ಸಾವೋ ಗೇಮ್ಸ್’ನಲ್ಲಿ ನೀರಜ್ ಗೋಲ್ಡ್ ಮೆಡಲ್ ತಮ್ಮದಾಗಿಸಿಕೊಂಡಿದ್ದಾರೆ.
ನೀರಜ್ ಚೋಪ್ರಾ 85.69 ಮೀ. ದೂರ ಎಸೆದು ಸ್ವರ್ಣಕ್ಕೆ ಕೊರಳೊಡ್ಡಿದರು. ಚೈನೀಸ್ ತೈಪೆಯ ಕಾವೊ ಸುನ್ ಚೆಂಗ್ 82.52 ಮೀ. ಸಾಧನೆಯೊಂದಿಗೆ ಬೆಳ್ಳಿ ಪದಕ ಪಡೆದರು.
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ನೀರಜ್ ಚೋಪ್ರಾ ಮುಂಬರುವ ಏಶ್ಯನ್ ಗೇಮ್ಸ್‌ಗಾಗಿ ಫಿನ್‌ಲಾÂಂಡಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇದು ಅವರಿಗೆ ಲಾಭವಾಗಿ ಪರಿಣಮಿಸಿತು.
ಚೆಂಗ್ ಸಾಮಾನ್ಯ ಎದುರಾಳಿಯಲ್ಲ!
23ರ ಹರೆಯದ ಚೆಂಗ್ ಸಾಮಾನ್ಯ ಎದುರಾಳಿಯೇನೂ ಆಗಿರಲಿಲ್ಲ. 90 ಮೀ.ಗಳಾಚೆ ಜಾವೆಲಿನ್ ಎಸೆದ ಏಶ್ಯದ ಏಕೈಕ ಸಾಧಕನೆಂಬ ಹಿರಿಮೆ ಇವರ ಪಾಲಿಗಿದೆ. ಕಳೆದ ವರ್ಷ ತೈಪೆಯಲ್ಲಿ ನಡೆದ ವಿಶ್ವ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಚೆಂಗ್ 91.39 ಮೀ. ದೂರದ ಸಾಧನೆಗೈದಿದ್ದರು. ಚೀನದ ಜಾವೊ ಕ್ವಿಂಗಾಂಗ್ ಅವರ 89.15 ಮೀ. ದೂರದ ಏಶ್ಯನ್ ದಾಖಲೆಯನ್ನು ಚೆಂಗ್ ಮುರಿದಿದ್ದರು. ಕ್ವಿಂಗಾಂಗ್ 2014ರ ಏಶ್ಯಾಡ್‌ನಲ್ಲಿ ಈ ಸಾಧನೆ ಮಾಡಿದ್ದರು.
ನೀರಜ್ ಚೋಪ್ರಾ ಪ್ರಸಕ್ತ ಋತುವಿನಲ್ಲಿ ಏಶ್ಯದ ನಂ.1 ಜಾವೆಲಿನ್ ಸ್ಪರ್ಧಿಯಾಗಿದ್ದಾರೆ. ಚೆಂಗ್ ದ್ವಿತೀಯ ಸ್ಥಾನದಲ್ಲಿದ್ದರೆ, ಕತಾರ್‌ನ ಅಹ್ಮದ್ ಬೆಡೆರ್ ಮಗೋರ್ ತೃತೀಯ ಸ್ಥಾನಿಯಾಗಿದ್ದಾರೆ (83.71 ಮೀ.). ಈ ಅಂಕಿಅಂಶಗಳನ್ನು ಗಮನಿಸುವಾಗ ನೀರಜ್ ಚೋಪ್ರಾ ಏಶ್ಯಾಡ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಸಾಧ್ಯತೆ ಉಜ್ವಲವಿದೆ ಎನ್ನಲಡ್ಡಿಯಿಲ್ಲ.
87.43 ಮೀ. ದಾಖಲೆ
ನೀರಜ್ ಚೋಪ್ರಾ ಅವರ ಇಂದಿನ ಸಾಧನೆ ರಾಷ್ಟ್ರೀಯ ದಾಖಲೆಗಿಂತ ತುಸು ಕೆಳ ಮಟ್ಟದ್ದಾಗಿದೆ. ಕಳೆದ ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ “ಡೈಮಂಡ್ ಲೀಗ್ ಮೀಟಿಂಗ್’ನಲ್ಲಿ ನೀರಜ್ 87.43 ಮೀ. ದೂರದ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.