ಕಾಮನ್ವೆಲ್ತ್ ಗೇಮ್ಸ್ ತಂಡದಲ್ಲಿ 37 ಆ್ಯತ್ಲೀಟ್ಸ್
Team Udayavani, Jun 17, 2022, 6:50 AM IST
ಹೊಸದಿಲ್ಲಿ: ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಆ್ಯತ್ಲೆಟಿಕ್ಸ್‌ಗೆ ಭಾರತದ 37 ಸದಸ್ಯರ ತಂಡ ಪ್ರಕಟಗೊಂಡಿದೆ.
ಒಲಿಂಪಿಕ್ಸ್ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಈ ತಂಡದ ಸಾರಥಿಯಾಗಿದ್ದಾರೆ.
ಇದರಲ್ಲಿ 18 ಮಂದಿ ವನಿತಾ ಕ್ರೀಡಾಪಟುಗಳಿದ್ದಾರೆ. ಸ್ಟಾರ್ ಸ್ಪ್ರಿಂಟರ್‌ಗಳಾದ ಹಿಮಾ ದಾಸ್, ದ್ಯುತಿ ಚಂದ್ ಸೇರಿದ್ದಾರೆ. 3 ಸಾವಿರ ಮೀ. ಸ್ಟೀಪಲ್‌ಚೇಸ್‌ನಲ್ಲಿ 8 ಸಲ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಅನಿವಾಶ್ ಸಬ್ಲೆ, 100 ಮೀ. ಹರ್ಡಲ್ಸ್ ರಾಷ್ಟ್ರೀಯ ದಾಖಲೆ ಹೊಂದಿರುವ ಜ್ಯೋತಿ ಯರ್ರಾಜ್, ಟ್ರಿಪಲ್ ಜಂಪ್ ದಾಖಲೆಯ ಒಡತಿ ಐಶ್ವರ್ಯಾ ಬಾಬು ಈ ತಂಡದ ಪ್ರಮುಖರು.
ಹಿರಿಯ ಡಿಸ್ಕಸ್ ತ್ರೋವರ್ ಸೀಮಾ ಪುನಿಯ 5ನೇ ಸಲ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಂದಿನ ನಾಲ್ಕೂ ಗೇಮ್ಸ್‌ಗಳಲ್ಲಿ ಅವರು ಪದಕ ಜಯಿಸಿದ್ದಾರೆ. ಹೈಜಂಪರ್ ತೇಜಸ್ವಿನ್ ಶಂಕರ್ ಕೂಡ ಈ ತಂಡದಲ್ಲಿದ್ದಾರೆ.