ನ್ಯೂಜಿಲ್ಯಾಂಡಿಗೆ 4 ರನ್ ಜಯ
Team Udayavani, Nov 20, 2018, 10:58 AM IST
ಅಬುಧಾಬಿ: ಮುಂಬಯಿ ಮೂಲದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಜಬರ್ದಸ್ತ್ ಬೌಲಿಂಗ್ ದಾಳಿಯೊಂದನ್ನು ಸಂಘಟಿಸಿ ಪಾಕಿಸ್ಥಾನವನ್ನು ಉರುಳಿಸಿದ್ದಾರೆ. ನ್ಯೂಜಿಲ್ಯಾಂಡಿನ 4 ರನ್ನುಗಳ ನಂಬಲಾಗದ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದಾರೆ.
ಅಬುಧಾಬಿ ಟೆಸ್ಟ್ ಪಂದ್ಯದಲ್ಲಿ 176 ರನ್ನುಗಳ ಗುರಿ ಪಡೆದಿದ್ದ ಪಾಕಿಸ್ಥಾನದ ಗೆಲುವು ಬಹುತೇಕ ನಿಶ್ಚಿತವಾಗಿತ್ತು. ಒಂದು ಹಂತದಲ್ಲಿ ಮೂರೇ ವಿಕೆಟಿಗೆ 130 ರನ್ ಬಾರಿಸಿ ವಿಜಯೋತ್ಸವದ ಕ್ಷಣಗಣನೆಯಲ್ಲಿತ್ತು. ಉಳಿದ 7 ವಿಕೆಟ್‌ಗಳಿಂದ 46 ರನ್ ಗಳಿಸುವುದು ಅಸಾಧ್ಯವಾಗಿರಲಿಲ್ಲ. ಆದರೆ ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು ಎಂಬುದಕ್ಕೆ ಅಜಾಜ್ ಪಟೇಲ್ ಅಸಾಮಾನ್ಯ ನಿದರ್ಶನವೊಂದನ್ನು ಒದಗಿಸಿದರು. 59 ರನ್ನಿಗೆ 5 ವಿಕೆಟ್ ಉಡಾಯಿಸಿ ಪಾಕಿಸ್ಥಾನವನ್ನು ಸೋಲಿನ ಸುಳಿಗೆ ತಳ್ಳಿದರು. ಪಾಕ್ 58.4 ಓವರ್‌ಗಳಲ್ಲಿ 171 ರನ್ನಿಗೆ ಆಲೌಟ್ ಆಯಿತು!
ವನ್‌ಡೌನ್ ಬ್ಯಾಟ್ಸ್‌ಮನ್ ಅಜರ್ ಅಲಿ (65) ಒಂದೆಡೆ ಕ್ರೀಸ್ ಆಕ್ರಮಿಸಿ ಕೊಂಡು ಪಾಕಿಸ್ಥಾನವನ್ನು ದಡ ಸೇರಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವರಿಗೆ ಇನ್ನೊಂದು ತುದಿಯಲ್ಲಿ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಅಜರ್ ಅಲಿ ವಿಕೆಟ್ ಪತನದೊಂದಿಗೆ ಪಾಕ್ ಮರ್ಮಾಘಾತ ಅನುಭವಿಸಿತು.
ಅಜರ್ ಅಲಿ ಅವರನ್ನು ಅಜಾಜ್ ಪಟೇಲ್ ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಇದರ ವಿರುದ್ಧ ಅಲಿ ಡಿ.ಆರ್.ಎಸ್.ಗೆ ಮನವಿ ಸಲ್ಲಿಸಿದರು. ಅಲ್ಲಿಯೂ ಅಂಪಾಯರ್ ತೀರ್ಪನ್ನು ಎತ್ತಿಹಿಡಿಯುವುದರೊಂದಿಗೆ ಸಫರಾಜ್ ಬಳಗದ ಮೇಲೆ ಸೋಲಿನ ಮುದ್ರೆ ಬಿತ್ತು.
ಮುಂಬಯಿಯಲ್ಲಿ ಜನಿಸಿದ ಅಜಾಜ್
30ರ ಹರೆಯದ ಅಜಾಜ್ ಯೂನುಸ್ ಪಟೇಲ್ ಮುಂಬಯಿಯಲ್ಲಿ ಜನಿಸಿ ನ್ಯೂಜಿಲ್ಯಾಂಡಿನಲ್ಲಿ ನೆಲೆ ನಿಂತ ಕ್ರಿಕೆಟಿಗ. ಇದು ಅವರ ಮೊದಲ ಟೆಸ್ಟ್ ಪಂದ್ಯ. ಯುಎಇಯಲ್ಲಿ ಸ್ಪಿನ್ ದಾಳಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಕಾರಣಕ್ಕಾಗಿ ಆಡುವ ಬಳಗದಲ್ಲಿ ಅವಕಾಶ ಪಡೆದಿದ್ದರು. ನ್ಯೂಜಿಲ್ಯಾಂಡಿನ ಈ ಆಯ್ಕೆಯ ನಿರ್ಧಾರ ಅದ್ಭುತ ಫಲ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಅಜಾಜ್ 64ಕ್ಕೆ 2 ವಿಕೆಟ್ ಉರುಳಿಸಿದ್ದರು. ಈ ವರೆಗೆ ಅವರು ಕೇವಲ 2 ಟಿ20 ಪಂದ್ಯಗಳಲ್ಲಷ್ಟೇ ನ್ಯೂಜಿಲ್ಯಾಂಡ್ ತಂಡವನ್ನು ಪ್ರತಿನಿಧಿಸಿದ್ದರು.
4 ರನ್ ಅಂತರದ ಮೊದಲ ಜಯ
ಇದು ಟೆಸ್ಟ್ ಚರಿತ್ರೆಯ ಕನಿಷ್ಠ ರನ್ ಅಂತರದ 5ನೇ ಗೆಲುವು. ತಂಡವೊಂದು 4 ರನ್ ಅಂತರದಿಂದ ಟೆಸ್ಟ್ ಗೆದ್ದದ್ದು ಇದೇ ಮೊದಲು. ಹಾಗೆಯೇ ನ್ಯೂಜಿಲ್ಯಾಂಡಿನ ಕನಿಷ್ಠ ರನ್ ಅಂತರದ ಜಯವೂ ಆಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯ ವಿರುದ್ಧದ 2011ರ ಹೋಬರ್ಟ್ ಟೆಸ್ಟ್ ಪಂದ್ಯವನ್ನು 7 ರನ್ನುಗಳಿಂದ ಗೆದ್ದದ್ದು ಕಿವೀಸ್ ದಾಖಲೆಯಾಗಿತ್ತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-153 ಮತ್ತು 249. ಪಾಕಿಸ್ಥಾನ-227 ಮತ್ತು 171 (ಅಜರ್ ಅಲಿ 65, ಅಸದ್ ಶಫೀಕ್ 45, ಇಮಾಮ್ 27, ಅಜಾಜ್ ಪಟೇಲ್ 59ಕ್ಕೆ 5, ಸೋಧಿ 37ಕ್ಕೆ 2, ವ್ಯಾಗ್ನರ್ 27ಕ್ಕೆ 2).
ಪಂದ್ಯಶ್ರೇಷ್ಠ: ಅಜಾಜ್ ಪಟೇಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.