US Open-2024: ಹಾಲಿ ಚಾಂಪಿಯನ್ ಜೊಕೋ ನಿರ್ಗಮನ!
Team Udayavani, Aug 31, 2024, 10:49 PM IST
ನ್ಯೂಯಾರ್ಕ್: ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ 3ನೇ ಸುತ್ತಿನಲ್ಲೇ ಮುಗ್ಗರಿಸಿ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಅವರ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಕನಸು ಛಿದ್ರಗೊಂಡಿದೆ.
ಮತ್ತೋರ್ವ ನೆಚ್ಚಿನ ಆಟಗಾರ ಕಾರ್ಲೋಸ್ ಅಲ್ಕರಾಜ್ ನಿರ್ಗಮಿಸಿದ ಕೇವಲ 24 ಗಂಟೆಗಳಲ್ಲಿ ಜೊಕೋವಿಕ್ ಕೂಡ ಹೊರನಡೆದಿರುವುದು ಟೆನಿಸ್ ಅಭಿಮಾನಿಗಳನ್ನು ಆಘಾತಕ್ಕೆ ತಳ್ಳಿದೆ.
ಇಂಥದೊಂದು ದೊಡ್ಡ ಬೇಟೆಯ ಮೂಲಕ ಸುದ್ದಿಯಾದವರು ಆಸ್ಟ್ರೇಲಿಯದ 28ನೇ ಶ್ರೇಯಾಂಕದ ಅಲೆಕ್ಸಿ ಪೊಪಿರಿನ್. 4 ಸೆಟ್‌ಗಳ ಈ ಕಾದಾಟವನ್ನು ಪೊಪಿರಿನ್ 6-4, 6-4, 2-6, 6-4ರಿಂದ ಗೆದ್ದರು.
ಈ ಆಘಾತಕಾರಿ ಸೋಲಿನೊಂದಿಗೆ ನೊವಾಕ್ ಜೊಕೋವಿಕ್ 2024ರಲ್ಲಿ ಯಾವುದೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲದೇ ಹೋದರು. ಅವರು 2017ರಲ್ಲೂ ಇದೇ ಸಂಕಟಕ್ಕೆ ಸಿಲುಕಿದ್ದರು. ಈ ವರ್ಷ ಅವರಿಗೆ ಒಲಿದ ಅತೀ ದೊಡ್ಡ ಪ್ರಶಸ್ತಿಯೆಂದರೆ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನ.
ಜೊಕೋವಿಕ್ ಯುಎಸ್ ಓಪನ್‌ನಲ್ಲಿ 2005 ಮತ್ತು 2006ರಲ್ಲೂ 3ನೇ ಸುತ್ತಿನ ಸೋಲಿನ ಸಂಕಟಕ್ಕೆ ಸಿಲುಕಿದ್ದರು. 18 ವರ್ಷಗಳ ಹಿಂದೆ (2006) ಇವರನ್ನು ಸೋಲಿಸಿದವರು ಆಸ್ಟ್ರೇಲಿಯದವರೇ ಆದ ಲೇಟನ್ ಹೆವಿಟ್. ಈಗ ಇವರು ಆಸ್ಟ್ರೇಲಿಯದ ಡೇವಿಸ್ ಕಪ್ ತಂಡದ ನಾಯಕರಾಗಿದ್ದು, “ಆರ್ಥರ್ ಆ್ಯಶ್ ಸ್ಟೇಡಿಯಂ’ನ ಗೆಸ್ಟ್ ಬಾಕ್ಸ್‌ನಲ್ಲಿ ಕುಳಿತು ಅಲೆಕ್ಸಿ ಪೊಪಿರಿನ್ ಅವರ ಗೆಲುವನ್ನು ಸವಿದರು!
ಜೊಕೋವಿಕ್ ಅವರನ್ನು ಮಣಿಸಿದ ಪೊಪಿರಿನ್ ಅವರೀಗ ಮೊದಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ಹಾದಿಯಲ್ಲಿದ್ದಾರೆ. ಇಲ್ಲಿ ಅವರ ಎದುರಾಳಿ ಅಮೆರಿಕದ ಫ್ರಾನ್ಸೆಸ್ ಥಿಯಾಫೊ. ಆಲ್ ಅಮೆರಿಕನ್ ಮೇಲಾಟದಲ್ಲಿ ಅವರು ಬೆನ್ ಶೆಲ್ಟನ್ ವಿರುದ್ಧ 4-6, 7-5, 6-7 (5), 6-4, 6-3 ಅಂತರದಿಂದ ಗೆದ್ದು ಬಂದರು.
ಒಲಿಂಪಿಕ್ಸ್ ಪದಕವೀರರಿಗೆಲ್ಲ ಸೋಲು!:
ಅಲ್ಕರಾಜ್, ಜೊಕೋವಿಕ್ ಜತೆಗೆ ಇಟಲಿಯ ಲೊರೆಂಜೊ ಮುಸೆಟ್ಟಿ ಕೂಡ ಯುಎಸ್ ಓಪನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಟೆನಿಸಿಗರೆಲ್ಲ 24 ಗಂಟೆಗಳಲ್ಲಿ ನ್ಯೂಯಾರ್ಕ್‌ಗೆ ಗುಡ್‌ಬೈ ಹೇಳಿದಂತಾಯಿತು. ಮುಸೆಟ್ಟಿ ಕಂಚು ಜಯಿಸಿದ್ದರು. 3ನೇ ಸುತ್ತಿನಲ್ಲಿ ಅಮೆರಿಕದ ಬ್ರ್ಯಾಂಡನ್ ನಕಶಿಮ 6-2, 3-6, 6-3, 7-6 (7-4) ಅಂತರದಿಂದ ಮುಸೆಟ್ಟಿ ಅವರನ್ನು ಕಟ್ಟಿಹಾಕಿದರು.
ಭಾಂಬ್ರಿ ಜೋಡಿ 3ನೇ ಸುತ್ತಿಗೆ:
ಯುಎಸ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ ಮತ್ತು ಅವರ ಫ್ರಾನ್ಸ್‌ನ ಜತೆಗಾರ ಅಲ್ಫಾನೊ ಒಲಿವೆಟ್ಟಿ 3ನೇ ಸುತ್ತಿಗೆ ಏರಿದ್ದಾರೆ. ಇಂಡೋ-ಫ್ರೆಂಚ್ ಜೋಡಿ ಸೇರಿಕೊಂಡು ಅಮೆರಿಕದ ಆಸ್ಟಿನ್ ಕ್ರಾಜಿಸೆಕ್-ನೆದರ್ಲೆಂಡ್ಸ್‌ನ ಜೀನ್ ಜೂಲಿಯನ್ ರೋಜರ್ ಅವರನ್ನು ತೀವ್ರ ಹೋರಾಟದ ಬಳಿಕ 4-6, 6-3, 7-5ರಿಂದ ಮಣಿಸುವಲ್ಲಿ ಯಶಸ್ವಿಯಾಯಿತು.
ಆದರೆ ಎನ್. ಶ್ರೀರಾಮ್ ಬಾಲಾಜಿ-ಗಿಡೊ ಆ್ಯಂಡ್ರಿಯೋಝಿ (ಆರ್ಜೆಂಟೀನಾ) ಪರಾಭವಗೊಂಡರು. ಇವರನ್ನು ನ್ಯೂಜಿಲ್ಯಾಂಡ್‌ನ ಮೈಕಲ್ ವೀನಸ್-ಗ್ರೇಟ್ ಬ್ರಿಟನ್‌ನ ನೀಲ್ ಸ್ಕಪ್‌ಸ್ಕಿ 7-6 (4), 6-4 ಅಂತರದಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.