Olympics; ವಿನೇಶ್ ಫೋಗಟ್ ಕ್ರೀಡಾನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲೇ ಇಲ್ಲ: ಹರೀಶ್ ಸಾಳ್ವೆ
Team Udayavani, Sep 14, 2024, 1:13 PM IST
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನಿಂದ (Paris Olympics) ಅನರ್ಹತೆಯ ವಿರುದ್ಧದ ಮೇಲ್ಮನವಿಯ ಸಂದರ್ಭದಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ನಿಂದ ಬೆಂಬಲದ ಕೊರತೆಯನ್ನು ವಿನೇಶ್ ಫೋಗಟ್ (Vinesh Phogat) ಆರೋಪಿಸಿದ ಕೆಲವು ದಿನಗಳ ನಂತರ, ಹಿರಿಯ ವಕೀಲ ಹರೀಶ್ ಸಾಳ್ವೆ (Harish Salve) ಅವರು ಇದರ ಬಗ್ಗೆ ಮಾತನಾಡಿದ್ದಾರೆ.
ವಿನೇಶ್ ಫೋಗಟ್ ಅವರು ಕ್ರೀಡಾ ನ್ಯಾಯಾಲಯದ (CAS) ತೀರ್ಪನ್ನು ಪ್ರಶ್ನಿಸದಿರಲು ನಿರ್ಧರಿಸಿದ್ದಾರೆ ಎಂದು ಸಾಳ್ವೆ ಬಹಿರಂಗಪಡಿಸಿದರು. ಸಿಎಎಸ್ ಫೋಗಾಟ್ ಅವರನ್ನು ಅನರ್ಹಗೊಳಿಸುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ನಿರ್ಧಾರವನ್ನು ಎತ್ತಿಹಿಡಿದಿದೆ. ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ನಿಂದ ಅನರ್ಹಗೊಂಡ ಬಳಿಕ ವಿನೇಶ್ ಜಂಟಿ ಬೆಳ್ಳಿ ಪದಕಕ್ಕಾಗಿ ಮಾಡಿದ್ದ ಮನವಿಯನ್ನು ಸಿಎಎಸ್ ತಿರಸ್ಕರಿಸಿದೆ.
ವಿನೇಶ್ ಫೋಗಟ್ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಕುಸ್ತಿ ಪಂದ್ಯಾವಳಿಯ ಫೈನಲ್ ನ ದಿನದಂದು ತೂಕದ ಮಿತಿಗಿಂತ 100 ಗ್ರಾಂ ಕಂಡುಬಂದ ನಂತರ ಫೈನಲ್ ನಿಂದ ಅನರ್ಹಗೊಂಡಿದ್ದರು. ಇದರ ಪರಿಣಾಮವಾಗಿ, ಫೋಗಟ್ ಸ್ಪರ್ಧೆಯಿಂದ ಹೊರಹಾಕಲ್ಪಟ್ಟರು. ಅಲ್ಲದೆ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ನಿರ್ಧಾರದಿಂದ ಅಸಮಾಧಾನಗೊಂಡ ಅವರು ಸಿಎಎಸ್ ಗೆ ಮನವಿ ಮಾಡಿದ್ದರು. ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಪರವಾಗಿ ಹರೀಶ್ ಸಾಳ್ವೆ ವಾದ ಮಾಡಿದ್ದರು.
ಆದಾಗ್ಯೂ, ಒಂದು ವಾರದ ವಿಚಾರಣೆಯ ನಂತರ, ತೀರ್ಪು ಫೋಗಟ್ ಪರವಾಗಿ ಬರಲಿಲ್ಲ.
ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿರುವ ಹರಿಯಾಣ ಮೂಲದ ಕುಸ್ತಿಪಟು ಫೋಗಟ್ ಅವರು ಐಒಎ ಅಧ್ಯಕ್ಷೆ ಪಿಟಿ ಉಷಾ ವಿರುದ್ಧ ತೀವ್ರ ಟೀಕೆ ಮಾಡಿದ್ದರು. ಸಂಘಟನೆಗೆ ಬೆಂಬಲ ಮತ್ತು ಸಮನ್ವಯದ ಕೊರತೆಯಿದೆ ಎಂದು ಆರೋಪಿಸಿದ್ದರು. ಫೋಗಟ್ ತನ್ನ ಕಾನೂನು ತಂಡದ ಬಗ್ಗೆಯೂ ಹತಾಶೆ ವ್ಯಕ್ತಪಡಿಸಿದ್ದರು. ತನಗೆ ಪದಕ ಗೆಲ್ಲುವ ಅವಕಾಶವನ್ನು ಕಾನೂನು ತಂಡ ಕಳೆದುಕೊಂಡಿತು ಎಂದು ಹೇಳಿದ್ದರು.
ಅವರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಮಾತನಾಡಿದ ಸಾಳ್ವೆ, “ಆರಂಭದಲ್ಲಿ ಸ್ವಲ್ಪ ಸಮಯದವರೆಗೆ ಸಂಪೂರ್ಣ ಸಮನ್ವಯದ ಕೊರತೆ, ಒಗ್ಗಟ್ಟಿನ ಕೊರತೆ ಇತ್ತು. ಏಕೆಂದರೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ನಿಂದ ತೊಡಗಿಸಿಕೊಂಡಿದ್ದ ಉತ್ತಮ ಕಾನೂನು ಸಂಸ್ಥೆಗೆ ಅಥ್ಲೀಟ್ ತೊಡಗಿಸಿಕೊಂಡಿದ್ದ ಕೆಲವು ವಕೀಲರು ‘ನಾವು ನಿಮ್ಮೊಂದಿಗೆ ಏನನ್ನೂ ಹಂಚಿಕೊಳ್ಳುವುದಿಲ್ಲ, ನಾವು ನಿಮಗೆ ಏನನ್ನೂ ನೀಡುವುದಿಲ್ಲʼ ಎಂದು ಹೇಳಿದ್ದರು. ನಮಗೆ ಎಲ್ಲವೂ ಸಿಕ್ಕಿದ್ದು ಬಹಳ ತಡವಾಗಿತ್ತು” ಎಂದು ಸಾಳ್ವೆ ಟೈಮ್ಸ್ ನೌಗೆ ತಿಳಿಸಿದ್ದರು.
ನಾವು ಈ ಪ್ರಕರಣವನ್ನು ತೀವ್ರವಾಗಿ ಹೋರಾಡಿದೆವೆ, ಸ್ವಿಸ್ ಕೋರ್ಟ್ ನಲ್ಲಿ ಸಿಎಎಸ್ ತೀರ್ಪಿನ ಮೇಲೆ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ಫೋಗಾಟ್‌ಗೆ ನೀಡಿದೆವು ಎಂದು ಸಾಳ್ವೆ ಹೇಳಿದರು. ಆದರೆ, ಆಕೆ ಅದನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ.
ಕ್ರೀಡಾಕೂಟದಿಂದ ಅನರ್ಹಗೊಂಡ ಒಂದು ದಿನದ ನಂತರ, ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ಇತ್ತೀಚೆಗೆ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದು, ಹರಿಯಾಣ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.