ಟಿ-20: ಮತ್ತೆ ಶಾದಾಬ್ ಪರಾಕ್ರಮ 3 ರನ್ನಿನಿಂದ ಗೆದ್ದ ಪಾಕಿಸ್ಥಾನ
Team Udayavani, Apr 1, 2017, 12:21 PM IST
ಪೋರ್ಟ್ ಆಫ್ ಸ್ಪೇನ್: ಪಾಕಿಸ್ಥಾನದ ಯುವ ಲೆಗ್‌ಸ್ಪಿನ್ನರ್ ಶಾದಾಬ್ ಖಾನ್ ಬೌಲಿಂಗ್ ಆಕ್ರಮಣಕ್ಕೆ ವೆಸ್ಟ್ ಇಂಡೀಸ್ ಮತ್ತೂಮ್ಮೆ ದಿಕ್ಕು ತಪ್ಪಿದೆ. ದ್ವಿತೀಯ ಟಿ-20 ಪಂದ್ಯದಲ್ಲಿ 3 ರನ್ ಸೋಲಿಗೆ ತುತ್ತಾಗಿದೆ.
ಗುರುವಾರ ಇಲ್ಲಿನ “ಕ್ವೀನ್ಸ್ ಪಾರ್ಕ್ ಓವಲ್’ನಲ್ಲಿ ನಡೆದ ಸಣ್ಣ ಮೊತ್ತದ ಹಣಾಹಣಿಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಾಕಿಸ್ಥಾನ ಸರಿಯಾಗಿ 20 ಓವರ್‌ಗಳಲ್ಲಿ 132 ರನ್ನಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ 8 ವಿಕೆಟಿಗೆ 129 ರನ್ ಗಳಿಸಿ ಶರಣಾಯಿತು. 14 ರನ್ನಿಗೆ 4 ವಿಕೆಟ್ ಕಿತ್ತು ಕೆರಿಬಿಯನ್ನರನ್ನು ಕಂಗೆಡಿಸಿದ ಶಾದಾಬ್ ಖಾನ್ ಸತತ 2ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಶಾದಾಬ್ ಅವರ ಬೌಲಿಂಗ್ ವಿಶ್ಲೇಷಣೆ ಹೀಗಿದೆ: 4-1-14-4.
ಮಾ. 26ರ ಬ್ರಿಜ್‌ಟೌನ್ ಪಂದ್ಯದಲ್ಲಿ ಟಿ-20 ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ 18ರ ಹರೆಯದ ಶಾದಾಬ್ ಖಾನ್, ಅಲ್ಲಿ 7 ರನ್ನಿಗೆ 3 ವಿಕೆಟ್ ಉರುಳಿಸಿ ಪಾಕಿಸ್ಥಾನದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಶಾದಾಬ್ ಕಡಿವಾಣ
ಅಷ್ಟೇನೂ ಸವಾಲಿನದ್ದಲ್ಲದ ಮೊತ್ತವನ್ನು ಬೆನ್ನಟ್ಟಲಿಳಿದ ವೆಸ್ಟ್ ಇಂಡೀಸಿಗೆ ವಾಲ್ಟನ್-ಸಾಮ್ಯುಯೆಲ್ಸ್ ಜೋಡಿಯಿಂದ ರಕ್ಷಣೆ ಲಭಿಸಿತ್ತು. ಇವರಿಬ್ಬರು ದ್ವಿತೀಯ ವಿಕೆಟಿಗೆ 50 ರನ್ ಪೇರಿಸಿ ತಂಡವನ್ನು ಗೆಲುವಿನತ್ತ ಮುಖ ಮಾಡಿ ನಿಲ್ಲಿಸಿದ್ದರು. ಆದರೆ 9ನೇ ಓವರಿನಲ್ಲಿ ಈ ಜೋಡಿಯನ್ನು ಬೇರ್ಪಡಿಸುವ ಮೂಲಕ ಶಾದಾಬ್ ಮ್ಯಾಜಿಕ್ ಮೊದಲ್ಗೊಂಡಿತು. ಒಂದಕ್ಕೆ 60 ರನ್ ಮಾಡಿ ಮುನ್ನುಗ್ಗುತ್ತಿದ್ದ ವಿಂಡೀಸ್ 13ನೇ ಓವರ್ ಮುಕ್ತಾಯಕ್ಕೆ 6ಕ್ಕೆ 81 ಎಂಬ ಸ್ಥಿತಿಗೆ ಮುಟ್ಟಿತು.
ಅಂತಿಮ ಓವರಿನಲ್ಲಿ ಆತಿಥೇಯರ ಗೆಲುವಿಗೆ 14 ರನ್ ಅಗತ್ಯವಿತ್ತು. 3 ವಿಕೆಟ್ ಕೈಯ ಲ್ಲಿತ್ತು. ಹಸನ್ ಅಲಿ ಪಾಲಾದ ಈ ಓವರಿನ ಮೊದಲೆರಡು ಎಸೆತಗಳನ್ನು ಬೌಂಡರಿಗೆ ಅಟ್ಟಿದ ಸುನೀಲ್ ನಾರಾಯಣ್ ಆಸೆ ಚಿಗು ರಿಸಿದರು. ಆದರೆ ಉಳಿದ 4 ಎಸೆತಗಳಿಂದ ಬಂದದ್ದು ಎರಡೇ ರನ್. ಇದರಲ್ಲಿ ಒಂದು ವೈಡ್ ರೂಪ ದಲ್ಲಿ ಬಂದಿತ್ತು.
5ನೇ ಎಸೆತದಲ್ಲಿ ಸುನೀಲ್ ನಾರಾಯಣ್ ವಿಕೆಟ್ ಬಿತ್ತು. ಅಂತಿಮ ಎಸೆತದಲ್ಲಿ 5 ರನ್ ತೆಗೆಯುವ ಒತ್ತಡಕ್ಕೆ ಸಿಲುಕಿದ ಹೋಲ್ಡರ್‌ಗೆ ದಕ್ಕಿದ್ದು ಒಂದೇ ರನ್.
ಪಾಕ್ ಪರ ಶೋಯಿಬ್ ಮಲಿಕ್ ಸರ್ವಾಧಿಕ 28 ರನ್ ಹೊಡೆದರೆ, ಬಾಬರ್ ಆಜಂ 27 ಮತ್ತು ವಹಾಬ್ ರಿಯಾಜ್ 24 ರನ್ ಮಾಡಿದರು. ಸರಣಿಯ ಉಳಿದೆರಡು ಪಂದ್ಯಗಳು ಇದೇ ಅಂಗಳದಲ್ಲಿ ಎ. 1 ಮತ್ತು 2ರಂದು ನಡೆಯಲಿವೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-132 (ಮಲಿಕ್ 28, ಆಜಂ 27, ರಿಯಾಜ್ 24, ನಾರಾಯಣ್ 22ಕ್ಕೆ 3, ಬ್ರಾತ್‌ವೇಟ್ 37ಕ್ಕೆ 3). ವೆಸ್ಟ್ ಇಂಡೀಸ್-8 ವಿಕೆಟಿಗೆ 129 (ಸಾಮ್ಯುಯೆಲ್ಸ್ 44, ಹೋಲ್ಡರ್ ಔಟಾಗದೆ 26, ವಾಲ್ಟನ್ 21, ಶಾದಾಬ್ 14ಕ್ಕೆ 4).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.