ಹರಿದ ಚಪ್ಪಲಿ ಧರಿಸಿ ಬಂದಿದ್ದ ಹುಡುಗ ಇದೀಗ ಸ್ಟಾರ್ ಪ್ಲೇಯರ್: ಬುಲ್ಸ್ ಗೆ ಬಲ ತುಂಬಿದ ಭರತ್
Team Udayavani, Nov 5, 2022, 12:42 PM IST
ಪ್ರೊ ಕಬಡ್ಡಿ 9ನೇ ಆವೃತ್ತಿ ಕಬಡ್ಡಿ ಪ್ರಿಯರಲ್ಲಿ ಕಿಚ್ಚೆಬ್ಬಿಸುತ್ತಿದೆ. ಪಂದ್ಯಗಳು ದಿನೇ ದಿನೇ ಕಾವೇರಿಸಿಕೊಳ್ಳುತ್ತಿವೆ. ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ಬಿರುಸಾಗಿಯೇ ಇದೆ. ಅದರಲ್ಲೂ ನಮ್ಮ ಬೆಂಗಳೂರು ಬುಲ್ಸ್ ಫುಲ್ ಚಾರ್ಜ್ ನಲ್ಲಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಬೆಂಗಳೂರು ಬುಲ್ಸ್ ಎಂದರೆ ಕಬಡ್ಡಿ ಅಭಿಮಾನಿಗಳಿಗೆ ಮೊದಲು ನೆನಪಾಗುವುದು ಹೈ ಫ್ಲೈಯರ್ ಎಂದೇ ಖ್ಯಾತರಾಗಿರುವ ಪವನ್ ಸೆಹ್ರಾವತ್. ಹೌದು ಪವನ್ ಅಂತಹ ಛಾಪನ್ನು ಪಿಕೆಎಲ್ ನಲ್ಲಿ ಮೂಡಿಸಿದ್ದಾರೆ.
ಪವನ್ ಪಿಕೆಎಲ್ ನ ಮೂರನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಮೂಲಕ ಪ್ರೊ ಕಬಡ್ಡಿ ಪ್ರವೇಶಿಸಿದರು. ಮೂರು ಮತ್ತು ನಾಲ್ಕನೇ ಆವೃತ್ತಿಯಲ್ಲಿ ಬುಲ್ಸ್’ನೊಂದಿಗಿದ್ದ ಅವರು ಅಂಕಣಕ್ಕಿಂತ ಬೆಂಚ್ ಮೇಲೆ ಕಳೆದ ಸಮಯವೇ ಜಾಸ್ತಿ. ಆಗೊಮ್ಮೆ ಈಗೊಮ್ಮೆ ಬದಲಿ ಆಟಗಾರನಾಗಿ ರೈಡಿಗಿಳಿದರು, ನೆನಪಿನಲ್ಲಿ ಉಳಿಯುವಂಥ ಪ್ರದರ್ಶನ ಅವರಿಂದ ಬಂದಿರಲಿಲ್ಲ. ಐದನೇ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ತಂಡ ಸೇರಿದರು. ಆಗಲೂ ಅಂತಹ ದೊಡ್ಡ ವ್ಯತ್ಯಾಸವೇನೂ ಅವರ ಆಟದಲ್ಲಿ ಆಗಿರಲ್ಲಿಲ್ಲ.
ಹೀಗಿರುವಾಗಲೇ ಪ್ರೊ ಕಬಡ್ಡಿಯ ಆರನೇ ಆವೃತ್ತಿ ಬಂತು. ಈ ಆವೃತ್ತಿಯನ್ನು ಬೆಂಗಳೂರು ಬುಲ್ಸ್ ಅಭಿಮಾನಿಗಳು ಮರೆಯಲಿಕ್ಕೆ ಸಾಧ್ಯಾವೇ ಇಲ್ಲ. ಬುಲ್ಸ್ ಈ ಆವೃತ್ತಿಯಲ್ಲಿ ಜೋರಾಗಿಗೇ ಕಾಲು ಕೆರೆದು ಹೋರಾಟಕ್ಕೆ ಇಳಿದಿತ್ತು. ಅಷ್ಟೇ ಅಲ್ಲದೇ ಆರನೇ ಸೀಸನ್ ಚಾಂಪಿಯನ್ ಆಗುವ ಮೂಲಕ ಗೆದ್ದು ಬೀಗಿತ್ತು. ಬುಲ್ಸ್’ನ ಈ ಗೆಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಇದೇ ಪವನ್. ಈ ಆವೃತ್ತಿಯಲ್ಲಿ ತಮ್ಮ ಆಟದ ಮೂಲಕ ಹೈ ಫ್ಲೈಯರ್ ಎಂಬ ಬಿರುದು ಪಡೆದ ಪವನ್ ಮೊಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಪ್ರಶಸ್ತಿಗೂ ಭಾಜನರಾಗಿದ್ದರು.
ಇದನ್ನೂ ಓದಿ:ಚಿತ್ರ ವಿಮರ್ಶೆ: ‘ಬನಾರಸ್’ ಪಯಣದಲ್ಲಿ ಹೊಸ ಅನುಭವ
ಏಳು ಮತ್ತು ಎಂಟನೇ ಆವೃತ್ತಿಗಳಲ್ಲಿಯೂ ಬುಲ್ಸ್ ಪರ ಆಡಿದ್ದ ಪವನ್ ಆ ಆವೃತ್ತಿಗಳ ಅತೀ ಹೆಚ್ಚು ಅಂಕ ಪಡೆದ ರೈಡರ್ ಆಗಿ ಹೊರ ಹೊಮ್ಮಿದ್ದರು. ಹೀಗೆ ಬುಲ್ಸ್ ನ ಬೆನ್ನುಲುಬಾಗಿದ್ದ ಪವನ್ ಒಂಬತ್ತನೇ ಆವೃತ್ತಿಯ ಹಾರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತಕ್ಕೆ ತಮಿಳ್ ತಲೈವಾಸ್ ತಂಡದ ಪಾಲಾದರು. ಪವನ್ ಬುಲ್ಸ್ ನಿಂದ ಬೇರ್ಪಟ್ಟಿದ್ದು ಬೆಂಗಳೂರು ಬುಲ್ಸ್ ಅಭಿಮಾನಿಗಳಿಗೆ ಬಹಳ ಬೇಸರ ತಂದಿತ್ತು. ಪವನ್ ಇಲ್ಲದ ಬುಲ್ಸ್ ನ ಊಹಿಸಿಕೊಳ್ಳಲು ಕಷ್ಟ ಆಗಿತ್ತು. ಮತ್ತೆ ಬೆಂಗಳೂರ್ ತಂಡ ಸೋಲಿನ ಸುಳಿಗೆ ಸಿಲುಕಿದರೆ ಎನ್ನುವ ಆತಂಕ ಕಾಡಿದ್ದಂತೂ ಸುಳ್ಳಲ್ಲ.
ಇಂತಹ ಸಮಯದಲ್ಲಿಯೇ ಬೆಂಗಳೂರು ಬುಲ್ಸ್’ಗೆ ಭರವಸೆಯ ಬೆಳಕಾಗಿ ಬಂದಿದ್ದು ಹರಿಯಾಣದ ಇಪ್ಪತ್ತೆರಡರ ಹರೆಯದ ಭರತ್ ಹೂಡಾ. ಕಳೆದ ಆವೃತ್ತಿಯಲ್ಲಿ ಪವನ್’ಗೆ ಸಪೋರ್ಟ್ ರೈಡರ್ ಆಗಿದ್ದ ಭರತ್ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಾದರೂ ಪವನ್ ಮುಂದೆ ಅವರಿಗೆ ಮಿಂಚಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಪವನ್ ಅನುಪಸ್ಥಿತಿಯಲ್ಲಿ ತಂಡದ ರೈಡಿಂಗ್ ಜವಾಬ್ದಾರಿಯನ್ನು ವಿಕಾಸ್ ಖಂಡೋಲ ಜೊತೆ ಜಂಟಿಯಾಗಿ ಹೊತ್ತಿರುವ ಭರತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸೂಪರ್ ರೈಡ್’ನ ಮೂಲಕ ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡುತ್ತಿದ್ದಾರೆ.
ಲೋಕಲ್ ಕಬಡ್ಡಿ ಪಂದ್ಯಾವಳಿಗಳಲ್ಲಿ ಆಡುತ್ತಿದ್ದ ಕಡು ಬಡತನದ ಕುಟುಂಬದಿಂದ ಬಂದ ಭರತ್ ಬೆಂಗಳೂರು ತಂಡ ಸೇರಿದ್ದೇ ಒಂದು ರೋಚಕ ಕತೆ. ಬುಲ್ಸ್ ನ ಸ್ಟಾರ್ ಡಿಫೆಂಡರ್ ಸೌರಭ್ ನಂದಾಲ್ ಅವರ ಹುಟ್ಟೂರಿನಲ್ಲಿ ನಡೆದ ಒಂದು ಸ್ಥಳೀಯ ಕಬಡ್ಡಿ ಪಂದ್ಯಾಟಕ್ಕೆ ಶಿಷ್ಯನ ಆಹ್ವಾನದ ಮೇಲೆ ಕೋಚ್ ರಣಧೀರ್ ಸಿಂಗ್ ಮುಖ್ಯ ಅತಿಥಿಯಾಗಿ ಹೋಗಿರುತ್ತಾರೆ. ಆ ಪಂದ್ಯಾವಳಿಯಲ್ಲಿ ಭರತ್ ಕೂಡ ಭಾಗವಹಿಸಿರುತ್ತಾರಲ್ಲದೇ ಉತ್ತಮ ಪ್ರದರ್ಶನ ಕೂಡ ನೀಡುತ್ತಾರೆ. ಅವರ ಆಟದಿಂದ ಖುಷಿಯಾದ ರಣಧೀರ್ ಸಿಂಗ್ ಭರತ್ ಗೆ ಬುಲ್ಸ್ ಬರುವಂತೆ ಆಹ್ವಾನಿಸುತ್ತಾರೆ. ಆಗ ಹರಿದ ಚಪ್ಪಲಿ ಧರಿಸಿದ್ದ ಭರತ್ ಗೆ ಧನ ಸಹಾಯವನ್ನೂ ಮಾಡುತ್ತಾರೆ. ಹೀಗೆ ಪ್ರೊ ಕಬಡ್ಡಿಯ ಎಂಟನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಸೇರಿಕೊಂಡ ಭರತ್, ಗುರು ರಣಧೀರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಆಟಗಾರನಾಗಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮುತ್ತಿದ್ದಾರೆ.
ಎರಡೂ ಕಡೆಗಳಿಂದ ದಾಳಿ ನಡೆಸಬಲ್ಲ ಎತ್ತರದ ನಿಲುವಿನ ಭರತ್ ಎದುರಾಳಿಯ ಕೋಟೆಗೆ ನುಗ್ಗಿ ಸೂಪರ್ ರೈಡ್ ಮೂಲಕ ರಕ್ಷಣಾ ಕೋಟೆಯನ್ನು ಛಿದ್ರಗೊಳಿಸಿ ಸಿಂಹಸ್ಪಪ್ನರಾಗುತ್ತಿದ್ದಾರೆ. ರೈಡಿಂಗ್ ಜೊತೆ ಡಿಫೆನ್ಸ್ ನಲ್ಲಿಯೂ ಉತ್ತಮ ಸಹಾಯ ನೀಡುತ್ತಿರುವ ಅವರು ಆ್ಯಂಕಲ್ ಹೋಲ್ಡ್ ಮೂಲಕ ಎದುರಾಳಿ ರೈಡರ್ ನ ಕಟ್ಟಿಹಾಕುವ ಸಾಮರ್ಥ್ಯವನ್ನು ಕೂಡ ಹೊಂದಿದ್ದಾರೆ.
ಪ್ರಸ್ತುತ ಒಂಬತ್ತನೇ ಆವೃತ್ತಿಯ ಎರಡನೇ ಉತ್ತಮ ರೈಡರ್ ಆಗಿರುವ ಭರತ್, ಬುಲ್ಸ್ ಗೆ ಹೊಸ ಭರವಸೆಯನ್ನು ತುಂಬುತ್ತಿದ್ದಾರೆ. ಯಾವಾಗಲೂ ಡಿಫೆನ್ಸ್ ನಲ್ಲಿ ಎಡವುತ್ತಿದ್ದ ಬುಲ್ಸ್ ಈ ಭಾರಿ ಎಲ್ಲ ವಿಭಾಗಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಸೌರಭ್ ನಂದಾಲ್ ಡಿಫೆನ್ಸ್ ನಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದರೆ, ಭರತ್ ರೈಡಿಂಗ್ ನಲ್ಲಿ ಮಿಂಚುತ್ತಿದ್ದಾರೆ.
ಪವನ್ ಇಲ್ಲದ ಕೊರಗು ಕಾಡದ ರೀತಿಯಲ್ಲಿ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಬುಲ್ಸ್ ಈ ಬಾರಿ ಎರಡನೇ ಸಲ ಕಪ್ ಎತ್ತುವ ಕನಸನ್ನು ನನಸು ಮಾಡುವತ್ತ ದಾಪುಗಾಲಿಡುತ್ತಿದೆ.
ಬೆಂಗಳೂರು ಬುಲ್ಸ್ ಮತ್ತೊಂದು ಕಪ್ ಗೆದ್ದು ತನ್ನ ಕೊಂಬಿನ ಉದ್ದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎನ್ನುವುದು ಬುಲ್ಸ್ ಆಭಿಮಾನಿಗಳ ಬಯಕೆ.
ಸುಶ್ಮಿತಾ ನೇರಳಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.