ಪ್ರೊ ಕಬಡ್ಡಿ ಲೀಗ್: ಮೊದಲೆರಡು ಪಂದ್ಯ ರೋಚಕ ಟೈ
Team Udayavani, Oct 8, 2022, 10:42 PM IST
ಬೆಂಗಳೂರು: ಇಲ್ಲಿನ ಕಂಠೀರವ ಒಳಾಂಗಣದಲ್ಲಿ ನಡೆಯುತ್ತಿರುವ 9ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ 2ನೇ ದಿನದ ಮೊದಲೆರಡು ಪಂದ್ಯಗಳು ರೋಚಕ ಟೈಯಲ್ಲಿ ಅಂತ್ಯಗೊಂಡಿವೆ. ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ಮತ್ತು ಪುನೇರಿ ಪಲ್ಟಾನ್ ನಡುವಣ ಪಂದ್ಯ 34-34 ಅಂಕಗಳಿಂದ ಟೈಗೊಂಡಿತು.
ದ್ವಿತೀಯ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಆರಂಭದಲ್ಲಿ ಭರ್ಜರಿಯಾಗಿ ಆಡಿ ಮೊದಲ ಅವಧಿಯಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಅವಧಿಯಲ್ಲಿ ತಿರುಗಿ ಬಿದ್ದ ತಮಿಳು ತಲೈವಾಸ್ ಮುನ್ನಡೆ ಸಾಧಿಸಿತಲ್ಲದೇ ಅಂತಿಮವಾಗಿ ಪಂದ್ಯವನ್ನು 31-31 ಅಂಕಗಳಿಂದ ಟೈಗೊಳಿಸಲು ಯಶಸ್ವಿಯಾಯಿತು. ಇದು ಈ ಋತುವಿನ ಮೊದಲ ಎರಡು ಟೈ ಪಂದ್ಯಗಳಾಗಿವೆ.
ಪಾಟ್ನಾ-ಪುನೇರಿ ಪಂದ್ಯ ರೋಚಕ ಟೈ
ಪಾಟ್ನಾ ಪರ ಖ್ಯಾತ ದಾಳಿಗಾರ ಸಚಿನ್ ಉತ್ತಮ ದಾಳಿ ನಡೆಸಿದರು. ಅವರು 21 ಬಾರಿ ಎದುರಾಳಿಯ ಅಂಕಣದೊಳಗೆ ದಾಳಿ ಮಾಡಿದರು. ಈ ಪೈಕಿ ಸ್ಪರ್ಶದಿಂದ 7, ಬೋನಸ್ ರೂಪದಲ್ಲಿ 1 ಅಂಕ ಪಡೆದರು. ಒಟ್ಟಾರೆ ಅವರ ಅಂಕ 8. ಇವರಿಗೆ ಆಲ್‌ರೌಂಡರ್ ರೋಹಿತ್ ಗುಲಿಯ ಉತ್ತಮ ನೆರವು ನೀಡಿದರು. 11 ಬಾರಿ ದಾಳಿ ಮಾಡಿದ ರೋಹಿತ್ ಒಟ್ಟು 6 ಅಂಕಗಳನ್ನು ಪಡೆದರು. ಎರಡು ಬಾರಿ ಕ್ಯಾಚ್ ಯತ್ನ ನಡೆಸಿದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಎಸ್.ವಿಶ್ವಾಸ್ 4 ಅಂಕ ಪಡೆದು, ದಾಳಿಯಲ್ಲಿ ಯಶಸ್ವಿಯೆನಿಸಿಕೊಂಡರು.
ಪುನೇರಿ ಪರ ಮೂವರು ಉತ್ತಮ ದಾಳಿ ನಡೆಸಿದರು. ನಾಯಕ ಅಸ್ಲಾಮ್ ಇನಾಮಾªರ್ 13 ಬಾರಿ ಎದುರಾಳಿಗಳ ಕೋಟೆಯೊಳಗೆ ನುಗ್ಗಿ 7 ಅಂಕ ಗಳಿಸಿದರು. ಖ್ಯಾತ ದಾಳಿಗಾರ ಮೋಹಿತ್ ಗೋಯತ್ 15 ಬಾರಿ ಎದುರಾಳಿಗಳ ಅಂಕಣಕ್ಕೆ ನುಗ್ಗಿ 7 ಅಂಕ ಗಳಿಸಿದರು. ವಿಶೇಷವೆಂದರೆ ರಕ್ಷಣೆಯಲ್ಲೂ ಯಶಸ್ವಿಯಾದ ಅವರು 1 ಅಂಕ ಪಡೆದರು.
ಆಕಾಶ್ ಶಿಂದೆ 11 ಬಾರಿ ದಾಳಿ ನಡೆಸಿ, ಸ್ಪರ್ಶದ ಮೂಲಕ 3, ಬೋನಸ್ ರೂಪದಲ್ಲಿ 3 ಅಂಕ ಪಡೆದರು. ಎರಡೂ ತಂಡಗಳ ಆಟಗಾರರು ರಕ್ಷಣೆಯಲ್ಲಿ ಪ್ರಬಲ ಕೋಟೆ ಕಟ್ಟಿರುವುದು ಪಂದ್ಯದ ವಿಶೇಷವಾಗಿತ್ತು. ಇದರಿಂದ ಎದುರಾಳಿಗಳು ನಿರೀಕ್ಷಿತ ರೀತಿಯಲ್ಲಿ ಅಂಕಗಳನ್ನು ಗಳಿಸಲು ಸಾಧ್ಯವಾಗದಂತೆ ಮಾಡಿದರು. ಹಾಗಾಗಿ ಪಂದ್ಯ ಟೈಗೊಳ್ಳಲು ಸಾಧ್ಯವಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.