ನಾಡಿಯಲ್ಲಿ, ನಾಡಿನಲ್ಲಿ ಕಬಡ್ಡಿ ಮಿಡಿತ…
Team Udayavani, Jul 28, 2017, 6:50 AM IST
ತೊಡೆ ತಟ್ಟಿ ಎದುರಾಳಿಗೆ ಪಂಥಾಹ್ವಾನ ನೀಡುವ ಕ್ರೀಡೆ ಕಬಡ್ಡಿ. ಪಕ್ಕಾ ಗ್ರಾಮೀಣ ಭಾಗದ ಮಣ್ಣಿನಲ್ಲಿ ಆಡುತ್ತಿದ್ದ ಕೂಟ ಇಂದು ಸಿಂಥೆಟಿಕ್ ಮ್ಯಾಟ್ ಕಂಡಿದೆ. ಕಬಡ್ಡಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಇದು ದೇಶವಷ್ಟೇ ಅಲ್ಲ, ವಿಶ್ವ ಮಟ್ಟದಲ್ಲೇ ತನ್ನ ಛಾಪನ್ನು ಅಚ್ಚೊತ್ತಿದೆ. ವಿಶ್ವಕಪ್ ಮೊದಲಾದ ಕ್ರೀಡಾಕೂಟಗಳನ್ನು ಹೊರತುಪಡಿಸಿ ಭಾರತದಲ್ಲಿ ಹೊಸ ಅಲೆಯೆನ್ನೇ ಸೃಷ್ಟಿಸಿದೆ. ಎಲ್ಲೆಡೆ ಕಬಡ್ಡಿ ಕಬಡ್ಡಿ ಕಬಡ್ಡಿ…
ಇದಕ್ಕೆಲ್ಲ ಕಾರಣ ಸ್ಟಾರ್ ನ್ಪೋರ್ಟ್ಸ್ ಪ್ರೊ ಕಬಡ್ಡಿ. 4 ಆವೃತ್ತಿ ಕಂಡಿರುವ ಪ್ರೊ ಕಬಡ್ಡಿ ಈಗ 5ನೇ ಆವೃತ್ತಿಗೆ ಕಾಲಿಟ್ಟಿದೆ. ಶುಕ್ರವಾರದಿಂದ ಸರಿಸುಮಾರು 3 ತಿಂಗಳ ಕಾಲ ದೇಶದಲ್ಲಿ ಕಬಡ್ಡಿಯದೇ ಕಲರವ, ಕಬಡ್ಡಿಯದೇ ಹವಾ. ಈ ಬಾರಿ ಎಂಟರ ಬದಲು ಹೆಚ್ಚುವರಿಯಾಗಿ 4 ತಂಡಗಳಿರುವುದರಿಂದ ಸ್ಪರ್ಧೆ, ರೋಮಾಂಚನ, ಕಾತರ, ಕುತೂಹಲವೆಲ್ಲ ಮೇರೆ ಮೀರಿದೆ.
2014ರಲ್ಲಿ ಪ್ರೊಕಬಡ್ಡಿ ಮೊದಲ ಆವೃತ್ತಿ ಆರಂಭವಾಗಿತ್ತು. ಅಂದಿನಿಂದ ಇಂದಿನ ವರೆಗೆ ಜನಪ್ರಿಯತೆ ವಿಷಯದಲ್ಲಿ ಎಂದೂ ತಗ್ಗಿಲ್ಲ. ಕ್ರಿಕೆಟ್…ಕ್ರಿಕೆಟ್… ಎಂದು ಜಪ ಮಾಡುತ್ತಿದ್ದ ಕಾಲದಲ್ಲಿ ಭಾರತೀಯರ ಕಣ್ಮನ ಸೆಳೆದದ್ದು ಪ್ರೊ ಕಬಡ್ಡಿ. ನೋಡನೋಡುತ್ತಲೇ ಕಬಡ್ಡಿ ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಭಾರೀ ಅಭಿಮಾನಿಗಳನ್ನು ಸಂಪಾದಿಸಿತು. ದೇಶದ ಗ್ರಾಮೀಣ ಮಟ್ಟದ ಕ್ರೀಡಾ ಕೂಟಕ್ಕೆ ಹೈಫೈ ಟಚ್ ನೀಡಿ, ನೇರ ಪ್ರಸಾರದ ಮೂಲಕ ಸ್ಟಾರ್ ನ್ಪೋರ್ಟ್ಸ್ ವಿಶ್ವದ ಮೂಲೆ ಮೂಲೆಗೂ ತಲುಪಿಸಿತು.
ಗ್ರಾಮೀಣ ಭಾಗದಲ್ಲೇ ಯಶಸ್ಸು
ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಪ್ರೊ ಕಬಡ್ಡಿಗೆ ಹೆಚ್ಚು ವೀಕ್ಷಕರಿದ್ದಾರೆ. ಪ್ರೊ ಕಬಡ್ಡಿ ಆರಂಭವಾಯಿತೆಂದರೆ ಹಳ್ಳಿ ಮಂದಿಯೆಲ್ಲ ಮನೆ, ಅಂಗಡಿಗಳ ಮುಂದೆ ಟೀವಿ ನೋಡಲು ವಿಪರೀತ ಆಸಕ್ತಿ ತೋರಿಸುತ್ತಿದ್ದಾರೆ. 2014ರ ಮೊದಲ ಆವೃತ್ತಿ ವೇಳೆ ಒಟ್ಟಾರೆ 43.5 ಕೋಟಿ ಮಂದಿ ಟೀವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದರು. ಇದರಲ್ಲಿ ಗ್ರಾಮೀಣ ಪ್ರದೇಶದ ವೀಕ್ಷಕರೇ ಹೆಚ್ಚು ಎನ್ನುತ್ತದೆ ಸಮೀಕ್ಷೆ.
ನಗರ ಪ್ರದೇಶದಲ್ಲೂ ಹವಾ ಕುಗ್ಗಿಲ್ಲ. ಪ್ರೊ ಕಬಡ್ಡಿ ಆರಂಭವಾದಾಗಿನಿಂದ ಇಂದಿನ ವರೆಗೆ ನಗರ ಪ್ರದೇಶದಲ್ಲೂ ಲಕ್ಷಾಂತರ ಮಂದಿ ಕೂಟ ವೀಕ್ಷಿಸಿದ್ದಾರೆ. 2016ರಲ್ಲಿ ವಿದೇಶದಲ್ಲೂ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿದೆ. ಅಮೆರಿಕ, ಕೆನಡಾ, ಯುಕೆ, ಆಸ್ಟ್ರೇಲಿಯ, ಇರಾನ್, ಪೋಲೆಂಡ್, ಪಾಕಿಸ್ಥಾನ, ಬಾಂಗ್ಲಾದೇಶ, ಕೊರಿಯಾ, ಜಪಾನ್, ಕೀನ್ಯಾದ ನಗರಗಳಲ್ಲೂ ಟೂರ್ನಿ ನೇರ ಪ್ರಸಾರ ಕಂಡಿದೆ. ಒಟ್ಟಾರೆ 4 ಆವೃತ್ತಿಗೆ ಹೋಲಿಸಿದಾಗ ಶೇ. 51ರಷ್ಟು ಬೆಳವಣಿಗೆ ಆಗಿದೆ ಎಂದು ಸ್ಟಾರ್ ನ್ಪೋರ್ಟ್ಸ್ ಪ್ರಕಟನೆಯಲ್ಲಿ ತಿಳಿಸಿದೆ.
ಐಪಿಎಲ್ಗೇ ಪೈಪೋಟಿ!
ಮೊದಲ ಆವೃತ್ತಿ ಪ್ರೊಕಬಡ್ಡಿ ಕೂಟದ ಫೈನಲ್ ಪಂದ್ಯವನ್ನು ಒಟ್ಟಾರೆ 8.64 ಕೋಟಿ ವೀಕ್ಷಕರು ಟೀವಿಯಲ್ಲಿ ವೀಕ್ಷಿಸಿದ್ದರು. ಇದು ಐಪಿಎಲ್ ಬಳಿಕ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದ ದೊಡ್ಡ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಪಿಎಲ್ ಅನ್ನು ಒಟ್ಟು 55.2 ಕೋಟಿ ಮಂದಿ ವೀಕ್ಷಕರು ಟೀವಿಯಲ್ಲಿ ವೀಕ್ಷಿಸಿದ್ದರು. ಮೊದಲ ಆವೃತ್ತಿಯಲ್ಲೇ ಇಂಥದೊಂದು ಹವಾವನ್ನು ಪ್ರೊ ಕಬಡ್ಡಿ ಸೃಷ್ಟಿಸಿತ್ತು ಎನ್ನುವುದು ವಿಶೇಷ.
ಇಲ್ಲಿ ಇನ್ನೂ ಒಂದು ಗಮನಾರ್ಹ ಸಂಗತಿಯಿದೆ. ಐಪಿಎಲ್ ವರ್ಷದಲ್ಲಿ ಒಂದೇ ಸಲ ನಡೆದರೆ, ಪ್ರೊ ಕಬಡ್ಡಿ ವರ್ಷಕ್ಕೆ 2 ಸಲ ನಡೆಯಲಾರಂಭಿಸಿದೆ. ಇದು ಕಬಡ್ಡಿಯ ಜನಪ್ರಿಯತೆಗೊಂದು ಮಾನದಂಡ.
ಈವರೆಗಿನ ಪ್ರೊ ಕಬಡ್ಡಿ ಆವೃತ್ತಿಗಳಲ್ಲಿ 8 ತಂಡಗಳು ಸ್ಪರ್ಧೆಗಿಳಿಯುತ್ತಿದ್ದವು. ಈ ಬಾರಿ 4 ಹೆಚ್ಚುವರಿ ತಂಡಗಳು ಕಾಣಿಸಿಕೊಂಡಿವೆ. ಅಲ್ಲಿಗೆ ತಂಡಗಳ ಸಂಖ್ಯೆ 12ಕ್ಕೆ ಏರಿದೆ. ಐಪಿಎಲ್ನಲ್ಲೂ ಇಷ್ಟೊಂದು ಪ್ರಮಾಣದ ತಂಡಗಳಿಲ್ಲ ಎಂಬುದು ಉಲ್ಲೇಖನೀಯ. ಈ ವಿಷಯದಲ್ಲೂ ಪ್ರೊ ಕಬಡ್ಡಿ ಐಪಿಎಲ್ಗೆ ಸಡ್ಡು ಹೊಡೆದಿದೆ. ಈ ಹೆಚ್ಚುವರಿ ತಂಡಗಳೆಂದರೆ ಹರ್ಯಾಣ ಸ್ಟೀಲರ್, ಗುಜರಾತ್ ಫಾರ್ಚೂನ್, ಯುಪಿ ಯೋಧಾಸ್, ತಮಿಳ್ ತಲೈವಾಸ್.
ಕನ್ನಡಿಗರ ನೆಚ್ಚಿನ ತಂಡ: ಬೆಂಗಳೂರು ಬುಲ್ಸ್
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು ಕನ್ನಡಿಗರು ಹೇಗೆ ಇಷ್ಟಪಡುತ್ತಿದ್ದರೋ ಹಾಗೆಯೇ ಕಬಡ್ಡಿಯಲ್ಲಿ “ಬೆಂಗಳೂರು ಬುಲ್ಸ್’ ರಾಜ್ಯದ ಮಂದಿಯ ನೆಚ್ಚಿನ ತಂಡ. ಕಾಸ್ಮಿಕ್ ಮೀಡಿಯಾ ಸಮೂಹ ಬೆಂಗಳೂರು ಬುಲ್ಸ್ ತಂಡದ ಫ್ರಾಂಚೈಸಿ. ಉದಯ್ ಮಾಲಕ. ಬೆಂಗಳೂರು ಮೊದಲ ಆವೃತ್ತಿಯಲ್ಲಿ 4ನೇ ಸ್ಥಾನ, 2ನೇ ಆವೃತ್ತಿಯಲ್ಲಿ ರನ್ನರ್ ಅಪ್, 3ನೇ ಆವೃತ್ತಿಯಲ್ಲಿ 7ನೇ ಸ್ಥಾನ ಹಾಗೂ 4ನೇ ಆವೃತ್ತಿಯಲ್ಲಿ 6ನೇ ಸ್ಥಾನ ಪಡೆದುಕೊಳ್ಳಲಷ್ಟೇ ಶಕ್ತವಾಗಿದೆ. ಒಟ್ಟಾರೆ ಹೇಳುವುದಾದರೆ, ಸಾಧನೆಯ ದೃಷ್ಟಿಯಲ್ಲಿ “ಬೆಂಗಳೂರು ಬುಲ್ಸ್’ ತಂಡ ಆರ್ಸಿಬಿಯಷ್ಟೇ ನತದೃಷ್ಟ! ಕಾರಣ, ಫೈನಲ್ಗೆ ಲಗ್ಗೆ ಇರಿಸಿದರೂ ಈವರೆಗೂ ಚಾಂಪಿಯನ್ ಆಗುವ ಯೋಗ ಕೂಡಿಬಂದಿಲ್ಲ! ಈ ಬಾರಿ ಹೇಗೆ ಎಂಬುದು ಎಂದಿನಂತೆಯೇ ಒಂದು ಕುತೂಹಲ.
ಬುಲ್ಸ್ಗೆ ತಾರಾ ಆಟಗಾರರು
ರೋಹಿತ್ ಕುಮಾರ್ ಬೆಂಗಳೂರು ಬುಲ್ಸ್ ತಂಡದ ನಾಯಕ. ರೈಡಿಂಗ್ನಲ್ಲಿ ಅದ್ಭುತ ಕಲೆಗಾರ. ಇದುವರೆಗೆ ಒಟ್ಟಾರೆ 412 ರೈಡಿಂಗ್ ಮಾಡಿದ್ದು 209 ಅಂಕ ಸಂಪಾದಿಸಿದ್ದಾರೆ. ಇನ್ನೋರ್ವ ಆಟಗಾರ ಆಶಿಷ್ ಕುಮಾರ್. ಇವರು ಆಲ್ರೌಂಡರ್. 77 ರೈಡಿಂಗ್ನಿಂದ 74 ಅಂಕ ಸಂಪಾದಿಸಿದ್ದಾರೆ. ಟ್ಯಾಕಲ್ನಲ್ಲಿ 115 ಅಂಕ ಹಾಗೂ ಡಿಫೆನ್ಸ್ನಲ್ಲಿ 51 ಅಂಕ ಗಳಿಸಿದ್ದು ಇವರ ಹೆಗ್ಗಳಿಕೆ.
ಏಕೈಕ ಕನ್ನಡಿಗ!
ಬೆಂಗಳೂರು ಬುಲ್ಸ್ ತಂಡದಲ್ಲಿ ಇರುವ ಏಕೈಕ ಕನ್ನಡಿಗ ಹರೀಶ್ ನಾಯ್ಕ. ಇವರನ್ನು ಹೊರತು ಪಡಿಸಿದಂತೆ ರಾಜ್ಯದ ಯಾವೊಬ್ಬ ಆಟಗಾರನೂ ತಂಡದಲ್ಲಿಲ್ಲ ಎನ್ನುವುದು ತುಸು ಬೇಸರದ ಸಂಗತಿ. ಮೂಲತಃ ಭಟ್ಕಳದವರಾದ ಹರೀಶ್ಗೆ ಕಳೆದ ಸಲ ಬುಲ್ಸ್ ತಂಡದಲ್ಲಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರೀ ಅಗ್ರ 7ರೊಳಗೆ ಸ್ಥಾನ ಸಿಗುವ ನಿರೀಕ್ಷೆ ಇದೆ.
ತಂಡಗಳು ನಾಯಕಕರು
1. ಬೆಂಗಾಲ್ ವಾರಿಯರ್ ಸುರ್ಜೀತ್ ಸಿಂಗ್
2. ಬೆಂಗಳೂರು ಬುಲ್ಸ್ ರೋಹಿತ್ ಕುಮಾರ್
3. ದಬಾಂಗ್ ಡೆಲ್ಲಿ ಮಿರಾಜ್ ಶೇಖ್
4. ಜೈಪುರ್ ಪಿಂಕ್ ಪ್ಯಾಂಥರ್ ಮನ್ಜಿàತ್ ಚಿಲ್ಲಾರ್
5. ಪಾಟ್ನಾ ಪೈರೇಟ್ಸ್ ಪ್ರದೀಪ್ ನರ್ವಾಲ್
6. ಪುನೇರಿ ಪಲ್ಟಾನ್ಸ್ ದೀಪಕ್ ನಿವಾಸ್ ಹೂಡಾ
7. ತೆಲುಗು ಟೈಟಾನ್ಸ್ ರಾಹುಲ್ ಚೌಧರಿ
8. ಯು ಮುಂಬಾ ಅನೂಪ್ ಕುಮಾರ್
9. ಗುಜರಾತ್ ಫಾರ್ಚೂನ್ ಸುಕೇಶ್ ಹೆಗ್ಡೆ
10. ಯುಪಿ ಯೋಧಾಸ್ ನಿತಿನ್ ತೋಮರ್
11. ತಮಿಳ್ ತಲೈವಾಸ್ ಅಜಯ್ ಠಾಕೂರ್
12. ಹರ್ಯಾಣ ಸ್ಟೀಲರ್ ಸುರೇಂದರ್ ನಾಡಾ
ಬಹುಮಾನ
ಚಾಂಪಿಯನ್ ತಂಡಕ್ಕೆ 3 ಕೋಟಿ ರೂ.
ರನ್ನರ್ ಅಪ್ ತಂಡಕ್ಕೆ 1.8 ಕೋಟಿ ರೂ.
ತೃತೀಯ ಸ್ಥಾನಿಗೆ 1.2 ಕೋಟಿ ರೂ.
ತಂಡಗಳು: 12
ತಾಣಗಳು: 12
ಒಟ್ಟು ಪಂದ್ಯ: 138
ವಿದೇಶಿ ಆಟಗಾರರು: 27
ಪ್ರೊ ಕಬಡ್ಡಿ ಚಾಂಪಿಯನ್ಸ್
ವರ್ಷ ಚಾಂಪಿಯನ್ ರನ್ನರ್ ಅಪ್ ಅಂತರ
2014 ಜೈಪುರ್ ಪಿಂಕ್ ಪ್ಯಾಂಥರ್ ಯು ಮುಂಬಾ 35-24
2015 ಯು ಮುಂಬಾ ಬೆಂಗಳೂರು ಬುಲ್ಸ್ 36-30
2016 ಪಾಟ್ನಾ ಪೈರೇಟ್ಸ್ ಯು ಮುಂಬಾ 31-28
2016 ಪಾಟ್ನಾ ಪೈರೇಟ್ಸ್ ಜೈಪುರ್ ಪಿಂಕ್ ಪ್ಯಾಂಥರ್ 37-29
ಪ್ರೊ ಕಬಡ್ಡಿ: ತಂಡಗಳ ಸಾಧನೆ
ತಂಡ ಪಂದ್ಯ ಗೆಲುವು ಸೋಲು ಟೈ ಅತ್ಯುತ್ತಮ
ಬೆಂಗಾಲ್ 58 20 34 4 4ನೇ ಸ್ಥಾನ
ಬೆಂಗಳೂರು 56 24 30 2 ರನ್ನರ್ ಅಪ್
ಡೆಲ್ಲಿ 56 14 38 4 6ನೇ ಸ್ಥಾನ
ಜೈಪುರ್ 60 31 24 5 ಚಾಂಪಿಯನ್
ಪಾಟ್ನಾ 64 39 20 5 ಚಾಂಪಿಯನ್
ಪುನೇರಿ 60 19 35 6 3ನೇ ಸ್ಥಾನ
ತೆಲುಗು 60 30 22 8 3ನೇ ಸ್ಥಾನ
ಮುಂಬಾ 62 43 15 4 ಚಾಂಪಿಯನ್
ಕಬಡ್ಡಿ ಕೌತುಕ…
4000 ವರ್ಷಗಳ ಇತಿಹಾಸ
ಭಾರತದಲ್ಲಿ ಕಬಡ್ಡಿಗೆ 4000 ವರ್ಷಗಳ ಇತಿಹಾಸವಿದೆ ಎಂದು ನಂಬಲಾಗುತ್ತದೆ. ರಾಜ ಮಹಾರಾಜರ ಕಾಲದಲ್ಲಿಯೂ ಕಬಡ್ಡಿಯನ್ನು ಒಂದು ಕ್ರೀಡೆಯಾಗಿ ಆಡುತ್ತಿದ್ದರು. ಪುರಾತನ ಮಹಾಭಾರತದ ಕಾಲದಲ್ಲೇ ಕಬಡ್ಡಿ ಇತ್ತು ಎನ್ನಲಾಗಿದೆ. ಮಹಾಭಾರತದ ಕಾಲನಿರ್ಣಯವನ್ನು ಮಾಡಿರುವ ವಿದ್ವಾಂಸರು ಅದಕ್ಕೆ 5 ವರ್ಷಗಳ ಇತಿಹಾಸವಿದೆ ಎಂದು ಹೇಳಿದ್ದಾರೆ!
ಬಾಂಗ್ಲಾದ ರಾಷ್ಟ್ರೀಯ ಕ್ರೀಡೆ
ಕಬಡ್ಡಿ ಭಾರತ, ಪಾಕಿಸ್ಥಾನ, ಜಪಾನ್ನಲ್ಲಿ ಭಾರೀ ಜನಪ್ರಿಯ. ಮತ್ತೂಂದು ವಿಶೇಷ ಎಂದರೆ ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಮತ್ತು ಫುಟ್ಬಾಲ್ ಜನಪ್ರಿಯ ಕ್ರೀಡೆಯಾದರೂ ಕಬಡ್ಡಿ ರಾಷ್ಟ್ರೀಯ ಕ್ರೀಡೆಯಾಗಿದೆ. ಭಾರತದಂತೆಯೇ ಬಾಂಗ್ಲಾದ ಗ್ರಾಮೀಣ ಮಟ್ಟದಲ್ಲಿ ಇಂದಿಗೂ ಕಬಡ್ಡಿ ಕೂಟಗಳು ನಡೆಯುತ್ತವೆ. ವಿಶ್ವಕಪ್, ಪ್ರೊ ಕಬಡ್ಡಿಯಲ್ಲೂ ಬಾಂಗ್ಲಾ ಆಟಗಾರರು ಪಾಲ್ಗೊಳ್ಳುತ್ತಾರೆ.
ಕಬಡ್ಡಿ ಪದದ ಮೂಲ ತಮಿಳು
ಕಬಡ್ಡಿ ಪದದ ಮೂಲ ತಮಿಳು ಭಾಷೆ. ಕೈ-ಪಿಡಿ ಎಂಬ ತಮಿಳು ಪದದಿಂದ ಕಬಡ್ಡಿ ಎಂಬ ಪದ ಹುಟ್ಟಿಕೊಂಡಿದೆ. ಕೈ-ಪಿಡಿ ಎಂಬ ಪದದ ಅರ್ಥ ಕೈ ಹಿಡಿ ಎಂದು ಆಗುತ್ತದೆ. ತಮಿಳುನಾಡಿನಲ್ಲಿ ಕಬಡ್ಡಿ ಇಂದಿಗೂ ಭಾರೀ ಜನಪ್ರಿಯವಾಗಿದೆ. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ತಮಿಳಿಗರು ಕಬಡ್ಡಿ ಆಡುತ್ತಾರೆ. ಪ್ರೊ ಕಬಡ್ಡಿಯಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡು ತಂಡ ಆಡುತ್ತಿದೆ.
ಬರ್ಲಿನ್ ಒಲಿಂಪಿಕ್ಸ್ನಲ್ಲಿ ಕಬಡ್ಡಿ
ಕಬಡ್ಡಿಗೆ ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಖ್ಯಾತಿ ಸಿಕ್ಕಿದ್ದು ಬರ್ಲಿನ್ ಒಲಿಂಪಿಕ್ಸ್ನಲ್ಲಿ. 1936ರಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕಬಡ್ಡಿ ಪ್ರದರ್ಶನ ಪಂದ್ಯವಾಗಿತ್ತು. ಅಲ್ಲಿಂದ ಇದಕ್ಕೆ ಅಂತಾರಾಷ್ಟ್ರೀಯ ಪ್ರಚಾರ ಸಿಕ್ಕಿತು. ಬಳಿಕ ಜಪಾನ್, ಇರಾನ್, ಇರಾಕ್ಗಳಲ್ಲೂ ಕಬಡ್ಡಿ ನೆಲೆ ಕಂಡುಕೊಂಡಿತು.
1995ರಿಂದ ಮಹಿಳಾ ಕಬಡ್ಡಿ
ಕಬಡ್ಡಿಗೆ ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಮಹಿಳೆಯರ ಕಬಡ್ಡಿ ಚಾಲ್ತಿಯಲ್ಲಿರಲಿಲ್ಲ. ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಮಹಿಳೆಯರ ಕಬಡ್ಡಿ ಆರಂಭವಾಗಿದ್ದು 1995ರಲ್ಲಿ. ಅನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತ ಪಾಲ್ಗೊಳ್ಳತೊಡಗಿತು. ಇಂದು ಶಾಲಾ, ಕಾಲೇಜು ಮಟ್ಟದಲ್ಲಿಯೂ ಮಹಿಳೆಯರ ಕಬಡ್ಡಿಯನ್ನು ಆಡಿಸಲಾಗುತ್ತಿದೆ.
ಪ್ರೊ ಕಬಡ್ಡಿ: 34 ರಾಷ್ಟ್ರಗಳ ಆಟಗಾರರು
ಪ್ರೊ ಕಬಡ್ಡಿಯಲ್ಲಿ ಇರಾನ್, ಬಾಂಗ್ಲಾ, ಶ್ರೀಲಂಕಾ, ಥಾಯ್ಲೆಂಡ್ ಸೇರಿದಂತೆ ಒಟ್ಟು 34 ದೇಶಗಳ ಆಟಗಾರರು ಪಾಲ್ಗೊಳ್ಳುತ್ತಾರೆ. ಇಷ್ಟು ದೇಶಗಳ ಆಟಗಾರರು ಐಪಿಎಲ್ನಲ್ಲೂ ಪಾಲ್ಗೊಳ್ಳುವುದಿಲ್ಲ. ಐಪಿಎಲ್ ಅತ್ಯಂತ ಜನಪ್ರಿಯ ಆಟವಾದರೂ ಕೆಲವು ಪ್ರಮುಖ ದೇಶಗಳ ಆಟಗಾರರು ಮಾತ್ರ ಕಾಣಿಸಿಕೊಳ್ಳುತ್ತಾರೆ.
ಪುರುಷ, ಮಹಿಳೆಯರಿಗೂ ವಿಶ್ವಕಪ್
ಭಾರತದಲ್ಲಿ ಪುರುಷ-ಮಹಿಳೆಯರ ಎರಡೂ ತಂಡಗಳು ವಿಶ್ವಕಪ್ ಗೆದ್ದ ಏಕೈಕ ಕ್ರೀಡೆಯೆಂದರೆ ಕಬಡ್ಡಿ. ಈವರೆಗೆ ನಡೆದ ಎಲ್ಲ ವಿಶ್ವಕಪ್ಗ್ಳಲ್ಲೂ ಈ ತಂಡಗಳು ಪ್ರಶಸ್ತಿ ಗೆದ್ದಿವೆ. ಕ್ರಿಕೆಟ್ನಲ್ಲಿ ಭಾರತ ಇಷ್ಟು ಮುಂದುವರಿದಿದ್ದರೂ ಮಹಿಳಾ ತಂಡ ಇನ್ನೂ ವಿಶ್ವಕಪ್ ಗೆದ್ದಿಲ್ಲ. ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾದರೂ ಮಹಿಳಾ ತಂಡಕ್ಕೆ ಪ್ರಮುಖ ಪ್ರಶಸ್ತಿ ಗೆಲ್ಲುವಷ್ಟು ಸಾಮರ್ಥ್ಯ ಸಿದ್ಧಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.